‘ಆಪರೇಷನ್ ಸಿಂಧೂರ’ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮೂದಾಬಾದ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ (ಮೇ 21) ಮಧ್ಯಂತರ ಜಾಮೀನು ನೀಡಿದೆ ಎಂದು ವರದಿಯಾಗಿದೆ.
ಅಲಿ ಖಾನ್ ಅವರನ್ನು ಮೇ 18 ರಂದು ಬಂಧಿಸಲಾಗಿತ್ತು. ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಅವರನ್ನು ಮೇ 20ರಂದು ಸೋನೆಪತ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ನಡುವೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಖಾನ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಅವರ ವಿರುದ್ದ ಹರಿಯಾಣ ಪೊಲೀಸರು ದಾಖಲಿಸಿರುವ ಎರಡು ಎಫ್‌ಐಆರ್‌ಗಳಿಗೆ ತಡೆ ನೀಡಲು ನಿರಾಕರಿಸಿದೆ.
ಅಲಿ ಖಾನ್ ಅವರ ಪೋಸ್ಟ್‌ನ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಲು ಮತ್ತು ತನಿಖೆ ಮಾಡಲು ಹರಿಯಾಣ ಅಥವಾ ದೆಹಲಿಗೆ ಸಂಬಂಧಿಸದ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) 24 ಗಂಟೆಗಳ ಒಳಗೆ ರಚಿಸುವಂತೆ ಇದೇ ವೇಳೆ ಸುಪ್ರೀಂ ಕೋರ್ಟ್ ಹರಿಯಾಣ ಡಿಜಿಪಿಗೆ ನಿರ್ದೇಶನ ನೀಡಿದೆ.
ಎಸ್‌ಐಟಿಯ ಒಬ್ಬ ಅಧಿಕಾರಿ ಮಹಿಳೆಯಾಗಿರಬೇಕು. ಎಸ್‌ಐಟಿಗೆ ಐಜಿ ಶ್ರೇಣಿಯ ಅಧಿಕಾರಿ ನೇತೃತ್ವ ವಹಿಸಬೇಕು ಮತ್ತು ಉಳಿದ ಇಬ್ಬರು ಸದಸ್ಯರು ಎಸ್‌ಪಿ ಶ್ರೇಣಿಯವರಾಗಿರಬೇಕು ಎಂದು ಸೂಚಿಸಿದೆ.
ಜಾಮೀನು ನೀಡುವ ವೇಳೆ, ಪ್ರಕರಣ ದಾಖಲಾಗಲು ಕಾರಣವಾಗಿರುವ ಪೋಸ್ಟ್‌ಗೆ ಸಂಬಂಧಿಸಿದ ಯಾವುದೇ ಹೊಸ ಪೋಸ್ಟ್‌ಗಳನ್ನು ಹಾಕುವುದು ಅಥವಾ ಲೇಖನಗಳನ್ನು ಬರೆಯುವುದಕ್ಕೆ ಮತ್ತು ಭಾರತೀಯ ನೆಲದಲ್ಲಿ ನಡೆದ ಭಯೋತ್ಪಾದಕ ದಾಳಿ ಅಥವಾ ಭಾರತ ಅವುಗಳಿಗೆ ನೀಡಿದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದಂತೆ ಸುಪ್ರೀಂ ಕೋರ್ಟ್ ಅಲಿ ಖಾನ್ ಅವರಿಗೆ ನಿರ್ಬಂಧ ವಿಧಿಸಿದೆ.
ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಮತ್ತು ಪಾಸ್‌ಪೋರ್ಟ್ ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ.
ನ್ಯಾಯಾಲಯ ಆದೇಶ ಹೊರಡಿಸಿದ ನಂತರ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಅಲಿ ಖಾನ್ ಅವರ ವಿರುದ್ದ ಪ್ರಸ್ತುತ ವಿಷಯದ ಕುರಿತು ಹೊಸ ಎಫ್‌ಐಆರ್‌ಗಳನ್ನು ದಾಖಲಿಸದಂತೆ ತಡೆಯಲು ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು,”ಏನೂ ಆಗುವುದಿಲ್ಲ” ಎಂದು ಮೌಖಿಕವಾಗಿ ಹೇಳಿದರು. ಈ ಬಗ್ಗೆ ಗಮನಿಸುವಂತೆ ಹರಿಯಾಣ ರಾಜ್ಯ ಸರ್ಕಾರಕ್ಕೂ ಸೂಚಿಸಿದರು. ತನಿಖೆಯ ಸಮಯದಲ್ಲಿ ಕಂಡುಕೊಳ್ಳುವ ಯಾವುದೇ ಹೆಚ್ಚಿನ ಅಪರಾಧದ ವಸ್ತುಗಳನ್ನು ದಾಖಲಿಸಲು ಕೋರ್ಟ್ ರಾಜ್ಯಕ್ಕೆ ಅವಕಾಶ ನೀಡಿದೆ ಎಂದು livelaw.in ವರದಿ ಮಾಡಿದೆ.
ವಿಚಾರಣೆಯ ಆರಂಭದಲ್ಲಿ, ವಕೀಲ ಕಪಿಲ್ ಸಿಬಲ್ ಅವರು ಅಲಿ ಖಾನ್ ಅವರು ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಆಪರೇಷನ್ ಸಿಂಧೂರ ಕುರಿತು ಹಾಕಿದ್ದ ಪೋಸ್ಟ್ ಬಗ್ಗೆ ಪೀಠದ ಗಮನ ಸೆಳೆದರು. ಅವರ ಪೋಸ್ಟ್ ಅನ್ನು ಪೀಠಕ್ಕೆ ಓದಿ ಹೇಳಿದರು. ಇದು ಅತ್ಯಂತ ದೇಶಭಕ್ತಿಯ ಪೋಸ್ಟ್ ಎಂದು ವಿವರಿಸಿದರು.
ಈ ವೇಳೆ “ಆಪರೇಷನ್ ಸಿಂಧೂರ ಕುರಿತ ಮಾಧ್ಯಮಗೋಷ್ಠಿಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹೊಗಳುವ ಬಲಪಂಥೀಯರು ಗುಂಪು ಹಲ್ಲೆ ಮತ್ತು ಆಸ್ತಿಗಳ ಅನಿಯಂತ್ರಿತ ಧ್ವಂಸಕ್ಕೆ ಬಲಿಯಾದವರ ಪರವಾಗಿ ಮಾತನಾಡುವಂತೆ” ಅಲಿಖಾನ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, “ಯುದ್ಧದ ಬಗ್ಗೆ ಹೇಳಿಕೆ ನೀಡಿದ ನಂತರ ಅಲಿ ಖಾನ್ ರಾಜಕೀಯದತ್ತ ತಿರುಗಿದ್ದಾರೆ” ಎಂದು ಹೇಳಿದ್ದಾರೆ.
“ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕು ಇದೆ. ಆದರೆ ಕೋಮುವಾದದ ಬಗ್ಗೆ ಇಷ್ಟೊಂದು ಮಾತನಾಡುವ ಸಮಯ ಇದುವಾ? ದೇಶ ದೊಡ್ಡ ಸವಾಲನ್ನು ಎದುರಿಸುತ್ತಿದೆ. ರಾಕ್ಷಸರು ಎಲ್ಲೆಡೆ ಬಂದು ನಮ್ಮ ಮುಗ್ಧ ಜನರ ಮೇಲೆ ದಾಳಿ ಮಾಡಿದ್ದಾರೆ. ನಾವು ಒಗ್ಗಟ್ಟಿನಿಂದ ಇದ್ದೇವೆ. ಈ ಸಮಯದಲ್ಲಿ ಈ ರೀತಿಯ ಅಗ್ಗದ ಜನಪ್ರಿಯತೆ ಬೇಕು?” ಎಂದು ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದ್ದಾರೆ.
ಈ ವೇಳೆ ಅಲಿ ಖಾನ್ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಂಡ ವಕೀಲ ಕಪಿಲ್ ಸಿಬಲ್, “ಅವರ ಪೋಸ್ಟ್‌ನಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ನ್ಯಾ.ಕಾಂತ್, “ಕಳೆದ 75 ವರ್ಷಗಳಿಂದ ದೇಶ ಹಕ್ಕುಗಳನ್ನು ವಿತರಿಸುತ್ತಿದೆ ಎಂಬಂತೆ, ಎಲ್ಲರೂ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ.
ಸೌಜನ್ಯ ; livelaw.in


