ಹೊಸದಿಲ್ಲಿ: ದೆಹಲಿ ವಿಶ್ವವಿದ್ಯಾಲಯದ (ಡಿ.ಯು.) ಪದವಿಪೂರ್ವ ಪ್ರವೇಶ ಪೋರ್ಟಲ್ ಗುರುವಾರದಿಂದ ಲಭ್ಯವಾಗಿದ್ದು, ‘ಮಾತೃಭಾಷೆ’ ವಿಭಾಗದಲ್ಲಿ ‘ಉರ್ದು’ ಭಾಷೆಯನ್ನು ಕೈಬಿಟ್ಟು ‘ಮುಸ್ಲಿಂ’ ಅನ್ನು ಒಂದು ಆಯ್ಕೆಯಾಗಿ ಪಟ್ಟಿ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಇದನ್ನು ವಾಸ್ತವಿಕವಾಗಿ ತಪ್ಪು ಮತ್ತು ಕೋಮು ಸಂವೇದನಾರಹಿತ ನಡೆಯಾಗಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.
ಲಕ್ಷಾಂತರ ಜನರು, ವಿಶೇಷವಾಗಿ ಉತ್ತರ ಭಾರತದ ಮುಸ್ಲಿಂ ಸಮುದಾಯಗಳಲ್ಲಿ ವ್ಯಾಪಕವಾಗಿ ಮಾತನಾಡುವ, ಮತ್ತು ಸಂವಿಧಾನದ ಎಂಟನೇ ಅನುಸೂಚಿಯ ಅಡಿಯಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ ಭಾಷೆಯಾದ ಉರ್ದುವನ್ನು ಪಟ್ಟಿಯಿಂದ ತೆಗೆದುಹಾಕಿರುವ ಹಿನ್ನೆಲೆಯಲ್ಲಿ ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ.
ಅಲ್ಲದೆ, ಅರ್ಜಿ ನಮೂನೆಯಲ್ಲಿ ‘ಮಾತೃಭಾಷೆ’ ವಿಭಾಗದ ಅಡಿಯಲ್ಲಿ ‘ಬಿಹಾರಿ’, ‘ಚಮಾರ್’, ‘ಮಜ್ದೂರ್’, ‘ದೇಹಾತಿ’, ‘ಮೋಚಿ’ ಮತ್ತು ‘ಕುರ್ಮಿ’ ನಂತಹ ಜಾತಿ ಮತ್ತು ಉದ್ಯೋಗ ಸಂಬಂಧಿತ ಪದಗಳನ್ನು ಸಹ ಸೇರಿಸಲಾಗಿದೆ. ಇದು ಅರ್ಜಿ ನಮೂನೆಯ ರಚನೆಯ ಹಿಂದಿನ ತರ್ಕ ಮತ್ತು ಉದ್ದೇಶದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಡಿಟಿಎಫ್‌ನ ಪ್ರಧಾನ ಕಾರ್ಯದರ್ಶಿ ಆಭಾ ದೇವ್ ಹಬೀಬ್, ಈ ವಿಷಯವನ್ನು ಖಂಡಿಸಿದ್ದಾರೆ. ಉರ್ದು ಭಾರತದ ಮಾನ್ಯತೆ ಪಡೆದ ಭಾಷೆಗಳಲ್ಲಿ ಒಂದಾಗಿ ಸಾಂವಿಧಾನಿಕ ಸ್ಥಾನಮಾನವನ್ನು ಹೊಂದಿದೆ ಮತ್ತು ಮುಸ್ಲಿಮರು ತಮ್ಮ ಪ್ರದೇಶಗಳ ಇತರರಂತೆ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಅವರು ಒತ್ತಿ ಹೇಳಿದರು.
“ಪದವಿಪೂರ್ವ ಪ್ರವೇಶಕ್ಕಾಗಿ ವಿಶ್ವವಿದ್ಯಾಲಯದ ನೋಂದಣಿ ನಮೂನೆ ಇದಕ್ಕಿಂತ ಹೆಚ್ಚು ಇಸ್ಲಾಮೊಫೋಬಿಕ್ ಆಗಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
“ಕೇಂದ್ರ ವಿಶ್ವವಿದ್ಯಾಲಯವು ಇಂತಹ ನಮೂನೆಯನ್ನು ಹೇಗೆ ಪ್ರಕಟಿಸಬಹುದು? ಇದು ಕೋಮು ಮನಸ್ಥಿತಿಯಿಂದ ಕೂಡಿದೆ. ಇದನ್ನು ಖಂಡಿಸಬೇಕು ಮತ್ತು ಇದಕ್ಕೆ ಸಂಬಂಧಪಟ್ಟವರು ತಕ್ಷಣವೇ ಕ್ಷಮೆಯಾಚಿಸುವುದರೊಂದಿಗೆ ತಿದ್ದುಪಡಿ ಮಾಡಬೇಕು” ಎಂದು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.
ಇಂತಹ ಪ್ರಮುಖ ವಿಶ್ವವಿದ್ಯಾಲಯವು ಈ ರೀತಿ ತಪ್ಪುಗಳನ್ನು ಮಾಡುತ್ತಿರುವುದು ಖೇದಕರ. ಯಾವುದೇ ವಿವಿಯು ಬಹುಭಾಷಾತ್ವವನ್ನು ಗೌರವಿಸಬೇಕು ಎಂದು ವಿವಿಯ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ. ಮಿಥುರಾಜ್ ಧುಸಿಯಾ ಹೇಳಿದ್ದಾರೆ.
ಕಿರೂರಿ ಮಾಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರುದ್ರಾಶಿಶ್ ಚಕ್ರವರ್ತಿ ಅವರು ಪ್ರವೇಶ ನಮೂನೆಯನ್ನು ಕೋಮುಪ್ರಚೋದನೆಯ ಯೋಜಿತ ಕೃತ್ಯ ಎಂದು ಟೀಕಿಸಿದ್ದಾರೆ.
“ವಿವಿ ಆಡಳಿತದ ಈ ಕೃತ್ಯವು ಭಾರತದ ಸಂವಿಧಾನಕ್ಕೆ ಗಂಭೀರ ಬೆದರಿಕೆಯಾಗಿದೆ. ಏಕೆಂದರೆ ಇದು ಸಂವಿಧಾನದ ಎಂಟನೇ ಅನುಸೂಚಿಯನ್ನು ಉಲ್ಲಂಘಿಸುತ್ತದೆ ಮತ್ತು ಇದು ಕೇಂದ್ರೀಯ ವಿಶ್ವವಿದ್ಯಾಲಯದ ಸಮಗ್ರ ಮತ್ತು ಒಳಗೊಳ್ಳುವ ಮನೋಭಾವವನ್ನು ದುರ್ಬಲಗೊಳಿಸುತ್ತದೆ” ಎಂದು ಅವರು ಹೇಳಿದರು.
ವಿವಿಯ ಅಧಿಕಾರಿಗಳು ದೋಷವನ್ನು ಸರಿಪಡಿಸಿದ್ದರೂ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಅಮಿತ್ ಶಾ ಇಂಗ್ಲಿಷ್ ವಿರೋಧಿ ಹೇಳಿಕೆ | ಸಂಕುಚಿತ ಮನಸ್ಸಿನ ರಾಜಕೀಯ ದೃಷ್ಟಿಕೋನ ಎಂದ ಕೇರಳ ಸಚಿವರು


