ಅಮೆರಿಕ, ಇಸ್ರೇಲ್ ಮತ್ತು ಇರಾನ್‌ಗಳಿಗೆ ಆದ ಲಾಭವೇನು?
ಇರಾನ್ ಮತ್ತು ಇಸ್ರೇಲ್ ನಡುವೆ 12 ದಿನಗಳ ಕಾಲ ನಡೆದ ತೀವ್ರ ಸಂಘರ್ಷವು ಅಮೆರಿಕದ ನೇರ ಹಸ್ತಕ್ಷೇಪದ ನಂತರ ಕದನವಿರಾಮ ಜಾರಿಯಾಗಿದೆ. ಈ ಕದನವಿರಾಮವು ಹಲವು ಅನಿಶ್ಚಿತತೆಗಳು ಮತ್ತು ಬಗೆಹರಿಯದ ಪ್ರಶ್ನೆಗಳನ್ನು ಉಳಿಸಿದೆ.
ಇಸ್ರೇಲ್ ‘ಆಪರೇಷನ್ ರೈಸಿಂಗ್ ಲಯನ್’ ಎಂಬ ವಾಯುಪಡೆಯ ಕಾರ್ಯಾಚರಣೆಯನ್ನು ಜೂನ್ 13ರಂದು ಇರಾನ್ ಮೇಲೆ ಆರಂಭಿಸಿತು. ಇರಾನ್‌ನ ಪರಮಾಣು ಮತ್ತು ದೂರಗಾಮಿ ಕ್ಷಿಪಣಿ ಯೋಜನೆಗಳು “ನಮಗೆ ಅಸ್ತಿತ್ವದ ಬೆದರಿಕೆ” ಎಂದು ಅದರ ಮೇಲಿನ ವಾಯುದಾಳಿಗೆ ಕಾರಣವೆಂದು ಇಸ್ರೇಲ್ ಹೇಳಿಕೊಂಡಿತು. ಇದೇ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಇರಾನ್‌ನಲ್ಲಿ ಆಡಳಿತ ಬದಲಾವಣೆ ತರುವುದಾಗಿ ಘೋಷಿಸಿದರು. ಇರಾನ್ ಸರ್ಕಾರ “ಬಹಳ ದುರ್ಬಲವಾಗಿದೆ” ಮತ್ತು “ಅವಕಾಶ ಸಿಕ್ಕರೆ ಶೇ. 80ರಷ್ಟು ಜನರು ಈ ಧಾರ್ಮಿಕ ಪುಂಡರನ್ನು ಹೊರಹಾಕುತ್ತಾರೆ” ಎಂದೂ ಸಹ ಅವರು ಹೇಳಿದರು.
ಏಪ್ರಿಲ್ ಮತ್ತು ಅಕ್ಟೋಬರ್ 2024ರಲ್ಲಿ ನಡೆದ ಎರಡು ಸುತ್ತಿನ ದಾಳಿಗಳಿಂದ ಇರಾನ್ ತನ್ನ ಮಿಲಿಟರಿ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಈ ನಡುವೆ, ತಾನು ಕೇವಲ ಪ್ರತೀಕಾರವಾಗಿ ವರ್ತಿಸುತ್ತಿದ್ದೇನೆ ಎಂದು ಇರಾನ್ ಒತ್ತಿ ಹೇಳಿತು. ಇರಾನ್ ಪರಮಾಣು ಅಸ್ತ್ರಗಳನ್ನು ಪಡೆಯುವುದನ್ನು ತಡೆಯುವುದು ತಮ್ಮ ಗುರಿ ಎಂದು ಅಮೆರಿಕ ಹೇಳಿಕೊಂಡಿತ್ತು.
ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲವಾದರೂ, ವೆಬ್ ಪೋರ್ಟಲ್ ‘ದಿ ವೈರ್’ ಈ ಸಂಘರ್ಷದಲ್ಲಿ ಭಾಗಿಯಾದ ಪ್ರಮುಖ ಶಕ್ತಿಗಳಾದ ಅಮೆರಿಕ, ಇರಾನ್ ಮತ್ತು ಇಸ್ರೇಲ್ ಹೇಗೆ ಕಾರ್ಯನಿರ್ವಹಿಸಿದವು, ಮತ್ತು ಭವಿಷ್ಯದಲ್ಲಿ ಏನಾಗಬಹುದು ಎಂಬುದನ್ನು ವಿಶ್ಲೇಷಿಸಿದೆ.
ಅಮೆರಿಕದ ನಿಲುವು: ಅನಿಶ್ಚಿತ ಲಾಭಗಳು ಮತ್ತು ಯುರೇನಿಯಂ ಪ್ರಶ್ನೆ
ಈ ಯುದ್ದ ಮತ್ತು ಕದನವಿರಾಮದ ಪರಿಸ್ಥಿತಿಯನ್ನು ವಿಶ್ಲೇಷಿಸುವಲ್ಲಿನ ಪ್ರಮುಖ ಸವಾಲೆಂದರೆ, ಅಮೆರಿಕದ ನಿಜವಾದ ಉದ್ದೇಶ ಏನೆಂದು ಸ್ಪಷ್ಟವಾಗಿ ತಿಳಿದಿಲ್ಲದಿರುವುದು. ಜೂನ್ 22 ರಂದು ಅಮೆರಿಕದಿಂದ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಕಾರ್ಯಾಚರಣೆ ಆರಂಭವಾಯಿತು. ಇರಾನ್ ಪರಮಾಣು ಅಸ್ತ್ರಗಳನ್ನು ಪಡೆಯುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಅಮೆರಿಕವು ಇರಾನ್‌ನ ಫೋರ್ಡೊ, ನಟಾನ್ಜ್ ಮತ್ತು ಇಸ್ಫಹಾನ್‌ನಲ್ಲಿರುವ ಪರಮಾಣು ಘಟಕಗಳ ಮೇಲೆ 14 ‘ಬಂಕರ್ ಬಸ್ಟರ್’ ಬಾಂಬ್‌ಗಳು ಸೇರಿದಂತೆ 75 ನಿಖರ ಸ್ಫೋಟಕಗಳನ್ನು ಬಳಸಿತು.
ವಿದೇಶಗಳಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಂದ ಅನುಮೋದನೆ ಪಡೆದೇ ಈ ಐತಿಹಾಸಿಕ ದಾಳಿ ನಡೆಯಿತು. ಆದರೆ, ಅಮೆರಿಕದ ಗುಪ್ತಚರ ಇಲಾಖೆಯ ನಿರ್ದೇಶಕ ತುಳಸಿ ಗಬ್ಬಾರ್ಡ್ ಅವರು ಇರಾನ್ ಸಕ್ರಿಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿಲ್ಲ ಎಂದು ಅಮೆರಿಕದ ಕಾಂಗ್ರೆಸ್‌ಗೆ ಮಾಹಿತಿ ನೀಡಿದ ಕೇವಲ ಮೂರು ತಿಂಗಳ ನಂತರ ಈ ದಾಳಿ ಸಂಭವಿಸಿತು. ದಾಳಿಯ ನಂತರ, ಟ್ರಂಪ್ ಆ ಅಂದಾಜನ್ನು ಎರಡು ಬಾರಿ ಹಾಸ್ಯ ಮಾಡಿದರು. ಇದರಿಂದಾಗಿ, ಗಬ್ಬಾರ್ಡ್ ನಂತರ ತಮ್ಮ ಹೇಳಿಕೆಗಳನ್ನು “ಸಂದರ್ಭಕ್ಕೆ ವಿರುದ್ಧವಾಗಿ ತಿರುಚಲಾಗಿದೆ” ಎಂದು ಸ್ಪಷ್ಟಪಡಿಸಬೇಕಾಯಿತು.
ಭಾನುವಾರದಂದು (ಜೂ.22) ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು, ಇರಾನ್‌ನಲ್ಲಿ ಆಡಳಿತ ಬದಲಾವಣೆಯನ್ನು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವ್ಯಾನ್ಸ್, “ಅಮೆರಿಕವು ಇರಾನ್‌ನೊಂದಿಗೆ ಯುದ್ಧ ಮಾಡುತ್ತಿಲ್ಲ, ಆದರೆ ಅದರ ಪರಮಾಣು ಕಾರ್ಯಕ್ರಮದ ವಿರುದ್ಧ ಹೋರಾಡುತ್ತಿದೆ” ಎಂದು ಹೇಳಿದರು. ಆದಾಗ್ಯೂ, ಇಸ್ರೇಲ್‌ನ ಪ್ರಧಾನಮಂತ್ರಿ ಸಾರ್ವಜನಿಕವಾಗಿ ಇರಾನ್‌ನಲ್ಲಿ ಆಡಳಿತ ಬದಲಾವಣೆ ತಮ್ಮ ಮುಖ್ಯ ಗುರಿ ಎಂದು ಹೇಳಿರುವುದರಿಂದ, ಈ ಕುರಿತ ಅನುಮಾನಗಳು ಮತ್ತಷ್ಟು ಹೆಚ್ಚಾಗಿದ್ದವು.
ಆದರೆ, ಟ್ರಂಪ್ ಅವರ ‘ಟ್ರುತ್ ಸೋಶಿಯಲ್’ ಪೋಸ್ಟ್‌ಗಳು ವ್ಯಾನ್ಸ್ ಮತ್ತು ಹೆಗ್ಸೆತ್ ಅವರ ಹೇಳಿಕೆಗಳ ಪರಿಣಾಮವನ್ನು ತಕ್ಷಣವೇ ಕಡಿಮೆಗೊಳಿಸಿದವು. ಆ ಪೋಸ್ಟ್‌ಗಳಲ್ಲಿ ಟ್ರಂಪ್ ಆಡಳಿತ ಬದಲಾವಣೆಯ ಕಲ್ಪನೆಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದರು. ಅವರ ಹಠಾತ್ ಕದನವಿರಾಮ ಘೋಷಣೆಯು ಪರಿಸ್ಥಿತಿಯಲ್ಲಿ ಮತ್ತೊಂದು ತಿರುವನ್ನು ನೀಡಿತು, ಅದರಲ್ಲೂ ವಿಶೇಷವಾಗಿ ಅವರು ಸಂಘರ್ಷವನ್ನು ವಿವರಿಸುವಾಗ ಇಸ್ರೇಲ್ ಮತ್ತು ಇರಾನ್ ಎರಡನ್ನೂ ಸಮಾನವಾಗಿ ಕಂಡಂತೆ ಭಾಸವಾಯಿತು.
ಇರಾನ್‌ನ ಪರಮಾಣು ಗುರಿಗಳನ್ನು ತಡೆಯುವುದು ಉದ್ದೇಶವಾಗಿದ್ದರೆ, ಅದು ನಿಜವಾಗಿಯೂ ಈಡೇರಿದೆಯೇ ಅಥವಾ ವಾಸ್ತವಿಕವಾಗಿ ಎಂದಾದರೂ ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಪಗ್ರಹ ಚಿತ್ರಗಳು ಇರಾನ್‌ನಲ್ಲಿ ಅಮೆರಿಕ ಗುರಿಪಡಿಸಿದ ನೆಲದಡಿಯ ಪರಮಾಣು ನೆಲೆಗಳಿಗೆ ಗಣನೀಯ ಹಾನಿಯನ್ನು ತೋರಿಸಿವೆ. ಆದರೆ, ಅವು “ಪೂರ್ಣವಾಗಿ ನಾಶವಾಗಿವೆ” ಎಂಬುದು ಖಚಿತವಾಗಿಲ್ಲ. ಸಿಎನ್‌ಎನ್ ವರದಿಯೊಂದು, ಅಮೆರಿಕದ ಆರಂಭಿಕ ಗುಪ್ತಚರ ಅಂದಾಜನ್ನು ಉಲ್ಲೇಖಿಸಿ, ಈ ದಾಳಿಗಳು ಇರಾನ್‌ನ ಪರಮಾಣು ಕಾರ್ಯಕ್ರಮದ ಮುಖ್ಯ ಅಂಶಗಳನ್ನು ನಾಶಪಡಿಸಿಲ್ಲ, ಬದಲಿಗೆ “ಬಹುಶಃ ಅದನ್ನು ಕೆಲವೇ ತಿಂಗಳುಗಳಷ್ಟು ಹಿಂದಕ್ಕೆ ಸರಿಸಿರಬಹುದು” ಎಂದು ಹೇಳಿದೆ. ಈ ವರದಿಯನ್ನು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ ವಿರೋಧಿಸಿದ್ದಾರೆ.
ಇರಾನ್‌ನ ಬಳಿ ಇರುವ 400 ಕೆಜಿ ಉನ್ನತ ಗುಣಮಟ್ಟದ, ಸೇನಾ ಬಳಕೆಯ ಯುರೇನಿಯಂನ ಭವಿಷ್ಯವು ಈಗ ಮುಖ್ಯವಾಗಿದೆ. ಈ ಯುರೇನಿಯಂ ಹಲವು ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಕಾಗುತ್ತದೆ ಮತ್ತು 10 ಕಾರುಗಳ ಹಿಂಭಾಗದಲ್ಲಿ ಇಡಬಹುದಾದಷ್ಟು ಚಿಕ್ಕದಾಗಿದೆ. ಅಮೆರಿಕ ದಾಳಿಗೂ ಮುನ್ನ ಈ ಸಂಗ್ರಹವನ್ನು ಇರಾನ್ ಬೇರೆಡೆಗೆ ಸಾಗಿಸಿರಬಹುದು ಎಂಬ ಊಹೆಯಿದೆ. ಇದರ ನಿಖರ ಸ್ಥಳದಿಂದಲೇ, ಅಮೆರಿಕವು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಿಜವಾಗಿಯೂ ನಿಷ್ಕ್ರಿಯಗೊಳಿಸಿದೆಯೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ.
ಇರಾನ್‌ನಲ್ಲಿ ಹಾನಿಗೊಳಗಾದ ಆಡಳಿತ, ಆದರೂ ನಿಯಂತ್ರಣದಲ್ಲಿ
ಸಂಘರ್ಷದ ಆರಂಭದಲ್ಲಿ, ವಿಶೇಷವಾಗಿ ಇಸ್ರೇಲ್ ನಡೆಸಿದ ವಾಯುದಾಳಿಯ ಮೊದಲ ದಿನ, ಇರಾನ್‌ಗೆ ಭಾರಿ ಹಾನಿಯಾಯಿತು. ಈ ದಾಳಿಗಳು ಇರಾನ್‌ನ ಹಿರಿಯ ಮಿಲಿಟರಿ ನಾಯಕರು ಮತ್ತು ಪರಮಾಣು ವಿಜ್ಞಾನಿಗಳನ್ನು ಬಲಿತಗೆದುಕೊಂಡವು. ಅಲ್ಲದೆ ಅದರ ವಾಯು ರಕ್ಷಣಾ ವ್ಯವಸ್ಥೆಗಳನ್ನು ತೀವ್ರವಾಗಿ ಹಾನಿಗೊಳಿಸಿದವು. ಇಸ್ರೇಲ್ ಮತ್ತು ಅಮೆರಿಕಗಳು ತಾವು ಇರಾನ್‌ನ ವಾಯುಪ್ರದೇಶದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ್ದೇವೆ ಎಂದು ಹೆಮ್ಮೆಪಟ್ಟವು.
ಆದರೆ, ನಂತರದ 12 ದಿನಗಳಲ್ಲಿ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಇರಾನ್ ಯಶಸ್ವಿಯಾಯಿತು, ಆದರೂ ಅದರ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗಿತ್ತು. ಆರಂಭದಲ್ಲಿ, ಇರಾನ್ ಸುಮಾರು 2,000 ದೂರಗಾಮಿ ಕ್ಷಿಪಣಿಗಳನ್ನು ಹೊಂದಿತ್ತು ಎಂದು ನಂಬಲಾಗಿತ್ತು. ಇಸ್ರೇಲ್‌ನ ಲೆಕ್ಕಾಚಾರದ ಪ್ರಕಾರ, ಇರಾನ್ 500 ಕ್ಷಿಪಣಿಗಳನ್ನು ಹಾರಿಸಿತು, ಇದರಿಂದಾಗಿ ಇಸ್ರೇಲಿನ 28 ಜನರು ಸಾವನ್ನಪ್ಪಿದರು.
ಟ್ರಂಪ್ ಇರಾನ್‌ನ ಸರ್ವೋಚ್ಚ ನಾಯಕನನ್ನು ಸುಲಭವಾಗಿ ಗುರಿ ಮಾಡಬಹುದು ಎಂದು ಹೇಳಿದಾಗ, ಅಲ್ಲಿನ ಆಡಳಿತದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದವು. ಆದರೆ ಇರಾನ್‌ನಲ್ಲಿ ಬಲವಾದ ಪರ್ಯಾಯ ರಾಜಕೀಯ ಶಕ್ತಿ ಇಲ್ಲದ ಕಾರಣ, ಆಡಳಿತದ ಜನಪ್ರಿಯತೆ ಅಷ್ಟೊಂದು ಮುಖ್ಯವಲ್ಲ ಎಂದು ಹೆಚ್ಚಿನ ತಜ್ಞರು ಒಪ್ಪಿಕೊಂಡರು.
ಇಸ್ರೇಲ್ ಮತ್ತು ಅಮೇರಿಕದ ಕೆಲವು ವರ್ಗದ ಜನತೆಯಲ್ಲಿ ಇರಾನ್ ಸರ್ಕಾರ ಪತನಗೊಳ್ಳುವ ನಿರೀಕ್ಷೆಗಳು ಮತ್ತೊಮ್ಮೆ ಸುಳ್ಳಾಗಿವೆ. ನಿರೀಕ್ಷಿಸಿದಂತೆಯೇ, ಈ ದಾಳಿಗಳು ಇರಾನ್‌ನಲ್ಲಿ ರಾಷ್ಟ್ರಪ್ರೇಮವನ್ನು ಹೆಚ್ಚಿಸಿದವು. ಇದೇ ಸಮಯದಲ್ಲಿ, ಇರಾನಿಯನ್ನರು ನಗರ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರಿಂದ ವಾಹನ ದಟ್ಟಣೆ ಉಂಟಾಯಿತು, ಮತ್ತು ಆರ್ಥಿಕ ಸಂಕಷ್ಟವೂ ಸ್ಪಷ್ಟವಾಗಿ ಕಾಣಿಸಿತು.
ಗಾಜಾ ಯುದ್ಧ ಪ್ರಾರಂಭವಾದಗಿನಿಂದ, ಇರಾನ್‌ನ ಪ್ರಾದೇಶಿಕ ಪ್ರಭಾವ ಕಡಿಮೆಯಾಗಿದೆ. ಇರಾನ್‌ಗೆ ಆಪ್ತವಾಗಿರುವ ಹೆಜ್ಬೊಲ್ಲಾಹ್‌ನಂತಹ ಗುಂಪುಗಳನ್ನು ಇಸ್ರೇಲ್ ವ್ಯವಸ್ಥಿತವಾಗಿ ಗುರಿಯಾಗಿಸಿದೆ. ಇಸ್ರೇಲ್ ಇರಾನಿನ ಭದ್ರತಾ ಸಂಸ್ಥೆಗಳಲ್ಲಿ ಆಳವಾಗಿ ನುಸುಳಿದ್ದು, ಇದು ಇರಾನ್‌ನಲ್ಲಿ ಹಮಾಸ್ ಮುಖ್ಯಸ್ಥನನ್ನು ಕೊಲ್ಲುವಂತಹ ಕಾರ್ಯಾಚರಣೆಗಳಿಗೆ ಕಾರಣವಾಗಿದೆ. ಸಿರಿಯಾದ ಅಸ್ಸಾದ್ ಆಡಳಿತ ಈಗ ದುರ್ಬಲಗೊಂಡಿರುವುದರಿಂದ, ಯೆಮನ್‌ನ ಹೂತಿಗಳು ಮಾತ್ರ ಇರಾನ್‌ನ ಬೆಂಬಲಿತ ಗುಂಪಾಗಿ ಸ್ವಲ್ಪ ಮಟ್ಟಿಗೆ ಸಕ್ರಿಯವಾಗಿರುವಂತೆ ಕಾಣುತ್ತಿದೆ.
ಮಿಲಿಟರಿ ಶಕ್ತಿಯಲ್ಲಿ ದುರ್ಬಲವಾಗಿದ್ದರೂ, ಇಸ್ರೇಲ್ ಮತ್ತು ಅಮೆರಿಕ ಎರಡನ್ನೂ ಎದುರಿಸಿದ್ದರಿಂದ ಅರಬ್ ದೇಶಗಳಲ್ಲಿ ಇರಾನ್‌ಗೆ ಗೌರವ ಸಿಕ್ಕಿತು. ಇಸ್ರೇಲ್‌ನ ದಾಳಿಗೆ ಪ್ರತೀಕಾರವಾಗಿ ಇರಾನ್ ನಡೆಸಿದ ದಾಳಿಯನ್ನು ಅರಬ್ ಸರ್ಕಾರಗಳು ವಿರೋಧಿಸಿದವು. ಆದರೆ, ಜೂನ್ 23 ರ ಅಮೆರಿಕದ ದಾಳಿಯನ್ನು ಟೀಕಿಸುವಾಗ ಅವು ಹೆಚ್ಚು ಜಾಗರೂಕವಾಗಿ ವರ್ತಿಸಿದವು. ಟರ್ಕಿ ಮತ್ತು ಸೌದಿ ಅರೇಬಿಯಾ ಕೇವಲ ತಮ್ಮ ಕಳವಳ ವ್ಯಕ್ತಪಡಿಸಿದರೆ, ಯುಎಇ ಮತ್ತು ಕತಾರ್ ವಿರೋಧಿಸಿದರೂ, ಅಮೆರಿಕದ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ.
ರಷ್ಯಾ ಮತ್ತು ಚೀನಾ ಕೇವಲ ಮಾತುಗಳಲ್ಲಿ ಬೆಂಬಲ ನೀಡಿದ್ದರಿಂದ, ಇರಾನ್ ಹೆಚ್ಚು ಹೆಚ್ಚು ಪ್ರತ್ಯೇಕಗೊಂಡಿತು. ಕೊನೆಗೆ, ಇರಾನ್ ಬಿಕ್ಕಟ್ಟನ್ನು ನಿಭಾಯಿಸಿತು. ಕತಾರ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತು. ಇದರ ನಂತರ ಅದು ಯುದ್ಧ ನಿಲ್ಲಿಸಲು ಒಪ್ಪಿಕೊಂಡಿತು. ಇದು ನಿಜವಾದ ಸಂಘರ್ಷದ ಹೆಚ್ಚಳಕ್ಕಿಂತ ಹೆಚ್ಚಾಗಿ, ತನ್ನ ಘನತೆ ಉಳಿಸಿಕೊಳ್ಳುವ ತಂತ್ರವಾಗಿತ್ತು. ಇರಾನ್ ಸರ್ಕಾರವು ಅಮೆರಿಕದೊಂದಿಗೆ ನೇರ ಸಂಘರ್ಷವನ್ನು ತಪ್ಪಿಸುವ ಸಾಧ್ಯತೆಗೆ ಹೆಚ್ಚು ಒತ್ತು ನೀಡಿತು. ಏಕೆಂದರೆ, ಅಮೆರಿಕವು ತನ್ನ ಆಡಳಿತದ ಉಳಿವಿಗೆ ದೊಡ್ಡ ಅಪಾಯವೆಂದು ಅದು ಪರಿಗಣಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇಸ್ರೇಲ್ ಮತ್ತು ಅಮೆರಿಕದ ನಡೆಗಳು ಒಂದೇ ಎಂದು ತೋರಿದರೂ, ಇಸ್ರೇಲ್ ಅನ್ನು ಗುರಿಪಡಿಸಲು ಅದಕ್ಕೆ ಕಡಿಮೆ ಅಡೆತಡೆಗಳಿವೆ. ಈ ಕದನವಿರಾಮವು ಶಾಂತಿಯ ಬದಲಿಗೆ ತಾತ್ಕಾಲಿಕ ವಿರಾಮವನ್ನು ನೀಡಿದೆ.
ಈ ಪರಿಸ್ಥಿತಿಯಲ್ಲಿ, ಇರಾನ್ ತನ್ನ 60% ರಷ್ಟು ಶುದ್ಧೀಕರಿಸಿದ ಯುರೇನಿಯಂ ದಾಸ್ತಾನನ್ನು ದೃಢವಾಗಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಪಾಶ್ಚಾತ್ಯ ದೇಶಗಳೊಂದಿಗೆ ನಡೆಯುವ ಯಾವುದೇ ಪರಮಾಣು ಮಾತುಕತೆಗಳಲ್ಲಿ ಇದು ಒಂದು ಪ್ರಮುಖ ಚೌಕಾಸಿಯ ಅಸ್ತ್ರವಾಗಿ ಕೆಲಸ ಮಾಡಲಿದೆ. ಅಷ್ಟೇ ಅಲ್ಲದೆ, ಇದು ತನ್ನ ದೇಶದ ಜನರಿಗೆ ಒಂದು ಭರವಸೆ ಮತ್ತು ಧೈರ್ಯದ ಪ್ರತೀಕವಾಗಿಯೂ ಇರಲಿದೆ.
ನೆತನ್ಯಾಹುಗೆ ಯುದ್ಧದಿಂದ ಏನು ಲಾಭ?
ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಲು ಶುರು ಮಾಡಿದಾಗ, ಈ ಇಸ್ರೇಲ್‌ನ ಮಿಲಿಟರಿ ಶ್ರೇಷ್ಠತೆಯ ಬಗ್ಗೆ ಯಾರಲ್ಲೂ ಅನುಮಾನವಿರಲಿಲ್ಲ. ಕಳೆದೊಂದು ವರ್ಷದಲ್ಲಿ ಇದು ಹಲವು ಬಾರಿ ಸಾಬೀತಾಗಿತ್ತು. ಜೂನ್ 13ರಂದು ನಡೆದ ದಾಳಿಗಳು ಇರಾನ್‌ನ ನಟಾನ್ಜ್ ಇಂಧನ ಶುದ್ಧೀಕರಣ ಕೇಂದ್ರ ಮತ್ತು ಇಸ್ಫಹಾನ್‌ನಲ್ಲಿರುವ ನಾಲ್ಕು ಪರಮಾಣು ನೆಲೆಗಳನ್ನು ಗುರಿಯಾಗಿಸಿದ್ದವು. ಎರಡು ದಿನಗಳ ನಂತರ, ಇರಾನ್‌ನ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿತು. ಇವುಗಳಲ್ಲಿ ಇರಾನ್‌ನ ರಕ್ಷಣಾ ಸಚಿವಾಲಯದ ಮುಖ್ಯ ಕಚೇರಿ, ಅಣುಬಾಂಬ್ ತಯಾರಿಕೆಗೆ ಸಂಬಂಧಿಸಿದ ಘಟಕಗಳು, ಇಂಧನ ಟ್ಯಾಂಕರ್‌ಗಳು ಮತ್ತು ಇತರ ಕಟ್ಟಡಗಳು ಸೇರಿದ್ದವು.
ಜೂನ್ 18ರ ಹೊತ್ತಿಗೆ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಒಂದು ವರದಿ ಬಿಡುಗಡೆ ಮಾಡಿತು. ಅದರ ಪ್ರಕಾರ, ಇರಾನ್‌ನ ಎರಡು ಸೆಂಟ್ರಿಫ್ಯೂಜ್ ಉತ್ಪಾದನಾ ಘಟಕಗಳಾದ ಟೆಸಾ ಕರಾಜ್ ಕಾರ್ಯಾಗಾರ ಮತ್ತು ಟೆಹ್ರಾನ್ ಸಂಶೋಧನಾ ಕೇಂದ್ರಗಳು ಹಾನಿಗೊಳಗಾಗಿದ್ದವು. ಈ ಎರಡೂ ಘಟಕಗಳು ಜಂಟಿ ಸಮಗ್ರ ಕ್ರಿಯಾ ಯೋಜನೆಯ (JCPOA) ಅಡಿಯಲ್ಲಿ IAEAಯ ಮೇಲ್ವಿಚಾರಣೆಯಲ್ಲಿದ್ದವು. ಜೂನ್ 19ರಂದು, ನಿರ್ಮಾಣ ಹಂತದಲ್ಲಿದ್ದ ಖೊಂಡಾಬ್ ಹೆವಿ ವಾಟರ್ ಸಂಶೋಧನಾ ರಿಯಾಕ್ಟರ್‌ಗೂ ಹಾನಿಯಾಯಿತು. ಇದಾಗಿ ಎರಡು ದಿನಗಳ ನಂತರ, ಇಸ್ರೇಲ್ ಇಸ್ಫಹಾನ್‌ನಲ್ಲಿ ಮತ್ತೊಂದು ಸೆಂಟ್ರಿಫ್ಯೂಜ್ ಉತ್ಪಾದನಾ ಕಾರ್ಯಾಗಾರವನ್ನು ಧ್ವಂಸಗೊಳಿಸಿತು. ಈ ದಾಳಿಗಳಲ್ಲಿ ಪೊಲೀಸ್ ಪ್ರಧಾನ ಕಚೇರಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ನಿರ್ದೇಶನಾಲಯ, ಮತ್ತು ಇರಾನ್‌ನ ಸರ್ಕಾರಿ ಪ್ರಸಾರಕ ಸಂಸ್ಥೆಗಳೂ ಗುರಿಯಾಗಿದ್ದವು.
ದಾಳಿಗಳು ಆರಂಭವಾದಾಗಿನಿಂದ 500 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಇರಾನ್‌ನಲ್ಲಿನ ಮಾನವ ಹಕ್ಕುಗಳ ಗುಂಪು ಈ ಸಾವಿನ ಸಂಖ್ಯೆಯನ್ನು 950 ಎಂದು ಅಂದಾಜಿಸಿದೆ. ಇರಾನ್ ತನ್ನ ಆರು ಉನ್ನತ ಪರಮಾಣು ವಿಜ್ಞಾನಿಗಳು ದಾಳಿಗಳಲ್ಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ದೃಢಪಡಿಸಿದೆ. ಇರಾನಿನ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಗೆರಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಜನರಲ್ ಹೊಸೈನ್ ಸಲಾಮಿ ಸೇರಿದಂತೆ, ಕನಿಷ್ಠ 20 ಇರಾನಿನ ಮಿಲಿಟರಿ ಕಮಾಂಡರ್‌ಗಳು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ದಾಳಿ ಪ್ರಾರಂಭಿಸಿದಾಗ, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಎರಡು ಗುರಿಗಳನ್ನು ಇಟ್ಟುಕೊಂಡಿದ್ದರು: ಇರಾನ್‌ನ ಪರಮಾಣು ಮತ್ತು ದೂರಗಾಮಿ ಕ್ಷಿಪಣಿ ಕಾರ್ಯಕ್ರಮವನ್ನು ದುರ್ಬಲಗೊಳಿಸುವುದು, ಮತ್ತು ಇರಾನ್‌ನಲ್ಲಿರುವ ಆಡಳಿತಕ್ಕೆ ನಿರ್ಣಾಯಕ ಹೊಡೆತ ನೀಡುವುದು. ಆ ಎರಡೂ ಗುರಿಗಳು ಸಂಪೂರ್ಣವಾಗಿ ಸಾಧಿಸಲಾಗದಿದ್ದರೂ, ನೆತನ್ಯಾಹು ಗೆಲುವು ಘೋಷಿಸಲು ಇದು ಅಡ್ಡಿಯಾಗಲಿಲ್ಲ.
ಇಸ್ರೇಲ್ ಸರ್ಕಾರಕ್ಕೆ ಸಿಕ್ಕ ಪ್ರಮುಖ ಯಶಸ್ಸೆಂದರೆ, ಅಮೆರಿಕವನ್ನು ಇರಾನ್ ಮೇಲೆ ನೇರ ದಾಳಿ ನಡೆಸಲು ಒಪ್ಪಿಸಿದ್ದಾಗಿದೆ. ಇದು 2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ (ಈ ದಾಳಿಯಲ್ಲಿ ಇಸ್ರೇಲ್‌ನ ಸುಮಾರು 1200 ಜನರನ್ನು ಹತ್ಯೆ ಮಾಡಲಾಗಿತ್ತು) ನಂತರ ತೀವ್ರ ಆಂತರಿಕ ಟೀಕೆಗಳನ್ನು ಎದುರಿಸಿದ್ದ ಇಸ್ರೇಲ್‌ನ ಸುದೀರ್ಘಾವಧಿಯ ಪ್ರಧಾನಮಂತ್ರಿಯ ರಾಜಕೀಯ ಪುನಶ್ಚೇತನವನ್ನು ಸೂಚಿಸಿತು. ಆ ಅಕ್ಟೊಬರ್ 7ರ ಹಮಾಸ್ ದಾಳಿಯನ್ನು ದೇಶದ ಅತ್ಯಂತ ಗಂಭೀರ ಗುಪ್ತಚರ ಲೋಪ ಎಂದು ಹೆಚ್ಚಾಗಿ ಭಾವಿಸಲಾಗಿದೆ.
ಇರಾನ್ ಅಣುಬಾಂಬ್ ತಯಾರಿಸಲು ಕೆಲವೇ ವಾರಗಳ ಅಂತರದಲ್ಲಿದೆ ಎಂದು ಮೂರು ದಶಕದಿಂದಲೂ ಇಸ್ರೇಲ್ ಹೇಳುತ್ತಿದೆ. ಇರಾನ್ ಮೇಲೆ ಭಾರಿ ಪ್ರಮಾಣದ ದಾಳಿಗೆ ಕರೆ ನೀಡಿದರೂ, ಪಾಶ್ಚಿಮಾತ್ಯ ದೇಶಗಳು ಇಸ್ರೇಲಿನ ಮಾತನ್ನು ನಂಬಿರಲಿಲ್ಲ. ಆದರೆ, ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದಾಗ ಈ ಪರಿಸ್ಥಿತಿ ಬದಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ, ಅಮೆರಿಕವು ಇರಾನ್‌ನೊಂದಿಗಿನ ಮಾತುಕತೆಯಲ್ಲಿ ತನ್ನ ಬೇಡಿಕೆಗಳನ್ನು ಬದಲಾಯಿಸಿತು. ಮೊದಲಿಗೆ, ಅದು ನಿರ್ದಿಷ್ಟ ಪರಮಾಣು ಕೇಂದ್ರಗಳಲ್ಲಿ ಯುರೇನಿಯಂ ಶುದ್ಧೀಕರಣವನ್ನು ಕಡಿಮೆ ಮಾಡಲು ಕೇಳಿತು. ಆದರೆ, ನಂತರ ಅದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಒತ್ತಾಯಿಸಲು ಶುರುಮಾಡಿತು. ಇರಾನ್ ವಿರೋಧ ವ್ಯಕ್ತಪಡಿಸಿದ್ದರಿಂದ ಮಾತುಕತೆಗಳು ನಿಂತುಹೋದವು. ಇದು ಟ್ರಂಪ್‌ಗೆ ನಿರಾಶೆ ತಂದಿತು. ಇದರಿಂದಾಗಿ, ಟ್ರಂಪ್ ತಮ್ಮ ವಲಯದಲ್ಲಿ ಇರಾನ್‌ಗೆ ವಿರುದ್ಧವಾದ ಅಭಿಪ್ರಾಯಗಳಿಗೆ ಹೆಚ್ಚು ಒಲವು ತೋರಿದರು.
ದೇಶದ ಒಳಗಡೆ, ಇರಾನ್ ಮೇಲಿನ ಈ ದಾಳಿಗಳು ನೆತನ್ಯಾಹು ಸರ್ಕಾರದ ವಿರುದ್ಧದ ವಿರೋಧವನ್ನು ಕಡಿಮೆ ಮಾಡಲು ನೆರವಾಯಿತು. ಹಲವು ವಿರೋಧ ಪಕ್ಷದ ನಾಯಕರು ದಾಳಿಗಳನ್ನು ಹೊಗಳಿದರು. ಇದರಿಂದ, ಅವರ ನಾಯಕತ್ವದ ಮೇಲಿನ ಟೀಕೆಗಳು ತಾತ್ಕಾಲಿಕವಾಗಿ ಕಡಿಮೆಯಾದವು. ಈಗ, ನೆತನ್ಯಾಹು ಆರಂಭಿಕ ಚುನಾವಣೆಗಳನ್ನು ಘೋಷಿಸಬಹುದು ಎಂಬ ಊಹಾಪೋಹಗಳು ಹೆಚ್ಚಾಗುತ್ತಿವೆ. ಅವರ ಪ್ರಸ್ತುತ ಅಧಿಕಾರಾವಧಿ 2026ರ ವರೆಗೆ ಇದ್ದರೂ ಸಹ, ಈ ಸಾಧ್ಯತೆ ಇದೆ.
ಗಾಜಾದಲ್ಲಿ ಉಳಿದಿರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಶಾಶ್ವತ ಕದನವಿರಾಮಕ್ಕಾಗಿ ಹಮಾಸ್‌ನೊಂದಿಗಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಜನಪ್ರಿಯತೆಯ ಸಮೀಕ್ಷೆಗಳಲ್ಲಿ ತಮ್ಮ ಬೆಂಬಲ ಹೆಚ್ಚುತ್ತಿರುವುದರಿಂದ, ನೆತನ್ಯಾಹು ತಮ್ಮ ಬಲಪಂಥೀಯ ಸಹವರ್ತಿಗಳ ಒತ್ತಡಕ್ಕೆ ಅಷ್ಟಾಗಿ ಒಳಗಾಗದೆ, ಒಂದು ಒಪ್ಪಂದಕ್ಕೆ ಬರಲು ಹೆಚ್ಚು ಸಿದ್ಧರಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಹಲವು ಅನಿಶ್ಚಿತತೆಗಳು ಇರುವುದರಿಂದ, ಈ ರಾಜಕೀಯ ಲಾಭದ ಕಾಲ ಎಷ್ಟು ಸಮಯ ಉಳಿಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಮೂಲ: “ದಿ ವೈರ್”


