ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಕೇರಳದ ಮಗುವೊಂದು ವಿನಂತಿಸುವ ವಿಡಿಯೋ ಕಳೆದ ಫೆಬ್ರವರಿಯಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು, ಅಂಗನವಾಡಿ ಕೇಂದ್ರಗಳ ಆಹಾರದ ಮೆನು ಪರಿಷ್ಕರಿಸುವ ಬಗ್ಗೆ ಯೋಚಿಸುತ್ತೇವೆ ಎಂದಿದ್ದರು.
ಅದರಂತೆ ಈಗ ರಾಜ್ಯದ 33,120 ಅಂಗನವಾಡಿ ಕೇಂದ್ರಗಳ ಆಹಾರದ ಮೆನು ಪರಿಷ್ಕರಣೆಯಾಗಿದೆ. ಬಿರಿಯಾನಿ, ಪಲಾವ್‌ನಂತಹ ವೈವಿಧ್ಯಮಯ ಆಹಾರಗಳು ಸೇರ್ಪಡೆಯಾಗಿವೆ.
ಮಂಗಳವಾರ, ಪತ್ತನಂತಿಟ್ಟ ಜಿಲ್ಲೆಯಲ್ಲಿ ಅಂಗನವಾಡಿಗಳ ರಾಜ್ಯಮಟ್ಟದ ಪುನರಾರಂಭವನ್ನು ಉದ್ಘಾಟಿಸಿದ ಸಚಿವೆ ವೀಣಾ ಜಾರ್ಜ್, “ಸಂಕುನಂತಹ ಮಕ್ಕಳ ಕೋರಿಕೆಗಳನ್ನು ಸ್ವೀಕರಿಸುವ ಮೂಲಕ ಸರ್ಕಾರವು ಆಹಾರ ಮೆನುವನ್ನು ಪರಿಷ್ಕರಿಸಿದೆ” ಎಂದು ಹೇಳಿದ್ದಾರೆ.
“ಎಲ್ಲಾ ಅಂಗನವಾಡಿಗಳಲ್ಲಿ ಮೆನು ಪರಿಷ್ಕರಿಸುವುದು ಮತ್ತು ಏಕರೂಪದ ಆಹಾರ ವಿತರಿಸುವುದು ಮುಖ್ಯ ಎಂದು ನಾವು ಅರಿತುಕೊಂಡಿದ್ದೇವೆ. ನಾವು ಈಗಾಗಲೇ ಮಕ್ಕಳಿಗೆ ಮೊಟ್ಟೆ ಕೊಡುತ್ತಿರುವುದರಿಂದ, ಹೊಸದಾಗಿ ಮೊಟ್ಟೆ ಬಿರಿಯಾನಿ ಮತ್ತು ಪಲಾವ್ ಅನ್ನು ಪರಿಚಯಿಸಲು ನಿರ್ಧರಿಸಿದ್ದೇವೆ. ಪ್ರಸ್ತುತ ವಾರದಲ್ಲಿ ಎರಡು ದಿನ ಹಾಲು, ಮೊಟ್ಟೆ ಕೊಡಲಾಗ್ತಿದೆ. ಅದನ್ನು ಮೂರು ದಿನಗಳಿಗೆ ವಿಸ್ತರಿಸುವ ಬಗ್ಗೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಗುಂಪಿನಿಂದ ಮನವಿ ಬಂದಿದೆ. ಇದಕ್ಕೆ ಹಣಕಾಸು ಇಲಾಖೆ ಹಣವನ್ನು ಅನುಮೋದನೆ ನೀಡಲಿದೆ” ಎಂದಿದ್ದಾರೆ.
ಪರಿಷ್ಕೃತ ಆಹಾರ ಮೆನುವಿನಲ್ಲಿ ಹಾಲು ಮತ್ತು ಮೊಟ್ಟೆ ಜೊತೆಗೆ ಪಿಡಿ (ಅಕ್ಕಿ ಡಂಪ್ಲಿಂಗ್ಸ್), ಹೆಸರುಕಾಳಿನ ಕರಿ, ಅನ್ನ, ನ್ಯೂಟ್ರಿ ಲಡ್ಡೂ, ಸೋಯಾ ಡ್ರೈ ಫ್ರೈ, ಹುರಿದ ತರಕಾರಿಗಳು ಮತ್ತು ಮುರಿದ ಗೋಧಿ ಪುಲಾವ್ ಮುಂತಾದ ಭಕ್ಷ್ಯಗಳಿವೆ.
ಅಂಗನವಾಡಿಗಳಲ್ಲಿ ಮಕ್ಕಳ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಯೋಗಕ್ಷೇಮವನ್ನು ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ‘ಕುಂಜೂಸ್’ ಎಂಬ ಹೊಸ ಉಪಕ್ರಮವನ್ನು ಈ ವರ್ಷದಿಂದ ಪ್ರಾರಂಭಿಸಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ನಿರ್ಣಯಿಸಲು ಶಿಕ್ಷಕರಿಗೆ ಸಹಾಯ ಮಾಡುವ ‘ಕುಂಜೂಸ್’ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವೆ ವೀಣಾ ಜಾರ್ಚ್ ತಿಳಿಸಿದ್ದಾರೆ.
ಇಡುಕ್ಕಿ ಜಿಲ್ಲೆಯ ದೇವಿಕುಳಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ -1ರ ‘ಶಂಕು’ ಎಂದು ಅಕ್ಕರೆಯಿಂದ ಕರೆಯಲ್ಪಡುವ ಮಗು ಪ್ರಜುಲ್ ಎಸ್ ಸುಂದರ್ ಬಿರಿಯಾನಿ ಬೇಕು ಎಂದು ತನ್ನ ಆಸೆಯನ್ನು ವ್ಯಕ್ತಪಡಿಸಿತ್ತು. ಮಗುವಿನ ತಾಯಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದರು.
ಜೆಎನ್‌ಯು ಅಧಿಕೃತ ದಾಖಲೆಗಳಲ್ಲಿ ‘ಕುಲಪತಿ’ ಬದಲಿಗೆ ‘ಕುಲಗುರು’ ಪದ ಬಳಕೆ


