ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ (ಜು.2) ಪರಿಷ್ಕೃತ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಪುನರಾರಂಭಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.
ಹೊಸ ಮಾರ್ಗಸೂಚಿಗಳು ರಾಜ್ಯ ಸರ್ಕಾರಗಳಿಗೆ ಪರವಾನಗಿಗಳನ್ನು ನೀಡಲು ಮತ್ತು ಅಗ್ರಿಗೇಟರ್‌ಗಳನ್ನು ನಿಯಂತ್ರಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ. ಬಳಕೆದಾರರ ಸುರಕ್ಷತೆ ಮತ್ತು ಭದ್ರತೆ ಹಾಗೂ ಚಾಲಕನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಗುರವಾದ ನಿಯಂತ್ರಣ ವ್ಯವಸ್ಥೆಯನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
‘ಸಾರಿಗೆ ಅಲ್ಲದ ಮೋಟರ್ ಸೈಕಲ್‌ಗಳನ್ನು ಅಗ್ರಿಗೇಟರ್‌ಗಳ ಮೂಲಕ ಒಗ್ಗೂಡಿಸುವಿಕೆ’ ಎಂಬ ಶೀರ್ಷಿಕೆಯ ಮಾರ್ಗಸೂಚಿಯ ಷರತ್ತು 23ರಲ್ಲಿ ಆನ್‌ಲೈನ್ ಅಗ್ರಿಗೇಟರ್‌ಗಳು ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಗಳಾಗಿ ಬಳಸಲು ಅನುವು ಮಾಡಿಕೊಡುವ ಬಗ್ಗೆ ಹೇಳಲಾಗಿದೆ.
ರಾಜ್ಯ ಸರ್ಕಾರ ಸಾರಿಗೇತರ ಮೋಟರ್ಸೈಕಲ್ಗಳನ್ನು ಜನರ ಪ್ರಯಾಣದ ಬಳಕೆಗೆ ಅವಕಾಶ ನೀಡಬಹುದು. ಇದು ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕಡಿಮೆ ಮಾಡಲು ನೆರವಾಗುತ್ತದೆ. ಜನರಿಗೆ ಕೈಗೆಟಕುವ ಪ್ರಯಾಣಕ್ಕೆ ಅವಕಾಶ ನೀಡುತ್ತದೆ. ಹೈಪರ್ಲೋಕಲ್ ಡೆಲಿವರಿ ಹಾಗೂ ಜೀವನೋಪಾಯಕ್ಕೂ ದಾರಿಯಾಗುತ್ತದೆ ಎಂದು ಮಾರ್ಗಸೂಚಿ ಹೇಳಿದೆ.
ಸಾರಿಗೆಯು ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯವಾಗಿದ್ದರೂ, ರಾಜ್ಯ ಸರ್ಕಾರವು ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ, 2019ರ ಸೆಕ್ಷನ್ 36ರ ಪ್ರಕಾರ, ಅಗ್ರಿಗೇಟರ್‌ಗೆ ಪರವಾನಗಿ ನೀಡುವಾಗ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬಹುದು.
ಕರ್ನಾಟಕ ಸರ್ಕಾರದ ರಾಜ್ಯದಲ್ಲಿ ಬೈಕ್ಸ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿದೆ. ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಹಿನ್ನೆಲೆ ಜೂನ್ 16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ. ಈ ನಡುವೆ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಯನ್ನು ಬೆಂಬಲಿಸಿ ಮಾರ್ಗಸೂಚಿ ಹೊರಡಿಸಿದೆ.
ಅತಿದೊಡ್ಡ ಬೈಕ್ ಟ್ಯಾಕ್ಸಿ ಆಪರೇಟರ್ ರ‍್ಯಾಪಿಡೋ ಕೇಂದ್ರದ ಪರಿಷ್ಕೃತ ಮಾರ್ಗಸೂಚಿಗಳನ್ನು ಸ್ವಾಗತಿಸಿದ್ದು, ಇದೊಂದು ‘ಮೈಲಿಗಲ್ಲು’ ಎಂದು ಕರೆದಿದೆ. ಬೈಕ್ ಟ್ಯಾಕ್ಸಿ ನಿಷೇಧ ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ಓಲಾ, ಊಬರ್, ರ‍್ಯಾಪಿಡೋ ಈಗಾಗಲೇ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದೆ.
“ರಾಜ್ಯ ಸರ್ಕಾರ ಸಾರಿಗೇತರ ಮೋಟರ್ಸೈಕಲ್ಗಳನ್ನು ಜನರ ಪ್ರಯಾಣದ ಬಳಕೆಗೆ ಅವಕಾಶ ನೀಡಬಹುದು ಎಂಬ ಕೇಂದ್ರದ ಮಾರ್ಗಸೂಚಿಯು, ಲಕ್ಷಾಂತರ ಜನರಿಗೆ ವಿಶೇಷವಾಗಿ ಹೈಪರ್ ಲೋಕಲ್ ಜನರಿಗೆ ಹೆಚ್ಚು ಕೈಗೆಟುಕುವ ಸಾರಿಗೆ ಆಯ್ಕೆಗಳ ಬಾಗಿಲು ತೆರೆಯುತ್ತದೆ. ಸುಸ್ಥಿರ ನಗರ ಅಭಿವೃದ್ಧಿಯ ಭಾರತದ ಗುರಿಯನ್ನು ಇದು ಬೆಂಬಲಿಸುತ್ತದೆ. ಈ ಕ್ರಮವು ಸಂಚಾರ ದಟ್ಟಣೆ ಮತ್ತು ವಾಹನ ಮಾಲಿನ್ಯದಂತಹ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ” ಎಂದು ರ‍್ಯಾಪಿಡೋ ಹೇಳಿಕೊಂಡಿದೆ.
ಊಬರ್ ಕೂಡ ಕೇಂದ್ರದ ಮಾರ್ಗಸೂಚಿಗಳನ್ನು ‘ಭಾರತದ ಡಿಜಿಟಲ್ ಮೊಬಿಲಿಟಿ ವಲಯದಲ್ಲಿ ನಾವೀನ್ಯತೆ ಮತ್ತು ನಿಯಂತ್ರಕ ಸ್ಪಷ್ಟತೆಯನ್ನು ಬೆಳೆಸುವತ್ತ ಒಂದು ಭವಿಷ್ಯದ ಹೆಜ್ಜೆ’ ಎಂದು ಬಣ್ಣಿಸಿದೆ.
ಮಾರ್ಗ ಸೂಚಿಗಳನ್ನು ರಾಜ್ಯಗಳು ಸಕಾಲಿಕವಾಗಿ ಅಳವಡಿಸಿಕೊಂಡರೆ ಏಕರೂಪದ ನೀತಿ ಅನುಷ್ಠಾನ ಮತ್ತು ಎಲ್ಲಾ ಪಾಲುದಾರರಿಗೆ ಹೆಚ್ಚು ಅಗತ್ಯವಿರುವ ಮುನ್ಸೂಚನೆಯನ್ನು ನೀಡಲು ಸಹಕಾರಿಯಾಗುತ್ತದೆ ಎಂದಿದೆ.
ಕರ್ನಾಟಕದ ಸಾರಿಗೆ ಇಲಾಖೆ ಈ ವಿಷಯದ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೈಕ್ ಟ್ಯಾಕ್ಸಿ ಸೇವೆಯು ಹೆಚ್ಚು ಸುರಕ್ಷಿತ, ಅನುಕೂಲಕರ: ಹೈಕೋರ್ಟ್‌ನಲ್ಲಿ ಮಹಿಳಾ ಪ್ರಯಾಣಿಕರ ವಾದ


