ಸಂಭಾಲ್: ಇಲ್ಲಿನ ಆಲಂ ಸರಾಯ್‌ನಲ್ಲಿರುವ ಸುದೀರ್ಘ ಇತಿಹಾಸವಿರುವ ಶಿಕ್ಷಣ ಸಂಸ್ಥೆ ಆಜಾದ್ ಜನ್ನತ್ ನಿಶಾ ಶಾಲೆಯ ಕಟ್ಟಡವನ್ನು ನೆಲಸಮಗೊಳಿಸದಂತೆ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.
46 ವರ್ಷಗಳ ಹಿಂದೆ ಭೂಮಿ ಮಾರಾಟ ಮಾಡಿದವರ ಕಾನೂನುಬದ್ಧ ಉತ್ತರಾಧಿಕಾರಿಗಳು ಆಸ್ತಿಯ ಮಾಲೀಕತ್ವವನ್ನು ಪ್ರತಿಪಾದಿಸಿ, ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ. ಈ ದಾವೆಗೆ ಸ್ಥಳೀಯ ಹಿಂದೂತ್ವ ಗುಂಪುಗಳ ಬೆಂಬಲವೂ ಇತ್ತು ಎಂದು ಹಿಂದಿನ ಮೂಲಗಳಿಂದ ತಿಳಿದುಬಂದಿದೆ.
ಆಲಂ ಸರಾಯ್‌ನಲ್ಲಿರುವ ಆಜಾದ್ ಜನ್ನತ್ ನಿಶಾ ಶಾಲೆಯ ವ್ಯವಸ್ಥಾಪಕ ಮೊಹಮ್ಮದ್ ಶಹವೇಜ್ ಆಲಂ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. 1979ರಿಂದ ತಾನೇ ಭೂಮಿಯ ನಿಜವಾದ ಮಾಲೀಕ ಎಂದು ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಹರ್ವೀರ್ ಸಿಂಗ್ ಅವರನ್ನೊಳಗೊಂಡ ಪೀಠವು ಶಾಲಾ ಕಟ್ಟಡವನ್ನು ನೆಲಸಮಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದು, ಸಂಸ್ಥೆಯ ಶಾಂತಿಯುತ ಕಾರ್ಯನಿರ್ವಹಣೆಗೆ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಿದೆ.
ಈ ಸಮಸ್ಯೆಯು 2025ರ ಜನವರಿ 13ರಂದು ಪ್ರಾರಂಭವಾಯಿತು. ಅಂದು ಜಿಲ್ಲಾಧಿಕಾರಿ, ಉಪವಿಭಾಗೀಯ ದಂಡಾಧಿಕಾರಿ, ಪೊಲೀಸ್ ಪಡೆ ಮತ್ತು ತಹಸೀಲ್ದಾರ್, ಲೇಖಪಾಲ್, ನಾಯಬ್ ಲೇಖಪಾಲ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು, ಭೂಮಿಯ ಮಾಲೀಕತ್ವವನ್ನು ಪ್ರತಿಪಾದಿಸಿದವರೊಂದಿಗೆ ಶಾಲಾ ಆವರಣಕ್ಕೆ ಆಗಮಿಸಿ, ಮಾಲೀಕರಿಗೆ ಬೆದರಿಕೆ ಹಾಕಲು ಮುಂದಾದರು.
ತಮ್ಮ ತಂದೆ 1979ರ ಜನವರಿ 8ರಂದು ನೋಂದಾಯಿತ ಮಾರಾಟ ಪತ್ರದ ಮೂಲಕ ಗಂಗಾ ಪ್ರಸಾದ್ ಮತ್ತು ಹರ್ ಪ್ರಸಾದ್ ಅವರಿಂದ ಭೂಮಿಯನ್ನು ಖರೀದಿಸಿದ್ದರು. ಆದರೆ ಈಗ ಅವರ ಉತ್ತರಾಧಿಕಾರಿಗಳು ಆಸ್ತಿಯ ಮಾಲೀಕತ್ವವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಶಾಲಾ ವ್ಯವಸ್ಥಾಪಕರು ವಾದಿಸಿದ್ದಾರೆ.
ಉತ್ತರಪ್ರದೇಶ ಮಂಡಳಿಗೆ ಸಂಯೋಜಿತವಾಗಿರುವ ಈ ಶಾಲೆಯು ಪ್ರಸ್ತುತ ನರ್ಸರಿಯಿಂದ 10ನೇ ತರಗತಿಯವರೆಗೆ ತರಗತಿಗಳನ್ನು ನಡೆಸುತ್ತಿದೆ. ದಶಕಗಳಿಂದ ಶಾಂತಿಯುತವಾಗಿ, ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ.
2025ರ ಜನವರಿಯಿಂದ ಜೂನ್‌ವರೆಗೆ ಸ್ಥಳೀಯ ನಾಯಕರು ಮತ್ತು ಅಧಿಕಾರಿಗಳು ಯಾವುದೇ ಕಾನೂನುಬದ್ಧ ಆದೇಶವಿಲ್ಲದೆ ಶಾಲಾ ಆವರಣಕ್ಕೆ ಭೇಟಿ ನೀಡಿ, ಕಾಲಕಾಲಕ್ಕೆ ಮಾಲೀಕರಿಗೆ ಬೆದರಿಕೆ ಹಾಕುವುದನ್ನು ಮುಂದುವರೆಸಿದ್ದರು ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
2025ರ ಮೇ 15ರಂದು ಆಡಳಿತವು ಶಾಲೆಯ ಮುಖ್ಯ ದ್ವಾರದ ಜೊತೆಗೆ ಹಲವು ತರಗತಿ ಕೊಠಡಿಗಳನ್ನು ನೆಲಸಮಗೊಳಿಸಿದ್ದು, ಇದರಿಂದ ಸುಮಾರು ₹30 ಲಕ್ಷ ರೂ. ಮೌಲ್ಯದ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಅರ್ಜಿದಾರರ ಮಾಲೀಕತ್ವದಲ್ಲಿರುವ ಶಾಲೆಗೆ ಹೋಗುವ ದಾರಿಯನ್ನೂ ಒಳಗೊಂಡಂತೆ ಶಾಲಾ ಭೂಮಿಯ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಲಾಗಿತ್ತು.
2024ರ ನವೆಂಬರ್‌ನಲ್ಲಿ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ನಂತರ ಕೋಮು ಉದ್ವಿಗ್ನತೆಗಳು ಹೆಚ್ಚಾದಾಗ ಈ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ ಎಂದು APCR ಪ್ರತಿಪಾದಿಸಿದೆ.
ಶಾಲಾ ಕಟ್ಟಡವನ್ನು ನೆಲಸಮಗೊಳಿಸುವ ಯಾವುದೇ ಯೋಜನೆ ಪ್ರಸ್ತುತ ಇಲ್ಲ ಎಂದು ರಾಜ್ಯದ ಪರ ವಾದ ಮಂಡಿಸಿದ ವಕೀಲ ಗೋಪಾಲ್ ಸಕ್ಸೇನಾ ಅವರು ಸ್ಪಷ್ಟಪಡಿಸಿದರು. ಭವಿಷ್ಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬೇಕಾದರೂ ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಕೇರಳ | ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ ಗುಂಪು ವಿಚಾರಣೆ: ಮಹಿಳೆ ಆತ್ಮಹತ್ಯೆ


