ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳು ಇನ್ನೂ ಇರಬೇಕೆ? ಎಂಬ ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆಯ ಹೇಳಿಕೆಯನ್ನು ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಜಿತೇಂದ್ರ ಸಿಂಗ್ ಬೆಂಬಲಿಸಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಸರ್ವ ಧರ್ಮ ಸಂಭವ್ (ಎಲ್ಲಾ ಧರ್ಮಗಳಿಗೂ ಸಮಾನ ಗೌರವ) ಭಾರತೀಯ ಸಂಸ್ಕೃತಿಯ ತಿರುಳು, ಅಲ್ಲದೆ ಧರ್ಮ ನಿರಪೇಕ್ಷತೆ (ಜಾತ್ಯತೀತ) ಅಲ್ಲ. ಆದ್ದರಿಂದ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸೇರಿಸಲಾದ ಧರ್ಮ ನಿರಪೇಕ್ಷತೆ ಪದವನ್ನು ತೆಗೆದು ಹಾಕುವ ಬಗ್ಗೆ ಚರ್ಚೆ ನಡೆಯಬೇಕು” ಎಂದಿದ್ದಾರೆ.
ಸಮಾಜವಾದದ ಬಗ್ಗೆ ಮಾತನಾಡಿದ ಚೌಹಾಣ್, “ಉಳಿದವರೆಲ್ಲರೂ ತಮ್ಮಂತೆಯೇ ಇರಬೇಕೆಂದು ನಂಬುವುದು ಮತ್ತು ಈ ಜಗತ್ತು ಒಂದು ಕುಟುಂಬ (ವಸುಧೈವ ಕುಟುಂಬಕಂ) ಎಂಬುದು ಭಾರತದ ಮೂಲ ಚಿಂತನೆಯಾಗಿದೆ. ಇಲ್ಲಿ ‘ಸಮಾಜವಾದ’ದ ಅಗತ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡಬೇಕು ಎಂದು ನಾವು ಬಹಳ ದಿನಗಳಿಂದ ಹೇಳುತ್ತಿದ್ದೇವೆ. ಆದ್ದರಿಂದ, ‘ಸಮಾಜವಾದ’ ಎಂಬ ಪದವೂ ಅಗತ್ಯವಿಲ್ಲ, ದೇಶವು ಖಂಡಿತವಾಗಿಯೂ ಇದರ ಬಗ್ಗೆ ಯೋಚಿಸಬೇಕು” ಎಂದು ಹೇಳಿದ್ದಾರೆ.
ಜಮ್ಮುವಿನಲ್ಲಿ ಮಾತನಾಡಿದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯ ಬಗ್ಗೆ ‘ಎರಡನೇ ಆಲೋಚನೆ’ ಇಲ್ಲ. ಸಂವಿಧಾನದ 42ನೇ ತಿದ್ದುಪಡಿಯ ನಂತರ ಅದರ ಪೀಠಿಕೆಗೆ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಸೇರಿಸಲಾಗಿದೆ. ಅವುಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರಿಸಿರಲಿಲ್ಲ” ಎಂದಿದ್ದಾರೆ.
ಡಾ. ಬಿ.ಆರ್ ಅಂಬೇಡ್ಕರ್ ಅವರು ‘ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದನ್ನು’ ರಚಿಸಿದ್ದಾರೆ ಎಂದು ಹೇಳಿದ ಸಿಂಗ್, “ಜಾತ್ಯತೀತ ಮತ್ತು ‘ಸಮಾಜವಾದಿ’ ಪದಗಳು ಅಂಬೇಡ್ಕರ್ ಅವರ ಚಿಂತನೆಯಲ್ಲಿ ಇರಲಿಲ್ಲ. ಯಾರೋ ಯಾವುದೋ ಚಿಂತನೆಯಿಂದ ಅವುಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಎಂದು ಹೇಳಿದ್ದಾರೆ.
‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕುವ ಬೇಡಿಕೆಯನ್ನು ಬಿಜೆಪಿ ಮುಂದಿಡುತ್ತದೆಯೇ? ಎಂದು ಕೇಳಿದ್ದಕ್ಕೆ “ಯಾರು ಅದನ್ನು ಬಯಸುವುದಿಲ್ಲ? ಪ್ರತಿಯೊಬ್ಬ ಸರಿಯಾದ ಚಿಂತನೆಯ ನಾಗರಿಕನು ಅದನ್ನು ಬೆಂಬಲಿಸುತ್ತಾನೆ. ಏಕೆಂದರೆ, ಆ ಪದಗಳು ಡಾ. ಅಂಬೇಡ್ಕರ್ ಮತ್ತು ಸಮಿತಿಯ ಉಳಿದವರು ಬರೆದ ಮೂಲ ಸಂವಿಧಾನ ದಾಖಲೆಯ ಭಾಗವಾಗಿರಲಿಲ್ಲ ಎಂಬುವುದು ಎಲ್ಲರಿಗೂ ತಿಳಿದಿದೆ” ಎಂದಿದ್ದಾರೆ.
“ಇದು ಬಿಜೆಪಿ ಮತ್ತು ಬಿಜೆಪಿಯೇತರರ ಪ್ರಶ್ನೆಯಲ್ಲ. ಇದು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಹಠಾತ್ ನಿರ್ಧಾರವಲ್ಲ. ಬದಲಾಗಿ, ಕಾಂಗ್ರೆಸ್‌ನ ಸೈದ್ಧಾಂತಿಕ ತೀರ್ಮಾನವಾಗಿದೆ. ಕಾಂಗ್ರೆಸ್ ಸ್ವಜನಪಕ್ಷಪಾತ, ಸರ್ವಾಧಿಕಾರ ಮತ್ತು ಅವಕಾಶವಾದದಲ್ಲಿ ಬೇರೂರಿದೆ. ಯಾವಾಗಲೂ ದೇಶದ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ತನ್ನ ಸ್ವಂತ ಹಿತಾಸಕ್ತಿಗಳ ಬಗ್ಗೆ ಚಿಂತಿಸುತ್ತದೆ” ಎಂದು ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.


