“ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ” ಎಂದು ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ (ಜೂ.3) ತರಾಟೆಗೆ ತೆಗೆದುಕೊಂಡಿದೆ. ತನ್ನ ಹೇಳಿಕೆಗೆ ಕ್ಷಮೆಯಾಚಿಸಲು ಕಮಲ್ ಹಾಸನ್ ನಿರಾಕರಿಸಿದ್ದನ್ನು ಪ್ರಶ್ನಿಸಿದ ನ್ಯಾಯಾಲಯ, ಒಂದೇ ಒಂದು ಕ್ಷಮೆಯಾಚನೆಯಿಂದ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಹೇಳಿದೆ.
ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವರ ಮುಂಬರುವ ಚಿತ್ರ ‘ಥಗ್ ಲೈಫ್’ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಅವಕಾಶ ಮತ್ತು ಸೂಕ್ತ ರಕ್ಷಣೆ ಕೋರಿ ‘ರಾಜ್‌ಕಮಲ್ ಫಿಲ್ಮ್ಸ್’ ನ್ಯಾಯಾಲಯದ ಮೊರೆ ಹೋಗಿತ್ತು.
ಸಾರ್ವಜನಿಕ ವ್ಯಕ್ತಿಯಾಗಿ ಕಮಲ್ ಹಾಸನ್ ಅವರ ಜವಾಬ್ದಾರಿಗಳ ಬಗ್ಗೆ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸುತ್ತಾ, “ನೀವು ಕಮಲ್ ಹಾಸನ್ ಆಗಿರಬಹುದು ಅಥವಾ ಯಾರಾದರೂ ಆಗಿರಬಹುದು, ನೀವು ಜನಸಾಮಾನ್ಯರ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಈ ದೇಶ ಭಾಷಾವಾರು ವಿಭಜನೆಯಾಗಿದೆ. ಹಾಗಾಗಿ, ಸಾರ್ವಜನಿಕ ವ್ಯಕ್ತಿಯೊಬ್ಬರು ಅಂತಹ ಹೇಳಿಕೆ ನೀಡಲು ಸಾಧ್ಯವಿಲ್ಲ. ಈ ಹೇಳಿಕೆಯಿಂದ ಆಗಿರುವುದು ಏನು? ಅಶಾಂತಿ, ಅಸಂಗತತೆ ಅಲ್ಲವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಕರ್ನಾಟಕದ ಜನರು ನಿಮ್ಮಿಂದ ಕ್ಷಮೆ ಬಯಸಿದ್ದಾರೆ. ನೀವು ರಕ್ಷಣೆ ಕೋರಿ ಇಲ್ಲಿಗೆ ಬಂದಿದ್ದೀರಿ. ನೀವು ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದೀರಿ? ನೀವು ಇತಿಹಾಸಕಾರರೇ, ಭಾಷಾಶಾಸ್ತ್ರಜ್ಞರೇ? ಎಂದು ನ್ಯಾಯಾಧೀಶರು ಖಾರವಾಗಿ ಕೇಳಿದ್ದಾರೆ.
ಅರ್ಜಿದಾರರಾದ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಪರವಾಗಿ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, “ಕಮಲ್ ಹಾಸನ್ ಬೇರೆಯೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ದಯವಿಟ್ಟು ಈ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ನೀಡಲಾಗಿದೆ ಎಂಬುದನ್ನು ನೋಡಿ” ಎಂದು ಮನವಿ ಮಾಡಿದ್ದಾರೆ.
ಮುಂದುವರಿದು, “ಆ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರೋದ್ಯಮದ ಸೂಪರ್‌ಸ್ಟಾರ್ ಕೂಡ ಉಪಸ್ಥಿತರಿದ್ದರು. ಅವರು (ಕಮಲ್ ಹಾಸನ್) ನೀಡಿದ ಹೇಳಿಕೆಯನ್ನು ಕನ್ನಡ ಭಾಷೆಯ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಚಿನ್ನಪ್ಪ ವಾದಿಸಿದ್ದಾರೆ. ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡ ನಂತರ ಕಮಲ್ ಹಾಸನ್ ನೀಡಿದ ಉತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ವೇಳೆ ನ್ಯಾಯಾಲಯ, 75 ವರ್ಷಗಳ ಹಿಂದೆ ಇದೇ ರೀತಿಯ ಹೇಳಿಕೆ ನೀಡಿದ್ದ ರಾಜಗೋಪಾಲ್ ಆಚಾರ್ಯ ಅವರ ಉದಾಹರಣೆಯನ್ನು ಉಲ್ಲೇಖಿಸಿದೆ.
“ರಾಜಗೋಪಾಲ್ ಅವರು 75 ವರ್ಷಗಳ ಹಿಂದೆ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ನಂತರ ಅವರು ಕ್ಷಮೆಯಾಚಿಸಿದರು. ಈಗ ನೀವು ನಿಮ್ಮ ಚಿತ್ರದ ಬಿಡುಗಡೆಗೆ ರಕ್ಷಣೆ ಕೋರುತ್ತಿದ್ದೀರಿ. ಕ್ಷಮೆಯಾಚಿಸಬೇಕಾಗಿತ್ತು” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.


