ಹೊಸದಿಲ್ಲಿ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಮಹಾಘಟಬಂಧನ’ (ಮೈತ್ರಿಕೂಟ) ಬಹುಮತ ಗಳಿಸಿದರೆ, ರಾಷ್ಟ್ರೀಯ ಜನತಾದಳ (RJD)ದ ತೇಜಸ್ವಿ ಯಾದವ್ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ತೇಜಸ್ವಿ ಯಾದವ್ ಅವರೇ ಸಿಎಂ ಸ್ಥಾನಕ್ಕೆ ನಮ್ಮ ಮೈತ್ರಿಕೂಟದ ಪ್ರಮುಖ ನಾಯಕರು. ಈ ಬಗ್ಗೆ “ಯಾವುದೇ ಗೊಂದಲ ಅಥವಾ ವಿವಾದ” ಇಲ್ಲ ಎಂದು ಕನ್ಹಯ್ಯಾ ಕುಮಾರ್ ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಜನರ ಸಮಸ್ಯೆಗಳೇ ಮುಖ್ಯ ಎಂದು ಒತ್ತಿ ಹೇಳಿದ ಅವರು, ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಎತ್ತುವ ಮೂಲಕ ವಿರೋಧಿಗಳು “ಷಡ್ಯಂತ್ರ” ಮಾಡುತ್ತಿದ್ದಾರೆ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ಅಧಿಕಾರ ಸಿಕ್ಕ ತಕ್ಷಣ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೆಳಗಿಳಿಸಿ, ತಮ್ಮದೇ ನಾಯಕರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ಕನ್ಹಯ್ಯಾ ಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. “ಬಿಜೆಪಿ ತನ್ನ ಹಳೆಯ ತಂತ್ರವನ್ನೇ ಇಲ್ಲಿಯೂ ಅನುಸರಿಸುತ್ತಿದೆ. ಮೊದಲು ಚಿಕ್ಕ ಪಕ್ಷಗಳ ಬೆಂಬಲ ಪಡೆದು, ನಂತರ ನಿಧಾನವಾಗಿ ಅವುಗಳನ್ನು ನುಂಗಿಹಾಕುತ್ತದೆ” ಎಂದು ಅವರು ದೂರಿದರು. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ನಂತರ ತಮ್ಮದೇ ನಾಯಕರನ್ನು ಅಧಿಕಾರಕ್ಕೆ ತಂದ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. “ಬಿಹಾರದಲ್ಲಿ ಬಿಜೆಪಿ ಹಲವು ವರ್ಷಗಳಿಂದ ಇದನ್ನೇ ಮಾಡಲು ಪ್ರಯತ್ನಿಸುತ್ತಿದೆಯಾದರೂ, ಯಶಸ್ವಿಯಾಗಿಲ್ಲ” ಎಂದು ಕುಮಾರ್ ಸ್ಪಷ್ಟಪಡಿಸಿದರು.
ಬಿಹಾರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಿಗಿಂತಲೂ “ಬದಲಾವಣೆಯ ಗಾಳಿ” ಈಗ ಹೆಚ್ಚು ಬಲವಾಗಿದೆ. ಬಿಜೆಪಿ ‘ಆಪರೇಷನ್ ಸಿಂಧೂರ್’ ಅನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿಲ್ಲ, ಏಕೆಂದರೆ ಬಿಹಾರದ ಜನರು ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದು ಅವರಿಗೆ ತಿಳಿದಿದೆ. ಜನರು ಇದನ್ನು ದೇಶದ ಗೌರವದ ವಿಷಯ ಎಂದು ನಂಬುತ್ತಾರೆ ಮತ್ತು ಯಾವುದೇ ಪಕ್ಷವು ಇದನ್ನು ರಾಜಕೀಯಗೊಳಿಸಬಾರದು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕುಮಾರ್ ಹೇಳಿದರು.
‘ಮಹಾಘಟಬಂಧನ’ದ ಆಂತರಿಕ ನಡೆಗಳನ್ನು ವಿವರಿಸಿದ ಕನ್ಹಯ್ಯಾ ಕುಮಾರ್, ಮೈತ್ರಿಕೂಟದಲ್ಲಿ ದೊಡ್ಡ ಅಥವಾ ಚಿಕ್ಕ ಪಾಲುದಾರರು ಎಂಬ ವಿಚಾರವನ್ನು ತಳ್ಳಿಹಾಕಿದರು. “ನೀವು ಕಾರನ್ನು ನೋಡಿದರೆ, ಕ್ಲಚ್ ಎಷ್ಟು ಮುಖ್ಯವೋ, ಬ್ರೇಕ್ ಮತ್ತು ಮಿರರ್ ಕೂಡ ಅಷ್ಟೇ ಮುಖ್ಯ” ಎಂದು ಉದಾಹರಣೆ ನೀಡುವ ಮೂಲಕ ಮೈತ್ರಿಕೂಟದ ಎಲ್ಲಾ ಪಕ್ಷಗಳ ಸಮಾನ ಪ್ರಾಮುಖ್ಯತೆಯನ್ನು ಅವರು ಸ್ಪಷ್ಟಪಡಿಸಿದರು.
“ಆರ್‌ಜೆಡಿ (RJD) ದೊಡ್ಡ ಪಕ್ಷವಾಗಿದ್ದು, ಹೆಚ್ಚು ಶಾಸಕರನ್ನು ಹೊಂದಿದೆ. ಇದು ನಮ್ಮ ಮೈತ್ರಿಕೂಟಕ್ಕೆ ನಾಯಕತ್ವ ನೀಡುತ್ತದೆ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನವೂ ಅವರಿಗಿದೆ” ಎಂದು ಕನ್ಹಯ್ಯಾ ಕುಮಾರ್ ಸ್ಪಷ್ಟಪಡಿಸಿದರು. ಆದರೆ, ವಿಕಾಸ್ಶೀಲ್ ಇನ್ಸಾನ್ ಪಾರ್ಟಿಯ ಮುಖೇಶ್ ಸಹಾನಿ ಸೇರಿದಂತೆ ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೂ ತಮ್ಮದೇ ಆದ ಪ್ರಮುಖ ಪಾತ್ರವಿದೆ ಎಂದು ಅವರು ಒತ್ತಿ ಹೇಳಿದರು.
ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕನ್ಹಯ್ಯಾ ಕುಮಾರ್ ಅವರು, ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನದ’ ಎಲ್ಲಾ ಪಕ್ಷಗಳೂ ಒಟ್ಟಾಗಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ನಮ್ಮ ಮೈತ್ರಿ ನಿಜವಾಗಿಯೂ ಸಮಸ್ಯೆಗಳ ಆಧಾರದ ಮೇಲೆ ರೂಪುಗೊಂಡಿದ್ದರೆ, ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಊಟದಲ್ಲಿ ಒಂದು ಚಿಟಿಕೆ ಉಪ್ಪು ಕಡಿಮೆಯಾದರೂ ರುಚಿ ತಪ್ಪುತ್ತದೆ, ಹೆಚ್ಚಾದರೂ ಚೆನ್ನಾಗಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸುವುದು ಮುಖ್ಯ ಎಂದು ಅವರು ಉದಾಹರಣೆ ನೀಡಿ ವಿವರಿಸಿದರು.
‘ಮಹಾಘಟಬಂಧನ’ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ತೇಜಸ್ವಿ ಯಾದವ್ ಪ್ರಮುಖರಾಗುತ್ತಾರೆಯೇ ಎಂಬ ಪ್ರಶ್ನೆಗೆ, “ಇದರಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಹೆಚ್ಚು ಶಾಸಕರು ಇರುವವರೇ ಮುಖ್ಯಮಂತ್ರಿಯಾಗುತ್ತಾರೆ. ಆರ್‌ಜೆಡಿ (RJD) ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಅವರೇ ಅರ್ಹರು” ಎಂದು ಕನ್ಹಯ್ಯಾ ಕುಮಾರ್ ಉತ್ತರಿಸಿದರು.
ಈ ಆಯ್ಕೆ ತಾನಾಗಿಯೇ ನಡೆಯುತ್ತದೆ. ನಮ್ಮ ಮೈತ್ರಿಕೂಟದಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ, ಎನ್‌ಡಿಎ (ಬಿಜೆಪಿ ಮೈತ್ರಿಕೂಟ)ದಲ್ಲಿ ನಿತೀಶ್ ಕುಮಾರ್ ಸಿಎಂ ಆಗುತ್ತಾರೆಯೇ ಅಥವಾ ಇಲ್ಲವೇ, ಮತ್ತು ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಬಗ್ಗೆ ಗೊಂದಲವಿದೆ ಎಂದು ಅವರು ಟೀಕಿಸಿದರು.
ಇದು ಕೇವಲ ಒಂದು ತಂತ್ರ. ಮುಖ್ಯಮಂತ್ರಿ ದೊಡ್ಡ ಪಕ್ಷದಿಂದಲೇ ಆಗುತ್ತಾರೆ ಎಂಬುದರಲ್ಲಿ ಯಾವುದೇ ಗೊಂದಲ ಅಥವಾ ಅನುಮಾನವಿಲ್ಲ. ಇದು ಒಂದು ಸ್ವಾಭಾವಿಕ ಬೆಳವಣಿಗೆಯ ಭಾಗವಾಗಿ ತಾನಾಗಿಯೇ ನಡೆಯುತ್ತದೆ. ಆದರೆ ಚುನಾವಣೆಯಲ್ಲಿ ಮುಖ್ಯವಾದುದು ಸಮಸ್ಯೆಗಳು, ಅಭ್ಯರ್ಥಿಯ ಮುಖ ಅಲ್ಲ. ತೇಜಸ್ವಿ ಯಾದವ್ ಅವರೇ ಮಹಾಘಟಬಂಧನದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಬಗ್ಗೆ ಯಾವುದೇ ಅನುಮಾನ ಅಥವಾ ವಿವಾದ ಇಲ್ಲ ಎಂದು ಕನ್ಹಯ್ಯಾ ಕುಮಾರ್ ಪಿಟಿಐಗೆ ತಿಳಿಸಿದರು.
‘ಮಹಾಘಟಬಂಧನ’ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರ್, ನಿರುದ್ಯೋಗ, ವಲಸೆ, ಶಿಕ್ಷಣ, ರೈತರ ಸಮಸ್ಯೆಗಳು, ಪರೀಕ್ಷೆಗಳಲ್ಲಿನ ಅಕ್ರಮಗಳು ಮತ್ತು ಕಳಪೆ ಆರೋಗ್ಯ ಸೇವೆಗಳಂತಹ ವಿಷಯಗಳೇ ಚುನಾವಣೆಯಲ್ಲಿ ಪ್ರಮುಖವಾಗಿವೆ ಎಂದು ಹೇಳಿದರು. ಈಗ ಸರ್ಕಾರವನ್ನು ಅಧಿಕಾರಿಗಳು “ನಿರ್ದಯವಾಗಿ” ನಡೆಸುತ್ತಿರುವುದರಿಂದ ಜನರು ಬದಲಾವಣೆಗಾಗಿ ಮತ ಚಲಾಯಿಸುತ್ತಾರೆ ಎಂದು ತಾವು ನಿರೀಕ್ಷಿಸುವುದಾಗಿ ಕನ್ಹಯ್ಯಾ ಕುಮಾರ್ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ, ‘ಮಹಾಘಟಬಂಧನದ’ ಅತಿದೊಡ್ಡ ಪಕ್ಷವಾದ ಆರ್‌ಜೆಡಿ (RJD) 144 ಸ್ಥಾನಗಳಲ್ಲಿ ಸ್ಪರ್ಧಿಸಿ 75ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ, ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. ಮೈತ್ರಿಕೂಟದ ಭಾಗವಾಗಿದ್ದ ಸಿಪಿಐ (ಎಂ.ಎಲ್.) ಲಿಬರೇಷನ್ 19 ಸ್ಥಾನಗಳಲ್ಲಿ ಸ್ಪರ್ಧಿಸಿ 12ರಲ್ಲಿ ಜಯಗಳಿಸಿತ್ತು. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯು 2025ರ ಅಕ್ಟೋಬರ್-ನವೆಂಬರ್ ಸುಮಾರಿಗೆ ನಡೆಯುವ ಸಾಧ್ಯತೆ ಇದೆ.
ಪಶ್ಚಿಮ ಬಂಗಾಳ | ಕಾನೂನು ಕಾಲೇಜಿನೊಳಗೆ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ


