ದೇಶದ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಜೂನ್. 23) ಪ್ರಕಟಗೊಂಡಿದೆ.
ಗುಜರಾತ್‌ನ ಕಾಡಿ ಮತ್ತು ವಿಸಾವದರ್, ಕೇರಳದ ನಿಲಂಬೂರ್, ಪಶ್ಚಿಮ ಬಂಗಾಳದ ಕಾಳಿಗಂಜ್, ಮತ್ತು ಪಂಜಾಬ್‌ನ ಲುದಿಯಾನ ಪಶ್ಚಿಮ ಕ್ಷೇತ್ರಗಳಿಗೆ ಜೂನ್ 19ರಂದು ಮತದಾನ ನಡೆದಿತ್ತು.
ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಆರ್ಯಡನ್ ಶೌಕತ್ ಅವರು 11, 077 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಶೌಕತ್ ಅವರು 77,737 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಆಡಳಿತರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೈತ್ರಿಕೂಟದ ಸಿಪಿಐ(ಎಂ) ಅಭ್ಯರ್ಥಿ ಎಂ. ಸ್ವರಾಜ್ 66,660 ಮತಗಳನ್ನು ಗಳಿಸಿದ್ದಾರೆ.
ಇನ್ನುಳಿದಂತೆ, ಬಿಜೆಪಿ ಅಭ್ಯರ್ಥಿ ಮೋಹನ್ ಜಾರ್ಜ್ 8,648 ಮತಗಳನ್ನು ಗಳಿಸಿದರೆ, ಎಸ್‌ಡಿಪಿಐನ ಸಾದಿಕ್ ನಡುತೊಡಿ 2,075 ಮತಗಳನ್ನು ಪಡೆದುಕೊಂಡಿದ್ದಾರೆ. 630 ನೋಟಾ ಮತಗಳು ಚಲಾವಣೆ ಆಗಿವೆ. ಒಟ್ಟು 10 ಅಭ್ಯರ್ಥಿಗಳು ನಿಲಂಬೂರ್ ಕಣದಲ್ಲಿದ್ದರು.
ಗುಜರಾತ್‌ನ ಕಾಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಕುಮಾರ್ (ರಾಜುಭಾಯಿ) ದಾನೇಶ್ವರ್ ಛಾವ್ಡ 39, 452 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಭಾಯಿ ಛಾವ್ಡ ವಿರುದ್ದ ಗೆಲುವು ದಾಖಲಿಸಿದ್ದಾರೆ. ದಾನೇಶ್ವರ್ ಛಾವ್ಡ 99,742 ಮತಗಳನ್ನು ಪಡೆದುಕೊಂಡಿದ್ದು, ರಮೇಶ್ಭಾಯಿ ಛಾವ್ಡ 60,290 ಮತಗಳನ್ನು ಗಳಿಸಿದ್ದಾರೆ.
ಇನ್ನುಳಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಛಾವ್ಡ ಜಗದೀಶ್‌ಭಾಯಿ ಛಾವ್ಡ 3090 ಮತಗಳನ್ನು ಪಡೆದರೆ, ಪ್ರಜಾಶಕ್ತಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ.ಗಿರೀಶ್‌ಭಾಯಿ ಜೀತಾಭಾಯಿ ಕಪಾಡಿಯಾ 1335 ಮತಗಳನ್ನು ಪಡೆದಿದ್ದಾರೆ.
ಗುಜರಾತ್‌ನ ಮತ್ತೊಂದು ಕ್ಷೇತ್ರ ವಿಸಾವದರ್‌ನಲ್ಲಿ ಎಎಪಿ ಅಭ್ಯರ್ಥಿ ಇಟಾಲಿಯಾ ಗೋಪಾಲ್ 17,554 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕಿರಿತ್ ಪಟೇಲ್ ವಿರುದ್ದ ಗೆಲುವು ದಾಖಲಿಸಿದ್ದಾರೆ. ಇಟಾಲಿಯಾ ಗೋಪಾಲ್ ಅವರು 75,942 ಮತಗಳನ್ನು ಪಡೆದರೆ, ಕಿರಿತ್ ಪಟೇಲ್ 58,388 ಮತಗಳನ್ನು ಗಳಿಸಿದ್ದಾರೆ.
ಇನ್ನುಳಿದಂತೆ ಕಾಂಗ್ರೆಸ್ ಅಭ್ಯರ್ಥಿ ನಿತಿನ್ ರಾನ್‌ಪರಿಯ ಅವರು 5,501 ಮತಗಳನ್ನು ಪಡೆದಿದ್ದು, ಸ್ವತಂತ್ರ ಅಭ್ಯರ್ಥಿ ಹಿತೇಶ್‌ಭಾಯಿ ಪ್ರೇಮ್‌ಜಿಭಾಯಿ ವಾಘಸಿಯಾ ಅವರು 3,224 ಮಗಳನ್ನು ಪಡೆದಿದ್ದಾರೆ.
ಪಂಜಾಬ್‌ನ ಲುದಿಯಾನ ಪಶ್ಚಿಮ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಸಂಜೀವ್ ಅರೋರ ಅವರು 10,637 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರತ್ ಭೂಷಣ್ ಅಶು ವಿರುದ್ದ ಜಯಗಳಿಸಿದ್ದಾರೆ. ಸಂಜೀವ್ ಅರೋರ ಅವರು 35,179 ಮತಗಳನ್ನು ಪಡೆದರೆ, ಭರತ್ ಭೂಷಣ್ 24, 542 ಮತಗಳನ್ನು ಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಜೀವನ್ ಗುಪ್ತಾ ಅವರು 20,323 ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದು, ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಅಡ್ವೊಕೇಟ್ ಪರೂಪ್‌ಕಾರ್ ಸಿಂಗ್ ಘುಮಾನ್ ಅವರು 8,203 ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಪಶ್ಚಿಮ ಬಂಗಾಳದ ಕಾಳಿಗಂಜ್ ಕ್ಷೇತ್ರದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಅಲೀಫಾ ಅಹ್ಮದ್ ಅವರು 500,49 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಆಶಿಷ್ ಘೋಶ್ ವಿರುದ್ದ ಜಯಗಳಿಸಿದ್ದಾರೆ. ಅಲೀಫಾ ಅವರು 102,759 ಮತಗಳನ್ನು ಪಡೆದರೆ, ಆಶಿಶ್ ಘೋಷ್ 52,710 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಬೀಲುದ್ದೀನ್ ಶೈಖ್ 28,348 ಮತಗಳನ್ನು ಗಳಿಸಿದ್ದಾರೆ.
ವಿಧಾನಸಭೆ ಉಪಚುನಾವಣೆ | ಕೇರಳದ ನಿಲಂಬೂರಿನಲ್ಲಿ ಯುಡಿಎಫ್ ಅಭ್ಯರ್ಥಿ ಆರ್ಯಡನ್ ಶೌಕತ್‌ಗೆ ಭರ್ಜರಿ ಜಯ


