ಭಾರತೀಯ ಚುನಾವಣಾ ಆಯೋಗವನ್ನು ಬುಧವಾರ ಭೇಟಿಯಾಗಿರುವ ಪ್ರತಿಪಕ್ಷ ನಿಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಎಆರ್) ಕುರಿತು ಕಳವಳ ವ್ಯಕ್ತಪಡಿಸಿದೆ.
ಕಾಂಗ್ರೆಸ್, ಆರ್‌ಜೆಡಿ, ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಎನ್‌ಸಿಪಿ-ಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳ 11 ಮಂದಿ ನಾಯಕರು ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಇತರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಕೈಗೊಂಡಿರುವ ಮತದಾರರ ಪಟ್ಟಿ ಪರಿಶೀಲನೆಯನ್ನು ವಿರೋಧಿಸಿದ್ದಾರೆ.
ಬಿಹಾರದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಮತ್ತು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜಾರಿಗೆ ಬರಲಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಇಂಡಿಯಾದ ಒಕ್ಕೂಟದ ಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.
ಚುನಾವಣಾ ಆಯೋಗದ ಜೊತೆಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ, ಪಕ್ಷದ ಅಧ್ಯಕ್ಷರು ಮಾತ್ರ ತನ್ನ ಮುಂದೆ ಹಾಜರಾಗಬೇಕೆಂದು ಹೇಳುವ, ಚುನಾವಣಾ ಆಯೋಗದ ಅವರಣ ಪ್ರವೇಶಕ್ಕೆ ಸಂಬಂಧಿಸಿದ ಆಯೋಗದ ಹೊಸ ನಿರ್ದೇಶನದ ವಿರುದ್ದವೂ ನಾವು ಪ್ರತಿಭಟಿಸಿದ್ದೇವೆ ಎಂದು ಹೇಳಿದ್ದಾರೆ.
ಮೊಟ್ಟ ಮೊದಲ ಬಾರಿಗೆ ನಮಗೆ ಇಂತಹ ನಿಯಮಗಳನ್ನು ವಿಧಿಸಲಾಗಿದೆ. ಪಕ್ಷದ ಮುಖ್ಯಸ್ಥರು ಮಾತ್ರ ಭೇಟಿ ಮಾಡಬಹುದು ಎಂದು ಮೊದಲ ಬಾರಿಗೆ ಹೇಳಲಾಗಿದೆ. ಈ ರೀತಿಯ ನಿರ್ಬಂಧಗಳಿಂದ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವೆ ಅತ್ಯಗತ್ಯ ಮಾತುಕತೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಸಿಂಘ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಪಟ್ಟಿಯನ್ನು ಕೊಟ್ಟಿದ್ದೇವೆ. ಅನಧಿಕೃತ ವ್ಯಕ್ತಿಗಳನ್ನು ಅನುಮತಿಸಲು ಸಾಧ್ಯವಿಲ್ಲ. ಇಬ್ಬರಿಗೆ ಮಾತ್ರ ಅವಕಾಶ ನೀಡುವುದು ವಿಪರ್ಯಾಸ. ಕೆಲವು ಹಿರಿಯ ನಾಯಕರು ಮೂರು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಸಿಂಘ್ವಿ ತಿಳಿಸಿದ್ದಾರೆ.
ನಾವು ಕಳೆದ ಪರಿಷ್ಕರಣೆಯಿಂದ ಮಾಹಿತಿ ಕೇಳಿದ್ದೇವೆ. ಅವಾಗಿನಿಂದ ಬಿಹಾರದಲ್ಲಿ ನಾಲ್ಕು ಅಥವಾ ಐದು ಚುನಾವಣೆಗಳು ನಡೆದಿವೆ. 2003ರ ಎಸ್‌ಐಆರ್ ಲೋಕಸಭಾ ಚುನಾವಣೆಗೆ ಒಂದು ವರ್ಷ ಮೊದಲು ನಡೆದಿತ್ತು. ಅಂದರೆ, ಬಿಹಾರ ವಿಧಾನಸಭಾ ಚುನಾವಣೆಯ 24 ತಿಂಗಳು ಮೊದಲು ಎಂದು ಸಿಂಘ್ವಿ ಹೇಳಿದ್ದಾರೆ.
“ಎರಡನೆಯದಾಗಿ ನೀವು ಎಸ್‌ಐಆರ್ ಮಾಡುವುದಾದರೆ ಜೂನ್ ಅಂತ್ಯದಲ್ಲಿ ಏಕೆ ಘೋಷಣೆ ಮಾಡಿದಿರಿ ಎಂದು ನಾವು ಕೇಳಿದ್ದೇವೆ. ಮೂರನೆಯದಾಗಿ, ಕಳೆದ ಒಂದು ದಶಕದಲ್ಲಿ ಎಲ್ಲದಕ್ಕೂ ಆಧಾರ್ ಮತ್ತು ಪಡಿತರ ಚೀಟಿಯನ್ನು ಕೇಳಿದ್ದೀರಿ. ಮೊಟ್ಟ ಮೊದಲ ಜನನ ಪ್ರಮಾಣ ಪತ್ರ ಇಲ್ಲದವರನ್ನು ಪರಿಗಣಿಸುವುದಿಲ್ಲ ಎನ್ನುತ್ತಿದ್ದೀರಿ ಎಂಬುವುದನ್ನು ಪ್ರಶ್ನಿಸಿದ್ದೇವೆ ಎಂದು ಸಿಂಘ್ವಿ ತಿಳಿಸಿದ್ದಾರೆ.
ವಿಶೇಷ ಸಚಿವ ಸಂಪುಟ ಸಭೆಯಲ್ಲಿ 48 ವಿಷಯಗಳು ಕುರಿತು ಚರ್ಚೆ; 3400 ಕೋಟಿ ಮೊತ್ತ ಮಂಜೂರು


