ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ನಿವಾಸಕ್ಕೆ ಬೆಂಕಿ ಬಿದ್ದ ಬಗ್ಗೆ ಪೊಲೀಸ್ ದೂರು ದಾಖಲಿಸದಿರುವುದು ಮತ್ತು ಅಲಹಾಬಾದ್ ಹೈಕೋರ್ಟ್‌ಗೆ ಅವರ ವರ್ಗಾವಣೆಯನ್ನು ಯಾವುದೇ ವಿರೋಧವಿಲ್ಲದೇ ಸ್ವೀಕರಿಸಿರುವುದನ್ನು, ಅವರ ನಿವಾಸದಲ್ಲಿ ನಗದು ಪತ್ತೆಯಾದ ಆರೋಪಗಳನ್ನು ತನಿಖೆ ಮಾಡಲು ರಚಿಸಲಾದ ಸಮಿತಿಯು ಅಸ್ವಾಭಾವಿಕ ಎಂದು ಪರಿಗಣಿಸಿದೆ.
ಈ ಸಂಶೋಧನೆಗಳ ಆಧಾರದ ಮೇಲೆ, ಸುಪ್ರೀಂ ಕೋರ್ಟ್ ರಚಿಸಿದ್ದ ಮೂವರು ಸದಸ್ಯರ ಸಮಿತಿಯು ನ್ಯಾಯಮೂರ್ತಿ ವರ್ಮಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿದೆ.
ಮಾರ್ಚ್ 14 ರಂದು ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಾಗ ನಗದು ಸಂಗ್ರಹ ಪತ್ತೆಯಾಗಿತ್ತು. ಆಗ ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಇರಲಿಲ್ಲ. ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿಗೆ ವರದಿ ಮಾಡಿದ ನಂತರ, ಸುಪ್ರೀಂ ಕೋರ್ಟ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿತು.
ನ್ಯಾಯಮೂರ್ತಿ ವರ್ಮಾ ಅವರ ಮೇಲೆ ದೋಷಾರೋಪಣೆ ಮಾಡಲು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ವಿಚಾರಣೆಗೆ ಒಳಗಾದ ನ್ಯಾಯಮೂರ್ತಿ ವರ್ಮಾ ಅವರ ಹಲವಾರು ಸಿಬ್ಬಂದಿ ಮಾರ್ಚ್ 14-15ರ ಮಧ್ಯದ ರಾತ್ರಿ ವಾಟ್ಸಾಪ್ ಮೂಲಕ ಮಾತ್ರ ಅವರೊಂದಿಗೆ ಸಂವಹನ ನಡೆಸಿದ್ದೇವೆ ಎಂದು ಹೇಳಿದರು. ಈ ವಾಟ್ಸಾಪ್ ಸಂವಹನದ ವಿವರಗಳನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಇದು ಎನ್‌ಕ್ರಿಪ್ಟ್ ಮಾಡಲಾದ ವೇದಿಕೆಯಾಗಿದೆ ಎಂದು ತನಿಖಾ ತಂಡ ಹೇಳಿಕೊಂಡಿದೆ.
ನ್ಯಾಯಮೂರ್ತಿ ವರ್ಮಾ ಮತ್ತು ಅವರ ಪತ್ನಿ ದೆಹಲಿಗೆ ಹಿಂದಿರುಗಿದ ನಂತರ ಒಮ್ಮೆಯೂ ಬೆಂಕಿಬಿದ್ದ ಕೋಣೆಗೆ ಭೇಟಿ ನೀಡಿಲ್ಲ ಎಂದು ಸಮಿತಿಯು ಕಂಡುಹಿಡಿದಿದೆ. ನ್ಯಾಯಮೂರ್ತಿ ವರ್ಮಾ ತಮ್ಮ ಕುಟುಂಬ ಸದಸ್ಯರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳುವ ಮೂಲಕ ಇದನ್ನು ಸಮರ್ಥಿಸಲು ಪ್ರಯತ್ನಿಸಿದ್ದೆರು ಎಂದು ಹೇಳಿದೆ.
ಸಮಿತಿಯು ಅವರ ಈ ನಡೆಯನ್ನು ವಿಚಿತ್ರವೆಂದು ಕಂಡುಕೊಂಡಿದೆ. ಏಕೆಂದರೆ, ಅಂತಹ ಸಂದರ್ಭಗಳಲ್ಲಿ ಯಾರಾದರೂ ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರೀಕ್ಷಿಸುತ್ತಾರೆ ಎಂದು ಹೇಳಿದೆ.
ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದರೂ ಅವರು ಪೊಲೀಸರಿಗೆ ಎಂದಿಗೂ ದೂರು ನೀಡಲಿಲ್ಲ. ನಿಜವಾಗಿಯೂ ಯಾವುದೇ ಪಿತೂರಿ ಇದ್ದರೆ, ನ್ಯಾಯಾಧೀಶರು ದೂರು ದಾಖಲಿಸಬೇಕಿತ್ತು ಅಥವಾ ಅದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕಿತ್ತು ಎಂದು ವರದಿ ಹೇಳಿದೆ.
ನ್ಯಾಯಮೂರ್ತಿ ವರ್ಮಾ ಅವರು ಅಲಹಾಬಾದ್ ಹೈಕೋರ್ಟ್‌ಗೆ ತಮ್ಮ ವರ್ಗಾವಣೆಯನ್ನು ಪ್ರಸ್ತಾಪಿಸಿದ ದಿನವೇ ಯಾವುದೇ ಪ್ರಶ್ನೆಗಳಿಲ್ಲದೆ ಸದ್ದಿಲ್ಲದೆ ಒಪ್ಪಿಕೊಂಡಿದ್ದಾರೆ ಎಂದು ತನಿಖಾ ಸಮಿತಿಯು ಕಂಡುಹಿಡಿದಿದೆ.
ವರ್ಗಾವಣೆ ಆದೇಶವನ್ನು ಪ್ರಸ್ತಾಪಿಸಿದ ಕೆಲವೇ ಗಂಟೆಗಳಲ್ಲಿ, ಮರುದಿನ ಬೆಳಿಗ್ಗೆಯವರೆಗೆ ತಮ್ಮ ನಿರ್ಧಾರವನ್ನು ತಿಳಿಸಲು ಅವರಿಗೆ ಸಮಯವಿದ್ದರೂ ಸಹ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಒಪ್ಪಿಕೊಂಡಿದ್ದಾರೆ. ವರ್ಗಾವಣೆಯ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಅವರು ಪ್ರಯತ್ನಿಸಲಿಲ್ಲ ಎಂದು ವರದಿ ಹೇಳಿದೆ.
ನ್ಯಾಯಮೂರ್ತಿ ವರ್ಮಾ ವಿರುದ್ಧ ಇನ್ನೂ ಹಲವಾರು ಅಂಶಗಳು ಕೆಲಸ ಮಾಡಿದ್ದವು. ಸ್ಟೋರ್ ರೂಮ್ ಮೇಲ್ವಿಚಾರಣೆ ಮಾಡುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಸಿಟಿವಿಯನ್ನು ಭದ್ರತಾ ಸಿಬ್ಬಂದಿ ನಿಯಂತ್ರಿಸುತ್ತಿದ್ದು, ಅದು ಏಕೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಮಗೆ ತಿಳಿದಿಲ್ಲ ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ.
ಇದಲ್ಲದೆ, ಮಾರ್ಚ್ 15 ರ ಮಧ್ಯರಾತ್ರಿ ಪಿಸಿಆರ್ ಇನ್-ಚಾರ್ಜ್ ಸುನಿಲ್ ಕುಮಾರ್ ಮಾಡಿದ 11 ಸೆಕೆಂಡುಗಳ ವೀಡಿಯೊದಲ್ಲಿ ಬಾಗಿಲಿನ ಮುಂದೆ ಮತ್ತು ಸ್ಟೋರ್ ರೂಮ್‌ನ ಹಿಂಭಾಗದಲ್ಲಿ ಹಣದ ರಾಶಿಗಳು ಇರುವುದನ್ನು ತೋರಿಸಲಾಗಿದೆ. ಒಬ್ಬ ವ್ಯಕ್ತಿ “ಕೋಣೆಯು ನೋಟುಗಳಿಂದ ತುಂಬಿದೆ, ಅದನ್ನು ಕಾಣಬಹುದು” ಎಂದು ಹೇಳುವುದು ಕೇಳಿಬರುತ್ತಿದೆ.
ಸಂಭಾಲ್: ಅಲಹಾಬಾದ್ ಹೈಕೋರ್ಟ್‌ನಿಂದ ಆಜಾದ್ ಜನ್ನತ್ ನಿಶಾ ಶಾಲೆಯ ನೆಲಸಮಕ್ಕೆ ತಡೆ


