ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಜನ ಸುರಾಜ್ ಪಕ್ಷದ (ಜೆಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಅಲಿಯಾಸ್ ಪಪ್ಪು ಸಿಂಗ್ ಅವರು ಗುರುವಾರ ಬಹಿರಂಗಪಡಿಸಿದ್ದಾರೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಜೆಎಸ್‌ಪಿಯ ಸ್ಥಾಪಕರಾಗಿದ್ದಾರೆ. ಬಿಹಾರ | ಜನ ಸುರಾಜ್
ಪ್ರಶಾಂತ್ ಕಿಶೋರ್ ಅವರು ತಾನು ಸಿಎಂ ಹುದ್ದೆಯ ಸ್ಪರ್ಧೆಯಲ್ಲಿಲ್ಲ ಎಂದು ಪದೇ ಪದೇ ಹೇಳುತ್ತಲೆ ಬಂದಿದ್ದಾರೆ. ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಪ್ರಶಾಂತ್ ಕಿಶೋರ್ ಅವರು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ‘ಬಿಹಾರ್ ಬದಲೋ ಯಾತ್ರೆ’ಯಲ್ಲಿದ್ದಾರೆ.
ಬದಲಾವಣೆಯ ಅಲೆಯು ಇಡೀ ಬಿಹಾರವನ್ನು ವ್ಯಾಪಿಸುತ್ತಿದೆ ಎಂದು ಪಪ್ಪು ಸಿಂಗ್ ಹೇಳಿಕೊಂಡಿದ್ದು, ಈ ಬದಲಾವಣೆಯನ್ನು ಸುಲಭವಾಗಿ ಕಾಣಬಹುದಾಗಿದೆ, ವಿವಿಧ ಹಳ್ಳಿಗಳ ಜನರು ಜೆಎಸ್‌ಪಿಗೆ ಸೇರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
“ಜನರು ಕಿಶೋರ್ ಅವರ ನಾಯಕತ್ವದಲ್ಲಿ ನಂಬಿಕೆ ಇಡುತ್ತಿದ್ದಾರೆ. ಜೆಎಸ್‌ಪಿ ರಾಜಕೀಯ ಪಕ್ಷಕ್ಕಿಂತ ಹೆಚ್ಚಾಗಿ ಸಮಾಜವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಚಳುವಳಿಯಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಮಾತ್ರ ಆಸಕ್ತಿ ಹೊಂದಿವೆ, ಇದುವೆ ರಾಜ್ಯದ ಶೋಚನೀಯ ಸ್ಥಿತಿಗೆ ಕಾರಣ” ಎಂದು ಅವರು ಆರೋಪಿಸಿದ್ದಾರೆ.
ಜೆಡಿ(ಯು) ನಾಯಕರು ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ರಾಜ್ಯದಲ್ಲಿ ವಲಸೆ ನಿಂತಿಲ್ಲ ಎಂದು ಹೇಳಿದ ಪಪ್ಪು ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿ (ಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರ ಮೇಲೆ ದಾಳಿ ಮಾಡಿದ್ದಾರೆ.
“ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ, ಆದರೆ ಶಿಕ್ಷಣದ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಲಾಲು ಆಡಳಿತವನ್ನು ‘ಜಂಗಲ್ ರಾಜ್’ ಎಂದು ನಿತೀಶ್ ಕುಮಾರ್ ಬಣ್ಣಿಸಿದ್ದಾರೆ. ಆದರೆ ಕಳೆದ 15 ವರ್ಷಗಳಿಂದ ಬಿಹಾರದಲ್ಲಿ ‘ಮಹಾಜಂಗಲ್ ರಾಜ್’ ಚಾಲ್ತಿಯಲ್ಲಿದೆ” ಎಂದು ಅವರು ಆರೋಪಿಸಿದ್ದಾರೆ.
ಈ ಮಧ್ಯೆ, ವಿಧಾನಸಭಾ ಚುನಾವಣೆಯ ನಂತರ ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಪ್ರತಿಪಾದಿಸಿದ್ದಾರೆ.
ಅದಾಗ್ಯೂ, ಈ ಬಗ್ಗೆ ಇತ್ತಿಚೆಗೆ ಪ್ರತಿಕ್ರಿಯಿಸಿದ್ದ ಬಿಹಾರದ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲವರು ಅವರು, ತೇಜಸ್ವಿ ಇಂಡಿಯಾ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ, ಬದಲಾಗಿ ಅದರ ಸಮನ್ವಯ ಸಮಿತಿಯ ಅಧ್ಯಕ್ಷರು ಮಾತ್ರ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ತಮ್ಮ ಸಿಎಂ ಅಭ್ಯರ್ಥಿಯಾಗಿ ಘೋಷಿಸುವಂತೆ ಎನ್‌ಡಿಎಗೆ ಪ್ರಶಾಂತ್ ಕಿಶೋರ್ ಅವರು ಸವಾಲು ಹಾಕಿದ್ದಾರೆ. ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ಮತ್ತು ಬಿಜೆಪಿ-ಜೆಡಿ (ಯು) ನೇತೃತ್ವದ ಎನ್‌ಡಿಎ ಜೊತೆಗೆ ಬಿಹಾರದಲ್ಲಿ ಜೆಎಸ್‌ಪಿ ಮೂರನೇ ಪರ್ಯಾಯವಾಗಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರ | ಜನ ಸುರಾಜ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೆಲಸದ ಅವಧಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರ: ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ
ಕೆಲಸದ ಅವಧಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರ: ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ

