ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ಸಂಸದೀಯ ಸಮಿತಿಗೆ ತಿಳಿಸಿದರು. ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ನಿರ್ಧಾರವನ್ನು ಎರಡು ನೆರೆಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಸಂಘರ್ಷವನ್ನು ನಿಲ್ಲಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಪಾತ್ರದ ಬಗ್ಗೆ ಕೆಲವು ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದ ನಂತರ ಮಿಸ್ರಿ ಅವರ ಹೇಳಿಕೆಗಳು ಬಂದಿವೆ ಎನ್ನಲಾಗಿದೆ.
“ಕದನ ವಿರಾಮವನ್ನು ಸುಗಮಗೊಳಿಸಿದ್ದೇನೆ ಎಂದು ಟ್ರಂಪ್ ಕನಿಷ್ಠ ಏಳು ಬಾರಿ ಸಾರ್ವಜನಿಕವಾಗಿ ಹೇಳಿಕೊಂಡರು. ಭಾರತ ಏಕೆ ಮೌನವಾಗಿತ್ತು?” ಎಂದು ಸಮಿತಿಯ ಒಬ್ಬ ಸದಸ್ಯರು ಕೇಳಿದರು. ಭಾರತವು “ಟ್ರಂಪ್‌ಗೆ ಪದೇಪದೆ ಈ ಸಂದರ್ಭವನ್ನು ಬಳಸಿಕೊಳ್ಳಲು ಅವಕಾಶ ನೀಡಿತು” ಎಂದು ಮತ್ತೊಬ್ಬರು ಪ್ರಶ್ನಿಸಿದರು, ವಿಶೇಷವಾಗಿ ಅವರು ತಮ್ಮ ಹೇಳಿಕೆಗಳಲ್ಲಿ ಕಾಶ್ಮೀರವನ್ನು ಉಲ್ಲೇಖಿಸುತ್ತಲೇ ಇದ್ದರು ಎಂದರು.
ಆದರೆ, ಈ ಹೇಳಿಕೆಗಳನ್ನು ವಿದೇಶಾಂಗ ಕಾರ್ಯದರ್ಶಿ ನಿರಾಕರಿಸಿದರು. ಭಾರತ-ಪಾಕಿಸ್ತಾನ ಕದನ ವಿರಾಮವು ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ ದ್ವಿಪಕ್ಷೀಯ ನಿರ್ಧಾರವಾಗಿದೆ ಎಂದು ಹೇಳಿದರು. “ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕವು ಯಾವುದೇ ಪಾತ್ರವನ್ನು ವಹಿಸಿಲ್ಲ” ಎಂದು ಮಿಸ್ರಿ ಸಮಿತಿಗೆ ತಿಳಿಸಿದರು.
ಇದಲ್ಲದೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಸಾಂಪ್ರದಾಯಿಕ ಯುದ್ಧದ ಮಿತಿಯೊಳಗೆ ಉಳಿದಿದೆ. ಇಸ್ಲಾಮಾಬಾದ್‌ನಿಂದ ಯಾವುದೇ ಪರಮಾಣು ಬೆದರಿಕೆಯ ಯಾವುದೇ ಪುರಾವೆಗಳಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಪುನರುಚ್ಚರಿಸಿದರು.
ಮೇ 10 ರಂದು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಒಪ್ಪಂದಕ್ಕೆ ಬಂದರು.
ಪಾಕಿಸ್ತಾನವು ಚೀನಾ ಮೂಲದ ಮಿಲಿಟರಿ ಹಾರ್ಡ್‌ವೇರ್ ಬಳಕೆಯ ಬಗ್ಗೆ ವಿರೋಧ ಪಕ್ಷದ ಸದಸ್ಯರು ಕಳವಳ ವ್ಯಕ್ತಪಡಿಸಿದಾಗ ಮಾತನಾಡಿದ ವಿಕ್ರಮ್ ಮಿಸ್ರಿ, “ಅವರು ಏನು ಬಳಸಿದರು ಎಂಬುದು ಮುಖ್ಯವಲ್ಲ; ಮುಖ್ಯ ವಿಷಯವೆಂದರೆ ನಾವು ಅವರ ವಾಯುನೆಲೆಗಳ ಮೇಲೆ ತೀವ್ರವಾಗಿ ದಾಳಿ ಮಾಡಿದ್ದೇವೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಯುದ್ಧದ ಸಮಯದಲ್ಲಿ ಕಳೆದುಹೋದ ಭಾರತೀಯ ವಿಮಾನಗಳ ಸಂಖ್ಯೆಯ ಬಗ್ಗೆ ಒತ್ತಡ ಹೇರಿದಾಗ, ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ವಿದೇಶಾಂಗ ಕಾರ್ಯದರ್ಶಿ ಪ್ರತಿಕ್ರಿಯಿಸಲು ನಿರಾಕರಿಸಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮಿಸ್ರಿ, ಸಚಿವರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಸದಸ್ಯರನ್ನು ಒತ್ತಾಯಿಸಿದರು. ಆಪರೇಷನ್ ಸಿಂಧೂರ್‌ನ ಮೊದಲ ಹಂತದ ನಂತರ – ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಭಯೋತ್ಪಾದಕ ಗುರಿಗಳ ಮೇಲೆ ಮಾತ್ರ ದಾಳಿ ಮಾಡಲಾಗಿದೆ ಎಂದು ನವದೆಹಲಿ ಇಸ್ಲಾಮಾಬಾದ್‌ಗೆ ತಿಳಿಸಿತ್ತು ಎಂದು ಜೈಶಂಕರ್ ಹೇಳಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಪಾಕಿಸ್ತಾನ ಪರ ಬೇಹುಗಾರಿಕೆ | ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್ ಬ್ಲಾಕ್


