ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ್ದ ಗಲಭೆಗಳ ಸಂದರ್ಭ ಬೆಂಕಿ ಹಚ್ಚಿದ್ದ, ಮಾರಕ ಆಯುಧಗಳೊಂದಿಗೆ ಗಲಭೆ ನಡೆಸಿದ್ದ ಮತ್ತು ಅಕ್ರಮವಾಗಿ ಗುಂಪು ಸೇರಿದ್ದ ಆರೋಪಗಳನ್ನು ಎದುರಿಸುತ್ತಿದ್ದ 11 ಜನರನ್ನು ದೆಹಲಿಯ ಕರ್ಕರಡೂಮಾ ನ್ಯಾಯಾಲಯವು ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
“ಪ್ರಾಸಿಕ್ಯೂಷನ್ ಸಾಕ್ಷಿ 9 ಸಹಾಯಕ ಸಬ್-ಇನ್ಸ್ಪೆಕ್ಟರ್ ಜಹಾಂಗೀರ್ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿ 10 ಸಹಾಯಕ ಸಬ್-ಇನ್ಸ್ಪೆಕ್ಟರ್ ವನ್ವೀರ್ ಅವರು ಫೆಬ್ರವರಿ 24, 2020ರಂದು ಗಲಭೆಕೋರರಲ್ಲಿ ಆರೋಪಿಗಳನ್ನು ನಿಜವಾಗಿಯೂ ನೋಡಿ ಗುರುತಿಸಿದ್ದರೆ, ಅವರು ಇಷ್ಟು ದೀರ್ಘಾವಧಿಯವರೆಗೆ (10 ತಿಂಗಳುಗಳು) ಮೌನವಾಗಿದ್ದು ಏಕೆ? ಎಂದು ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಮೇ 14 ರಂದು ಆರೋಪಿಗಳನ್ನು ಖುಲಾಸೆಗೊಳಿಸುವಾಗ ತಮ್ಮ ಆದೇಶದಲ್ಲಿ ಪ್ರಶ್ನಿಸಿದ್ದಾರೆ ಎಂದು ವರದಿಗಳು ಹೇಳಿವೆ.
“ಈ ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಿರುವಾಗ, ಪ್ರಾಸಿಕ್ಯೂಷನ್ ಸಾಕ್ಷಿ 9 ಸಹಾಯಕ ಸಬ್-ಇನ್ಸ್ಪೆಕ್ಟರ್ ಜಹಾಂಗೀರ್ ಅವರಿಗೆ ಆರೋಪಿಗಳ ಫೋಟೋಗಳನ್ನು ತೋರಿಸುವುದು ಅಸ್ವಾಭಾವಿಕ ಕ್ರಮವೆಂದು ತೋರುತ್ತದೆ. ಆರೋಪಿಗಳನ್ನು ಗುರುತಿಸಲು ಜಹಾಂಗೀರ್ ಅವರನ್ನು ಕೃತಕವಾಗಿ ಪ್ರತ್ಯಕ್ಷದರ್ಶಿಯನ್ನಾಗಿ ಮಾಡಲಾಗಿದೆ ಎಂಬ ಭಾವನೆ ಮೂಡುತ್ತದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.ಪೋಲಿಸರು ಆರೋಪಿಗಳನ್ನು ಗುರುತಿಸಿದ್ದು ವಿವಾದ ಮತ್ತು ಅನುಮಾನದಿಂದ ಹೊರತಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಗಲಭೆಯ ಸಮಯದಲ್ಲಿ ಗೋಕಲ್ಪುರಿಯಲ್ಲಿರುವ ತಮ್ಮ ‘ಕ್ರೌನ್ ಮೆಡಿಕೋಸ್’ ಅಂಗಡಿಗೆ ಬೆಂಕಿ ಹಚ್ಚಲಾಗಿದೆ, ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಮೊಹಮ್ಮದ್ ಇಮ್ರಾನ್ ಶೇಖ್ ಎಂಬವರು ನೀಡಿದ್ದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿತ್ತು.
ದೂರುದಾರರ ಅಂಗಡಿಯನ್ನು ಸುಟ್ಟು ಲೂಟಿ ಮಾಡಿದ್ದನ್ನು ಫೋಟೋಗಳು ಶಂಕಾತೀತವಾಗಿ ಸಾಬೀತುಗೊಳಿಸಿವೆ ಎಂದು ಹೇಳಿದ ನ್ಯಾಯಾಲಯ, 12 ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ನೆಚ್ಚಿಕೊಂಡಿದ್ದ ಪೋಲಿಸರು ಆರೋಪಿಗಳನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಎಂದಿದೆ.
ಆರೋಪಿಗಳ ವಿರುದ್ಧದ ಆರೋಪಗಳು ಶಂಕಾತೀತವಾಗಿ ಸಾಬೀತಾಗಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಾಲಯವು, ಅಂಕಿತ್ ಚೌಧರಿ, ಸುಮಿತ್, ಪಪ್ಪು, ವಿಜಯ, ಆಶಿಷ್ ಕುಮಾರ, ಸೌರಭ ಕೌಶಿಕ್, ಭೂಪೇಂದರ್, ಶಕ್ತಿಸಿಂಗ್, ಸಚಿನ್ ಕುಮಾರ್, ರಾಹುಲ್ ಮತ್ತು ಯೋಗೇಶ್ ಅವರನ್ನು ಖುಲಾಸೆಗೊಳಿಸಿದೆ.
2020ರ ಫೆಬ್ರವರಿ 24 ರಿಂದ 26 ರವರೆಗೆ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಈಶಾನ್ಯ ದೆಹಲಿ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದು ಮತ್ತು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಗೆ ಹಾನಿಯಾಗಿತ್ತು. ಗಲಭೆಯ ನಂತರ ಈಶಾನ್ಯ ಜಿಲ್ಲಾ ಪೊಲೀಸರು ಒಟ್ಟು 700 ಪ್ರಕರಣಗಳನ್ನು ದಾಖಲಿಸಿದ್ದರು.


