ಮಹತ್ವದ ಬೆಳವಣಿಗೆಯೊಂದರಲ್ಲಿ, ಟ್ರಂಪ್ ಆಡಳಿತವು ಗುರುವಾರ (ಮೇ.22) ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮ (ಎಸ್‌ಇವಿಪಿ) ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಅಮೆರಿಕದ ಗೃಹ ಭದ್ರತಾ ಇಲಾಖೆಗೆ ಆದೇಶಿಸಿದೆ.
ಇದರರ್ಥ ಹಾರ್ವರ್ಡ್ ಇನ್ನು ಮುಂದೆ ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಪ್ರಸ್ತುತ ಇರುವ ವಿದೇಶಿ ವಿದ್ಯಾರ್ಥಿಗಳು ಬೇರೆಗೆ ಸ್ಥಳಾಂತರ ಆಗಬೇಕು. ಇಲ್ಲದಿದ್ದರೆ ಅವರು ಅಮೆರಿಕದಲ್ಲಿ ಉಳಿದುಕೊಳ್ಳುವ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಲಿದ್ದಾರೆ.
ಟ್ರಂಪ್ ಆಡಳಿತದ ಈ ನಿರ್ಧಾರವನ್ನು ವಿವಿಯ ದಕ್ಷಿಣ ಏಷ್ಯಾದ ವಿದ್ಯಾರ್ಥಿ ಸಂಘ ಬಲವಾಗಿ ಖಂಡಿಸಿದೆ. ಇದು ‘ಅನಗತ್ಯ ನಿರ್ಧಾರ’ ಮತ್ತು ವಿವಿ ಮೇಲಿನ ‘ಘೋರ ದಾಳಿ’ ಎಂದು ಕರೆದಿರುವ ಸಂಘ, ವಿವಿ ಆಡಳಿತ ತನ್ನ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮುದಾಯಕ್ಕೆ ದೃಢವಾದ ಬೆಂಬಲ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದೆ.
ವಿದೇಶಿ ವಿದ್ಯಾರ್ಥಿಗಳು ವಿವಿಗೆ ದಾಖಲಾಗುವುದನ್ನು ತಡೆಯುವುದಲ್ಲದೆ, ಪ್ರಸ್ತುತ ಇರುವ ವಿದ್ಯಾರ್ಥಿಗಳು ಬೇರೆಡೆಗೆ ವರ್ಗಾವಣೆಯಾಗುವಂತೆ ಒತ್ತಾಯಿಸುವ ಬಗ್ಗೆ ಸಂಘ ಕಳವಳ ವ್ಯಕ್ತಪಡಿಸಿದೆ. ಈ ಸಂದಿಗ್ಥ ಪರಿಸ್ಥಿತಿಯಲ್ಲಿ ನಮ್ಮ ದಕ್ಷಿಣ ಏಷ್ಯಾದ ಗೆಳೆಯರು ಮತ್ತು ಇಡೀ ವಿದೇಶಿ ವಿದ್ಯಾರ್ಥಿ ಸಮುದಾಯದೊಂದಿಗೆ ನಾವು ಇದ್ದೇವೆ ಎಂದು ಸಂಘ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದೆ.
ಎಲ್ಲಾ ವಿದೇಶಿ ವಿದ್ಯಾರ್ಥಿಗಳು ನಮ್ಮ ಸಂಘ ಮತ್ತು ಹಾರ್ವರ್ಡ್ ವಿವಿಯ ಅವಿಭಾಜ್ಯ ಅಂಗ ಎಂದು ಸಂಘ ತಿಳಿಸಿದೆ.
1986ರಲ್ಲಿ ಸ್ಥಾಪನೆಯಾದ ದಕ್ಷಿಣ ಏಷ್ಯಾ ವಿದ್ಯಾರ್ಥಿ ಸಂಘ ನೂರಾರು ಸದಸ್ಯರನ್ನು ಹೊಂದಿರುವ ಹಾರ್ವರ್ಡ್ ಕ್ಯಾಂಪಸ್‌ನಲ್ಲಿ ಅತಿದೊಡ್ಡ ಮತ್ತು ಅತ್ಯಂತ ಸಕ್ರಿಯ ವಿದ್ಯಾರ್ಥಿ ಗುಂಪುಗಳಲ್ಲಿ ಒಂದಾಗಿದೆ. ಇದು ಎಲ್ಲಾ ಹಿನ್ನೆಲೆಯ ದಕ್ಷಿಣ ಏಷ್ಯನ್ನರಿಗೆ, ಮುಖ್ಯವಾಗಿ ವಲಸಿಗರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಕೆಲಸ ಮಾಡುತ್ತದೆ.
ಪ್ರಸ್ತುತ, ಹಾರ್ವರ್ಡ್ ತನ್ನ ಸಂಸ್ಥೆಗಳಲ್ಲಿ ಪ್ರಪಂಚದ ವಿವಿಧ ಭಾಗಗಳ ಒಟ್ಟು 10,158 ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೆಲೆ ಕಲ್ಪಿಸಿದೆ.
ಹಾರ್ವರ್ಡ್ ಅಂತಾರಾಷ್ಟ್ರೀಯ ಕಚೇರಿಯ ವೆಬ್‌ಸೈಟ್‌ನಲ್ಲಿರುವ ಅಂಕಿ ಅಂಶಗಳ ಪ್ರಕಾರ, 2024-25ನೇ ಶೈಕ್ಷಣಿಕ ವರ್ಷದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲಾ ಸಂಸ್ಥೆಗಳಲ್ಲಿ ಭಾರತದ 788 ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇದ್ದಾರೆ.
ಆಪರೇಷನ್ ಸಿಂಧೂರದ ಭಾಗವಾಗಿದ್ದ ಮಹಿಳಾ ವಿಂಗ್ ಕಮಾಂಡರನ್ನು ತೆಗೆದುಹಾಕದಂತೆ ಸುಪ್ರಿಂಕೋರ್ಟ್ ಸೂಚನೆ


