ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ 40 ವರ್ಷದ ಮಹಿಳೆಯನ್ನು ಜನರ ಗುಂಪೊಂದು ಸಾರ್ವಜನಿಕವಾಗಿ ನಿಂದಿಸಿದ್ದು, ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಧರ್ಮಡಂ ನಿವಾಸಿ ರಸೀನಾ ಎಂಬ ಮಹಿಳೆ ಮಂಗಳವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಪತಿ ಮತ್ತು ಮೂವರು ಅಪ್ರಾಪ್ತ ಮಕ್ಕಳನ್ನು ಅಗಲಿದ್ದಾರೆ.
ಪ್ರಕರಣದ ಸಂಬಂಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಧರ್ಮಡಂ ಗ್ರಾಮದ ವಿ.ಸಿ. ಮುಬಶ್ಶಿರ್ (28), ಕೆ.ಎ ಫೈಸಲ್ (34) ಮತ್ತು ವಿ.ಕೆ. ರಫ್ನಾಸ್ (24) ಎಂದು ಗುರುತಿಸಿರುವುದಾಗಿ indianexpress.com ವರದಿ ಮಾಡಿದೆ.
ಪಿಣರಾಯಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬವಿಶ್ ವಿ.ಎಸ್ ಅವರ ಪ್ರಕಾರ, ಮೃತ ರಸೀನಾ ಸಾರ್ವಜನಿಕವಾಗಿ ಪುರುಷ ಸ್ನೇಹಿತನೊಂದಿಗೆ ಮಾತನಾಡುತ್ತಿರುವುದನ್ನು ನೋಡಿದ ಆರೋಪಿಗಳು ಆಕೆಯನ್ನು ಪ್ರಶ್ನಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ರಸೀನಾ ಅವರ ಸಂಬಂಧಿ. ಆರೋಪಿಗಳು ರಸೀನಾ ಮತ್ತು ಆಕೆಯ ಸ್ನೇಹಿತೆಯನ್ನು ವಿಚಾರಣೆ ನಡೆಸಿ, ರಸೀನಾ ಅವರ ಕುಟುಂಬಸ್ಥರನ್ನು ಕರೆಸಿ ಅವರ ಮುಂದೆ ಆಕೆಯನ್ನು ಅವಮಾನಿಸಿದ್ದಾರೆ ಎಂದು ಪೊಲೀಸ್ ಇನ್ಸ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಆರೋಪಿಗಳು ರಸೀನಾ ಅವರ ಸ್ನೇಹಿತನನ್ನು ತಮ್ಮ ಕಚೇರಿಗೆ ಕರೆದೊಯ್ದು ‘ಗುಂಪು ವಿಚಾರಣೆ’ಗೆ ಒಳಪಡಿಸಿದ್ದಾರೆ. ಆತನ ಡಿಜಿಟಲ್ ಗ್ಯಾಜೆಟ್‌ಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
“ಮೃತ ಮಹಿಳೆಯಿಂದ ನಮಗೆ ಒಂದು ಆತ್ಮಹತ್ಯೆ ಪತ್ರ ಸಿಕ್ಕಿದೆ. ಆಕೆ ತನಗೆ ಆದ ಅವಮಾನದಿಂದ ತೀವ್ರವಾಗಿ ನೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಬವಿಶ್ ಹೇಳಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಕೆಲಸದ ಅವಧಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರ: ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ


