Homeಚಳವಳಿಅತ್ಯಾಚಾರ ತಡೆಗಟ್ಟಲು ಸಾಧ್ಯ! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ...

ಅತ್ಯಾಚಾರ ತಡೆಗಟ್ಟಲು ಸಾಧ್ಯ! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…

ಮೈಸೂರು ಮತ್ತು ತುಮಕೂರು ಅತ್ಯಾಚಾರಗಳ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೆ ಮೂಲ ಕಾರಣಗಳೇನು? ಕೊನೆಗೊಳಿಸುವುದು ಹೇಗೆ ಎಂಬುದರ ಕುರಿತು ಲೇಖನ.

- Advertisement -
- Advertisement -

ಲೈಂಗಿಕ ಹಿಂಸೆಯನ್ನು ತಡೆಗಟ್ಟಲು ಸಾಧ್ಯ; ತಡೆಗಟ್ಟಲೇಬೇಕು!

ಇಂದು ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರವೆಂಬುದು ಸರ್ಕಾರ ಹಾಗೂ ಸಮಾಜದ ಮುಂದೆ ಬೃಹದಾಕಾರವಾಗಿ ನಿಂತಿರುವ ಅದರದ್ದೇ ಪ್ರತಿಬಿಂಬದಂತೆ ಕಂಡುಬರುತ್ತಿದೆ. ಇದು ಸಮಾಜವೊಂದು ಯಾವ ಮಟ್ಟಕ್ಕೆ ಕೊಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿರುವ ಪ್ರತಿಬಿಂಬ. ಇದು, ‘ನಾಗರಿಕ’ ಎನಿಸಿಕೊಂಡಿರುವ ಸಮಾಜ ಎಂತಹ ಹೃದಯಹೀನ ಹಂತವನ್ನು ತಲುಪಬಹುದು ಎಂಬುದರ ಪ್ರತಿಬಿಂಬ.

ಇಂದು ಮನುಕುಲದ ಅಮಾನವೀಯ, ಕ್ರೂರ ಲಕ್ಷಣಗಳಲ್ಲೊಂದಾಗಿ ಬೆಳೆದು ನಿಂತಿರುವ ಅತ್ಯಾಚಾರವೆಂಬ ಪೆಡಂಭೂತವು ನಮ್ಮೆಲ್ಲರ ಮುಂದೆ ಕೆಲವು ಮೂಲಭೂತವಾದ ಪ್ರಶ್ನೆಗಳನ್ನೆತ್ತಿ ನಿಲ್ಲಿಸಿದೆ; ನಿಜಕ್ಕೂ ಈ ಸಮಾಜ ಮಹಿಳೆಯರ ವಿಚಾರದಲ್ಲಿ ಎಷ್ಟು ಪ್ರಜಾತಾಂತ್ರಿಕವಾಗಿ ಆಲೋಚಿಸುತ್ತಿದೆ? ಎಷ್ಟು ಪ್ರಜಾತಾಂತ್ರಿಕವಾಗಿ ನಡೆದುಕೊಳ್ಳುತ್ತಿದೆ? ಮಹಿಳೆ ಮತ್ತು ಪುರುಷನನ್ನು ಎಷ್ಟು ಮಟ್ಟಿಗೆ ಸಮಾನ ನೆಲೆಯಲ್ಲಿ ಸ್ವೀಕರಿಸಿದೆ? ಹೆಚ್ಚಾಗಿ ಮನೆಯೊಳಗೇ ಇದ್ದ ಮಹಿಳೆಯನ್ನು, ಹೊರಕ್ಕೂ ತಂದು ದುಡಿಯಲು ಹಚ್ಚಲಾಗಿದೆ. ಆ ಮೂಲಕ ಆಕೆಯ ಶ್ರಮವನ್ನು ಆಧುನಿಕ ಜಗತ್ತಿನ ಕುಬೇರರು ತಮ್ಮ ಅಗತ್ಯಗಳಿಗನುಸಾರ ದೋಚುತ್ತಿದ್ದಾರೆ. ಆದರೆ, ಮಹಿಳೆಯ ಈ ಪಾತ್ರಕ್ಕೆ ಆಕೆಯ ಕುಟುಂಬದ ಚೌಕಟ್ಟು ಎಷ್ಟರ ಮಟ್ಟಿಗೆ ಬದಲಾಗಿದೆ? ಮಹಿಳೆಯ ಸ್ವತಂತ್ರ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಒಪ್ಪಿಕೊಳ್ಳಲು ಎಷ್ಟರಮಟ್ಟಿಗೆ ಈ ಜಗತ್ತು ಸಿದ್ಧವಿದೆ? ಇಷ್ಟು ವರ್ಷಗಳ ಇತಿಹಾಸ ಹೊಂದಿರುವ ‘ನಾಗರಿಕ’ ಜಗತ್ತು ಮಹಿಳೆಯರ ಮೇಲಿನ ಹಿಂಸೆಗಳ ವಿಚಾರಕ್ಕೆ ಬಂದರೆ ಮಾತ್ರ ಯಾಕೆ ಅತ್ಯಂತ ಕ್ರೂರವಾಗಿ, ಬರ್ಬರವಾಗಿ ನಡೆದುಕೊಳ್ಳುತ್ತದೆ? ಮಹಿಳೆಯನ್ನು ತುಚ್ಛೀಕರಿಸುವ, ಎರಡನೆಯ ದರ್ಜೆಯ ನಾಗರಿಕಳಂತೆ ನೋಡುವ ಸಮಾಜದ ಮನಸ್ಥಿತಿಗೂ, ಈ ಲೈಂಗಿಕ ಹಿಂಸೆಗೂ ಸಂಬಂಧವಿಲ್ಲವೇ? ಇಂತಹ ಹಿಂಸೆಗಳನ್ನು ತಡೆಯಬೇಕಾದರೆ ನಿಜಕ್ಕೂ ಆಗಬೇಕಾದುದೇನು?

ಈ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಮತ್ತು ವಾಸ್ತವದ ಉತ್ತರ ಕಂಡುಕೊಂಡು, ಕುಟುಂಬ ಮತ್ತು ಇಡೀ ಸಮಾಜದ ಪ್ರಜಾತಾಂತ್ರೀಕರಣದೆಡೆಗೆ ಸಾಗುತ್ತಿಲ್ಲ. ಬದಲಿಗೆ, ಆಳುವವರು ಮತ್ತು ಅಭಿಪ್ರಾಯ ರೂಪಿಸುವವರು (ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳು, ಇವರೆಲ್ಲರ ಬೆನ್ನಿಗಿರುವ ಮಠ-ಮಾನ್ಯಗಳು, ಸ್ವಾಮೀಜಿಗಳು, ಮಾಧ್ಯಮಗಳು ಇತ್ಯಾದಿ), ಹೆಚ್ಚುತ್ತಿರುವ ಅತ್ಯಾಚಾರಗಳ ಹೊಣೆಯನ್ನು ಮತ್ತೆ ಮತ್ತೆ ಬಲಿಪಶುಗಳಾಗಿರುವ ಹೆಣ್ಣುಮಕ್ಕಳ ಹೆಗಲಿಗೇ ವರ್ಗಾಯಿಸುತ್ತಿದ್ದಾರೆ; ತಣ್ಣನೆಯ ಕ್ರೌರ್ಯದಲ್ಲಿ ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಇವರುಗಳೇ ಸೇರಿ, ಎಲ್ಲವನ್ನೂ ಸರಕಾಗಿಸುತ್ತಿರುವ ಮಾರುಕಟ್ಟೆ ಶಕ್ತಿಗಳನ್ನು, ಮನೋರಂಜನಾ ಉದ್ದಿಮೆಯ ದೊಡ್ಡ ಕಾರ್ಪೊರೇಟ್‌ಗಳನ್ನು ಕೊಬ್ಬಿಸುತ್ತಿದ್ದಾರೆ. ಮಹಿಳೆಯರನ್ನೂ, ಅವರ ಘನತೆಯನ್ನೂ ಕೂಡಾ ಮಾರಾಟದ ವಸ್ತುವಾಗಿಸಿದ್ದಾರೆ. ‘ಸೆಕ್ಸ್ ಮತ್ತು ಕ್ರೈಮ್‌’ ಅನ್ನೇ ಮನರಂಜನೆ ಎಂಬಂತೆ ಯುವಸಮೂಹವನ್ನು ದಿಕ್ಕುತಪ್ಪಿಸುತ್ತಾ, ಲೈಂಗಿಕ ಹಿಂಸಾಚಾರ ಹೆಚ್ಚಲು ನೇರವಾಗಿ ಕಾರಣರಾಗುತ್ತಿದ್ದಾರೆ.

1990ರ ನಂತರ ಜಾರಿಗೆ ಬಂದ ಜಾಗತೀಕರಣ ನೀತಿಯು ಎಲ್ಲವನ್ನೂ ಸರಕನ್ನಾಗಿಸಿದಂತೆ, ಮಹಿಳೆಯನ್ನೂ ಸರಕನ್ನಾಗಿಸಿದೆ. ಇದಕ್ಕೆ ವ್ಯಕ್ತಿಗತ ಮಹಿಳೆಯರು ಕಾರಣವಲ್ಲ. ಇದೊಂದು ಲಾಭದ ಉದ್ದಿಮೆ. ಈ ನೀತಿಗಳನ್ನು ನಮ್ಮ ಸರ್ಕಾರಗಳೇ ತಂದು, ಈಗ ಅದರ ಪರಿಣಾಮವಾದ ಅತ್ಯಾಚಾರದ ಹೆಚ್ಚಳಕ್ಕೆ ಯಾರೋ ಕೆಲವು ವಿಕೃತ ವ್ಯಕ್ತಿಗಳು ಮಾತ್ರ ಕಾರಣವೆಂಬಂತೆ ಮಾತಾಡುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ನಮ್ಮನ್ನು ಆಳುವವರು ಮಾಡಬೇಕಾದ್ದನ್ನು ಮಾಡುತ್ತಿಲ್ಲ; ಬದಲಿಗೆ ಮಾಡಲೇಬಾರದಾದ್ದನ್ನು ಮಾಡುತ್ತಿದ್ದಾರೆ!!

ಶತಮಾನಗಳಿಂದ ಮುಂದುವರೆಯುತ್ತಾ ಬಂದ ಈ ಕ್ರೌರ್ಯ ಈಗಲೂ ಹಾಗೆಯೇ ಮುಂದುವರೆದಿದೆ-ಅಥವಾ ಹಿಂದಿಗಿಂತ ಹೆಚ್ಚುತ್ತಿದೆ-ಎಂದರೆ, ಅದಕ್ಕೆ ಅತ್ಯಾಚಾರಿಗಳು ಮತ್ತು ಲೈಂಗಿಕ ಹಿಂಸೆ ನೀಡುವವರು ಎಷ್ಟು ಹೊಣೆಯೋ, ನಮ್ಮನ್ನು ಆಳುತ್ತಿರುವ ಪ್ರಭುತ್ವಗಳೂ ಅಷ್ಟೇ ಹೊಣೆ; ಜೊತೆಗೆ, ಈ ಸಮಸ್ಯೆಯನ್ನು ಉಪೇಕ್ಷಿಸುತ್ತಾ ಬಂದ ಪ್ರಜ್ಞಾವಂತ ಜನರ ನಿಷ್ಕ್ರಿಯತೆಯ ಪಾಲೂ ಇದರಲ್ಲಿ ಸೇರಿದೆ. ಈಗಾಗಲೇ ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಕರ್ತವ್ಯ ಇನ್ನಷ್ಟು ಕಾಲ ಹೀಗೆಯೇ ಉಪೇಕ್ಷೆಗೊಳಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ.

ಈ ನಿಟ್ಟಿನಲ್ಲಿ, ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಮಹಿಳೆಯನ್ನೇ ಹೊಣೆಯಾಗಿಸಿ, ಯಾವುದೇ ಪರಿಣಾಮಕಾರಿ ನಿಯಂತ್ರಣ ಕ್ರಮಗಳಿಗೆ ಮುಂದಾಗದ ಸರ್ಕಾರಗಳ ವಿರುದ್ಧದ ನಮ್ಮೆಲ್ಲರ ಹೋರಾಟಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸಬೇಕಾಗಿದೆ. ಒಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಕ್ರಿಯಾಶೀಲರಾಗಿ ಒಂದು ವಿದ್ಯಮಾನವಾಗಿ ಹರಡುತ್ತಿರುವ ಈ ಬರ್ಬರ ಹಿಂಸಾಚಾರದ ವಿರುದ್ಧದ ಐಕ್ಯ ಹೋರಾಟಕ್ಕೆ ಬೀದಿಗಿಳಿಯಲೇಬೇಕಾಗಿದೆ. ಇದು ಸಮಾನ ಮನಸ್ಕರ ಸಮಷ್ಟಿ ಪ್ರಯತ್ನದಿಂದ ಆಗಬೇಕಾದ ಕೆಲಸವಾಗಿದೆ.

• ಬಟ್ಟೆ ಹೆಚ್ಚು ಹಾಕುವುದು, ಕಡಿಮೆ ಹಾಕುವುದು ಅತ್ಯಾಚಾರಕ್ಕೆ ಕಾರಣವಲ್ಲ; ಹೆಣ್ಣು ಮಕ್ಕಳು ಹೊರಗೆ ಹೊತ್ತಲ್ಲದ ಹೊತ್ತಲ್ಲಿ ಓಡಾಡುವುದು ಅತ್ಯಾಚಾರಕ್ಕೆ ಕಾರಣವಲ್ಲ.

• ಅತ್ಯಾಚಾರ ನಡೆಸುವವರಲ್ಲಿ ಹೆಚ್ಚಿನವರು ವಿವಿಧ ರೀತಿಯಲ್ಲಿ ಮೇಲಿನ ಸ್ಥಾನದಲ್ಲಿರುವವರು. ಅತ್ಯಾಚಾರಕ್ಕೆ ಒಳಗಾಗುವವರು ವಿವಿಧ ಕಾರಣಗಳಿಂದಾಗಿ ದುರ್ಬಲರಾಗಿರುವವರು. (ಈಗೀಗ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅಥವಾ ಮುದಿವಯಸ್ಸಿನ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದಕ್ಕೂ ಅದೇ ಕಾರಣ).

• ಅಶ್ಲೀಲವಾದ ಚಿತ್ರಗಳನ್ನು ಇಂಟರ್‌ನೆಟ್, ಟಿವಿ-ಸಿನೆಮಾ, ಪತ್ರಿಕೆಗಳಲ್ಲಿ ಪ್ರಸಾರ ಮಾಡುತ್ತಿರುವುದೂ ಅಲ್ಲದೇ, ಎಲ್ಲರ ಕೈಗಳಿಗೂ ತಲುಪುವ ಮೊಬೈಲ್‌ಗೂ ಕಳಿಸುವ ಉದ್ದಿಮೆಯನ್ನು ತಡೆಯಲು ಏನು ಮಾಡಲಾಗಿದೆ? ನೀಲಿ ಚಿತ್ರಗಳಿಂದ ಹಿಡಿದು, ‘ಮಾಮೂಲಿ’ ಪತ್ರಿಕಾ ವರದಿಗಳೆಲ್ಲದರಲ್ಲೂ ಮಹಿಳೆಯನ್ನು ಸೆಕ್ಸ್ ಬೊಂಬೆಯನ್ನಾಗಿ ಚಿತ್ರಿಸುತ್ತಿರುವ ಎಲ್ಲರೂ ಇದರ ಕುರಿತು ಯೋಚಿಸಬೇಕಲ್ಲವೇ? ಜಾಗತೀಕರಣ ನೀತಿಗಳ ನಂತರ ಇದು ಇನ್ನೂ ಹೆಚ್ಚಾಗಿದೆ.

• ಎಲ್ಲಕ್ಕಿಂತ ಮುಖ್ಯವಾಗಿ ಯಾರು ದುರ್ಬಲರೆಂದು ಬಿಂಬಿಸಲ್ಪಡುತ್ತಾರೋ, ಅವರೇ ಶೋಷಣೆಗೆ ಒಳಗಾಗುವುದು. ಮಹಿಳೆಯನ್ನು ಅಸಮಾನವಾಗಿಟ್ಟಿರುವ ಸಮಾಜದಲ್ಲಿ, ಮಹಿಳೆಯನ್ನು ಸರಕು ಮಾಡಿಟ್ಟಿರುವ ಸಮಾಜದಲ್ಲಿ ಅತ್ಯಾಚಾರ ತಡೆಗಟ್ಟಬೇಕೆಂದರೆ ಮೊದಲು ನಾವು ಸಮಾನತೆಯ ಕಡೆಗೆ ಚಲಿಸಬೇಕು. ಅದಕ್ಕಾಗಿ ಸರ್ಕಾರ ಹಾಗೂ ಸಮಾಜವನ್ನು ಒತ್ತಾಯಿಸಬೇಕು.

• ಮಹಿಳೆಯರ ಸುರಕ್ಷತೆಯ ಕುರಿತು ಕ್ರಮಗಳು ಪರಿಣಾಮಕಾರಿಯಾಗಿ ಜರುಗದಿರುವುದು ಮತ್ತು ಪೊಲೀಸ್ ಹಾಗೂ ನ್ಯಾಯಾಂಗದ ವ್ಯವಸ್ಥೆಯಲ್ಲಿರುವ ಕೊರತೆಗಳು ಲೈಂಗಿಕ ಹಿಂಸೆಯ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿವೆ.

ಪರಿಹಾರ ಮಾರ್ಗಗಳು
1. ಹೆಣ್ಣನ್ನು ತುಚ್ಛೀಕರಿಸುವ, ದುರ್ಬಳಕೆ ಮಾಡುವ, ಮಹಿಳೆಯರ ಘನತೆಯನ್ನು ಕುಗ್ಗಿಸುವ, ಹೆಣ್ಣು-ಗಂಡಿನ ನಡುವೆ ಮೇಲುಕೀಳನ್ನು ಆಚರಿಸುವ, ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳನ್ನೂ, ಸಂಸ್ಥೆಗಳನ್ನೂ, ಆಚರಣೆಗಳನ್ನೂ ನಿಷೇಧಿಸಬೇಕು: ಇದು ಈ ದೇಶದ ಸಂವಿಧಾನ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿದ ಡಾ. ಅಂಬೇಡ್ಕರ್ ಅವರು ಅರ್ಧ ಶತಮಾನಕ್ಕೂ ಹಿಂದೆಯೇ ಹಿಂದೂ ಕೋಡ್ ಬಿಲ್‌ನಲ್ಲಿ ಪ್ರಸ್ತಾಪಿಸಿದರು. ಅದನ್ನು ಈ ದೇಶದ ಪಟ್ಟಭದ್ರರು ಆಗಲೂ ಜಾರಿಮಾಡಲು ಅವಕಾಶ ಕೊಡಲಿಲ್ಲ. ಈಗಲೂ ಸ್ತ್ರೀ ಪುರುಷ ಸಮಾನತೆಯ ಚಿಂತನೆಗಳನ್ನು ಬೆಳೆಯಲು ಬಿಡುತ್ತಿಲ್ಲ. ಅತ್ಯಾಚಾರ, ಲೈಂಗಿಕ ಹಿಂಸೆ ಮಾತ್ರವಲ್ಲದೆ, ಎಲ್ಲಾ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯಗಳ ಬೇರು ಇದೇ ಆಗಿರುವುದರಿಂದ, ಇದನ್ನು ಸರ್ಕಾರ ತೀವ್ರ ನಿಗಾವಹಿಸಿ ತಡೆಗಟ್ಟುವ ಅಗತ್ಯವಿದೆ.

ಎಲ್ಲಾ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮಗಳು ಸೇರಿದಂತೆ ಜವಾಬ್ದಾರಿ ಸ್ಥಾನದಲ್ಲಿರುವ ಯಾರೇ ಆದರೂ, ಮಹಿಳೆಯರ ಮೇಲಿನ ಅತ್ಯಾಚಾರಗಳ ವಿಚಾರದಲ್ಲಿ ಲಘುವಾಗಿ ಸಾರ್ವಜನಿಕ ಹೇಳಿಕೆಗಳನ್ನು ಕೊಟ್ಟರೆ, ಅವುಗಳನ್ನು ‘ಲೈಂಗಿಕ ಹಿಂಸೆಯ ಪ್ರಚೋದನೆ’ ಎಂದು ಪರಿಗಣಿಸಿ, ಕಾನೂನು ಕ್ರಮ ಜರುಗಿಸಬೇಕು.

2. ಮಹಿಳೆಯರ ಸಾಮಾಜಿಕ ಸ್ಥಾನ-ಮಾನವನ್ನು ಉತ್ತಮಪಡಿಸುವ ದೃಷ್ಟಿಯಿಂದ, ಅಧಿಕಾರ, ಆಸ್ತಿ, ಉದ್ಯೋಗ, ಶಿಕ್ಷಣಗಳಲ್ಲಿ ಕಡ್ಡಾಯವಾಗಿ ಶೇ. 50ರಷ್ಟು ಮೀಸಲಾತಿ ಮತ್ತಿತರ ಕ್ರಮಗಳಿಗೆ ಮುಂದಾಗಬೇಕು. (ಮಹಿಳೆಯರ ವರ್ಗ, ಜಾತಿ ಹಿನ್ನೆಲೆಯನ್ನಾಧರಿಸಿದ ವರ್ಗೀಕರಣವೂ ಇರಬೇಕು).

3. ಸಮಾಜದ ಪ್ರಜಾತಾಂತ್ರೀಕರಣದ ದಿಕ್ಕಿನಲ್ಲಿ ಖಚಿತವಾದ ಹೆಜ್ಜೆಗಳನ್ನಿಡುವುದು: ಪಠ್ಯಗಳಲ್ಲಿ, ಸಾಮಾಜಿಕ ಸಂಸ್ಥೆಗಳಲ್ಲಿ, ಕುಟುಂಬದಲ್ಲಿ ಲಿಂಗ ಅಸಮಾನತೆ (ಹಾಗೂ ಜಾತಿ-ವರ್ಗ-ಧರ್ಮ ಮೊದಲಾದ ಎಲ್ಲಾ ರೀತಿಯ ಅಸಮಾನತೆಗಳು) ಅಪರಾಧ ಎಂಬ ಮನೋಭಾವವನ್ನು ಸಮಾಜದಲ್ಲಿ ಬೇರೂರಿಸಲು ವ್ಯಾಪಕವಾದ ಅರಿವಿನ ಕಾರ್ಯಕ್ರಮಗಳನ್ನು ಗಂಭೀರವಾಗಿ ಯೋಜಿಸುವುದು ಮತ್ತು ಕಾರ್ಯಗತಗೊಳಿಸುವುದು.

4. ಎಲ್ಲಾ ಶಾಲಾ-ಕಾಲೇಜುಗಳಲ್ಲಿ (ಖಾಸಗಿ ಮತ್ತು ಸರ್ಕಾರಿ), ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವ ಕೆಲಸದ ಸ್ಥಳಗಳಲ್ಲಿ, ಸ್ವಸಹಾಯ ಗುಂಪುಗಳಲ್ಲಿ ಮೊದಲಾದೆಡೆ ಮಹಿಳಾ ಆತ್ಮರಕ್ಷಣಾ ತರಬೇತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವುದು.

5. ಅತ್ಯಾಚಾರ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು: ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ, ಸರಿಯಾದ ತನಿಖೆಯನ್ನು ಮತ್ತು ಶೀಘ್ರ ನ್ಯಾಯದಾನವನ್ನು ಖಾತ್ರಿಪಡಿಸಬೇಕು. ಪೊಲೀಸ್ ಯಂತ್ರಾಂಗ ಮತ್ತು ನ್ಯಾಯಾಂಗ ಪ್ರಭಾವಗಳಿಗೆ ಮಣಿಯುವುದನ್ನು ಅಥವಾ ಭ್ರಷ್ಟಾಚಾರಕ್ಕೆ ಒಳಗಾಗಿ ಇಂತಹ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಬಲಿಯಾಗಿಸುವುದನ್ನು ಸರ್ಕಾರ ತಡೆಗಟ್ಟಬೇಕು.

6. ಲೈಂಗಿಕ ಹಿಂಸೆ ವಿರೋಧಿ ನಿಯಮಗಳನ್ನು ರೂಪಿಲು ಏಪ್ರಿಲ್‌ನಲ್ಲಿ ನಡೆಯುವ ಬಜೆಟ್ ಅಧಿವೇಶದಲ್ಲಿ ವಿಶೇಷ ಚರ್ಚೆಯ ಅವಧಿಯನ್ನು ಗೊತ್ತುಪಡಿಸಬೇಕು ಮತ್ತು ಇದಕ್ಕಾಗಿ ವಿಶೇಷ ಬಜೆಟ್‌ನ್ನು ಒದಗಿಸಬೇಕು. ಇಂತಹ ಕೆಲಸಗಳಿಗಾಗಿಯೇ ಇರುವ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೊದಲಾದವು ಈ ದಿಕ್ಕಿನಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸುವಂತೆ ಬಲಪಡಿಸಬೇಕು ಮತ್ತು ಇದರಲ್ಲಿ ವಿಫಲವಾಗದಂತೆ ಖಾತ್ರಿಪಡಿಸಬೇಕು.

7. ಮೇಲೆ ಹೇಳಿರುವ ಎಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಮುಂದಾಗುವುದರ ಜೊತೆಗೆ ಈ ತಕ್ಷಣದಲ್ಲೇ ತೆಗೆದುಕೊಳ್ಳಬಹುದಾದ ಕ್ರಮವೂ ಇದೆ. ಇಂಟರ್‌ನೆಟ್, ಮೊಬೈಲ್, ಸಿನೆಮಾ, ಸಮೂಹ ಮಾಧ್ಯಮಗಳು ಮತ್ತಿತರೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಸೆಕ್ಸ್ ಉದ್ದಿಮೆಯನ್ನು, ಮಹಿಳೆಯರನ್ನು ತುಚ್ಛೀಕರಿಸುವ ಸಂಗತಿಗಳನ್ನು ತಡೆಗಟ್ಟಬೇಕು.

ಈ ನೆಲದಲ್ಲಿ ಹೆಣ್ಣು ತುಳಿಯಲ್ಪಡುತ್ತಿದ್ದರೆ,
ಅವಮಾನಿಸಲ್ಪಡುತ್ತಿದ್ದರೆ,
ನಿಮ್ಮೆದೆಯ ಮೇಲೆ ಕೈಯಿಟ್ಟು ಹೇಳಿ,
ಈ ದೇಶ ಸ್ವತಂತ್ರವೇ?!

ಕೃಪೆ: ಮಹಿಳಾ ಮುನ್ನಡೆ, ಕರ್ನಾಟಕ ಜನಶಕ್ತಿ ಮತ್ತು ಲೈಂಗಿಕ ಹಿಂಸೆ ವಿರೋಧಿ ಜನಚಳುವಳಿಯ ಕಿರುಪುಸ್ತಕದಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಶ್ಲೀಲ ಸಿನಿಮಾ ಧಾರವಾಹಿ ಸಂಭಾಷಣೆಗಳು, ದೃಶ್ಯಗಳು ಮತ್ತು ಯುವಜನತೆಯನ್ನು ಹುಚ್ಚಬ್ಬಿಸುವ ಅಶ್ಲೀಲ ಸಿನಿಮಾಹಾಡುಗಳನ್ನು ನಿರ್ಬಂಧಿಸಬೇಕು. ಪ್ರೀತಿ ಎಂದರೆ ಏನು? ಜೀವನದಲ್ಲಿ ಅದರ ಅವಶ್ಯಕತೆ ಎಷ್ಟು, ಅದರ ಮಹತ್ವ, ಹಸು ಎಮ್ಮೆ ನಾಯಿ ಬೆಕ್ಕು ಕಾಗೆ ಗೂಬೆ ಗುಬ್ಬಚ್ಚಿ ಹೀಗೆ ಎಲ್ಲ ಪ್ರಾಣಿ ಪಕ್ಷಿಗಳಂತೆ ಮಾನವನಿಗೂ ಕಾಮತೃಷೆ ಇದೆ ಎನ್ನುವುದನ್ನು ಯುವಜನತೆಗೆ ಅರ್ಥೈಸಿ ಹೇಳಬೇಕಾಗಿದೆ, ಅದನ್ನ ವೈಭವೀಕರಿಸಿ ಹಣ ಮಾಡುತ್ತಿರುವವರನ್ನ ಹತೋಟಿ ಯಲ್ಲಿಡಬೇಕಾಗಿದೆ

  2. ಎಲ್ಲಾ ವಯೋಮಾನದ ಗಂಡು ಮಕ್ಕಳೂ ಹೆಣ್ಣುಮಕ್ಕಳ ಬಗ್ಗೆ ಸೂಕ್ಷ್ಮತೆ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ.
    ಸ್ವಾತಂತ್ರ್ಯ ಪೂರ್ವದಲ್ಲೇ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ ಮೋಹನ್ ರಾಯರು,
    ಜ್ಯೋತೀಬಾ ಫುಲೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ, ವಿಧವಾ ವಿವಾಹದ ಬಗ್ಗೆ ಹೋರಾಟ ಮಾಡಿದರು. ಹಾಗಾದರೆ ಈಗಿನ ಕಾಲದ ನಾವು ಇಂಥಾ ಅಸಮಾನತೆ, ಬರ್ಬರತೆಯಲ್ಲಿ ಬದುಕುವುದು ಗಂಡುಮಕ್ಕಳ ವ್ಯಕ್ತಿತ್ವಕ್ಕೆ ಅವಮಾನ ಎಂಬ ಜಾಗೃತಿ ಮೂಡಿಸುವ ಅವಶ್ಯಕತೆ ಪ್ರಜ್ಞಾವಂತರ ಜವಾಬ್ದಾರಿ. ಈ ಜವಾಬ್ದಾರಿ ಮನೆ, ಸಮಾಜ, ಸರಕಾರ ಎಲ್ಲರದ್ದೂ ಆಗಿದೆ.
    ಮನೆಯಲ್ಲಿ ಅಮ್ಮಂದಿರು ಹೆಣ್ಣುಮಕ್ಕಳ ಬಗ್ಗೆ ತೆಗೆದುಕೊಳ್ಳುವ ಜಾಗೃತೆಯ ಎರಡು ಪಟ್ಟು ತನ್ನ ಗಂಡು ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕು. ತನ್ನ ಮಗ ಹಾಗೂ ಗಂಡ ಹೆಣ್ಣು ಮಕ್ಕಳ ಬಗ್ಗೆ ಎಷ್ಟು ಮಾನವೀಯತೆ, ಕಾಳಜಿ ತೋರುತ್ತಾನೆ?
    ಹೆಣ್ಣು ಗಂಡಿನಂತೇ ಸಮಾನವಾಗಿ ಸಂತೋಷವಾಗಿ ಬದುಕಲು ಅರ್ಹ ಜೀವಿ. ಅವಳನ್ನು ಒಂದು ಸರಕಿನಂತೆ ನೋಡುವ ಅಭ್ಯಾಸವನ್ನು ಮನೆಯಲ್ಲಿ ಅಮ್ಮಂದಿರು, ಶಾಲೆಗಳಲ್ಲಿ ಅಧ್ಯಾಪಕರು ಪ್ರಶ್ನೆ ಮಾಡುತ್ತಾ ಗಂಡುಮಕ್ಕಳಲ್ಲಿ ಎಚ್ಚರವನ್ನು ಮೂಡಿಸಬೇಕು.
    ಈಗಿನ ಹೆಣ್ಣು ಮಕ್ಕಳೂ ಪ್ರತಿಯೊಂದು ವಿಷಯವನ್ನೂ ವಿಮರ್ಶೆ ಮಾಡಿ ಸತ್ಯಾಸತ್ಯತೆಯನ್ನು ಅರ್ಥ ಮಾಡಿ ತಾನು ಒಂದು ಸರಕು ಎನ್ನುವ ಭಾವನೆಯನ್ನೆನು ಬಿಟ್ಟು ಸಮಾಜದಲ್ಲೂ ಹೆಣ್ಣನ್ನು ಸರಕಿನಂತೆ ನೋಡುವ ಪ್ರತಿಯೊಂದನ್ನೂ ಪ್ರಶ್ನೆ ಮಾಡಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...