ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಇಲಾಖೆ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಭಾರತದ ವಿದೇಶಾಂಗ ಇಲಾಖೆ ಸಚಿವ ಎಸ್. ಜೈಶಂಕರ್ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಗುರುವಾರ (ಮೇ.15) ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಜೈಶಂಕರ್, “ಇಂದು ಸಂಜೆ ಅಫ್ಘಾನ್‌ನ ಹಂಗಾಮಿ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಉತ್ತಮ ಚರ್ಚೆ ನಡೆಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಕ್ಕೆ ಅವರಿಗೆ ನಾನು ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಇತ್ತೀಚಿನ ಪ್ರಯತ್ನಗಳನ್ನು ಅವರು ದೃಢವಾಗಿ ತಿರಸ್ಕರಿಸಿದ್ದನ್ನು ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, “ಅಫ್ಘಾನ್ ಜನರೊಂದಿಗಿನ ನಮ್ಮ ಸಾಂಪ್ರದಾಯಿಕ ಸ್ನೇಹ ಮತ್ತು ಅವರ ಅಭಿವೃದ್ಧಿ ಅಗತ್ಯಗಳಿಗೆ ನಿರಂತರ ಬೆಂಬಲವನ್ನು ಒತ್ತಿ ಹೇಳಲಾಯಿತು. ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳನ್ನು ಚರ್ಚಿಸಲಾಯಿತು” ಎಂದು ತಿಳಿಸಿದ್ದಾರೆ.
Good conversation with Acting Afghan Foreign Minister Mawlawi Amir Khan Muttaqi this evening.
Deeply appreciate his condemnation of the Pahalgam terrorist attack.
Welcomed his firm rejection of recent attempts to create distrust between India and Afghanistan through false and…
— Dr. S. Jaishankar (@DrSJaishankar) May 15, 2025
ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ರಾಜಕೀಯ ಮಟ್ಟದ ಮೊದಲ ಮಾತುಕತೆ ಇದಾಗಿದೆ. ಈ ವರ್ಷದ ಜನವರಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ದುಬೈನಲ್ಲಿ ಮುತ್ತಕಿ ಅವರನ್ನು ಭೇಟಿಯಾಗಿದ್ದರು.
ಪಹಲ್ಗಾಮ್ ದಾಳಿಯ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಫ್ಘಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನ ವಿಭಾಗದ ಮಹಾನಿರ್ದೇಶಕರಾದ ಭಾರತದ ವಿಶೇಷ ರಾಯಭಾರಿ ಆನಂದ್ ಪ್ರಕಾಶ್ ಅವರು ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿ ಮಾಡಲು ಕಾಬೂಲ್‌ಗೆ ತೆರಳಿದ್ದರು. ಅಲ್ಲಿ ಅವರು, ದ್ವಿಪಕ್ಷೀಯ ರಾಜಕೀಯ ಸಂಬಂಧಗಳನ್ನು ಬಲಪಡಿಸುವುದು, ವ್ಯಾಪಾರ ಮತ್ತು ಸಾರಿಗೆ ಸಹಕಾರವನ್ನು ಹೆಚ್ಚಿಸುವುದರ ಕುರಿತು ಚರ್ಚೆ ನಡೆಸಿದ್ದಾರೆ. ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೊನೆಯದಾಗಿ ಭಾರತ-ಅಫ್ಘಾನಿಸ್ತಾನ ನಡುವೆ ರಾಜಕೀಯ ಮಟ್ಟದ ಮಾತುಕತೆ ನಡೆದಿರುವುದು 1999–2000ದಲ್ಲಿ. ಆಗ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು ಡಿಸೆಂಬರ್ 1999ರಲ್ಲಿ ಕಂದಹಾರ್‌ಗೆ ಇಂಡಿಯನ್ ಏರ್‌ಲೈನ್ಸ್ ವಿಮಾನ IC-814 ಅನ್ನು ಅಪಹರಿಸಿದ ವೇಳೆ ತಾಲಿಬಾನ್ ವಿದೇಶಾಂಗ ಸಚಿವ ವಕೀಲ್ ಅಹ್ಮದ್ ಮುತ್ತವಾಕಿಲ್ ಅವರನ್ನು ಸಂಪರ್ಕಿಸಿದ್ದರು.
‘ನಾವು ಪಾಕಿಸ್ತಾನದ ಭಾಗವಲ್ಲ’: ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡ ಬಲೂಚಿಸ್ತಾನ ನಾಯಕರು


