ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಯಿಂದ 2017ರಲ್ಲಿ ವಿದೇಶಿ ಘೋಷಿಸಲ್ಪಟ್ಟ ಮಹಿಳೆಯ ಗಡಿಪಾರು ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಜೂನ್.24) ತಾತ್ಕಾಲಿಕವಾಗಿ ತಡೆಹಿಡಿದಿದೆ.
ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಜೈನಾಬ್ ಬೀಬಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರವರಿ 17ರಂದು ಗುವಾಹಟಿ ಹೈಕೋರ್ಟ್ ವಜಾಗೊಳಿಸಿತ್ತು. ಮಹಿಳೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಮಂಗಳವಾರ, ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರ ಪೀಠವು ಹೈಕೋರ್ಟ್ ಆದೇಶದ ವಿರುದ್ಧ ಬೀಬಿ ಸಲ್ಲಿಸಿದ ಅರ್ಜಿಯ ಕುರಿತು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 25 ರಂದು ನಡೆಯಲಿದೆ.
ತಾನು ಭಾರತೀಯ ಪ್ರಜೆಯಾಗಿದ್ದು, ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂದು ಬೀಬಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಬೀಬಿ ಅವರು 1951ರ ರಾಷ್ಟ್ರೀಯ ನಾಗರಿಕರ ನೋಂದಣಿ ಪಟ್ಟಿ ಮತ್ತು 1965 ಮತ್ತು 1970ರ ಮತದಾರರ ಪಟ್ಟಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅವುಗಳಲ್ಲಿ ಅವರ ಅಜ್ಜನ ಹೆಸರಿದೆ. ಅಲ್ಲದೆ, 1989 ಮತ್ತು 1997ರ ನಂತರದ ಮತದಾರರ ಪಟ್ಟಿಗಳಲ್ಲಿ ಅವರ ಹೆತ್ತವರ ಹೆಸರುಗಳಿದ್ದರೆ, 2016 ಮತ್ತು 2018ರ ಮತದಾರರ ಪಟ್ಟಿಗಳಲ್ಲಿ ಅವರ ಗಂಡನ ಹೆಸರಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಮಂಡಳಿಯು ಈ ಪ್ರಮುಖ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ. ತನ್ನನ್ನು “ನಿರಂಕುಶ ಮತ್ತು ಯಾಂತ್ರಿಕ ರೀತಿಯಲ್ಲಿ” ವಿದೇಶಿ ಎಂದು ಘೋಷಿಸಿದೆ ಎಂಬುವುದಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಬೀಬಿ ಆರೋಪಿಸಿದ್ದಾರೆ.
ಅಸ್ಸಾಂನಲ್ಲಿರುವ ವಿದೇಶಿಯರ ನ್ಯಾಯಮಂಡಳಿಗಳು ಪೌರತ್ವದ ವಿಷಯಗಳಲ್ಲಿ ತೀರ್ಪು ನೀಡುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ. ಅವುಗಳ ಮೇಲೆ ಅನಿಯಂತ್ರಿತತೆ ಮತ್ತು ಪಕ್ಷಪಾತದ ಆರೋಪಗಳಿವೆ. ಸಣ್ಣ ಕಾಗುಣಿತ ತಪ್ಪುಗಳು, ದಾಖಲೆಗಳ ಕೊರತೆ ಅಥವಾ ನೆನಪಿನ ಕೊರತೆಯ ಆಧಾರದ ಮೇಲೆ ಜನರನ್ನು ವಿದೇಶಿಯರೆಂದು ಘೋಷಿಸುತ್ತಿವೆ ಎಂದು ಹೇಳಲಾಗ್ತಿದೆ.
ಇಂತಹ ನ್ಯಾಯಮಂಡಳಿ ವಿದೇಶಿಯರು ಎಂದು ಘೋಷಿಸಿದವರನ್ನು ಅಸ್ಸಾಂ ಸರ್ಕಾರ ಗಡಿಪಾರು ಮಾಡುತ್ತಿದೆ. ಸರ್ಕಾರ ಮೇ ತಿಂಗಳಿನಿಂದ 300ಕ್ಕೂ ಹೆಚ್ಚು ಜನರನ್ನು ಗಡಿಯಾಚೆ ಬಾಂಗ್ಲಾದೇಶಕ್ಕೆ ಬಲವಂತವಾಗಿ ತಳ್ಳಿದೆ. ಅವರಲ್ಲಿ ಹಲವರು ತಾವು ಭಾರತೀಯ ನಾಗರಿಕರು ಎಂದು ವರದಿಗಳು ಹೇಳಿವೆ.
“ಅಸ್ಸಾಂನ ‘ಹಿತಾಸಕ್ತಿಗಳನ್ನು ಕಾಪಾಡುವುದು’ ಮತ್ತು ‘ಎಲ್ಲಾ ಅಕ್ರಮ ವಲಸಿಗರನ್ನು ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ರಾಜ್ಯದಿಂದ ಹೊರಹಾಕುವುದು ಸರ್ಕಾರದ ಕೆಲಸ” ಎಂದು ಮೇ 20ರಂದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ವಿದೇಶಿ ಪ್ರಜೆಗಳೆಂದು ಘೋಷಿಸಲ್ಪಟ್ಟ ವ್ಯಕ್ತಿಗಳನ್ನು ಸರ್ಕಾರ ಗಡಿಪಾರು ಮಾಡಬೇಕು ಎಂಬ ಫೆಬ್ರವರಿ 4ರ ಸುಪ್ರೀಂಕೋರ್ಟ್ ತೀರ್ಪನ್ನು ಸಿಎಂ ಶರ್ಮಾ ಉಲ್ಲೇಖಿಸಿದ್ದಾರೆ.
ಕಳೆದ 11 ವರ್ಷಗಳಿಂದ ದೇಶದಲ್ಲಿ ‘ಅಘೋಷಿತ ತುರ್ತು ಪರಿಸ್ಥಿತಿ’ಯಿದೆ: ಕಾಂಗ್ರೆಸ್


