ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ, ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ತಂದೆ-ಮಗನನ್ನು ಹತ್ಯೆಗೈದ ಆರೋಪದ ಮೇಲೆ ಏಳು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ವೀರೇಂದ್ರಸಿಂಹ ಎನ್ ಜಡೇಜಾ ಮತ್ತು ಅವರ ಅಧೀನ ಅಧಿಕಾರಿಗಳಾದ ರಾಜೇಶ್ ಸಾವಿಜಿಭಾಯಿ, ಕಿರೀಟ್‌ಭಾಯಿ ಗಣೇಶ್‌ಭಾಯಿ, ದಿಗ್ವಿಜಯ್ ಸಿನ್ಹ್ ಹರ್ದೀಪ್ ಸಿನ್ಹ್, ಪ್ರಹ್ಲಾದಭಾಯಿ ಪ್ರಭುಭಾಯಿ ಮತ್ತು ಮನುಭಾಯಿ ಗೋವಿಂದ್‌ಭಾಯಿ ಸೇರಿದಂತೆ ಏಳು ಪೊಲೀಸರ ವಿರುದ್ಧ ಶುಕ್ರವಾರ (ಮೇ.30) ಪಟ್ಡಿ ತಾಲೂಕಿನ ಬಜಾನಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ಪೊಲೀಸರ ವಿರುದ್ಧ ಕೊಲೆ ಸೇರಿದಂತೆ ಇತರ ಆರೋಪಗಳಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಧೃಂಗಾಧ್ರದ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಡಿ. ಪುರೋಹಿತ್ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಪುರೋಹಿತ್ ಅವರನ್ನು ನೇಮಿಸಲಾಗಿದೆ.
ಪಟ್ಡಿ ತಾಲೂಕಿನಲ್ಲಿ 2021ರಲ್ಲಿ ಆಪಾದಿಯ ನಕಲಿ ಎನ್‌ಕೌಂಟರ್ ನಡೆದಿದೆ. ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಆರೋಪಿ ಪಿಎಸ್ಐ ಜಡೇಜಾ ನೇತೃತ್ವದ ತಂಡ ನಡೆಸಿದ ಗುಂಡಿನ ದಾಳಿಯಲ್ಲಿ ಹನೀಫ್ ಜಾಟ್ ಮಲಿಕ್ (44) ಮತ್ತು ಅವರ ಮಗ ಮದೀನ್ (14) ಸಾವನ್ನಪ್ಪಿದ್ದರು.
ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ ಎಂದು ಹೇಳುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಆದರೆ, ಮೃತರ ಕುಟುಂಬ ಸದಸ್ಯರು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಂದೆ-ಮಗನನ್ನು ನಿರ್ದಯವಾಗಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದರು. ಹತ್ಯೆಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು.
ನವೆಂಬರ್ 6, 2021ರಂದು ಬಜಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆಡಿಯಾ ಗ್ರಾಮದಲ್ಲಿ ತನ್ನ ತಂದೆ ಮತ್ತು ಸಹೋದರನನ್ನು ಕ್ರೂರವಾಗಿ ಕೊಲ್ಲಲಾಯಿತು ಎಂದು ಆರೋಪಿಸಿ ಸೋಹಾನಾ ಮಲೇಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ (GUJCTOC) ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಹನೀಫ್ ಬೇಕಾಗಿದ್ದ ಎಂದು ಪೊಲೀಸರು ಹೇಳಿಕೊಂಡಿದ್ದರು. ಹಲವಾರು ಲೂಟಿ ಮತ್ತು ಕಳ್ಳತನ ಪ್ರಕರಣಗಳಲ್ಲಿ ಹನೀಫ್ ಭಾಗಿಯಾಗಿದ್ದ ಎಂದು ಹೇಳಿಕೊಂಡಿದ್ದರು. ಹನೀಫ್ ಕುಖ್ಯಾತ “ಗೆಡಿಯಾ ಗ್ಯಾಂಗ್” ನ ಭಾಗವಾಗಿದ್ದ. 86 ಎಫ್‌ಐಆರ್‌ಗಳಲ್ಲಿ ಹೆಸರಿಸಲ್ಪಟ್ಟಿದ್ದ ಮತ್ತು 59 ಪ್ರಕರಣಗಳಲ್ಲಿ ಬೇಕಾಗಿದ್ದ ಎಂದಿದ್ದರು.
ನಿರ್ದಿಷ್ಟ ಮಾಹಿತಿ ಪಡೆದ ನಂತರ ಜಡೇಜಾ ನೇತೃತ್ವದ ಏಳು ಸದಸ್ಯರ ಪೊಲೀಸ್ ತಂಡ ಹನೀಫ್ ಅವರನ್ನು ಬಂಧಿಸಲು ಗ್ರಾಮಕ್ಕೆ ಹೋಗಿತ್ತು. ಈ ವೇಳೆ ಹನೀಫ್ ಮತ್ತು ಅವರ ಮಗ ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೆ, ಹನೀಫ್ ತನ್ನ ಮಗ ಮತ್ತು ಇತರರ ಸಹಾಯದಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಪೊಲೀಸರು ಪ್ರತಿ ಗುಂಡು ಹಾರಿಸಬೇಕಾಯಿತು. ಒಂದು ಗುಂಡು ಹನೀಫ್ ಎದೆಗೆ ತಗುಲಿದರೆ, ಇನ್ನೊಂದು ಗುಂಡು ಮಗ ಮದೀನ್ ಗೆ ತಗುಲಿತ್ತು ಎಂದು ತಿಳಿಸಿದ್ದಾರೆ.
2024ರಲ್ಲಿ ಗುಜರಾತ್ ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿ ಅರ್ಜಿದಾರರಿಗೆ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯ ನೀಡಿತ್ತು. ನಂತರ, ಅರ್ಜಿದಾರರು ಮ್ಯಾಜಿಸ್ಟೀರಿಯಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಮ್ಯಾಜಿಸ್ಟೀರಿಯಲ್ ನ್ಯಾಯಾಲಯ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಆದೇಶಿಸಿದೆ ಎಂದು ವರದಿಯಾಗಿದೆ.
ಗೋಮಾಂಸ ಮಾರಾಟ ಆರೋಪ; ದೆಹಲಿ ವಿಶ್ವವಿದ್ಯಾಲಯ ಬಳಿಯ ಅಂಗಡಿ ಮಾಲೀಕನಿಗೆ ಹಲ್ಲೆ


