ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸನ್ಯಾಸಿ ಕಾರ್ತಿಕ್ ಮಹಾರಾಜ್ ವಿರುದ್ದ ಅತ್ಯಾಚಾರ ಆರೋಪ ಮಾಡಿದ್ದಾರೆ. ಬಿಜೆಪಿಗೆ ಆಪ್ತರಾಗಿರುವ ಕಾರ್ತಿಕ್ ಮಹಾರಾಜ್ ಆರೋಪಗಳನ್ನು ನಿರಾಕರಿಸಿದ್ದಾರೆ.
ಭಾರತ್ ಸೇವಾಶ್ರಮ ಸಂಘದ ಸನ್ಯಾಸಿ ಕಾರ್ತಿಕ್ ಮಹಾರಾಜ್ ಅವರು ಮುರ್ಷಿದಾಬಾದ್‌ನಲ್ಲಿರುವ ಆಶ್ರಮಕ್ಕೆ ತನ್ನನ್ನು ಕರೆದೊಯ್ದು, ಅದರ ಆವರಣದಲ್ಲಿರುವ ಶಾಲೆಯಲ್ಲಿ ಬೋಧನಾ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು ಮತ್ತು ಆಶ್ರಮದಲ್ಲಿ ವಸತಿಯನ್ನೂ ನೀಡಿದ್ದರು.
ಆದರೆ, ಒಂದು ದಿನ ರಾತ್ರಿ ಸನ್ಯಾಸಿ ತನ್ನ ಕೋಣೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. 2013ರ ಜನವರಿಯಿಂದ ಜೂನ್ ನಡುವೆ ಆರು ತಿಂಗಳ ಅವಧಿಯಲ್ಲಿ ಸನ್ಯಾಸಿ ಕಾರ್ತಿಕ್ ಕನಿಷ್ಠ 12 ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಭಯ ಮತ್ತು ಅಸಹಾಯಕತೆಯಿಂದ ಇಷ್ಟು ಸಮಯ ದೌರ್ಜನ್ಯದ ಬಗ್ಗೆ ನಾನು ಮೌನವಾಗಿದ್ದೆ. ಪೊಲೀಸರಿಗೆ ದೂರು ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸನ್ಯಾಸಿ ಬೆದರಿಕೆ ಹಾಕಿದ್ದರು ಮಹಿಳೆ ತಿಳಿಸಿದ್ದಾರೆ.
ಸನ್ಯಾಸಿ ಕಾರ್ತಿಕ್ ಮಹಾರಾಜ್ ವಿರುದ್ಧ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ indiatoday.in ವರದಿ ಮಾಡಿದೆ.
ಆರೋಪ ನಿರಾಕರಿಸಿದ ಕಾರ್ತಿಕ್ ಮಹಾರಾಜ್
ಈ ವರ್ಷ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನರಾದ ಸನ್ಯಾಸಿ ಕಾರ್ತಿಕ್ ಮಹಾರಾಜ್, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ಮಹಿಳೆ ಉಲ್ಲೇಖಿಸಿದ ಆಶ್ರಮದಲ್ಲಿ ವಸತಿ ಸೌಲಭ್ಯವಿದೆ ಎಂಬುವುದನ್ನು ಅವರು ಒಪ್ಪಿಕೊಂಡಿದ್ದಾರೆ.
“ನಾನು ಸನ್ಯಾಸಿ. ಸನ್ಯಾಸಿಯ ಜೀವನದಲ್ಲಿ ಇಂತಹ ಆರೋಪಗಳು ಸಾಮಾನ್ಯವಾದುದಲ್ಲ. ನಮ್ಮ ಕಾನೂನು ತಂಡವು ಈ ಸಂಬಂಧ ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸುತ್ತದೆ” ಎಂದು ಕಾರ್ತಿಕ್ ಮಹಾರಾಜ್ ಹೇಳಿದ್ದಾರೆ.
ಆರೋಪಿ ಸನ್ಯಾಸಿಗೆ ಬಿಜೆಪಿ ಜೊತೆಗೆ ನಿಕಟ ಸಂಬಂಧ ಇರುವುದರಿಂದ ಈ ಪ್ರಕರಣವು ಗಮನ ಸೆಳೆದಿದೆ. ಸನ್ಯಾಸಿ ಕಾರ್ತಿಕ್ ಮಹಾರಾಜ್ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಆರೋಪಿಸಿದ್ದರು.
ತಮ್ಮ ಆಶ್ರಮದ ಪ್ರತಿಷ್ಠೆಗೆ ಕಳಂಕ ತಂದಿದ್ದಕ್ಕಾಗಿ ಬ್ಯಾನರ್ಜಿ ಅವರಿಂದ ಬೇಷರತ್ತಾದ ಕ್ಷಮೆಯಾಚನೆಯನ್ನು ಕೋರಿ ಮಹಾರಾಜ್ 2024 ರಲ್ಲಿ ಲೀಗಲ್ ನೋಟಿಸ್ ಕಳುಹಿಸಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಇಬ್ಬರು ಹಿರಿಯ ವಿದ್ಯಾರ್ಥಿಗಳು ತನ್ನ ಮೇಲೆ ಕಾಲೇಜು ಕ್ಯಾಂಪಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಕೋಲ್ಕತ್ತಾ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ದ ಜನರಿಂದ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಸನ್ಯಾಸಿ ವಿರುದ್ದ ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಸೌಜನ್ಯ : indiatoday.in
‘ಕೇಸರಿ ಧ್ವಜ ಹಿಡಿದಿರುವ ಭಾರತ ಮಾತೆ ‘ಧಾರ್ಮಿಕ ಚಿತ್ರ’: ಕೇರಳ ರಾಜ್ಯಪಾಲರ ವಿರುದ್ಧ ಗುಡುಗಿದ ಸಚಿವ ಶಿವನ್‌ಕುಟ್ಟಿ


