ರಾಜ್ಯ ಕಾಂಗ್ರೆಸ್ ಸರ್ಕಾರದ ಕೇಂದ್ರದ ಬಿಜೆಪಿಗಿಂತ 3 ಪಟ್ಟು ಹೆಚ್ಚು ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದು, ಇದಕ್ಕೆ ನೇರ ಕಾರಣ ಡಿಕೆ ಶಿವಕುಮಾರ್, ಉಳಿದವರು ಇದ್ದರೂ ಡಿಕೆ ಶಿವಕುಮಾರ್ ಪಾಲು ಹೆಚ್ಚಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ವೆಂಕಟಾಚಲಯ್ಯ ಮಂಗಳವಾರ ಹೇಳಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ-ಕರ್ನಾಟಕ’ ಆಯೋಜಿಸಿದ್ದ ಜನಾಗ್ರಹ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾವೇಶದಲ್ಲಿ ಮಾತನಾಡಿದ ವೆಂಕಟಾಚಲಯ್ಯ ಅವರು, “ಕೋಮುವಾದಿಗಳು ಮನೆಗೆ ಹೋಗಬೇಕು ಎಂದು ಜನರು ನಿರ್ಧಾರ ತೆಗೆದುಕೊಂಡಿದ್ದರು. ಆದರೆ ರಾಜ್ಯದ ಈಗಿನ ಸ್ಥಿತಿ ನೋಡಿದರೆ ಈಗ ಬಿಜೆಪಿಗೂ ಕಾಂಗ್ರೆಸ್‌ಗೂ ವ್ಯತ್ಯಾಸ ಕಾಣುತ್ತಿಲ್ಲ. ರೈತ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ರಾಜ್ಯ ಕಾಂಗ್ರೆಸ್ ಕೇಂದ್ರದ ಬಿಜೆಪಿಗಿಂತ 3 ಪಟ್ಟು ಹೆಚ್ಚು ಭೂಮಿಯನ್ನು ಕಿತ್ತುಕೊಳ್ಳುತ್ತಿವೆ” ಎಂದು ಅವರು ಹೇಳಿದ್ದಾರೆ.
ರೈತರ ಭೂಮಿ ಕಿತ್ತಿಕೊಳ್ಳಲು ನೇರ ಕಾರಣ ಡಿಕೆ ಶಿವಕುಮಾರ್ ಆಗಿದ್ದು, ಉಳಿದವರು ಇದ್ದರೂ ಡಿಕೆ ಶಿವಕುಮಾರ್ ಪಾಲು ಹೆಚ್ಚಿದೆ ಎಂದು ಅವರು ಆರೋಪಿಸಿದ್ದಾರೆ.
“ಒಂದು ಕುಟುಂಬಕ್ಕೆ 58 ಎಕರೆ ಭೂಮಿ ಇರಬೇಕು ಎಂಬ ಕಾನೂನಿತ್ತು. ಆದರೆ ಅದಕ್ಕೆ ತಿದ್ದುಪಡಿ ತಂದಿದ್ದು ದೇವೇಗೌಡರರು. ನೈಸ್ ಕಂಪನಿ ಬಳಿ ಅಧೀಕೃತ ಮತ್ತು ಅನಧೀಕೃತವಾಗಿ ಲಕ್ಷ ಎಕರೆಗಿಂತಲೂ ಹೆಚ್ಚಿನ ಭೂಮಿಯಿದೆ. ರೈತರ ಭೂಮಿಯನ್ನು ಕಿತ್ತು ಎಲ್ಲಾ ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ, ಮಠಾಧೀಶರಿಗೆ, ವಿದೇಶಿ ಕಂಪನಿಗಳಿಗೆ ನೀಡಲಾಗುತ್ತಿದೆ. ನಾವು ಯಾರು ಅಭಿವೃದ್ಧಿಯ ವಿರೋಧಿಗಳು ಅಲ್ಲ. ಆದರೆ ಈ ಅಭಿವೃದ್ಧಿ ಯಾರಿಗಾಗಿ ಮಾಡುತ್ತಿದ್ದಾರೆ ಎಂದು ಗಮನಿಸಬೇಕಾಗುತ್ತದೆ. ಬೆಂಗಳೂರು ಸುತ್ತಮುತ್ತಲಿನ ರೈತರು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ.” ಎಂದು ಅವರು ಹೇಳಿದ್ದಾರೆ.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಬಿಡದಿಯಲ್ಲಿ ನಡೆದ ಅಲೆಮಾರಿ ಸಮುದಾಯದ ಬಾಲಕಿಯ ಅತ್ಯಾಚಾರವನ್ನು ಖಂಡಿಸಿದರು. “ಒಂದು ಕಡೆಗೆ ಘಟನಾ ಸ್ಥಳಕ್ಕೆ ತೆರಳಿದ ಜನಪರ ಸಂಘಟನೆಗಳೊಂದಿಗೆ ಪೊಲೀಸರು ದರ್ಪದಿಂದ ವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಆರೆಸ್ಸೆಸ್ ಮತ್ತು ಬಿಜೆಪಿ ಅವರು ಈ ಘಟನೆಯನ್ನು ಇಟ್ಟು ಕೋಮುಗಲಭೆ ಎಬ್ಬಿಸಲು ಪ್ರಯತ್ನ ಮಾಡುತ್ತಿದ್ದಾರೆ.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವುದು ಸಾಮಾನ್ಯ ಎಂದು ರಾಜ್ಯದ ಗೃಹ ಮಂತ್ರಿಯೆ ಹೇಳಿದ್ದರು. ಜನರ ಆಕ್ರೋಶದ ನಂತರ ಅದನ್ನು ವಾಪಾಸು ಪಡೆದರು, ಈ ಸರ್ಕಾರರಲ್ಲಿ ಎಲ್ಲವೂ ಸರಿಯಿಲ್ಲ ಎಂದು ದೇವಿ ಅವರು ಹೇಳಿದ್ದಾರೆ.
“ಗ್ಯಾರೆಂಟಿ ಹೆಸರಿನಲ್ಲಿ ಮಹಿಳೆಗೆ ಏನೂ ಬೇಕಾಗಿಲ್ಲ ಎಂಬಂತೆ ಸರ್ಕಾರ ಬಿಂಬಿಸುತ್ತಿದೆ. ಬೆಂಗಳೂರಿಗೆ ವಲಸೆ ಬಂದ ರೈತ ಮಹಿಳೆಯರು ಕಾರ್ಪೋರೇಟ್ ಕಂಪೆನಿಗಳ ಬಾಗಿಲು ಕಾಯುತ್ತಾ, ಅವರ ಮನೆ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾರ್ಪೋರೇಟ್‌ಗಳಿಗೆ ರತ್ನಗಂಬಳಿ ಹಾಸಿ ಭೂಮಿ ಕೊಡುವ ಸರ್ಕಾರ, ಬಡವರಿಗೆ ಮತ್ತು ನಿವೇಶನ ಇಲ್ಲದವರಿಗೆ ಸರ್ಕಾರ ನಿವೇಶನ ನೀಡದೆ ಕಾಡಿಸುತ್ತಿದೆ. ವಿಧವೆಯರಿಗೆ ಮೂರಂಕಿಯ ಸಹಾಯಧನವನ್ನು ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿಟಿಯು ರಾಜ್ಯಾಧ್ಯಕ್ಷ ಪಿಪಿ ಅಪ್ಪಣ್ಣ ಮಾತನಾಡಿ, “ಕಾರ್ಮಿಕರು, ರೈತರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನೋಡುತ್ತಿದ್ದರೆ ಯಾರಿಗೂ ಇಲ್ಲಿ ರಕ್ಷಣೆಯಿಲ್ಲ ಎಂಬಂತಾಗಿದೆ. ಪಾಕಿಸ್ತಾನ ಮತ್ತು ಭಾರತದ ಸಂಘರ್ಷವನ್ನು ಮೋದಿ ನಿಲ್ಲಿಸಿದರೆ ಅಥವಾ ಟ್ರಂಪ್ ನಿಲ್ಲಿಸಿದರೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಯುದ್ದ ನಿಲ್ಲಿಸಿದ್ದು, ಅಮೆರಿಕದ ಬ್ಯಾಂಕ್‌ಗಳು ಆಗಿವೆ. ಅದಕ್ಕಾಗಿ ಹಣ ಸುರಿದಿದ್ದು ಕೂಡಾ ಅವರೇ ಆಗಿದ್ದಾರೆ.” ಎಂದು ಹೇಳಿದ್ದಾರೆ.
ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್ ಮಾತನಾಡಿ, “ಕಾಂಗ್ರೆಸ್‌ಗೆ ಈ ಹಿಂದೆ ಬೆಂಬಲ ನೀಡಿದ್ದು, ದೊಡ್ಡ ಶತ್ರುವನ್ನು ಮಣಿಸಲು ಸಣ್ಣ ಶತ್ರುವನ್ನು ಮುಂದೆ ತಳ್ಳಿದಂತೆ ಅಷ್ಟೆ. ಕಾಂಗ್ರೆಸ್‌ನ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳ ಕಾರಣಕ್ಕೆ ದೇಶದಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿವೆ. ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿಗೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಹಾಗಾದರೆ ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ಅದನ್ನು ಜಾರಿ ಮಾಡಬಹುದು ಅಲ್ಲವೇ?” ಎಂದು ಹೇಳಿದ್ದರೆ.
ಕೇಂದ್ರ ಜಾರಿ ಮಾಡಿದ್ದ ರೈತ ವಿರೋಧಿ ಕಾಯ್ದೆ ರಚನೆ ಮಾಡಿದ್ದ ತಂಡದಲ್ಲಿ ಇದ್ದವರೇ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಆಗಿದ್ದಾರೆ. ಅವರನ್ನು ಕಿತ್ತೊಗೆಯಲು ನಾವು ಹೋರಾಟ ಮಾಡಬೇಕಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ, ನಾವು ಹಿಂದೆ ಕೂಡಾ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದೆವು. ಈಗಲೂ ಅದನ್ನೇ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಅಲ್ಪ ಸಾಧನೆಯನ್ನು ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಬಗರ್ ಹುಂಕುಂ ಸಾಗುವಳಿದಾರರಿಗೆ ಭೂಮಿ ಒಡೆತನ ಸಿಕ್ಕಿಲ್ಲ, ನಿವೇಶನ ರಹಿತರಿಗೆ ನಿವೇಶನ, ಮನೆ ಇಲ್ಲದವರಿಗೆ ಮನೆ ನೀಡಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಪ್ರಚಾರ ಮಾಡಲಿ. ನಾವು ಕರ್ನಾಟಕ ಸರ್ಕಾರದ ಬಾಲ ಅಲ್ಲ ಎಂದು ಹೇಳಿದ್ದಾರೆ.
ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿಯ ಮೂಲ ಸಿದ್ಧಾಂತವೆ ಶ್ರೀಮಂತರ ಓಲೈಕೆ ಆಗಿದೆ. ಅದು ಗೊತ್ತಿದ್ದೂ ಕಾಂಗ್ರೆಸ್ ಬೆಂಬಲಿಸಿದ್ದು ಬಿಜೆಪಿಯ ಕೋಮು ಕಾರಣಕ್ಕಾಗಿ ಮಾತ್ರ ಎಂದು ಹೇಳಿದ್ದಾರೆ. ಅದಾಗ್ಯೂ, ಕಾಂಗ್ರೆಸ್ ಮೇಲೆ ನಮಗೆ ಅಂದೂ ಕೂಡಾ ಅಥವಾ ಇಂದೂ ಕೂಡ ಅಂತಹ ಭರವಸೆ ಇಲ್ಲ ಎಂದು ಹೇಳಿದರು.

“ರಾಜ್ಯದಲ್ಲಿ 116 ಕೊಮುಗಲಭೆಳು ನಡೆದಿವೆ. ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸರಿಯಾದ ನಿಲುವು ಇಲ್ಲ. ಕೋಮು ಸೌಹಾರ್ದತೆ ಹಾಳು ಮಾಡುವ ಮಠಾಧೀಶರ ಕಾಲಿಗೆ ಸರ್ಕಾರ ಬೀಳುತ್ತಿದೆ. ಈ ಸರ್ಕಾರದಿಂದ ಸಕಾರಾತ್ಮಕ ವಿಚಾರಕ್ಕಿಂತ ನಕಾರಾತ್ಮಕ ವಿಚಾರಗಳೆ ನಮಗೆ ಹೆಚ್ಚಾಗಿ ಕಾಣುತ್ತಿವೆ. ರಾಜ್ಯ ಸರ್ಕಾರ ಈ ಎರಡು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಯಾವುದೇ ವ್ಯತ್ಯಾಸ ಇಲ್ಲ. ಹೋರಾಟದಿಂದಲೆ ಬಂದ ಸಿದ್ದರಾಮಯ್ಯ ಅವರು ಹೋರಾಟಗಾರರನ್ನು ಅವಮಾನಿಸುತ್ತಿದ್ದಾರೆ. ಇನ್ನೂ ಮೂರು ವರ್ಷ ಅಧಿಕಾರ ಇದೆ, ಬದಲಾಗದಿದ್ದರೆ ನಮ್ಮ ಹೋರಾಟಗಳ ಮೂಲಕ ಬದಲಾಯಿಸಬೇಕು” ಎಂದು ವರಲಕ್ಷ್ಮಿ ಹೇಳಿದ್ದಾರೆ.
ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, “ಈ ಸಮಾವೇಶ ಕಾಂಗ್ರೆಸ್ ಸರ್ಕಾರದ ಜೊತೆಗಿನ ಗುದ್ದಾಟದ ಆರಂಭ ಬಿಂದು. ಸರ್ಕಾರ ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿಗೆ ಅವಕಾಶ ಮಾಡಿಕೊಟ್ಟಿದ್ದು, 200 ಕೊಟಿ ಖರ್ಚು ಮಾಡಿ ಕಟ್ಟಿದ ಸರ್ಕಾರಿ ಎಪಿಎಂಸಿ ಮುಚ್ಚಲಾಗಿದೆ. ಮಹಿಳೆಯರ ಅಪೌಷ್ಟಿಕತೆ ಹೆಚ್ಚಾಗುತ್ತಿವೆ. ಬಗರ್‌ಹುಕುಂ ಅರ್ಜಿಗಳನ್ನು ಹರಿದು ಬಿಸಾಕಲಾಗುತ್ತಿವೆ. ಇದನ್ನು ಪ್ರತಿಭಟಿಸಿ ದೆಹಲಿ ಮಾದರಿಯಂತೆ ಬೆಂಗಳೂರಿಗೆ ಮುತ್ತಿಗೆ ಹಾಕಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳಾದ ಹಿನ್ನಲೆ ಪಕ್ಷವು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಮಂಗಳವಾರ ಆಯೋಜಿಸಿದೆ. ಈ ಸಮಾವೇಶದ ನೈತಿಕತೆಯನ್ನು ಪ್ರಶ್ನಿಸಿ ಸಂಯುಕ್ತ ಹೋರಾಟ – ಕರ್ನಾಟಕ ಜನ ಚಳವಳಿಗಳಿಂದ ಜನಾಗ್ರಹ ಸಮಾವೇಶವನ್ನು ನಡೆಸಿದೆ. ‘ಸಂಯುಕ್ತ ಹೋರಾಟ-ಕರ್ನಾಟಕ’ ರಾಜ್ಯದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿದೆ. ಕೇಂದ್ರದ ಬಿಜೆಪಿಗಿಂತ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸುಳ್ಳು ಮಾಹಿತಿ ನೀಡಿದ ಆರೋಪ: ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ಧ ದೂರು ನೀಡಿದ ಕಾಂಗ್ರೆಸ್, ಎಫ್‌ಐಆರ್ ದಾಖಲು
ಸುಳ್ಳು ಮಾಹಿತಿ ನೀಡಿದ ಆರೋಪ: ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ಧ ದೂರು ನೀಡಿದ ಕಾಂಗ್ರೆಸ್, ಎಫ್‌ಐಆರ್ ದಾಖಲು

