ನವದೆಹಲಿಯ ಜಂಗ್‌ಪುರ ಪ್ರದೇಶದ ಮದ್ರಾಸಿ ಕ್ಯಾಂಪ್‌ನ ಮನೆಗಳನ್ನು ಸರ್ಕಾರ ತೆರವುಗೊಳಿಸಿದ್ದು, ನಿರಾಶ್ರಿತರಾಗಿರುವ ಜನರು ತಮ್ಮ ಮೂಲ ಸ್ಥಳಕ್ಕೆ ಮರಳಲು ಬಯಸುವುದಾದರೆ, ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡುವುದಾಗಿ ತಮಿಳುನಾಡು ಸರ್ಕಾರ ಭಾನುವಾರ ತಿಳಿಸಿದೆ.
ನವದೆಹಲಿಯ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದ ಬಳಿಯ ಜಂಗ್‌ಪುರ ಪ್ರದೇಶದ ಬರಾಪುಲ್ಲಾ ಚರಂಡಿಯ ಬಳಿ ದಶಕಗಳಿಂದ ಮದ್ರಾಸಿ ಕ್ಯಾಂಪ್ ಇತ್ತು. ಇಲ್ಲಿ ಸುಮಾರು 370 ಮನೆಗಳಲ್ಲಿ ತಮಿಳುನಾಡು ಮೂಲದ ಜನರು ವಾಸಿಸುತ್ತಿದ್ದರು.
ದೆಹಲಿ ಹೈಕೋರ್ಟ್ ಆದೇಶದಂತೆ ದೆಹಲಿ ಅಭಿವೃದ್ದಿ ಪ್ರಾಧಿಕಾರ ಭಾನುವಾರ ಇಲ್ಲಿನ ಮನೆಗಳನ್ನು ತೆರವುಗೊಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮದ್ರಾಸಿ ಕ್ಯಾಂಪ್‌ನಿಂದಾಗಿ ಬರಾಪುಲ್ಲಾ ಚರಂಡಿ ಮುಚ್ಚಿಹೋಗಿ ನೀರು ಹರಿಯಲು ಜಾಗ ಇಲ್ಲ ಕಾರಣ ಮಳೆಗಾಲದಲ್ಲಿ ಆ ಪ್ರದೇಶ ಜಲಾವೃತ್ತ ಆಗುತ್ತಿತ್ತು. ಹಾಗಾಗಿ, ಕ್ಯಾಂಪ್ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು ಎಂದು ವರದಿ ತಿಳಿಸಿದೆ.
ದೆಹಲಿ ಸರ್ಕಾರ ಮನೆಗಳನ್ನು ಧ್ವಂಸಗೊಳಿಸಿದ ಬೆನಲ್ಲೇ, ಸಂತ್ರಸ್ತರ ಜೊತೆ ಇರುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ಸಂತ್ರಸ್ತರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲು ನವದೆಹಲಿಯ ತಮಿಳುನಾಡು ಹೌಸ್‌ಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನಿರ್ದೇಶನ ನೀಡಿದ್ದಾರೆ.
ವರದಿಗಳ ಪ್ರಕಾರ, ಮದ್ರಾಸಿ ಕ್ಯಾಂಪ್ ಅನ್ನು ‘ಅನಧಿಕೃತ ಅತಿಕ್ರಮಣ’ ಎಂದು ಹೇಳಿದ್ದ ದೆಹಲಿ ಹೈಕೋರ್ಟ್, ಮೇ 9 ರಂದು ಬರಾಪುಲ್ಲಾ ಚರಂಡಿಯ ಉದ್ದಕ್ಕೂ ಇರುವ ಪ್ರದೇಶವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಮದ್ರಾಸಿ ಕ್ಯಾಂಪ್ ಮಳೆಗಾಲದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಳಚರಂಡಿಯ ನೀರು ಹರಿಯಲು ಅಡ್ಡಿಯಾಗುತ್ತಿದೆ ಎಂದು ಹೇಳಿತ್ತು.
ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ ಕಾಯ್ದೆ ಮತ್ತು ದೆಹಲಿ ಕೊಳೆಗೇರಿ ಮತ್ತು ಜುಗ್ಗಿ ಝೋಪ್ರಿ ಪುನರ್ವಸತಿ ಮತ್ತು ಸ್ಥಳಾಂತರ ನೀತಿಯ ನಿಬಂಧನೆಗಳ ಅಡಿಯಲ್ಲಿ ಅರ್ಹ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯು ಕ್ಯಾಂಪ್‌ನಲ್ಲಿದ್ದ 370 ಕುಟುಂಬಗಳಲ್ಲಿ ಕೇವಲ 215 ಕುಟುಂಬಗಳಿಗೆ ಮಾತ್ರ ವಸತಿಗೆ ಅರ್ಹರು ಎಂದು ನಿರ್ಧರಿಸಿತ್ತು. ಈ ಕುಟುಂಬಗಳಿಗೆ ಕ್ಯಾಂಪ್‌ನಿಂದ 35 ಕಿ.ಮೀ ದೂರದಲ್ಲಿರುವ ಉತ್ತರದ ಉಪನಗರವಾದ ನರೇಲಾದಲ್ಲಿ ವಸತಿ ವ್ಯವಸ್ಥೆಯನ್ನು ಮಾಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉಳಿದ 155 ಕುಟುಂಬಗಳು ದಾಖಲೆಗಳು ಅಥವಾ ಅರ್ಹತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂದು ವರದಿಯಾಗಿದೆ. ಇದರಿಂದ ಈ ಕುಟುಂಬಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮದ್ರಾಸಿ ಕ್ಯಾಂಪ್ ಅಡುಗೆಯವರು ಮತ್ತು ದಿನಗೂಲಿ ಕಾರ್ಮಿಕರಾಗಿ ಉದ್ಯೋಗ ಅರಸಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ತಮಿಳು ಮಾತನಾಡುವ ವಲಸಿಗರಿಗೆ ಆಶ್ರಯ ನೀಡಿತ್ತು.
ಕಮಲ್ ಹಾಸನ್ ಭಾಷಾ ವಿವಾದ | ‘ಥಗ್ ಲೈಫ್’ ಬಹಿಷ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ


