ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ದುರ್ಘಟನೆಗಳು ಸಂಭವಿಸಿವೆ. ಶುಕ್ರವಾರ (ಮೇ.30) ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿ ನೌಶಾದ್ ಎಂಬವರ ಮನೆ ಮೇಲೆ ಗುಡ್ಡ ಕುಸಿದು, ಅವರ 10 ವರ್ಷದ ಮಗಳು ಫಾತಿಮಾ ನಈಮ ಸಾವಿಗೀಡಾಗಿದ್ದಾರೆ. ನೌಶಾದ್ ಅವರ ಮನೆಯ ಹಿಂಬದಿಯ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಈ ವೇಳೆ ಕೊಠಡಿಯೊಂದರ ಕಿಟಕಿ ಬಾಲಕಿ ಮೇಲೆ ಬಿದ್ದು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ ಸಂಭವಿಸಿದೆ. ಘಟನೆಯಲ್ಲಿ ಕಾಂತಪ್ಪ ಪೂಜಾರಿ ಎಂಬವರ ಪತ್ನಿ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಅವಶೇಷಗಳಡಿ ಸಿಲುಕೊಂಡಿದ್ದರು.
ಈ ಪೈಕಿ ಈ ಸುದ್ದಿ ಬರೆಯುವ ಹೊತ್ತಿಗೆ (ಮಧ್ಯಾಹ್ನ 12:30) ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ (58) ಮತ್ತು ಮತ್ತು ಒಬ್ಬ ಮೊಮ್ಮಗ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸೊಸೆ ಅಶ್ವಿನಿ ಮತ್ತು ಇನ್ನೊಂದು ಮಗುವಿನ ರಕ್ಷಣಾ ಕಾರ್ಯಾ ಮುಂದುವರಿದಿದೆ.
ಶುಕ್ರವಾರ ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಘಟನೆ ಸಂಭವಿಸಿದೆ. ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ ಹಾಗೂ ಅವರ ಪುತ್ರ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು| ರಾತ್ರೋರಾತ್ರಿ ದಲಿತರ ಮನೆ, ದೇವಸ್ಥಾನ ಧ್ವಂಸ ಆರೋಪ: ಪ್ರಕರಣ ದಾಖಲು


