ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಆರೋಪ ಮಾಡಿದೆ. ಈ ಬಾರಿ, ಇರಾನ್‌ನ ಅಣುಶಕ್ತಿ ಕಾರ್ಯಕ್ರಮದ ಕುರಿತಾದ ಆರೋಪಗಳು ಇತಿಹಾಸ ಪುನರಾವರ್ತನೆಯಾಗುವ ಭಯವನ್ನು ಹುಟ್ಟುಹಾಕಿವೆ. 2003ರಲ್ಲಿ ಇರಾಕ್ ಮೇಲೆ ಇದೇ ರೀತಿಯ ಸುಳ್ಳು ಹೇಳಿಕೆಗಳ ಆಧಾರದ ಮೇಲೆ ನಡೆದ ಆಕ್ರಮಣದ ನೆನಪುಗಳು ಈಗಲೂ ಕಾಡುತ್ತಿವೆ.
ಇದೇ ಸೋಮವಾರದಂದು, ಡೊನಾಲ್ಡ್ ಟ್ರಂಪ್, ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಇರಾನ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಇರಾನ್‌ನಿಂದ ಜನರನ್ನು ಸ್ಥಳಾಂತರಗೊಳ್ಳುವಂತೆ ಕರೆ ನೀಡಿದ್ದಾರೆ. “ಇರಾನ್ ಅಣುಬಾಂಬ್ ಹೊಂದಬಾರದು. ನಾನು ಇದನ್ನು ಪದೇ ಪದೇ ಹೇಳಿದ್ದೇನೆ” ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇಷ್ಟು ಮಾತ್ರವಲ್ಲದೆ ಇರಾನ್‌ಗೆ ಅನೇಕ ಬೆದರಿಕೆಗಳನ್ನು ಹಾಕಿದ್ದಾರೆ. ಹಾಗೆಯೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈಯುವ ಬೆದರಿಕೆಯೂ ಸೇರಿದೆ. “ಇರಾನ್‌ನ ಆಕಾಶದ ಮೇಲೆ ನಮಗೆ ಈಗ ಸಂಪೂರ್ಣ ನಿಯಂತ್ರಣವಿದೆ. ಇರಾನ್ ಉತ್ತಮ ಆಕಾಶ ಟ್ರ್ಯಾಕರ್‌ಗಳು ಮತ್ತು ಇತರ ರಕ್ಷಣಾತ್ಮಕ ಸಾಧನಗಳನ್ನು ಹೊಂದಿದ್ದರೂ, ಅವು ಅಮೆರಿಕಾದಲ್ಲಿ ತಯಾರಾದ ಶಸ್ತ್ರಾಸ್ತ್ರಗಳ ಮುಂದೆ ಏನೂ ಅಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇರಾನ್‌ಗೆ ಯಾವುದೇ ಷರತ್ತು ಇಲ್ಲದೆ ಕೂಡಲೇ ಶರಣಾಗುವಂತೆ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಇರುವಿಕೆಯ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಅವರು, ಇರಾಕ್‌ನ ಅಂದಿನ ಅಧ್ಯಕ್ಷ ಸದ್ದಾಂ ಹುಸೇನ್ ಮತ್ತು ಅವರ ಪುತ್ರರಿಗೆ 48 ಗಂಟೆಗಳಲ್ಲಿ ಇರಾಕ್ ತೊರೆಯಲು ಅಂತಿಮ ಗಡುವು ನೀಡಿ, ರಾಜತಾಂತ್ರಿಕ ಸಂಬಂಧಗಳಿಗೆ ಅಂತ್ಯ ಹಾಡಿದ ಕ್ಷಣವನ್ನು ನೆನಪಿಸಿದೆ.
ಖಮೇನಿ ಎಲ್ಲಿ ಅಡಗಿಕೊಂಡಿದ್ದಾರೆಂದು ನಮಗೆ ನಿಖರವಾಗಿ ತಿಳಿದಿದೆ. ಅವರಿಗೆ ಸುಲಭವಾಗಿ ಗುರಿ ಇಡಬಹುದು. ಆದರೆ ನಾವು ಅವರನ್ನು ಸದ್ಯದ ಮಟ್ಟಿಗೆ ಕೊಲ್ಲುವುದಿಲ್ಲ. ನಾವು ಅಮೆರಿಕನ್ ಸೈನಿಕರ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸಲು ಬಯಸುವುದಿಲ್ಲ. ನಮ್ಮ ತಾಳ್ಮೆ ಕಡಿಮೆಯಾಗುತ್ತಿದೆ ಎಂದು ಟ್ರಂಪ್ ಹೇಳಿದ್ದರು.
ಟ್ರಂಪ್‌ರ ಆತ್ಮವಿಶ್ವಾಸದ ಮಾತುಗಳು ಹಲವರಿಗೆ ಇರಾನ್‌ನೊಂದಿಗೆ ಯುದ್ಧವನ್ನು ಹೆಚ್ಚಿಸುವ ಸಿದ್ಧತೆಯನ್ನು ಸೂಚಿಸುತ್ತಿವೆ. ಅಮೆರಿಕವು ಇಸ್ರೇಲಿ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸುತ್ತಿದೆ ಎಂಬ ಆರೋಪಗಳ ನಡುವೆ, ಅಮೆರಿಕದ ಹಸ್ತಕ್ಷೇಪದ ವಿರುದ್ಧ ಸಾರ್ವಜನಿಕ ಮತ್ತು ರಾಜಕೀಯ ವಿರೋಧವಿದ್ದರೂ ಈ ಹೇಳಿಕೆಗಳು ಬಂದಿವೆ.
ನೆನಪಾಗುತ್ತಿರುವ ಇರಾಕ್ ಇತಿಹಾಸ
ಟ್ರಂಪ್‌ರ ‘ಟ್ರೂತ್ ಸೋಶಿಯಲ್’ ಪೋಸ್ಟ್‌ಗಳು ಮತ್ತು ಇತ್ತೀಚಿನ ಮಾಧ್ಯಮ ಸಂವಾದಗಳು ಹಲವು ವಿಷಯಗಳನ್ನು ಸ್ಪಷ್ಟಪಡಿಸುತ್ತಿವೆ. ಅಮೆರಿಕವು ಇರಾನ್‌ಗೆ ಅಣುಬಾಂಬ್ ಹೊಂದುವುದಕ್ಕೆ ಅವಕಾಶ ನೀಡಬಾರದು ಎಂದು ಪುನರುಚ್ಚರಿಸುತ್ತಿದೆ. ಇವು ಇರಾಕ್ ಆಕ್ರಮಣದ ಮೊದಲು ಅಂದಿನ ಅಮೆರಿಕ ಅಧ್ಯಕ್ಷ ಬುಷ್ ಅವರ ಹೇಳಿಕೆಗಳನ್ನು ನೆನಪಿಸುತ್ತವೆ.
ಬುಷ್ ಆಡಳಿತವು ಇರಾಕ್ ಸಮೂಹ ವಿನಾಶದ ಶಸ್ತ್ರಾಸ್ತ್ರಗಳನ್ನು, ಅಂದರೆ ಅಣು, ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹೊಂದಿತ್ತು ಅಥವಾ ಸಕ್ರಿಯವಾಗಿ ತಯಾರಿಸುತ್ತಿತ್ತು ಎಂದು ಪದೇ ಪದೇ ಹೇಳಿಕೊಂಡಿತ್ತು. ಇರಾಕ್ ಒಂದು ತಕ್ಷಣದ ಬೆದರಿಕೆ ಎಂದು ಬಿಂಬಿಸಲು ಇದೇ ಪ್ರಮುಖ ವಾದವಾಗಿತ್ತು.
ಸದ್ದಾಂ ಹುಸೇನ್ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಅಮೆರಿಕವು ಮಿಲಿಟರಿ ಬಲವನ್ನು ಏಕೆ ಬಳಸಬೇಕಾಗಬಹುದು ಎಂದು 2002ರ ತಮ್ಮ ‘ಸ್ಟೇಟ್ ಆಫ್ ದಿ ಯೂನಿಯನ್’ ಭಾಷಣದಲ್ಲಿ ಬುಷ್ ವಾದ ಮಂಡಿಸಿದ್ದರು. ಇರಾಕ್ ಅಮೆರಿಕದ ಕಡೆಗೆ ತನ್ನ ದ್ವೇಷವನ್ನು ಪ್ರದರ್ಶಿಸುವುದನ್ನು ಮುಂದುವರೆಸಿದೆ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ಅಣುಬಾಂಬ್‌ಗಳನ್ನು ತಯಾರಿಸಲು ಸಂಚು ರೂಪಿಸಿದೆ ಎಂದು ಕೂಡ ಬುಷ್ ಹೇಳಿದ್ದರು.
ಇರಾಕ್, ಇರಾನ್ ಮತ್ತು ಉತ್ತರ ಕೊರಿಯಾಗಳನ್ನು “ದುಷ್ಟರ ಕೂಟ” ಎಂದು ಆಗ ಬುಷ್ ಬಣ್ಣಿಸಿದ್ದರು. ಹೀಗೆ ನಾನಾ ರೀತಿ ಹೇಳುತ್ತಾ ಅವರು ಅಂದಿನ ಅಮೆರಿಕನ್ ಜನರಲ್ಲಿ ಭಯವನ್ನು ಹುಟ್ಟುಹಾಕಿದ್ದರು. ನ್ಯೂಯಾರ್ಕ್, ವಾಷಿಂಗ್ಟನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳು ನಡೆದು ನಾಲ್ಕು ತಿಂಗಳು ಕಳೆದ ನಂತರ ಬುಷ್ ಈ ಭಾಷಣವನ್ನು ಮಾಡಿದ್ದರು. ಇದರಿಂದ ಪ್ರಚೋದಿಸಲ್ಪಟ್ಟ ಸಾರ್ವಜನಿಕರು ಇರಾಕ್ ವಿರುದ್ಧ ಅಮೆರಿಕ ನಡೆಸುವ ಯುದ್ಧದ ಪರವಾಗಿ ನಿಂತರು.
ಬುಷ್ ಅಂದಿನ ಇರಾಕಿ ಜನರಿಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ತರುವ ಬಗ್ಗೆಯೂ ಮಾತನಾಡಿದರು. ಈ ಯುದ್ಧವು ಕೇವಲ ಭದ್ರತಾ ಬೆದರಿಕೆಗಳ ಬಗ್ಗೆ ಮಾತ್ರವಲ್ಲದೆ, ಕ್ರೂರ ಸರ್ವಾಧಿಕಾರಿ ಒಬ್ಬರಿಂದ ಒಂದು ರಾಷ್ಟ್ರವನ್ನು ಮುಕ್ತಗೊಳಿಸುವ ಬಗ್ಗೆಯೂ ಇದೆ ಎಂದು ಬುಷ್ ತಮ್ಮ ಭಾಷಣದಲ್ಲಿ ಸೂಚಿಸಿದ್ದರು. ಈ ಸಂದೇಶವು ಕೆಲವರಿಗೆ ಒಪ್ಪಿಗೆಯಾಗಿತ್ತು.
2003ರಲ್ಲಿ ಬುಷ್ ಅಮೆರಿಕದ ಜನರಿಗೆ “ಇರಾಕ್‌ನಲ್ಲಿ ಹೊಸ ಆಡಳಿತವು ಆ ಪ್ರದೇಶದ ಇತರ ರಾಷ್ಟ್ರಗಳಿಗೆ ಸ್ಪೂರ್ತಿದಾಯಕ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಭರವಸೆ ನೀಡಿದ್ದರು. ಆದರೆ ಅಮೆರಿಕವು ಅಂತಿಮವಾಗಿ ವರ್ಷಗಳ ಕಾಲ ನಡೆಸಿದ ಯುದ್ಧದ ನಂತರ ಇರಾಕ್‌ನಲ್ಲಿ ದುರ್ಬಲ ಮತ್ತು ವಿಭಜಿತ ಸರ್ಕಾರವನ್ನು ಬಿಟ್ಟುಹೋಯಿತು.
ಅಂದು ಪ್ರಪಂಚದೆಲ್ಲೆಡೆ ದೊಡ್ಡ ಪ್ರಮಾಣದ ಯುದ್ಧ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದರೂ, ಮಾಧ್ಯಮಗಳು ಅವುಗಳನ್ನು ವರದಿ ಮಾಡಲೇ ಇಲ್ಲ. ಬದಲಿಗೆ ಯುದ್ಧಪರ ನಿರೂಪಣೆಗಳನ್ನು ಹೆಚ್ಚಿಸಿದವು. “ತೈಲಕ್ಕಾಗಿ ರಕ್ತ ಬೇಡ” ಎಂಬ ಫಲಕಗಳನ್ನು ಹೊತ್ತು ಅಮೆರಿಕ ಮತ್ತು ಪ್ರಪಂಚದಾದ್ಯಂತ ಪ್ರದರ್ಶಿಸಿ ಲಕ್ಷಾಂತರ ಜನರು ನಡೆಸಿದ ಪ್ರತಿಭಟನೆಗಳಿಗೆ ಮಾಧ್ಯಮಗಳು ಅಲ್ಪಾವಕಾಶವನ್ನು ನೀಡಿದವು.
ಇರಾಕ್ ಯುದ್ಧದ ವಿವಾದಾತ್ಮಕ ಅಂಶಗಳು
2003ರ ಮಾರ್ಚ್ 19ರಂದು ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಹೇಳಿಕೆಗಳ ಆಧಾರದ ಮೇಲೆ ಅಮೆರಿಕ ನೇತೃತ್ವದ ಒಕ್ಕೂಟವು ಇರಾಕ್‌ಗೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿತು. ಈ ಹೇಳಿಕೆಗಳು ಯುದ್ಧದ ನಂತರ ಸುಳ್ಳೆಂದು ಸಾಬೀತಾದವು. ಇರಾಕ್ ಯುದ್ಧವು 8 ವರ್ಷಗಳ ಕಾಲ ನಡೆಯಿತು. ಇದರ ಪರಿಣಾಮವಾಗಿ 2 ಲಕ್ಷಕ್ಕೂ ಹೆಚ್ಚು ಇರಾಕಿ ನಾಗರಿಕರು ಮತ್ತು 4,000 ಅಮೆರಿಕ ಸೈನಿಕರು ಸಾವನ್ನಪ್ಪಿದರು.
2011ರವರೆಗೆ ನಡೆದ ಅಮೆರಿಕ ನೇತೃತ್ವದ ಇರಾಕ್ ಆಕ್ರಮಣವು ಜನರ ದೊಡ್ಡ ಪ್ರಮಾಣದ ಸ್ಥಳಾಂತರಗಳಿಗೆ ಕಾರಣವಾಯಿತು. 2003ರಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸಂಖ್ಯೆ 2007ರ ವೇಳೆಗೆ 26 ಲಕ್ಷಕ್ಕೆ ಏರಿತು. ಅಮೆರಿಕ ತನ್ನ ಯುದ್ಧ ಕಾರ್ಯಾಚರಣೆಗಳನ್ನು 2011ರ ಡಿಸೆಂಬರ್‌ನಲ್ಲಿ ಅಂತ್ಯಗೊಳಿಸುವುದಾಗಿ ಘೋಷಿಸುವ ಹೊತ್ತಿಗೆ 10 ಲಕ್ಷ 30 ಸಾವಿರ ಜನರು ಸ್ಥಳಾಂತರಗೊಂಡಿದ್ದರು.
ಮೂರು ವಾರಗಳ ನಂತರ, ಅಂದರೆ 2011ರ ಏಪ್ರಿಲ್ 9ರಂದು ಅಮೆರಿಕನ್ ಪಡೆಗಳು ಇರಾಕಿನ ಬಾಗ್ದಾದ್ ಅನ್ನು ವಶಪಡಿಸಿಕೊಂಡವು ಮತ್ತು ಫಿರ್ದೋಸ್ ಸ್ಕ್ವೇರ್‌ನಲ್ಲಿ ಸದ್ದಾಂ ಹುಸೇನ್ ಪ್ರತಿಮೆಯನ್ನು ಉರುಳಿಸಿದವು. ಇದು ಅಮೆರಿಕದ ವಿಜಯದ ಜಾಗತಿಕ ಸಂಕೇತವಾಯಿತು.
ಸದ್ದಾಂ ಹುಸೇನ್ ಪ್ರತಿಮೆಯ ನಾಶವನ್ನು ಆರಂಭದಲ್ಲಿ ಮಾಧ್ಯಮಗಳು ವಿಮೋಚನೆಯ ಸಂಭ್ರಮ ಎಂದು ಬಿಂಬಿಸಿದವು. ಆದರೆ ಇದು ಅಮೆರಿಕದ ವಿಜಯದ ಸಂಕೇತವೆಂದು ನಂತರ ತಿಳಿದು ಬಂತು.
2003ರ ಅಂತ್ಯದ ಮೊದಲು ಅಮೆರಿಕ ಪಡೆಗಳು ಸದ್ದಾಂ ಹುಸೇನ್ ಅವರನ್ನು ಸೆರೆಹಿಡಿದವು. ನಂತರ ಅವರಿಗೆ ಇರಾಕಿ ನ್ಯಾಯಾಲಯದಿಂದ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಲಾಯಿತು. ಅವರ ಮರಣದಂಡನೆಗೆ ಆಯ್ಕೆ ಮಾಡಿದ ದಿನವಾದ 2006ರ ಡಿಸೆಂಬರ್ 30, ಮುಸ್ಲಿಂ ಹಬ್ಬ ಈದ್ ಅಲ್-ಅಧಾದ ಮೊದಲ ದಿನವೂ ಆಗಿತ್ತು, ಇದು ಇಂದಿಗೂ ವಿವಾದಾತ್ಮಕವಾಗಿದೆ.
ಸದ್ದಾಂರನ್ನು ಸೆರೆಹಿಡಿದ ನಂತರ, ಬುಷ್ ಆಡಳಿತವು ಇರಾಕ್‌ನಲ್ಲಿ ರಾಸಾಯನಿಕ, ಜೈವಿಕ ಮತ್ತು ಅಣುಬಾಂಬ್‌ಗಳ ದಾಸ್ತಾನುಗಳು ಇರುವಿಕೆ ಬಗ್ಗೆ ತನ್ನ ಯುದ್ಧಪೂರ್ವ ವಾದಗಳು ಆಧಾರರಹಿತವಾಗಿವೆ ಎಂದು ಒಪ್ಪಿಕೊಂಡಿತು.
ಅಮೆರಿಕ ನಿರ್ವಹಣೆಯ ಅಬು ಘ್ರೈಬ್ ಜೈಲಿನಲ್ಲಿ ಇರಾಕ್ ಕೈದಿಗಳ ಮೇಲಿನ ದೌರ್ಜನ್ಯದ ಪುರಾವೆಗಳು, ಛಾಯಾಚಿತ್ರಗಳು ವೈರಲ್ ಆದಾಗ ಅಮೆರಿಕ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಗಳು ಬೆಳಕಿಗೆ ಬಂದವು. ಇದು ಜಾಗತಿಕ ಆಕ್ರೋಶಕ್ಕೆ ಕಾರಣವಾಯಿತು. ದೈಹಿಕ ಹಲ್ಲೆ, ಲೈಂಗಿಕ ಅವಮಾನ, ಮಾನಸಿಕ ಮತ್ತು ದೈಹಿಕ ಹಿಂಸೆ, ಅತ್ಯಾಚಾರ, ಮನಾಡೆಲ್ ಅಲ್-ಜಮಾಡಿ ಅವರ ಹತ್ಯೆ, ಮತ್ತು ಅವರ ದೇಹದ ಅಪವಿತ್ರೀಕರಣ ಸೇರಿದಂತೆ ಈ ದೌರ್ಜನ್ಯಗಳು ಸಿಬಿಎಸ್ ನ್ಯೂಸ್ 2004ರ ಏಪ್ರಿಲ್‌ನಲ್ಲಿ ಛಾಯಾಚಿತ್ರಗಳನ್ನು ಪ್ರಕಟಿಸಿದಾಗ ಬೆಳಕಿಗೆ ಬಂದವು. ಇದು ಅಮೆರಿಕ ಮತ್ತು ಪ್ರಪಂಚದಾದ್ಯಂತ ವ್ಯಾಪಕ ಖಂಡನೆಗೆ ಕಾರಣವಾಯಿತು.
2011ರಲ್ಲಿ ಅಮೆರಿಕ ನೇತೃತ್ವದ ಒಕ್ಕೂಟ ಪಡೆಗಳು ಇರಾಕ್‌ನಿಂದ ಹಿಂತೆಗೆದುಕೊಳ್ಳಲಾಯಿತು. ಒಕ್ಕೂಟವು ಯುದ್ಧ ಮುಗಿದಿದೆ ಎಂದು ಘೋಷಿಸಿತು. ಆದರೆ ಆಕ್ರಮಣದ ಪರಿಣಾಮವಾಗಿ ನಾಶವಾದ ಇರಾಕ್ ದೇಶವನ್ನು ಬಿಟ್ಟುಹೋದವು. ಈ ಯುದ್ಧವನ್ನು ಏಕೆ ನಡೆಸಲಾಯಿತು ಎಂಬ ಪ್ರಶ್ನೆಗಳು ಇಂದಿಗೂ ಉಳಿದಿದೆ.
ಭವಿಷ್ಯದ ಆತಂಕ
ಅಮೆರಿಕದ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಕುರಿತಾದ ಗುಪ್ತಚರ ಸಾಮರ್ಥ್ಯಗಳ ಆಯೋಗ (WMD ಆಯೋಗ) 2005ರಲ್ಲಿ ಇರಾಕಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಕುರಿತ ಅಮೆರಿಕದ ಗುಪ್ತಚರ ಮಾಹಿತಿ ಸಂಪೂರ್ಣವಾಗಿ ದೋಷಪೂರಿತವಾಗಿದೆ ಮತ್ತು ಒಂದು ಸಣ್ಣ ಪುರಾವೆಯೂ ಇಲ್ಲ ಎಂದು ಹೇಳಿತು.
ಅಮೆರಿಕ ಸರ್ಕಾರವು ಸದ್ದಾಂ ಹುಸೇನ್ ತನ್ನ ಅಣುಬಾಂಬ್ ಕಾರ್ಯಕ್ರಮವನ್ನು ಪುನಃ ಸ್ಥಾಪಿಸಿದ್ದಾನೆ, ಜೈವಿಕ ಶಸ್ತ್ರಾಸ್ತ್ರಗಳು ಮತ್ತು ಮೊಬೈಲ್ ಜೈವಿಕ ಶಸ್ತ್ರಾಸ್ತ್ರ ಉತ್ಪಾದನಾ ಘಟಕಗಳನ್ನು ಹೊಂದಿದ್ದಾನೆ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ್ದಾನೆ ಮತ್ತು ಉತ್ಪಾದಿಸುತ್ತಿದ್ದಾನೆ ಎಂದು ಹೇಳಿಕೊಂಡಿತ್ತು. ಇವೆಲ್ಲವೂ ಅಮೆರಿಕದ ಗುಪ್ತಚರ ಸಮುದಾಯದ ಮೌಲ್ಯಮಾಪನಗಳನ್ನು ಆಧರಿಸಿದ್ದವು ಮತ್ತು ಯುದ್ಧ ಮುಗಿದಾಗ ಈ ಆರೋಪಗಳ ಒಂದು ಸಣ್ಣ ದೃಢೀಕರಣವೂ ಸಾಧ್ಯವಾಗಲಿಲ್ಲ ಎಂದು ವರದಿಯು ಹೇಳಿದೆ.
ಈಗ, ಟ್ರಂಪ್‌ರ ಯುದ್ಧದ ಬೆದರಿಕೆಗಳು ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿವೆ. ಅನೇಕ ಅಮೆರಿಕನ್ನರು ಇರಾನ್‌ನೊಂದಿಗಿನ ಯುದ್ಧವು ಅಮೆರಿಕದ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರದಂದು, ಇರಾನ್ ವಿರುದ್ಧ ಮಿಲಿಟರಿ ದಾಳಿಯನ್ನು ಆದೇಶಿಸುವ ಮೊದಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಂಗ್ರೆಸ್ ಅನುಮತಿ ಪಡೆಯಬೇಕೆಂದು ಒತ್ತಾಯಿಸುವ ಮಸೂದೆಯನ್ನು ಮಂಡಿಸಲಾಯಿತು. ಇಸ್ರೇಲ್ ಪರ ಗುಂಪುಗಳು ಇರಾನ್ ವಿರುದ್ಧ ಇಸ್ರೇಲ್‌ನ ಬಾಂಬ್ ದಾಳಿ ಕಾರ್ಯಾಚರಣೆಗೆ ಅಮೆರಿಕ ಬೆಂಬಲ ನೀಡುವಂತೆ ಒತ್ತಾಯಿಸಿವೆ.
ಅನೇಕ ನೆಟ್ಟಿಗರು ಟ್ರಂಪ್‌ನ 2011ರ ಪೋಸ್ಟ್‌ಗಳನ್ನು ಉಲ್ಲೇಖಿಸಿ ವಿಪರ್ಯಾಸವನ್ನು ಎತ್ತಿ ತೋರಿಸಿದ್ದಾರೆ. ಆ ಪೋಸ್ಟ್‌ಗಳಲ್ಲಿ ಟ್ರಂಪ್, “ಬರಾಕ್ ಒಬಾಮಾ ಮತ್ತೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಲು ಇರಾನ್‌ನೊಂದಿಗೆ ಯುದ್ಧವನ್ನು ಪ್ರಾರಂಭಿಸುತ್ತಾರೆ. ಅಧ್ಯಕ್ಷ ಒಬಾಮಾ ಸರಿಯಾಗಿ ಮಾತುಕತೆ ನಡೆಸಲು ಅಸಮರ್ಥರಾಗಿರುವುದರಿಂದ ಇರಾನ್‌ಗೆ ದಾಳಿ ಮಾಡುತ್ತಾರೆ ಎಂದು ನಾನು ಬಹಳ ಹಿಂದೆಯೇ ಊಹಿಸಿದ್ದೆ!” ಎಂದು ಬರೆದಿದ್ದರು.
ಈಗ ಇರಾನ್-ಇಸ್ರೇಲ್ ಸಂಘರ್ಷವು ಮತ್ತೊಂದು ಇರಾಕ್ ಮಾದರಿಯ ಯುದ್ಧದ ಭಯವನ್ನು ಹುಟ್ಟುಹಾಕುತ್ತಿದೆ. ಆದರೆ ಇರಾಕ್‌ಗಿಂತ ಭಿನ್ನವಾಗಿ, ಈಗ ಅಂತರರಾಷ್ಟ್ರೀಯ ಮೇಲ್ವಿಚಾರಣೆ ಮತ್ತು ಜಾಗತಿಕ ಎಚ್ಚರಿಕೆಗಳು ಅಮೆರಿಕ-ಇರಾನ್ ಯುದ್ಧದ ಸಾಧ್ಯತೆಯನ್ನು ಸದ್ಯಕ್ಕೆ ಕಡಿಮೆ ಮಾಡುತ್ತವೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡುತ್ತಿರುವುದನ್ನು ನೋಡಿದರೆ, ಇರಾನ್ ಎಂಬ ದೇಶವೊಂದು ಯುದ್ಧದಿಂದ ಧ್ವಂಸವಾಗುವ ಮತ್ತೊಂದು ಮಾರಣಾಂತಿಕ ಸಂಘರ್ಷಕ್ಕೆ ಜಗತ್ತು ಸಾಕ್ಷಿಯಾಗಲಿದೆಯೇ? ಅನಿಸುತ್ತಿದೆ.
ಸೌಜನ್ಯ: ಮಕ್ತೂಬ್


