ಕೋಮುದ್ವೇಷದ ಹೇಳಿಕೆ ಒಳಗೊಂಡ ವಿಡಿಯೋ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸರಿಂದ ಬಂಧಿಸಲ್ಪಟ್ಟ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಮತ್ತು ಕಾನೂನು ವಿದ್ಯಾರ್ಥಿನಿ ಶರ್ಮಿಸ್ತಾ ಪನೋಲಿಗೆ ಕಲ್ಕತ್ತಾ ಹೈಕೋರ್ಟ್ ಬುಧವಾರ (ಜೂ.5) ಮಧ್ಯಂತರ ಜಾಮೀನು ನೀಡಿದೆ.
ಹೈಕೋರ್ಟ್ ಆಕೆಗೆ 10,000 ರೂ.ಗಳ ಜಾಮೀನು ಬಾಂಡ್ ಸಲ್ಲಿಸುವಂತೆಯೂ ನಿರ್ದೇಶಿಸಿದೆ.
ಪಶ್ಚಿಮ ಬಂಗಾಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಶರ್ಮಿಸ್ತಾ ವಿರುದ್ಧ ಕನಿಷ್ಠ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅವರ ವಕೀಲರು ಹೇಳಿದ್ದಾರೆ. ಕೋಲ್ಕತ್ತಾದ ಗಾರ್ಡನ್ ರೀಚ್ ಪೊಲೀಸ್ ಠಾಣೆಯಲ್ಲಿ ವಜಾಹತ್ ಖಾನ್ ಖಾದ್ರಿ ಎಂಬವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
ಕೋಲ್ಕತ್ತಾ ಪೊಲೀಸರು ಈಗ ಖಾದ್ರಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ‘ದುರುದ್ದೇಶಪೂರಿತ ಮತ್ತು ಪ್ರಚೋದನಕಾರಿ ವಿಷಯವನ್ನು’ ಅಪ್ಲೋಡ್ ಮಾಡಿದ್ದಾರೆ ಮತ್ತು ಅದು ಧಾರ್ಮಿಕ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ. ಖಾದ್ರಿ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಖಾದ್ರಿ ವಿರುದ್ಧ ಧಾರ್ಮಿಕ ಟ್ರಸ್ಟ್ ಶ್ರೀ ರಾಮ್ ಸ್ವಾಭಿಮಾನ ಪರಿಷತ್, ಅವರು ಈ ಹಿಂದೆ ಪನೋಲಿ ವಿರುದ್ಧ ದೂರು ನೀಡಿದ್ದ ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಖಾದ್ರಿ ವಿರುದ್ಧ ಮುಂಬೈ, ಅಸ್ಸಾಂ ಮತ್ತು ದೇಶದ ಇತರ ಭಾಗಗಳಲ್ಲಿ ದ್ವೇಷ ಭಾಷಣ ಹರಡಿದ ಮತ್ತು ಧಾರ್ಮಿಕ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಇದೇ ರೀತಿಯ ಅನೇಕ ದೂರುಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಖಾದ್ರಿ ಅವರ ಕುಟುಂಬವು ಅವರನ್ನು ಸಮರ್ಥಿಸಿಕೊಂಡಿದ್ದು, ಅವರು ‘ಅಮಾಯಕ ಮತ್ತು ಜಾತ್ಯತೀತ’ ಎಂದು ಹೇಳಿದ್ದಾರೆ.
ಪುಣೆಯ ಸಿಂಬಿಯೋಸಿಸ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಶರ್ಮಿಸ್ತಾ ಪನೋಲಿ, ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಮುಸ್ಲಿಂ ಸಮುದಾಯ ಮತ್ತು ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಆರೋಪವಿದೆ.
ಮೇ 14ರಂದು ಹಾಕಿದ್ದ ತನ್ನ ಪೋಸ್ಟ್ ವಿವಾದಕ್ಕೆ ತಿರುಗುತ್ತಿದ್ದಂತೆ, ಅದನ್ನು ಡಿಲಿಟ್ ಮಾಡಿ ಶರ್ಮಿಸ್ತಾ ಎಕ್ಸ್‌ನಲ್ಲಿ ಕ್ಷಮೆಯಾಚಿಸಿದ್ದರು. ಆದರೆ, ಮೇ 15,2025 ರಂದು ಅವರ ವಿರುದ್ಧ ಕೊಲ್ಕತ್ತಾದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎರಡು ದಿನಗಳ ನಂತರ ಮೇ 17,2025 ರಂದು ಶರ್ಮಿಸ್ತಾ ವಿರುದ್ದ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಮೇ 30ರಂದು ಕೋಲ್ಕತ್ತಾ ಪೊಲೀಸರು ಗುರುಗ್ರಾಮದಲ್ಲಿ ಅವರನ್ನು ಬಂಧಿಸಿದ್ದರು.
ಕೋಲ್ಕತ್ತಾದ ವಿಚಾರಣಾ ನ್ಯಾಯಾಲಯ ಮೇ 31ರಂದು ಶರ್ಮಿಸ್ತಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಅದನ್ನು ಪ್ರಶ್ನಿಸಿ ಶರ್ಮಿಸ್ತಾ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಜೂನ್ 3ರಂದು ಹೈಕೋರ್ಟ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಪೊಲೀಸ್ ಕಿರುಕುಳದ ಆರೋಪ ಮಾಡಿದ ಪತ್ರಕರ್ತರು: ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ


