‘ಆಪರೇಷನ್ ಸಿಂಧೂರ’ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಮತ್ತು ಕೋಮುವಾದಿ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ಅವರ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ಆದೇಶಿಸಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ನಾಳೆಯೊಳಗೆ ಮಧ್ಯಪ್ರದೇಶ ಕೇಡರ್‌ನ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಎಸ್‌ಐಟಿ ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಆದೇಶಿಸಿದೆ. ಆದಾಗ್ಯೂ, ಐಪಿಎಸ್ ಅಧಿಕಾರಿಗಳು ಮಧ್ಯಪ್ರದೇಶದ ಹೊರಗಿನವರಾಗಿರಬೇಕು ಎಂದು ಅದು ಹೇಳಿದೆ.
“ನಾವು ಮೂವರು ಐಪಿಎಸ್ ಅಧಿಕಾರಿಗಳನ್ನು ಹೊಂದಿರುವ ಎಸ್‌ಐಟಿಯನ್ನು ರಚಿಸುತ್ತಿದ್ದೇವೆ. ಅದರಲ್ಲಿ ಒಬ್ಬರು ಐಜಿ ಅಥವಾ ಡಿಜಿಪಿ ಶ್ರೇಣಿಯವರಾಗಿರಬೇಕು. ಅವರೆಲ್ಲರೂ ರಾಜ್ಯದ ಹೊರಗಿನವರಾಗಿರಬೇಕು. ಇದು ಒಂದು ಅಗ್ನಿ ಪರೀಕ್ಷೆಯಾಗಿದ್ದು, ರಾಜ್ಯವು ಎಸ್‌ಐಟಿ ವರದಿಯನ್ನು ನಮಗೆ ಸಲ್ಲಿಸಬೇಕೆಂದು ನಾವು ಬಯಸುತ್ತೇವೆ. ನಾವು ಇದನ್ನು ಬಹಳ ನಿಕಟವಾಗಿ ಗಮನಿಸಲು ಬಯಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.
ಈ ಮಧ್ಯೆ, ನ್ಯಾಯಾಲಯವು ಸಚಿವ ಶಾ ಅವರ ಬಂಧನವನ್ನು ತಡೆಹಿಡಿದು ತನಿಖೆಗೆ ಸಹಕರಿಸುವಂತೆ ಆದೇಶಿಸಿದೆ. ವಿಚಾರಣೆಯ ಸಮಯದಲ್ಲಿ, ಶಾ ಅವರ ಕ್ಷಮೆಯಾಚನೆಯನ್ನು ಪ್ರಶ್ನಿಸಿದ ನ್ಯಾಯಾಲಯ, ತಮ್ಮ ಮಾತುಗಳಿಗೆ ಕ್ಷಮೆಯಾಚಿಸಲು ಅವರು ಯಾವುದೇ ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದು ಹೇಳಿದೆ. “ಇದು ನೀವು ಸಂಪೂರ್ಣವಾಗಿ ವಿವೇಕಯಿಲ್ಲದೆ ಮಾಡಿದ ಈ ರೀತಿಯ ಅಸಭ್ಯ ಹೇಳಿಕೆಗಳು… ನಮಗೆ ಈ ಕ್ಷಮೆಯಾಚನೆಯ ಅಗತ್ಯವಿಲ್ಲ” ಎಂದು ನ್ಯಾಯಾಲಯವು ಅವರ ಕ್ಷಮೆ ಯಾಚನೆಯನ್ನು ತಿರಸ್ಕರಿಸಿದ್ದು, ಇದು ಪರಿಣಾಮಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಹೇಳಿದೆ.
ಈ ವಿಷಯದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ನ್ಯಾಯಾಲಯವು ಇದೆ ವೇಳೆ ಪ್ರಶ್ನಿಸಿದೆ. “ಎಫ್‌ಐಆರ್ ದಾಖಲಿಸಿದ ನಂತರ ನೀವು ಏನು ಮಾಡಿದ್ದೀರಿ? ಅವರು [SHO] ಯಾವ ರೀತಿಯ ಅಪರಾಧವನ್ನು ಮಾಡಿದ್ದಾರೆಂದು ಪರಿಶೀಲಿಸಿದ್ದಾರೆಯೇ? ಅದರ ಸ್ಥಿತಿ ಏನು” ಎಂದು ಅದು ಕೇಳಿದೆ. ಸರ್ಕಾರವು ಅವರ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳಬೇಕಿತ್ತು ನ್ಯಾಯಾಲಯವು ಹೇಳಿದೆ.
ಮಧ್ಯಪ್ರದೇಶ ಹೈಕೋರ್ಟ್ ಮೇ 14 ರಂದು ಸಚಿವ ಶಾ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ಆರಂಭಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶಿಸಿತು. ನಂತರ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
“ಅವರ ಹೇಳಿಕೆಗಳು ಆ ಅಧಿಕಾರಿಗೆ ಮಾತ್ರವಲ್ಲ, ಸಶಸ್ತ್ರ ಪಡೆಗಳಿಗೂ ಅವಹೇಳನಕಾರಿ ಮತ್ತು ಅಪಾಯಕಾರಿ,” ಎಂದು ಕಳೆದ ವಾರ ಹೈಕೋರ್ಟ್ ಅವರ ಹೇಳಿಕೆಗಳ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು. ಕರ್ನಲ್ ಸೋಫಿಯಾ ಖುರೇಷಿ ಅವರನ್ನು “ಭಯೋತ್ಪಾದಕರ ಸಹೋದರಿ” ಎಂದು ಕರೆದು ಸಚಿವ ಶಾ “ಗಟಾರಗಳ ಭಾಷೆ”ಯನ್ನು ಬಳಸಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು.
ಹೈಕೋರ್ಟ್ ಆದೇಶದ ನಂತರ, ಮೇ 14 ರಂದು ತಡರಾತ್ರಿ ಸಚಿವ ಶಾ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152, 196(1)(ಬಿ), ಮತ್ತು 197(1)(ಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ಮೇ 15 ರಂದು, ಆರೋಪಿಗಳ ಕ್ರಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸದ ಕಾರಣ ಮುಂದೊಂದು ದಿನ ರದ್ದಾಗಬಹುದಾದ ಗಂಭೀರವಲ್ಲದ ರೀತಿಯಲ್ಲಿ ಎಫ್‌ಐಆರ್ ರಚಿಸಿದ್ದಕ್ಕಾಗಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಲವಂತದ ಅಥವಾ ವಂಚನೆಯ ಧಾರ್ಮಿಕ ಮತಾಂತರವನ್ನು ಸಂವಿಧಾನ ಬೆಂಬಲಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್
ಬಲವಂತದ ಅಥವಾ ವಂಚನೆಯ ಧಾರ್ಮಿಕ ಮತಾಂತರವನ್ನು ಸಂವಿಧಾನ ಬೆಂಬಲಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್
ಇದನ್ನೂಓದಿ: ಬೆಳಗಾವಿಯಲ್ಲಿ ಕುರಾನ್ ಅಪವಿತ್ರ ಪ್ರಕರಣ: ಸಾವಿರಾರು ಜನರಿಂದ ಶಾಂತಿಯುತ ಪ್ರತಿಭಟನೆ

