ಹೆಂಡತಿಯನ್ನು ಕೊಲೆಗೈದ ಸುಳ್ಳಾರೋಪದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ, ನಂತರ ಖುಲಾಸೆಗೊಂಡಿದ್ದ ಕುಶಾಲನಗರದ ಸುರೇಶ್, ತನಗೆ ನೀಡಲಾದ ಪರಿಹಾರದ ಮೊತ್ತವನ್ನು ರೂ. 1 ಲಕ್ಷದಿಂದ 5 ಕೋಟಿಗೆ ಹೆಚ್ಚಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕುಶಾಲನಗರ ತಾಲೂಕಿನ ಬಸವನಹಳ್ಳಿ ನಿವಾಸಿ ಸುರೇಶ್ ಅವರನ್ನು ಮೈಸೂರಿನ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ‘ನಿರಪರಾಧಿ’ ಎಂದು ಘೋಷಿಸಿ ಕಳೆದ ಏಪ್ರಿಲ್ 23ರಂದು ‘ಗೌರವಯುತವಾಗಿ’ ಖುಸಲಾಸೆಗೊಳಿಸಿತ್ತು.
ಪ್ರಕರಣ ಸಂಬಂಧ, ಪೊಲೀಸ್ ದಾಖಲೆಗಳಲ್ಲಿ ಸುರೇಶ್ ಅವರ ಹೆಸರನ್ನು ತೆಗೆದು ಹಾಕುವಂತೆ ಮೈಸೂರಿನ ಬೆಟ್ಟದಪುರ ಪೊಲೀಸರಿಗೆ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಸೂಚನೆ ನೀಡಿದ್ದರು. ಸುರೇಶ್ ಅವರ ಜಾಮೀನು ಬಾಂಡ್ ಮತ್ತು ಅವರ ಶ್ಯೂರಿಟಿ ಬಾಂಡ್ ಅನ್ನು ರದ್ದುಗೊಳಿಸಲಾಗಿತ್ತುಲ. ಅಲ್ಲದೆ, ಅವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿತ್ತು.
ಹೆಚ್ಚಿನ ಪರಿಹಾರ ಕೋರಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸುರೇಶ್, ತನ್ನ ಒಂದೂವರೆ ವರ್ಷದ ಜೀವಿತಾವಧಿ ಮತ್ತು ಸಮಾಜದಲ್ಲಿ ಗೌರವವನ್ನು ಕಳೆದುಕೊಂಡಿದ್ದೇನೆ. ಈ ಅವಧಿಯಲ್ಲಿ ತನ್ನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಾದಿಸಿದ್ದಾರೆ.
ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ತಾನು ಜೈಲು ಪಾಲಾಗುವಂತೆ ಮಾಡಿದ ಆರೋಪದ ಮೇಲೆ ಕೇವಲ ಒಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗಿದೆ ಎಂದು ಸುರೇಶ್ ತನ್ನ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿರುವ ಭಾಗಿಯಾಗಿರುವ ಇತರ ನಾಲ್ವರು ಪೊಲೀಸರ ವಿರುದ್ಧವೂ ಇಲಾಖಾ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಸುರೇಶ್ ನ್ಯಾಯಾಲಯವನ್ನು ಕೋರಿದ್ದಾರೆ.
ಅಲ್ಲದೆ, ನ್ಯಾಯಾಲಯದ ತೀರ್ಪಿನಲ್ಲಿ ತನ್ನನ್ನು ‘ಆರೋಪಿ’ ಎಂದು ಉಲ್ಲೇಖಿಸಿರುವುದನ್ನು ‘ಸಂತ್ರಸ್ತ’ ಎಂದು ಬದಲಾಯಿಸುವಂತೆ ಸುರೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ : ಸುರೇಶ್ ಅವರ ಪತ್ನಿ ಮಲ್ಲಿಗೆ 2021ರಲ್ಲಿ ನಾಪತ್ತೆಯಾಗಿದ್ದರು. ಅವರನ್ನು ಸುರೇಶ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಪೊಲೀಸರು, ಎಫ್‌ಐಆರ್ ದಾಖಲಿಸಿ ಬಂಧಿಸಿದ್ದರು. ಸುರೇಶ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರು ಜಿಲ್ಲಾ ನ್ಯಾಯಾಲಯ ಸುರೇಶ್ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಎರಡು ವರ್ಷ ಜೈಲಿನಲ್ಲಿದ್ದ ಸುರೇಶ್ 2023ರಲ್ಲಿ ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು.
ತಪ್ಪು ಮಾಡದೆ ಜೈಲು ಶಿಕ್ಷೆ ಅನುಭವಿಸಿದ್ದ ಸುರೇಶ್, ನಾಪತ್ತೆಯಾದ ತನ್ನ ಪತ್ನಿಯ ಕುರಿತು ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಆಕೆಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ 2025ರ ಏಪ್ರಿಲ್ 1ರಂದು ಸುರೇಶ್ ಅವರ ಪತ್ನಿ ಮಲ್ಲಿಗೆ ಮಡಿಕೇರಿಯ ಹೋಟೆಲ್ ಒಂದರಲ್ಲಿ ಪ್ರಿಯಕರ ಗಣೇಶ್ ಜೊತೆ ಪತ್ತೆಯಾಗಿದ್ದರು. ಈ ವಿಚಾರವನ್ನು ವಕೀಲರ ಮೂಲಕ ಸುರೇಶ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ನ್ಯಾಯಾಲಯದ ಆದೇಶದಂತೆ ಗಣೇಶ್ ಜೊತೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಕ್ಕೆ ತೆರಳುತ್ತಿದ್ದಾಗ ಮಡಿಕೇರಿ ಪೊಲೀಸರು ಮಲ್ಲಿಗೆಯನ್ನು ವಶಕ್ಕೆ ಪಡೆದು, ಕುಶಾಲನಗರ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮೈಸೂರು ಜಿಲ್ಲಾ ಸೆಷನ್ಸ್ ನ್ಯಾಯಾಲವು ಪ್ರಕರಣದ ಕುರಿತು 15 ದಿನಗಳೊಳಗೆ ವಿವರಣೆ ನೀಡುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿತ್ತು. ಪೊಲೀಸ್ ವರಿಷ್ಠಾಧಿಕಾರಿಯ ವಿಚಾರಣಾ ವರದಿಯನ್ನು ಬೈಲುಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬಿ.ಜಿ.ಪ್ರಕಾಶ್, ಮಹೇಶ್ ಕುಮಾರ್, ಪ್ರಕಾಶ್ ಎತ್ತಿಮನಿ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ದೋಷಾರೋಪ ಪಟ್ಟಿಗೆ ಏನು ಆಧಾರವಿದೆ? ಎಂದು ಪ್ರಶ್ನಿಸಿದ್ದರು.
ಸುರೇಶ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಪಾಂಡು ಪೂಜಾರಿ ಅವರು, ‘ಪೊಲೀಸರು ಉದ್ದೇಶ ಪೂರ್ವಕವಾಗಿ ಬುಡಕಟ್ಟು ಸಮುದಾಯವನ್ನು ಗುರಿಯಾಗಿಸಿ ಸುಳ್ಳು ಕಥೆ ಸೃಷ್ಟಿಸಿದ್ದಾರೆ. ತನಿಖಾಧಿಕಾರಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಲು ನಿರ್ದೇಶನ ನೀಡಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಾದ ಆಲಿಸಿದ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿ, ವಿಚಾರಣೆ ಮುಂದೂಡಿದ್ದರು. ಕಾಯ್ದಿರಿಸಿದ ತೀರ್ಪನ್ನು ಏಪ್ರಿಲ್ 23ರಂದು ಪ್ರಕಟಿಸಿದ್ದರು.
ಕುಶಾಲನಗರದ ಮಹಿಳೆ ನಾಪತ್ತೆ…ಮೈಸೂರಿನಲ್ಲಿ ಏಕೆ ಪ್ರಕರಣ?
2021ರ ಜುಲೈನಲ್ಲಿ ಕೊಡಗು ಜಿಲ್ಲೆ ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಮಲ್ಲಿಗೆ ಕಾಣೆಯಾಗಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಅದೇ ತಿಂಗಳ 18ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಠಾಣಾ ವ್ಯಾಪ್ತಿಯ ಶಾನುಭೋಗನಹಳ್ಳಿಯ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಅದು ಮಗಳದ್ದೇ ಎಂದು ಮಲ್ಲಿಗೆಯ ತಾಯಿ ಗುರುತಿಸಿದ್ದರು. ಪತಿ ಸುರೇಶ್ ಅವರನ್ನು ವಿಚಾರಣೆ ನಡೆಸಿದ ಪೊಲೀಸರು, ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿ, ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ತನ್ನ ಪತ್ನಿ ಕಾಣೆಯಾಗಿದ್ದಾರೆ ಎಂದು ಸುರೇಶ್ ಕುಶಾಲನಗರದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಯಾರದ್ದೋ ಶವವನ್ನು ಸುರೇಶ್ ಅವರ ಪತ್ನಿಯದ್ದೇ ಎಂದು ಬಿಂಬಿಸಿದ್ದ ಮೈಸೂರಿನ ಬೆಟ್ಟದಪುರ ಪೊಲೀಸರು, ಸುರೇಶ್ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುರೇಶ್‌ಗೆ ನ್ಯಾಯ ದೊರಕಿಸಿಕೊಟ್ಟ ವಕೀಲ ಪಾಂಡು ಪೂಜಾರಿ
ಸುರೇಶ್ ಜೈಲಿನಲ್ಲಿದ್ದ ಸಮಯದಲ್ಲಿ ಅವರ ತಂದೆ ಗಾಂಧಿ ವಕೀಲ ಪಾಂಡು ಪೂಜಾರಿ ಅವರನ್ನು ಭೇಟಿಯಾಗಿ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಮಗನನ್ನು ಜೈಲಿಗೆ ಹಾಕಿರುವ ಬಗ್ಗೆ ತಿಳಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪಾಂಡು ಪೂಜಾರಿ ಸುರೇಶ್ ಕುಟುಂಬದಿಂದ ಯಾವುದೇ ಶುಲ್ಕ ಪಡೆಯದೆ ವಾದ ಮಂಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ವರದಿಗಳು ಹೇಳಿತ್ತು.
ದೇವನಹಳ್ಳಿ ಚಲೋ! ‘ಭೂಮಿ ಸತ್ಯಾಗ್ರಹ’ ಅಹೋರಾತ್ರಿ ಧರಣಿ: ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ಪತ್ರಿಕಾ ಹೇಳಿಕೆ


