ವಿಪಕ್ಷದಲ್ಲಿದ್ದಾಗ ಬಿಜೆಪಿ ತಂದಿದ್ದ ಜಾನುವಾರು ಹತ್ಯೆ ಕಾಯ್ದೆ, ಭೂ ಸುದಾರಣೆ ಕಾಯ್ದೆ, ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 12ಕ್ಕೆ ಏರಿಸುವುದರ ವಿರುದ್ಧ ಮಾತಾನಾಡಿದ್ದ ಕಾಂಗ್ರೆಸ್, ಅಧಿಕಾರ ಹಿಡಿದು ಅದನ್ನೇ ಮುಂದುವರಿಸಿದೆ ಎಂದು ‘ಎದ್ದೇಳು ಕರ್ನಾಟಕ’ದ ಕೇಂದ್ರ ಸಮಿತಿ ಸದಸ್ಯ, ರೈತ ಮುಖಂಡ ವೀರ ಸಂಗಯ್ಯ ಅವರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು. ಎದ್ದೇಳು ಕರ್ನಾಟಕ ಸಂಘಟನೆಯು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಅಧಿಕಾರ ಹಿಡಿದು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರ ಸಂಗಯ್ಯ ಅವರು, “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು. ಅದಕ್ಕಿಂತಲೂ ಮುಂಚೆ ಬಿಜೆಪಿಯಿಂದ ರೋಸಿ ಹೋಗಿದ್ದ ರೈತ, ದಲಿತ, ಮಹಿಳಾ ಸಂಘಟನೆಗಳು ಸೇರಿದಂತೆ ರಾಜ್ಯದ ಜನರು ಹೋರಾಟ ನಡೆಸಿ ಬಿಜೆಪಿಯನ್ನು ಸೋಲಿಸಿದರು. ಅದಾಗ್ಯೂ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಕೋಮುಗಲಭೆ ನಡೆದಿದೆ. ಅದರ ಬಗ್ಗೆ ಅವರು ಸರಿಯಾದ ನಿಲುವು ತೆಗೆದುಕೊಂಡಿಲ್ಲ. ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಬೀದಿಯಲ್ಲಿ ಚಳವಳಿಗಳ ಮೂಲಕ ಎದುರಿಸಲಿದ್ದೇವೆ” ಎಂದು ಹೇಳಿದರು.
ಹೋರಾಟಗಾರ ಕೆ.ಎಲ್. ಅಶೋಕ್ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾಗ ಅದನ್ನು ಅವಲೋಕನ ಸಮಾವೇಶ ಮಾಡಿ ಎಂದಿದ್ದೆವು. ಇದೇ ರೀತಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ ನೀವು ಮನೆಗೆ ಹೋಗುತ್ತೀರಿ” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ಎರಡು ವರ್ಷಗಳಾದರೂ ಎಪಿಎಂಸಿ ಕಾಯ್ದೆ, ಕಾರ್ಮಿಕ ವಿರೋಧಿ ನೀತಿಗಳನ್ನು ಯಾಕೆ ವಾಪಾಸು ತೆಗೆದುಕೊಂಡಿಲ್ಲ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ವಿರುದ್ಧವಾಗಿ ಬಂದ ನೀವು ಕೂಡಾ ಭ್ರಷ್ಟಾಚಾರ ಮುಂದುವರೆಸಿದ್ದೀರಿ. ಹಾಗಾಗದರೆ ಅವರಿಗೂ, ನಿಮಗೂ ವ್ಯಾತ್ಯಾಸ ಏನಿದೆ. ಬಿಜೆಪಿಯದೆ ನೀತಿಯನ್ನು ನೀವು ಅನುಸರಿಸುತ್ತಿದ್ದೀರಿ. ಜನ ವಿರೋಧಿ ಕಾಯ್ದೆಯನ್ನು ಬಡವರ ಸಮಾಧಿ ಮೇಲೆ ಜಾರಿಗೆ ತರುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರದ ವಿರುದ್ಧ ನಾವು ಈ ಹಿಂದೆ ಕೂಡಾ ಮಾಡಿದ್ದೇವೆ.ಕರ್ನಾಟಕದ ಅರ್ಧ ಜನರು ಭೂಮಿ ಮತ್ತು ವಸತಿ ಹೀನರಾಗಿದ್ದಾರೆ. ಸರ್ಕಾರದ ಕಣ್ಣು ಕುರುಡಾಗಿದ್ದು ಕಿವಿ ಕೇಳಿಸುತ್ತಿಲ್ಲ. ನೀವು ಇದೇ ರೀತಿ ಮುಂದುವರೆದರೆ ಘನಘೋರ ಪರಿಸ್ಥಿತಿಗೆ ತಲುಪಲಿದ್ದೀರಿ. ಎರಡ ವರ್ಷ ಕಾದರೂ ಏನೂ ಆಗದ ಕಾರಣಕ್ಕೆ ಸರ್ಕಾರದ ವಿರುದ್ಧ ಸಂಗ್ರಾಮಕ್ಕೆ ಮುಂದಾಗಿದ್ದೇವೆ. ಇದಕ್ಕೂ ಕೇಳಿಲ್ಲ ಎಂದರೆ ಜನ ಚಳವಳಿಗಳು ಮತ್ತಷ್ಟು ಜಾಸ್ತಿಯಾಗುತ್ತದೆ” ಎಂದು ಅಶೋಕ್ ಹೇಳಿದರು.
ಮಾಜಿ ಸಚಿವರಾದ ಬಿಟಿ ಲಲಿತಾ ನಾಯಕ್ ಮಾತನಾಡಿ, “ರಾಜ್ಯದಲ್ಲಿ ಶ್ರೀಮಂತರನ್ನು ಬಿಟ್ಟು ಎಲ್ಲರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪರದಾಡುವಂತಾಗಿದೆ. ಗ್ಯಾರೆಂಟಿ ಯೋಜನೆ ರೀತಿಯ ಐದಾರು ಅಂಶಗಳನ್ನು ತಂದ ಮಾತ್ರಕ್ಕೆ, ಅದನ್ನೆ ಸರ್ಕಾರದ ದೊಡ್ಡ ಸಾಧನೆ ಎಂದು ಹೇಳಬೇಕೆ? ಬೆಂಗಳೂರಿನಲ್ಲಿ ಮಳೆ ಬಂದು ಜನರು ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ನೀರು ತುಂಬಿಕೊಳ್ಳುತ್ತಿತ್ತು, ಗುಂಡಿ ಇತ್ತು ಎಂದು ಹೇಳುವುದಾದರೆ ನೀವು ಯಾಕೆ ಅಧಿಕಾರಕ್ಕೆ ಬರಬೇಕಿತ್ತು? ಬಿಜೆಪಿ ಇದ್ದರೆ ಸಾಕಿತ್ತಲ್ಲವೆ” ಎಂದು ಪ್ರಶ್ನಿಸಿದರು.
“ಈ ರೀತಿಯಾಗಿ ಮಾತನಾಡಲು ನೀವು ಯಾಕೆ ಬೇಕು? ಬಿಜೆಪಿ ಕೂಡಾ ಅದನ್ನೇ ಮಾಡಿಕೊಂಡು ಬಂದಿದೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಾಗಿದೆ. ಕೋಮುಗಲಭೆ ಹೆಚ್ಚಾಗಿದೆ. ನಿಮ್ಮ ಪರವಾಗಿ ಕೆಲಸ ಮಾಡಿದ ಸಂಘಟನೆಗಳಿಗೆ ನಿಮ್ಮನ್ನು ಸರಿ ಮಾಡಬೇಕಾದ ತುರ್ತಿದೆ. ಯಾವ ವಂಚನೆ ಇಲ್ಲದೆ ಜನರ ಪರವಾಗಿ ಕೆಲಸ ಮಾಡಿ ಎಂದು ಹೇಳುತ್ತಿದ್ದೇವೆ” ಎಂದು ಹೇಳಿದರು.
ದಲಿತ ಹಕ್ಕುಗಳ ಹೋರಾಟಗಾರ ಎನ್. ವೆಂಕಟೇಶ್ ಮಾತನಾಡಿ, “ಬಿಜೆಪಿ ಸೋಲಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆ ಅಡಿಯಲ್ಲಿ ಚುನಾವಣೆ ವೇಳೆ ದಸಂಸ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ನಿರಾಸೆ ಕಾಂಗ್ರೆಸ್ ಮೂಡಿಸಿದೆ. ಮಂಗಳೂರಿನಲ್ಲಿ ಇಡೀ ಸಮುದಾಯಯವನ್ನೆ ಕೋಮುವಾದಿಕರಣ ಮಾಡಲಾಗುತ್ತಿದೆ. ಕೋಮು ಘಟನೆಗಳು ನಡೆಯುವಲ್ಲಿ ದಕ್ಷ ಅಧಿಕಾರಿಗಳನ್ನು ನೇಮಿಸಬೇಕಿದೆ.” ಎಂದು ಹೇಳಿದರು.
“ಭ್ರಷ್ಟಾಚಾರ ಬಗ್ಗೆ ಸಂಬಂಧಪಟ್ಟ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಏನೂ ಮಾತನಾಡುತ್ತಿರಲಿಲ್ಲ. ಅವರು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ. ಕೇಂದ್ರ ಸರ್ಕಾರ ಎನ್ಇಪಿ ತಂದು ಶಿಕ್ಷಣವನ್ನು ಕೋಮುವಾದಿಕರಣ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು. ಇಲ್ಲವೆಂದರೆ ದಸಂಸ ಇತರ ಪ್ರಗತಿಪರ ಸಂಘಟನೆಗಳನ್ನು ಸೇರಿಸಿ ಹೋರಾಟ ಮಾಡಬೇಕಾಗುತ್ತದೆ” ಎಂದು ವೆಂಕಟೇಶ್ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಅಧಿಕಾರ ಹಿಡಿದು


