ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮಂಗಳವಾರ (ಮೇ.27) ನಡೆದ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ (32) ಎಂಬವರ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಕೊಲೆಯತ್ನ ಪ್ರಕರಣ ಸಂಬಂಧ 15 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಈ ವಿಚಾರವನ್ನು ನಾನುಗೌರಿ.ಕಾಂಗೆ ಖಚಿತಪಡಿಸಿದ್ದಾರೆ.
ಸ್ಥಳೀಯರಾದ ದೀಪಕ್ ಮತ್ತು ಸುಮಿತ್ ಸೇರಿ 15 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ದೀಪಕ್ ಮತ್ತು ಸುಮಿತ್ ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರಿಗೆ ಪರಿಚಯಸ್ಥರು ಎಂದು ವರದಿಗಳು ಹೇಳಿವೆ.
ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರು ಬಂಟ್ಬಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಗಳು ವಿವರಿಸಿವೆ.
“ಮೃತ ಅಬ್ದುಲ್ ರಹಿಮಾನ್ ಅವರು ಕೊಳ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಕಲಂದರ್ ಶಾಫಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಊರಿನ ಜನರೊಂದಿಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ದುಷ್ಕರ್ಮಿಗಳ ಗುಂಪು ಕೋಮು ಭಾವನೆಯಿಂದ ಅಥವಾ ಇನ್ನಾವುದೋ ಕಾರಣಕ್ಕೆ ಅಬ್ದುಲ್ ರಹಿಮಾನ್ ಅವರನ್ನು ಕೊಲೆಗೈದು, ಕಲಂದರ್ ಶಾಫಿ ಅವರನ್ನು ತೀವ್ರವಾಗಿ ಗಾಯಗೊಳಿಸಿ ಕೊಲೆ ಪ್ರಯತ್ನ ಮಾಡಿದ್ದಾರೆ. ಈ ಕೃತ್ಯದಲ್ಲಿ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ನಿಸಾರ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ” ಎಂದಿವೆ.
ವರದಿಗಳ ಪ್ರಕಾರ, ಆರೋಪಿಗಳ ವಿರುದ್ದ ಬಂಟ್ವಾಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 103, 109, 118(1), 118(2), 190, 191(1), 191(2), 191(3) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಬೇಧಿಸಲು 5 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಕರಾವಳಿಯಲ್ಲಿ ಮತ್ತೊಬ್ಬ ಯುವಕನ ಹತ್ಯೆ: ಕೋಮುವಾದಕ್ಕೆ ಕಡಿವಾಣ ಹಾಕದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ


