ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ರೈತರು ಕಳೆದ 1180 ದಿನಗಳಿಂದ (ಸುಮಾರು ನಾಲ್ಕು ವರ್ಷ) ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಂಘರ್ಷದ ಸ್ಥಿತಿಗೆ ತಲುಪಿದೆ. ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ವಿರೋಧಿಸಿ, ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ಜೂನ್ 25 ರಂದು ‘ದೇವನಹಳ್ಳಿ ಚಲೋ’ ಹೋರಾಟಕ್ಕೆ ಕರೆ ನೀಡಲಾಗಿದೆ.
ಈ ಬಗ್ಗೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಯುಕ್ತ ಹೋರಾಟದ ಮುಖಂಡರು, “13 ಗ್ರಾಮಗಳ ರೈತರು ನಾಡ ಕಚೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಕಡಾ 80 ರಷ್ಟು ರೈತರು ಲಿಖಿತವಾಗಿ ಭೂಸ್ವಾಧೀನಕ್ಕೆ ತಮ್ಮ ಅಸಮೃತಿ ಹಾಗೂ ವಿರೋಧ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಬಲವಂತದ ಭೂಸ್ವಾಧೀನಕ್ಕೆ ಕ್ರಮವಹಿಸಿರುವುದು, ಭೂ ಸ್ವಾಧೀನ ಕಾಯ್ದೆ-2013 ರ ಸ್ಪಷ್ಠ ಉಲ್ಲಂಘನೆಯಾಗಿದೆ” ಎಂದು ಹೇಳಿದರು.
ಭೂ ಸ್ವಾಧೀನ ಕೈಬಿಡುವಂತೆ ಬೆಂಗಳೂರಿನ ಫ್ರೀಂಡಂ ಪಾರ್ಕಿಲ್ಲಿ ರೈತರು ನಡೆಸಿದ ಪ್ರತಿಭಟನಾ ಸ್ಥಳಗಳಿಗೆ ಈಗಿನ ಮುಖ್ಯಮಂತ್ರಿ, ಹಿಂದಿನ ವಿರೋಧ ಪಕ್ಷದ ನಾಯಕರಾಗಿ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ತಾವು ಅಧಿಕಾರಕ್ಕೆ ಬಂದರೆ ಅನ್ಯಾಯ ಹಾಗೂ ಬಲವಂತದ ಭೂ ಸ್ವಾಧೀನವನ್ನು ರದ್ದುಪಡಿಸುವುದಾಗಿ ಸಾರ್ವಜನಿಕ ಘೋಷಣೆ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಗ ಉಸ್ತುವಾರಿ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಕೂಡ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಲವಂತವಾಗಿ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಈ ರೈತರ ಮತ ಕೇಳಿದ್ದರು. ಆದರೆ, ಈ ಇಬ್ಬರೂ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ತಮ್ಮ ವಚನಕ್ಕೆ ವಿರುದ್ಧವಾಗಿ ವರ್ತಿಸುವ ಮೂಲಕ ವಚನಭ್ರಷ್ಟರು ಎಂದು ಸಾಬೀತು ಮಾಡಿಕೊಂಡಿದ್ದಾರೆ, ಇದು ಸಾರ್ವಜನಿಕ ಹುದ್ದೆಗೆ ಮತ್ತು ನಡವಳಿಕೆಗೆ ಯೋಗ್ಯವಲ್ಲದ್ದು ಎಂದು ಸಂಘಟನೆ ಆಕ್ರೋಶ ಹೊರಹಾಕಿದೆ.
ಇತ್ತೀಚಿಗಿನ ಸಭೆಯೂ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪ್ರತಿಭಟನಾ ಒತ್ತಡ ಹೆಚ್ಚಿದ ಸಂದರ್ಭದಲ್ಲೆಲ್ಲಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಲ್ಕಾರು ಸಭೆಗಳು, ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಹತ್ತಾರು ಸಭೆಗಳು ಅಲ್ಲದೇ, ಸ್ವತಃ ಉಸ್ತುವಾರಿ ಮಂತ್ರಿ ಹತ್ತಾರು ಬಾರಿ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ರೈತರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊ೦ಡಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆ ಇಲ್ಲದೇ ಭೂಸ್ವಾಧೀನ ಮುಂದುವರೆಸುವುದಿಲ್ಲ ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. ಈ ರೀತಿ ಭರವಸೆ ನೀಡಿ ಒಳಗೊಳಗೆ ಭೂಸ್ವಾಧೀನದ ಪ್ರಕ್ರಿಯೆ ಮುಂದುವರೆಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ರೈತರಲ್ಲಿ ಹತಾಶೆ-ನಿರಾಶೆ ಉ೦ಟು ಮಾಡಿ, ಒಡಕು ಉ೦ಟು ಮಾಡುವ ಹೀನ ಕುತಂತ್ರವಲ್ಲದೇ ಬೇರೇನೂ ಅಲ್ಲ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.
ಸಾರ್ವಜನಿಕವಾಗಿ ಒಂದು ಮುಖ ತೋರಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಇನ್ನೊಂದು ರೀತಿಯಲ್ಲಿ ಆದೇಶ ನೀಡುವ ಮೂಲಕ ರೈತ ಸಮುದಾಯವನ್ನು ಹಾಗೂ ರೈತ ಹೋರಾಟವನ್ನು ಸಿದ್ದರಾಮಯ್ಯರವರ ನೇತೃತ್ವದ ರಾಜ್ಯ ಸರ್ಕಾರ ಅಪಮಾನಿಸಿದೆ. ಚನ್ನರಾಯಪಟ್ಟಣ ಹೋಬಳಿ ರೈತರ ಧರಣಿ ಸ್ಥಳಕ್ಕೆ ಈ ನಾಲ್ಕು ವರ್ಷಗಳಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷರು, ಸಂಯುಕ್ತ ಕಿಸಾನ್ ಮೋರ್ಚಾ ನಾಯಕರೂ ಆಗಿರುವ ಡಾ.ಅಶೋಕ್ ಧವಳೆ, ಅಖಿಲ ಭಾರತ ಕಿಸಾನ್ ಸಭಾದ ಅಖಿಲ ಭಾರತ ಹಣಕಾಸು ಕಾರ್ಯದರ್ಶಿ ಮಾಜಿ ಶಾಸಕ ಕೃಷ್ಣಪ್ರಸಾದ್, ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಸೇರಿದಂತೆ ರಾಷ್ಟ್ರೀಯ ರೈತ ನೇತಾರರು ಭೇಟಿ ಕೊಟ್ಟು ಹೋರಾಟಕ್ಕೆ ಬೆ೦ಬಲ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದ ಎಲ್ಲ ರೈತ ಚಳವಳಿಗಳ ಹಾಗೂ ಬುದ್ಧಿಜೀವಿ, ಸಾಹಿತಿಗಳ ಬೆ೦ಬಲ ಮತ್ತು ಅನುಕಂಪ ಈ ಭೂ ಸ್ವಾಧೀನ ವಿರೋಧಿ ರೈತರ ಮೇಲೆ ಇದೆ ಎಂದು ವಿವರಿಸಿದರು.
ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಈ ರೈತರ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದ ಜಿ.ಸಿ. ಬಯ್ಯಾರೆಡ್ಡಿರವರು ಈ ಹೋರಾಟದ ಬೇಡಿಕೆಯನ್ನು ಪುನರುಚರಿಸುತ್ತಾ ಮರಣವನ್ನಪ್ಪಿದ್ದಾರೆ. ಇಷ್ಟೆಲ್ಲಾ ಇದ್ದರೂ ಬಹುರಾಷ್ಟ್ರೀಯ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ಮಾಡೇತೀರುವ ಹಠ ಸರ್ವಾಧಿಕಾರಿ ಮನೋಭಾವದ್ದು. ಇಂತಹ ಭೂಸ್ವಾಧೀನ ವಿರೋಧಿ ಹೋರಾಟವನ್ನು ರಾಜ್ಯಾದ್ಯಂತ ಸಂಪೂರ್ಣ ಮಟ್ಟ ಹಾಕುವ ಫ್ಯಾಸಿಸ್ಟ್ ದುರುದ್ದೇಶದ್ದು. ಈ ದುರುದ್ದೇಶ ಈಡೇರುವುದಕ್ಕೆ ರಾಜ್ಯದ ರೈತ ಸಮುದಾಯ ಅವಕಾಶ ನೀಡುವುದಿಲ್ಲ. ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಬೆ೦ಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯು ಸೇರಿದಂತೆ ರಾಜ್ಯದ ಎಲ್ಲಾ ಭೂಸ್ವಾಧೀನದ ಭೀತಿ ಎದುರಿಸುತ್ತಿರುವ ರೈತರನ್ನು ಒಗ್ಗೂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನಕ್ಕೆ ಪ್ರಬಲ ವಿರೋಧವನ್ನು ಇನ್ನೂ ಹೆಚ್ಚಿನ ಹೋರಾಟದ ಶಕ್ತಿಯೊಂದಿಗೆ ಮುಂದುವರೆಸಿ, ರೈತ ಹೋರಾಟ ಜಯಗಳಿಸುವಂತೆ ಮಾಡಲು ಜೂನ್ 25, 2025 ರಂದು ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಕಾರಳ್ಳಿ ಶ್ರೀನಿವಾಸ್, ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, ರೈತ ಸಂಘದ ಮುಖಂಡರಾದ ವೀರಸಂಗಯ್ಯ, ಪ್ರಾಂತ ರೈತ ಸಂಘದ ಯಶವಂತ್ ಸೇರಿದಂತೆ ಸಂಯುಕ್ತ ಹೋರಾಟದ ಹಲವರು ಇದ್ದರು.


