ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ ಪಶ್ಚಿಮ ಬಂಗಾಳದ 36 ವರ್ಷದ ವ್ಯಕ್ತಿಯನ್ನು ಅಕ್ರಮ ಬಾಂಗ್ಲಾದೇಶ ವಲಸಿಗ ಎಂದು ಶಂಕಿಸಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರನ್ನು ಶನಿವಾರ ಬೆಳಗಿನ ಜಾವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದೆ ಎಂದು indianexpress.com ವರದಿ ಮಾಡಿದೆ.
ಗಡಿಯಾಚೆಗೆ ತಳ್ಳಿದ ವ್ಯಕ್ತಿಯನ್ನು ಮೆಹಬೂಬ್ ಶೇಖ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಪೊಲೀಸರು, ರಾಜ್ಯ ವಲಸೆ ಕಲ್ಯಾಣ ಮಂಡಳಿಯ ಮೆಹಬೂಬ್ ಶೇಖ್ ಅವರ ಅವರ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಸಹ, ಮಹಾರಾಷ್ಟ್ರ ಪೊಲೀಸರು ಮತ್ತು ಬಿಎಸ್‌ಎಫ್ ಗಡಿಯಾಚೆಗೆ ತಳ್ಳಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದ್ದಾಗಿ ವರದಿ ತಿಳಿಸಿದೆ.
“ಶೇಖ್ ಅವರ ಕುಟುಂಬ ನಮ್ಮನ್ನು ಸಂಪರ್ಕಿಸಿದ ನಂತರ, ನಾವು ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಎಲ್ಲಾ (ಅಗತ್ಯ) ದಾಖಲೆಗಳನ್ನು ಅವರಿಗೆ ಕಳುಹಿಸಲಾಗಿದೆ. ಅವರು ಕನಿಷ್ಠ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಿಳಿಸುವ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಶೇಖ್ ಅವರನ್ನು ಬಿಎಸ್‌ಎಫ್ ಬಾಂಗ್ಲಾದೇಶಕ್ಕೆ ತಳ್ಳಿದೆ” ಎಂದು ಪಶ್ಚಿಮ ಬಂಗಾಳ ವಲಸೆ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮಿರುಲ್ ಇಸ್ಲಾಂ ಹೇಳಿದ್ದಾಗಿ indianexpress.com ವರದಿ ವಿವರಿಸಿದೆ.
ಶೇಖ್ ಅವರ ಕುಟುಂಬವು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾಗಬಂಗೋಲಾದ ಮಹಿಸಸ್ಥಲಿ ಗ್ರಾಮ ಪಂಚಾಯತ್ ಪ್ರದೇಶದ ಹೊಸೈನ್‌ನಗರ ಗ್ರಾಮದ ನಿವಾಸಿಗಳು. 36 ವರ್ಷದ ಶೇಖ್ ಮಹಾರಾಷ್ಟ್ರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು.
“ಕಳೆದ ಎರಡು ವರ್ಷಗಳಿಂದ ಶೇಖ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಮುಂಬೈ ಬಳಿಯ ಥಾಣೆಯ ಮೀರಾ ರಸ್ತೆ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಐದು ದಿನಗಳ ಹಿಂದೆ (ಬುಧವಾರ, ಜೂನ್ 11) ಅವರು ಚಹಾ ಸೇವಿಸುತ್ತಿದ್ದಾಗ ಪೊಲೀಸರು ಅವರನ್ನು ಬಾಂಗ್ಲಾದೇಶದವರೆಂದು ಶಂಕಿಸಿ ಕನಕಿಯಾ ಪೊಲೀಸ್ ಠಾಣೆಗೆ ಕರೆದೊಯ್ದರು,” ಎಂದು ಶೇಖ್ ಅವರ ಕಿರಿಯ ಸಹೋದರ ಮುಜಿಬುರ್ ಮುರ್ಷಿದಾಬಾದ್‌ನಿಂದ ದೂರವಾಣಿ ಹೇಳಿರುವುದಾಗಿ indianexpress.com ತಿಳಿಸಿದೆ.
“ಅವರು (ಶೇಖ್) ಕನಕಿಯಾ ಪೊಲೀಸ್ ಠಾಣೆಯಿಂದ ನಮಗೆ ಕರೆ ಮಾಡಿದರು. ನಾವು ತಕ್ಷಣ ಸ್ಥಳೀಯ ಪೊಲೀಸರು, ಆಡಳಿತಕ್ಕೆ, ನಮ್ಮ ಪಂಚಾಯತ್ ಮುಖ್ಯಸ್ಥ ಮತ್ತು ವಲಸೆ ಕಲ್ಯಾಣ ಮಂಡಳಿಗೆ ಮಾಹಿತಿ ನೀಡಿದ್ದೆವು. ಅವರು ಮಹಾರಾಷ್ಟ್ರ ಪೊಲೀಸರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದರು. ಶುಕ್ರವಾರದ ವೇಳೆಗೆ, ನಾವು ಮೆಹಬೂಬ್ ಶೇಖ್ ಅವರ ವೋಟರ್ ಐಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಪಂಚಾಯತ್ ಪ್ರಮಾಣೀಕರಿಸಿದ ನಮ್ಮ ಕುಟುಂಬ ವೃಕ್ಷ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮಹಾರಾಷ್ಟ್ರ ಪೊಲೀಸರಿಗೆ ಕಳುಹಿಸಿದ್ದೇವೆ” ಎಂದು ಮುಜಿಬುರ್ ಹೇಳಿದ್ದಾರೆ.
ಮೆಹಬೂಬ್ ಶೇಖ್ ಅವರನ್ನು ಬಿಎಸ್‌ಎಫ್ ಶಿಬಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿದ ನಂತರ ನಾವು ಸಿಲಿಗುರಿಗೆ ಧಾವಿಸಿದೆವು ಎಂದು ಮಹಿಸಸ್ಥಲಿ ಗ್ರಾಮ ಪಂಚಾಯತ್‌ನ ಮುಖ್ಯಸ್ಥ ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರು ಮೆಹಬೂಬ್ ಅವರನ್ನು ಸಿಲಿಗುರಿಯ ಬಿಎಸ್ಎಫ್ ಶಿಬಿರಕ್ಕೆ ಕಳುಹಿಸಿದ್ದಾರೆ ಎಂದು ತಿಳಿದ ನಂತರ ನಾವು ಶೇಖ್ ಅವರ ಸಹೋದರ ಮುಜಿಬುರ್ ಜೊತೆ ಸಿಲಿಗುರಿಗೆ ಧಾವಿಸಿದೆವು. ಆದರೆ ನಮಗೆ ಅಲ್ಲಿ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಅವರು ನಮ್ಮ ಮಾತನ್ನು ಕೇಳಲಿಲ್ಲ” ಎಂದು ಶಬ್ಬೀರ್ ಅಹ್ಮದ್ ಹೇಳಿದ್ದಾರೆ.
ಕುಟುಂಬದ ಪ್ರಕಾರ, ಮೆಹಬೂಬ್ ಶೇಖ್ ಶನಿವಾರ (ಜೂನ್ 14) ಅವರಿಗೆ ಕರೆ ಮಾಡಿ, ಬೆಳಗಿನ ಜಾವ 3.30ಕ್ಕೆ ಬಿಎಸ್‌ಎಫ್ ಅವರನ್ನು ಬಾಂಗ್ಲಾದೇಶಕ್ಕೆ ತಳ್ಳಿದೆ ಎಂದು ತಿಳಿಸಿದ್ದಾರೆ.
“ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ಬಿಎಸ್‌ಎಫ್ ತನ್ನನ್ನು ಬಾಂಗ್ಲಾದೇಶಕ್ಕೆ ತಳ್ಳಿದೆ ಎಂದು ಶೇಖ್ ಹೇಳಿದ್ದಾನೆ. ಅವನು ಹಳ್ಳಿಯೊಂದರಲ್ಲಿ ಆಶ್ರಯ ಪಡೆದಿದ್ದಾನೆ, ಅಳುತ್ತಿದ್ದನು. ಅವನಿಗೆ ಹೆಂಡತಿ ಮತ್ತು ಮೂವರು ಮಕ್ಕಳಿದ್ದಾರೆ. ನಮಗೆ ಅವನು ಮರಳಿ ಬೇಕು. ಅವನು ಬಾಂಗ್ಲಾದೇಶದಲ್ಲಿ ಎಷ್ಟು ದಿನ ಬದುಕಬಲ್ಲನೆಂದು ನಮಗೆ ತಿಳಿದಿಲ್ಲ” ಎಂದು ಸಹೋದರ ಮುಜಿಬುರ್ ಹೇಳಿದ್ದಾಗಿ ವರದಿ ವಿವರಿಸಿದೆ.
ಮಹಾರಾಷ್ಟ್ರ ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮೆಹಬೂಬ್ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ. ಪೌರತ್ವವನ್ನು ಸಾಬೀತುಪಡಿಸಲು ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ನಮ್ಮ ತಪ್ಪಿಲ್ಲ… ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ನೀಡಿದ ಆದೇಶದ ಮೇರೆಗೆ, ಜೂನ್ 11 ರಂದು ಮೆಹಬೂಬ್ ಶೇಖ್ ಸೇರಿದಂತೆ ಅನೇಕ ಶಂಕಿತರನ್ನು ನಾವು ಬಂಧಿಸಿದ್ದೇವೆ. ಅವರ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ನಾವು ಅವರಿಂದ ಕೋರಿದ್ದೇವೆ. ಸಾಮಾನ್ಯವಾಗಿ, ನಾವು ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಈ ಉದ್ದೇಶಕ್ಕಾಗಿ ಪರಿಗಣಿಸುವುದಿಲ್ಲ, ಏಕೆಂದರೆ ಅವುಗಳನ್ನು ವಂಚನೆಯಿಂದ ಪಡೆಯಬಹುದು. ಆದ್ದರಿಂದ, ನಾವು ಅವರ ಜನನ ಪ್ರಮಾಣಪತ್ರ ಅಥವಾ ಯಾವುದೇ ಬಲವಾದ ಪುರಾವೆಗಳನ್ನು ತೋರಿಸಲು ಕೇಳಿದ್ದೇವೆ. ಆದರೆ ಅವರು ಅದನ್ನು ತೋರಿಸಲು ವಿಫಲರಾದರು ಮತ್ತು ಅವರು ಭಾರತೀಯರು ಎಂಬ ಅವರ ಹೇಳಿಕೆಯನ್ನು ಬೆಂಬಲಿಸಲು ಬೇರೆ ಯಾವುದೇ ದಾಖಲೆ ಅಥವಾ ಅವರ ಕುಟುಂಬದ ದಾಖಲೆಗಳನ್ನು ಸಹ ಒದಗಿಸಲಿಲ್ಲ, ”ಎಂದು ಥಾಣೆಯ ಮೀರಾ ರಸ್ತೆ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮೇಘನಾ ಬುರಾಡೆ ಹೇಳಿದ್ದಾರೆ ಎಂದು indianexpress.com ವರದಿ ತಿಳಿಸಿದೆ.
ಹಿಂದುತ್ವ ಪ್ರೊಪಗಂಡ ಚಿತ್ರ ’ರಜಾಕಾರ್’ಗೆ ತೆಲಂಗಾಣ ಸರ್ಕಾರದಿಂದ ‘ಗದ್ದರ್’ ಚಲನಚಿತ್ರ ಪ್ರಶಸ್ತಿ!


