ಭಿಂಡ್ ಪೊಲೀಸರಿಂದ ಕಸ್ಟಡಿ ಹಿಂಸಾಚಾರ, ಜಾತಿ ಆಧಾರಿತ ನಿಂದನೆ ಮತ್ತು ಜೀವ ಬೆದರಿಕೆ ಆರೋಪ ಮಾಡಿರುವ ಮಧ್ಯಪ್ರದೇಶ ಮೂಲದ ಇಬ್ಬರು ಪತ್ರಕರ್ತರ ಪರವಾಗಿ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು, ಶಶಿಕಾಂತ್ ಜಾತವ್ ಮತ್ತು ಅಮರಕಾಂತ್ ಸಿಂಗ್ ಚೌಹಾಣ್ ಎಂಬ ಇಬ್ಬರು ಪತ್ರಕರ್ತರಿಗೆ ಸಂಬಂಧಿಸಿದ ಪ್ರಕರಣದ ನಿಖರ ಸ್ವರೂಪದ ಬಗ್ಗೆ ಅರಿವು ಮೂಡಿಸದ ಹೊರತು, ಬಂಧನದಿಂದ ರಕ್ಷಣೆ ನೀಡುವ ಮಧ್ಯಂತರ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಅರ್ಜಿದಾರರು ಈಗಾಗಲೇ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂಬುವುದನ್ನು ತಿಳಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲೆ ವಾರಿಷಾ ಫರಾಸತ್, ವರದಿಯ ಪ್ರಕಾರ, ಇದು ಮಧ್ಯಪ್ರದೇಶದ ಪ್ರಕರಣ ಆಗಿರುವುದರಿಂದ ದೆಹಲಿ ಹೈಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಅರ್ಜಿದಾರರಿಗೆ ಮಧ್ಯಪ್ರದೇಶ ಹೈಕೋರ್ಟ್‌ಗೆ ಹೋಗಲು ತಡೆಯಾಗಿರುವುದು ಏನು? ಎಂದು ನ್ಯಾಯಾಲಯ ಪ್ರಶ್ನಿಸಿದೆ ಮತ್ತು ಆರೋಪಗಳನ್ನು ಹೊರಿಸಲಾಗಿರುವ ಭಿಂಡ್ ಎಸ್‌ಪಿ ಅಜಿತ್ ಯಾದವ್ ಅವರನ್ನು ಅರ್ಜಿಯಲ್ಲಿ ಪಕ್ಷವಾಗಿ ಸೇರಿಸಲಾಗಿಲ್ಲ ಎಂದಿದೆ.
ನಂತರ ನ್ಯಾಯಾಲಯ ಮಧ್ಯ ಪ್ರದೇಶ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ನಿಗದಿ ಮಾಡಿದೆ.
ಸ್ವರಾಜ್ ಎಕ್ಸ್‌ಪ್ರೆಸ್‌ನ ಅಮರ್‌ಕಾಂತ್ ಸಿಂಗ್ ಚೌಹಾಣ್ ಮತ್ತು ದೈನಿಕ್ ಬೆಜೋರ್ ರತ್ನದ ಶಶಿಕಾಂತ್ ಜಾತವ್ ಅವರು ಮೇ 1ರಂದು ತಮ್ಮನ್ನು ಅಪಹರಿಸಿ, ಕಸ್ಟಡಿಯಲ್ಲಿ ಹಲ್ಲೆ ನಡೆಸಿ, ಭಿಂಡ್‌ನ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಸಿತ್ ಯಾದವ್ ಮತ್ತು ಅವರ ಸಹೋದ್ಯೋಗಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ತಮ್ಮ ವರದಿಗಳ ಮೂಲಕ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪತ್ರಕರ್ತರು ಆರೋಪಿಸಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತಮ್ಮ ರಿಟ್ ಅರ್ಜಿಯಲ್ಲಿ, ಚೌಹಾಣ್ ಮತ್ತು ಜಾತವ್ ಅವರು ಮಧ್ಯಪ್ರದೇಶ ಪೊಲೀಸರು ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಅನ್ನು ಕೋರಿದ್ದರು. ಆದರೆ, ನ್ಯಾಯಾಲಯ ರಕ್ಷಣೆ ಒದಗಿಸಲು ನಿರಾಕರಿಸಿದೆ.
ಆದಾಗ್ಯೂ, ಜೀವಕ್ಕೆ ಬೆದರಿಕೆ ಇದ್ದರೆ ಅರ್ಜಿದಾರರ ರಕ್ಷಣೆಗೆ ಬರುವುದಾಗಿ ನ್ಯಾಯಾಲಯ ಭರವಸೆ ನೀಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಮೇ 19ರಂದು, ಪೊಲೀಸರಿಂದ ಕಿರುಕುಳ ಅನುಭವಿಸಿದ ನಂತರ ಇಬ್ಬರು ಪತ್ರಕರ್ತರು ದೆಹಲಿಗೆ ಪಲಾಯನ ಮಾಡಿದ್ದರು. ನಂತರ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಭಾರತೀಯ ಪತ್ರಿಕಾ ಮಂಡಳಿಗೆ ಸಹ ದೂರು ನೀಡಿದ್ದರು ಎಂದು ವರದಿಗಳು ಹೇಳಿವೆ.
ಪೊಲೀಸ್ ವರಿಷ್ಠಾಧಿಕಾರಿಯ ಕೊಠಡಿಯಲ್ಲಿ 5ಕ್ಕೂ ಹೆಚ್ಚು ಪತ್ರಕರ್ತರು ಇದ್ದರು. ಅವರು ನಾವು ತಲುಪುವ ಮೊದಲು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಪತ್ರಕರ್ತರು ಆರೋಪಿಸಿದ್ದಾರೆ.
ಸ್ಥಳೀಯ ಪೊಲೀಸರೊಂದಿಗೆ ಸೇರಿ ಚಂಬಲ್ ನದಿಯಲ್ಲಿ ನಡೆಸುತ್ತಿರುವ ಮರಳು ಮಾಫಿಯಾ ವರದಿಗಳು ಪ್ರಕಟಿಸಿದ ಬಗ್ಗೆ ಎಸ್‌ಪಿ ಅಸಿತ್ ಯಾದವ್ ಅವರಿಗೆ ಅಸಮಾಧಾನ ಇತ್ತು ಎಂದು ಚೌಹಾಣ್ ಮತ್ತು ಗೋಯಲ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹಲ್ಲೆಗೆ ಸಂಬಂಧಿಸಿದ ಎಲ್ಲಾ ಆರೋಪಗಳನ್ನು ಕೈಬಿಡುವಂತೆ ಯಾದವ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಯಾದವ್ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದು, “ಅವರು ಪತ್ರಕರ್ತರಲ್ಲ, ಅವರು ಬ್ಲ್ಯಾಕ್‌ಮೇಲರ್‌ಗಳು” ಎಂದು ಮೇ ತಿಂಗಳಲ್ಲಿ ನ್ಯೂಸ್‌ಲಾಂಡ್ರಿಗೆ ತಿಳಿಸಿದ್ದರು ಎನ್ನಲಾಗಿದೆ.
ಮೇ 28ರಂದು, ದೆಹಲಿ ಹೈಕೋರ್ಟ್ ಚೌಹಾಣ್ ಅವರಿಗೆ ಎರಡು ತಿಂಗಳ ಕಾಲ ರಕ್ಷಣೆ ನೀಡುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿತ್ತು. ಈ ರಕ್ಷಣೆ ಇನ್ನೂ ಜಾರಿಯಲ್ಲಿದೆ ಎಂದು ಲೈವ್ ಲಾ ವರದಿ ಮಾಡಿದೆ.
“ಈ ಮಧ್ಯೆ, ನ್ಯಾಯವ್ಯಾಪ್ತಿಯ [ಮಧ್ಯಪ್ರದೇಶ] ಹೈಕೋರ್ಟ್ ಅನ್ನು ಸಂಪರ್ಕಿಸಿ ಮತ್ತು ಅಲ್ಲಿ ನೀವು ಪರಿಹಾರ ಪಡೆಯಿರಿ” ಎಂದು ನ್ಯಾಯಾಲಯವು ಚೌಹಾಣ್ ಅವರಿಗೆ ಮೌಖಿಕವಾಗಿ ನಿರ್ದೇಶಿಸಿತ್ತು.
ಜಾತವ್ ಕೂಡ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ವಿಷಯವನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಪ್ರಕರಣವನ್ನು ಜುಲೈ 14 ರಂದು ವಿಚಾರಣೆ ನಡೆಸಲು ಮರು ಅಧಿಸೂಚನೆ ಹೊರಡಿಸಲಾಗಿದೆ.
ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಬಿಜೆಪಿ ಮಾಜಿ ಪದಾಧಿಕಾರಿ, ಪ್ರಿಯಕರ ಬಂಧನ


