ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿಷೇಧವನ್ನು ವಿರೋಧಿಸಿರುವ ಮಹಿಳಾ ಪ್ರಯಾಣಿಕರು, ಬೈಕ್ ಟ್ಯಾಕ್ಸಿ ಸುರಕ್ಷಿತವಾಗಿದ್ದು, ಅನುಕೂಲಕರ ಮತ್ತು ಕೈಗೆಟುಕುವ ಪ್ರಯಾಣ ವಿಧಾನವಾಗಿದೆ ಎಂದು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಬೈಕ್ ಟ್ಯಾಕ್ಸಿ ನಿಷೇಧವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ದ ಓಲಾ, ಊಬರ್ ಮತ್ತು ರ‍್ಯಾಪಿಡೋ ಸಲ್ಲಿಸಿರುವ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ ವಿಭಾಗೀಯ ಪೀಠ ಬುಧವಾರ (ಜು.2) ವಿಚಾರಣೆ ನಡೆಸಿದೆ.
ರಾಜ್ಯ ಸರ್ಕಾರವು ಮೋಟಾರು ವಾಹನ ಕಾಯ್ದೆ, 1988ರ ಸೆಕ್ಷನ್ 93 ಮತ್ತು ಅದರ ಅಡಿಯಲ್ಲಿರುವ ನಿಯಮಗಳ ಅಡಿಯಲ್ಲಿ ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು, “ಅರ್ಜಿದಾರರು (ಓಲಾ, ಊಬರ್, ರ‍್ಯಾಪಿಡೋ) ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಕಳೆದ ಏಪ್ರಿಲ್‌ನಲ್ಲಿ ತೀರ್ಪು ನೀಡಿತ್ತು.
ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಪರ್ಮಿಟ್‌ಗಳನ್ನು ನೀಡಲು ರಾಜ್ಯದ ಸಾರಿಗೆ ಇಲಾಖೆಗೆ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಪೀಠ, ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಆರು ವಾರಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
ಈ ದಿನಾಂಕವನ್ನು ಜೂನ್ 15ರವರೆಗೆ ವಿಸ್ತರಿಸಲಾಗಿತ್ತು. ಜೂನ್ 16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ಓಲಾ, ಊಬರ್ ಮತ್ತು ರ‍್ಯಾಪಿಡೋ ಆರ್ಜಿಯಲ್ಲಿ ಮಹಿಳಾ ಪ್ರಯಾಣಿಕರ ಪರ ಮಧ್ಯ ಪ್ರವೇಶಿಸಿದ ಹಿರಿಯ ವಕೀಲೆ ಜಯನಾ ಕೊಠಾರಿ, ಬೈಕ್ ಟ್ಯಾಕ್ಸಿ ಅಸುರಕ್ಷಿತ ಎಂಬ ಕಾರಣ ಕೊಟ್ಟು ರದ್ದುಗೊಳಿಸಲಾಗಿದೆ. ಆದರೆ, ದೈನಂದಿನ ಪ್ರಯಾಣಿಕರಾಗಿರುವ ನಮಗೆ (ಮಹಿಳೆಯರಿಗೆ) ಬೈಕ್ ಟ್ಯಾಕ್ಸಿಗಳು ಸುರಕ್ಷಿತ, ಕೈಗೆಟುಕುವ ಮತ್ತು ಅನುಕೂಲಕರ ಸೇವೆಯನ್ನು ಒದಗಿಸುತ್ತಿತ್ತು ಎಂದಿದ್ದಾರೆ.
ಮಹಿಳೆಯರಿಗೆ ಈ ಸೇವೆ ಬೇಕಾಗಿದ್ದು, ಅದನ್ನು ನಿರ್ಬಂಧಿಸುವುದಕ್ಕೂ ಮುನ್ನ ಮಹಿಳೆಯರ ವಾದ ಆಲಿಸಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇತರ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದಂತೆ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಕೊಠಾರಿ, “ಇತರ ರಾಜ್ಯಗಳಲ್ಲಿ ಬೈಕರ್‌ಗಳಿಗೆ ಪೂರ್ವ ಅರ್ಹತಾ ಪರೀಕ್ಷೆ ಇರುತ್ತದೆ. ಹಿನ್ನೆಲೆ ಪರಿಶೀಲನೆಗಳನ್ನು ಮಾಡಲಾಗುತ್ತದೆ. ಪಶ್ಚಿಮ ಬಂಗಾಳವು ರಾತ್ರಿಯಲ್ಲಿ ಸೀಮಿತ ಬೈಕ್ ಟ್ಯಾಕ್ಸಿ ಓಡಾಟವನ್ನು ಹೊಂದಿದೆ. ಅನೇಕ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸವಾರರು ಮಹಿಳೆಯರು ಎಂದು ಒತ್ತಿ ಹೇಳಿದ್ದಾರೆ. ಎಲ್ಲಾ ಸೇವಾ ನಿಯಮಗಳು ಮತ್ತು ಮಾರ್ಗಸೂಚಿಗಳು ಬೈಕ್ ಟ್ಯಾಕ್ಸಿ ಹೆಚ್ಚು ಸುರಕ್ಷಿತ ಪ್ರಯಾಣ ವಿಧಾನವಾಗಿದೆ ಎಂದು ತೋರಿಸಿದೆ ಎಂದಿದ್ದಾರೆ.
ರಾಜಸ್ಥಾನದ ಬೈಕ್ ಟ್ಯಾಕ್ಸಿ ನೀತಿಯನ್ನು ಉಲ್ಲೇಖಿಸಿದ ಕೊಠಾರಿ, ಆ ನೀತಿಯಡಿಯಲ್ಲಿ ಚಾಲಕರ ಪೂರ್ವವರ್ತಿಗಳನ್ನು ಸೇವಾ ಪೂರೈಕೆದಾರರು ಪರಿಶೀಲಿಸಬೇಕು ಮತ್ತು ಪೊಲೀಸ್ ಪರಿಶೀಲನೆ ಮಾಡಲಾಗುತ್ತದೆ. ಅಪ್ರಾಪ್ತ ವಯಸ್ಕರಿಗೆ ಬೈಕ್ ಓಡಿಸಲು ಅವಕಾಶವಿಲ್ಲ. ಸರ್ಕಾರ ಬೈಕ್ ಟ್ಯಾಕ್ಸಿಯ ದರಗಳನ್ನು ನಿಗದಿ ಮಾಡಿದರೂ, ಅದು ಕಡಿಮೆ ಮತ್ತು ಅತ್ಯಂತ ಕೈಗೆಟುಕುವ ಮಟ್ಟದಲ್ಲಿದೆ ಎಂದು ವಿವರಿಸಿದ್ದಾರೆ.
ಬೈಕ್ ಟ್ಯಾಕ್ಸಿಗಳನ್ನು ಪರಿಶೀಲಿಸುವ ಮತ್ತು ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಶಿಫಾರಸು ಮಾಡುವ ಸ್ವತಂತ್ರ ಸಂಸ್ಥೆಗಳ ಹಲವಾರು ರಾಷ್ಟ್ರೀಯ ವರದಿಗಳಿವೆ. ಇದು ಮಹಿಳೆಯರಿಗೆ ಸುರಕ್ಷಿತ ಮತ್ತು ಹೆಚ್ಚು ಕೈಗೆಟುಕುವಂತಿದೆ ಎಂದು ಹೇಳಿದೆ. ಬೈಕ್ ಟ್ಯಾಕ್ಸಿ ಅತ್ಯಂತ ಅನುಕೂಲಕರ ವಿಧಾನವಾಗಿದೆ ಎಂದು ತೋರಿಸುವ ಕೆಪಿಎಂಜಿ ವರದಿಯಿದೆ. ದರಗಳನ್ನು ನಿಗದಿಪಡಿಸಬೇಕು. ಆದರೆ, ಬೈಕ್ ಟ್ಯಾಕ್ಸಿ ಚಾಲನೆಯಲ್ಲಿ ಇದ್ದಾಗ ಕೈಗೆಟಕುವಂತಿತ್ತು ಎಂದು ಕೊಠಾರಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಕೆಪಿಎಂಜಿ ಸಿದ್ಧಪಡಿಸಿದ ವರದಿಯ ಆಧಾರದ ಕುರಿತ ನ್ಯಾಯಾಲಯದ ಪ್ರಶ್ನೆಗೆ, “ಅವರು (ಕೆಪಿಎಂಜಿ) ಕಾರ್ಯಸಾಧ್ಯತಾ ಅಧ್ಯಯನವನ್ನು ಮಾಡಿದ್ದಾರೆ. ವರದಿಯು ಬೈಕ್ ಟ್ಯಾಕ್ಸಿ ಹೆಚ್ಚು ಕೈಗೆಟುಕುವ, ಅನುಕೂಲಕರ ಮತ್ತು ಸುರಕ್ಷಿತವಾಗಿದೆ ಎಂದು ಹೇಳುತ್ತದೆ. ಇತರ ಸಾರಿಗೆ ವಿಧಾನಗಳಿಗಿಂತ ಬೈಕ್ ಟ್ಯಾಕ್ಸಿ ಸುರಕ್ಷಿತವಾಗಿದೆ ಎಂದು ಡೇಟಾ ತೋರಿಸುತ್ತದೆ. ನಮ್ಮ ಮನವಿ ಕೈಗೆಟುಕುವಿಕೆ, ಅನುಕೂಲತೆ ಮತ್ತು ಮಹಿಳೆಯರಿಗೆ ಸುರಕ್ಷತೆ. ಇದು ಉತ್ತಮ ಆಯ್ಕೆಯಾಗಿದೆ ಎಂದು ಕೊಠಾರಿ ತಿಳಿಸಿದ್ದಾರೆ.
ಇದೇ ವೇಳೆ ಊಬರ್ ಪರ ಹಾಜರಾಗಿದ್ದ ಹಿರಿಯ ವಕೀಲ ಉದಯ್ ಹೊಳ್ಳ, ಈ ಹಿಂದೆ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದ್ದ ತಮಿಳುನಾಡಿನಂತಹ ರಾಜ್ಯಗಳು ಈಗ ಅದಕ್ಕೆ ಅನುಮತಿ ನೀಡಿವೆ. ಕೇರಳ ಕೂಡ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿಸಿದೆ ವಾದಿಸಿದ್ದಾರೆ.
ಬೆಂಗಳೂರಿನ ಮೆಟ್ರೋ ಮಾರ್ಗಗಳ ಬಗ್ಗೆ ಉಲ್ಲೇಖಿಸಿದ ಹೊಳ್ಳ, “ಮೆಟ್ರೋ ಮಾರ್ಗಗಳನ್ನು ನೋಡಿ, ಕೇವಲ ಎರಡು ಮಾರ್ಗಗಳಿವೆ. ಅದು ಕೊನೆಯ ಮೈಲಿ ಸಂಪರ್ಕ ನೀಡುತ್ತಿಲ್ಲ. ಜಪಾನ್ ಮುಂತಾದ ಸ್ಥಳಗಳು ಬಹು ಮೆಟ್ರೋ ಮಾರ್ಗಗಳನ್ನು ಹೊಂದಿವೆ. ದಯವಿಟ್ಟು ಬೆಂಗಳೂರಿನ ವಿಸ್ತರಣೆಯನ್ನು ನೋಡಿ. ಹೆಚ್ಚಿನ ಮೆಟ್ರೋ ಮಾರ್ಗಗಳಿದ್ದರೂ ಜನರಿಗೆ ಬೇಕಾದ ಸೇವೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ನನ್ನ ಬಾಲ್ಯದಲ್ಲಿ ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೆ 20 ನಿಮಿಷಗಳಲ್ಲಿ ಪ್ರಯಾಣಿಸಬಹುದಿತ್ತು. ಈಗ ಗರಿಷ್ಠ ಸುಮಾರು 3 ರಿಂದ 4 ಗಂಟೆಗಳು ಬೇಕಾಗುತ್ತದೆ. ಒಬ್ಬ ಪ್ರಯಾಣಿಕ 3 ರಿಂದ 4 ಗಂಟೆಗಳು ಟ್ರಾಫಿಕ್‌ನಲ್ಲಿ ಕಳೆದರೆ ಏನಾಗುತ್ತದೆ. ಅವರಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ ಎಂದು ಹೊಳ್ಳ ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಬಾರದು ಮತ್ತು ಅದರ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದ 2019ರ ತಜ್ಞರ ಸಮಿತಿಯ ವರದಿಯಲ್ಲಿ ಪರಿಗಣಿಸಲಾದ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಸ್ತಾಪಿಸಿದ ಹೊಳ್ಳ, ಬೈಕ್ ಟ್ಯಾಕ್ಸಿಯನ್ನು ನಿರ್ಬಂಧಿಸಲು ಮಹಿಳಾ ಸುರಕ್ಷತೆ ವಿಷಯವನ್ನು ಮುಂದೆ ತರಲಾಗಿದೆ. ಇಲ್ಲಿ ಪ್ರಬಲ ಆಟೋ ಯೂನಿಯನ್‌ಗಳು ಇವೆ ಎಂದಿದ್ದಾರೆ.
ಬೈಕ್ ಸವಾರರ ವಿಷಯದಲ್ಲಿ ಸರ್ಕಾರ ನೋಂದಣಿಯನ್ನು ನಿರಾಕರಿಸುವಂತಿಲ್ಲ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
“ಇಂದು ಎಲ್ಲರೂ ಟ್ಯಾಕ್ಸಿಗಾಗಿ ಊಬರ್ ಅನ್ನು ಅವಲಂಬಿಸುತ್ತಿದ್ದಾರೆ. ಸೇವಾದಾರರಿಗೆ ಕೆಲವೇ ಕೆಲವು ನಿಮಿಷಗಳಲ್ಲಿ ಟ್ಯಾಕ್ಸಿ ಸೇವೆ ನೀಡಲು ಸಾಧ್ಯವಾಗುತ್ತಿದೆ. ಇಲ್ಲಿ ವೈಯಕ್ತಿವಾಗಿ ಚಾಲಕರು ಸೇವೆ ನೀಡುತ್ತಾರೆ. ಕಂಪನಿಗಳು ಕೇವಲ ಸೇವಾ ಪೂರೈಕೆದಾರರು ಮಾತ್ರ. ಆದ್ದರಿಂದ ಚಾಲಕರನ್ನು ತಡೆಯಲು ಸಾಧ್ಯವಿಲ್ಲ. ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದ ನಂತರ ಸಂಚಾರ ದಟ್ಟಣೆ ಶೇಕಡ 18ರಷ್ಟು ಹೆಚ್ಚಳವಾಗಿದೆ” ಎಂದ ಹೊಳ್ಳ ತಮ್ಮ ವಾದ ಮುಕ್ತಾಯಗೊಳಿಸಿದ್ದಾರೆ.
ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಹೊಳ್ಳ, “ಬೈಕ್ ಟ್ಯಾಕ್ಸಿಗಳು ಇಲ್ಲದ ಕಾರಣ ಜನರು ತಮ್ಮ ಕಾರುಗಳನ್ನು ಬಳಸಬೇಕಾಗುತ್ತದೆ. ಲಂಡನ್‌ನಲ್ಲಿ ಪಾರ್ಕಿಂಗ್ ಸ್ಥಳವಿಲ್ಲದ ಕಾರಣ ಜನರು ಸ್ವಂತ ಕಾರು ಹೊಂದಲು ಸಾಧ್ಯವಿಲ್ಲ. ಅಲ್ಲಿ ಎಲ್ಲರೂ ಊಬರ್ ಬಳಸುತ್ತಾರೆ ಎಂದು ತಿಳಿಸಿದ್ದಾರೆ.
Courtesy : livelaw.in


