Homeಅಂಕಣಗಳುದೇಶದ ಆರು ಪ್ರಮುಖ ಭೂಸ್ವಾಧೀನ ವಿರೋಧಿ ಹೋರಾಟಗಳು ಗೆಲುವು ಸಾಧಿಸಿದ್ದೇಗೆ?

ದೇಶದ ಆರು ಪ್ರಮುಖ ಭೂಸ್ವಾಧೀನ ವಿರೋಧಿ ಹೋರಾಟಗಳು ಗೆಲುವು ಸಾಧಿಸಿದ್ದೇಗೆ?

- Advertisement -
- Advertisement -

 (ಕೇಂದ್ರದ 2013ರ LARR ಕಾಯಿದೆಗೆ ಕರ್ನಾಟಕ ರಾಜ್ಯವು 2019ರಲ್ಲಿ ತಿದ್ದುಪಡಿ ಮಾಡಿದೆ ಮತ್ತು ರಾಜ್ಯವು ‘ವಿಶೇಷ KIADB ಕಾಯಿದೆ’ಯನ್ನು ಹೊಂದಿದೆ. ರಾಜ್ಯ ಸರಕಾರವು ಈ KIADB ಕಾಯಿದೆಯಡಿ ದೇವನಹಳ್ಳಿಯ ರೈತರ ಭೂಮಿಯನ್ನು ಭೂಸ್ವಾಧೀನ ಮಾಡಲು ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಸರಕಾರವೇನೋ ಈ ಎರಡು ಕಾಯಿದೆಯಡಿಯೂ ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಆದರೆ ದೇಶದ ಬೇರೆ ರಾಜ್ಯಗಳಲ್ಲಿ ಇಂತಹದೇ ಅಥವಾ ಬ್ರಿಟಿಷರು ಜಾರಿಗೆ ತಂದಿದ್ದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅತಿ ಕರಾಳ ಕಾಯಿದೆಯಾದ 1894ರ ಭೂಸ್ವಾಧೀನ ಕಾಯಿದೆಯಡಿಯೂ ರೈತರ ಭೂಮಿಯನ್ನು ಸ್ವಾಧೀನಕ್ಕೆ ಹೋಗಿ ಸೋತ 6ಕ್ಕೂ ಹೆಚ್ಚು ಪ್ರಕರಣಗಳು ಇವೆ)

ದೇವನಹಳ್ಳಿಯಲ್ಲಿ ಕೆಎಐಡಿಬಿ ವತಿಯಿಂದ ನಡೆಯುತ್ತಿರುವ ರೈತರ ಭೂಸ್ವಾಧೀನ ಪ್ರಕ್ರಿಯೆಯು ರಾಜ್ಯದಲ್ಲಿ ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ನಾಂದಿ ಹಾಡಿದೆ. ಈ ಹೋರಾಟವು  2013ರ ಭೂಸ್ವಾಧೀನ ಕಾಯಿದೆಯ ಆಶಯಗಳು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾರ್ಯವೈಖರಿಯ ನಡುವಿನ ಅಂತರವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ವಿಶೇಷವಾಗಿ, ‘ಸಿದ್ದರಾಮಯ್ಯ ಸರಕಾರ-1’ ಮತ್ತು ‘ಸಿದ್ದರಾಮಯ್ಯ ಸರಕಾರ-2’ ಗಳ ಅವಧಿಯು ಕಾರ್ಪೊರೇಟ್ ಹಿತಾಸಕ್ತಿಗಳ ನಡುವಿನ ಸಂಘರ್ಷವನ್ನು ಈ ದೇವನಹಳ್ಳಿ ಪ್ರಕರಣವು ಬಯಲುಮಾಡಿದೆ.

LARR ಕಾಯಿದೆ 2013: ರೈತಪರ ಅಂಶಗಳು

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ‘Right to Fair Compensation and Transparency in Land Acquisition, Rehabilitation and Resettlement Act, 2013’ (ಸಂಕ್ಷಿಪ್ತವಾಗಿ LARR ಕಾಯಿದೆ) ಅನ್ನು ಜಾರಿಗೆ ತಂದಿತು. ಇದು ಭಾರತದ ಭೂಸ್ವಾಧೀನ ಇತಿಹಾಸದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು, ರೈತರಿಗೆ ನ್ಯಾಯಯುತ ಪರಿಹಾರ ಮತ್ತು ಹಕ್ಕುಗಳನ್ನು ಒದಗಿಸುವ ಉದ್ದೇಶ ಹೊಂದಿತ್ತು. ಈ ಕಾಯಿದೆಯ ಪ್ರಮುಖ ಜನಪರ ಅಂಶಗಳು ಹೀಗಿದ್ದವು:

  1. ಸಾಮಾಜಿಕ ಪರಿಣಾಮ ಅಧ್ಯಯನ: ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಮೊದಲು, ಆ ಯೋಜನೆಯಿಂದ ಸಮಾಜದ ಮೇಲೆ, ವಿಶೇಷವಾಗಿ ಸ್ಥಳೀಯ ಜನರ ಜೀವನೋಪಾಯ ಮತ್ತು ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಸಮಗ್ರ ವರದಿ ಕಡ್ಡಾಯವಾಗಿತ್ತು.
  2. ರೈತರ ಒಪ್ಪಿಗೆ: ಭೂಸ್ವಾಧೀನಪಡಿಸಿಕೊಳ್ಳುವ ಮೊದಲು, ಖಾಸಗಿ ಯೋಜನೆಗಳಿಗೆ ಶೇ. 80ರಷ್ಟು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಯೋಜನೆಗಳಿಗೆ ಶೇ. 70ರಷ್ಟು ಭೂಮಾಲೀಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿತ್ತು.
  3. ಪರಿಹಾರ ಧನ: ಸ್ವಾಧೀನಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ಧನ ನೀಡಬೇಕು.
  4. ಬಹು ಬೆಳೆ ಭೂಮಿಗೆ ರಕ್ಷಣೆ: ನೀರಾವರಿ ಇರುವ, ಬಹು ಬೆಳೆ ಬೆಳೆಯುವ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಿರ್ಬಂಧವಿತ್ತು.

ಮೋದಿ ಸರ್ಕಾರ ಮತ್ತು ರಾಜ್ಯಗಳ ಜನವಿರೋಧಿ ತಿದ್ದುಪಡಿಗಳು: 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮೇಲೆ ತಿಳಿಸಿದ ನಾಲ್ಕು ಅಂಶಗಳಲ್ಲಿ ಮೂರು ಪ್ರಮುಖ ಜನಪರ ಅಂಶಗಳನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದಿತು. ಅವು ಕೆಳಗಿನಂತಿವೆ.

  • ಒಪ್ಪಿಗೆ ಶರತ್ತು ರದ್ದು
  • ಸಾಮಾಜಿಕ ಪರಿಣಾಮ ಮೌಲ್ಯಮಾಪನದಿಂದ ವಿನಾಯಿತಿ
  • ಬಹುಬೆಳೆ ಭೂಮಿ ರಕ್ಷಣೆಯಲ್ಲಿ ಸಡಿಲಿಕೆ

ಈ ತಿದ್ದುಪಡಿಗಳು ಲೋಕಸಭೆಯಲ್ಲಿ ಅಂಗೀಕಾರಗೊಂಡರೂ, ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಜೆಪಿಸಿ (Joint Parliamentary Committee) ಗೆ ಒಪ್ಪಿಸಲಾಯಿತು.

ಇದನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು LARR ಕಾಯಿದೆಯ ಈ ರೈತ ವಿರೋಧಿ ತಿದ್ದುಪಡಿಗಳನ್ನು ಯಥಾವತ್ ಜಾರಿಗೆ ತಂದವು. 2016-17ರಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು LARR ಕಾಯಿದೆಗೆ ತಿದ್ದುಪಡಿಯನ್ನು ತಂದಿದ್ದರೆ, ಕೆಲವು ರಾಜ್ಯಗಳು ಹಳೆಯ ಭೂಸ್ವಾಧೀನ ಕಾಯಿದೆಯಡಿಯೇ ಸ್ವಾಧೀನ ಮುಂದುವರೆಸಿದವು. (ಅಂದರೆ ಬ್ರಿಟಷರು ಜಾರಿಗೆ ತಂದಿದ್ದ 1894ರ ಭೂಸ್ವಾಧೀನ ಕಾಯಿದೆ) ಇವು ಹೈಕೋರ್ಟ್‌ನಿಂದ ತಡೆ ಪಡೆದರೂ, ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವು. ಈ 1894ರ ಭೂಸ್ವಾಧೀನ ಕಾಯಿದೆ (Land Acquisition Act of 1894)ಯು ಬ್ರಿಟಿಷ್ ವಸಾಹತುಶಾಹಿ ಆಡಳಿತವು ಭಾರತದಲ್ಲಿ ರೈಲ್ವೇ, ರಸ್ತೆಗಳು, ನೀರಾವರಿ ಯೋಜನೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಭೂಮಿಯ ಅಗತ್ಯವಿತ್ತು. ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಒಂದು ಕಾನೂನು ಚೌಕಟ್ಟನ್ನು ಒದಗಿಸುವ ಉದ್ದೇಶದಿಂದ ಈ ಕಾಯಿದೆಯನ್ನು ರೂಪಿಸಲಾಯಿತು. ಇದು ಸರ್ಕಾರಕ್ಕೆ “ಸಾರ್ವಜನಿಕ ಉದ್ದೇಶಗಳಿಗಾಗಿ” ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ನೀಡಿತ್ತು. ಈ ಕಾಯಿದೆಯು ಭೂಮಾಲೀಕರಿಗೆ ಪರಿಹಾರವನ್ನು ಒದಗಿಸುತ್ತದೆಯಾದರೂ, ಭೂಮಿಯ ನಿಜವಾದ ಬೆಲೆಯನ್ನು ಕಡಿಮೆ ಅಂದಾಜು ಮಾಡುತ್ತಿತ್ತು. ಸ್ವಾತಂತ್ರ್ಯದ ನಂತರವೂ ಭಾರತವು ದೀರ್ಘಕಾಲದವರೆಗೆ ಇದೇ ಕಾಯಿದೆಯನ್ನು ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಮುಂದುವರೆಸಿತು

ಸಿದ್ದರಾಮಯ್ಯ ಎರಡು ಅವಧಿಯ ಸರ್ಕಾರಗಳ ಸೋಗಲಾಡಿ ಜನಪರತೆ: 2013-2018ರ ಅವಧಿಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಬಹುಮತದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಆಡಳಿತದಲ್ಲಿತ್ತು. ಈ ಅವಧಿಯಲ್ಲಿ 5000 ಎಕರೆಗೂ ಹೆಚ್ಚು ರೈತರ ಜಮೀನನ್ನು ವಿಶೇಷ ಕಾಯಿದೆಯಾಗಿರುವ KIADB (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಕಾಯಿದೆಯಡಿ ವಶಪಡಿಸಿಕೊಂಡಿತು.  2019ರ ಫೆಬ್ರವರಿಯಲ್ಲಿ, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಕೂಡ 2013ರ LARR ಕಾಯಿದೆಗೆ ರಾಜ್ಯ ಮಟ್ಟದ ತಿದ್ದುಪಡಿಗಳನ್ನು ತಂದಿತು. ಆಘಾತಕಾರಿಯೆಂದರೆ, ಈ ತಿದ್ದುಪಡಿಗಳು 2014ರಲ್ಲಿ ಮೋದಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ತಂದ ಜನಪರ ಅಂಶಗಳನ್ನು ಕಿತ್ತುಹಾಕುವ ತಿದ್ದುಪಡಿಗಳ ಯಥಾವತ್ ನಕಲಾಗಿದ್ದವು.

ಕರ್ನಾಟಕದಲ್ಲಿ ಭೂಸ್ವಾಧೀನ: ದೇವನಹಳ್ಳಿ ಸನ್ನಿವೇಶ ಮತ್ತು ಗೆಜೆಟ್ ಅಧಿಸೂಚನೆಗಳು

ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳಲ್ಲಿ ಸುಮಾರು 1770 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಬಹು ಹಿಂದಿನಿಂದಲೂ ನಡೆಯುತ್ತಿದೆ. ಕರ್ನಾಟಕ ಸರ್ಕಾರವು ಕೈಗಾರಿಕಾ ಯೋಜನೆಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಖ್ಯವಾಗಿ KIADB ಕಾಯಿದೆಯನ್ನು ಬಳಸಿದೆ. ಈ ಕಾಯಿದೆಯಡಿ, ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ (Preliminary Notification) ಮತ್ತು ಅಂತಿಮ ಅಧಿಸೂಚನೆ (Final Notification) ಗಳನ್ನು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಗಳು ಭೂಮಿ ಸ್ವಾಧೀನಕ್ಕೆ ಒಳಗಾಗುವ ಪ್ರದೇಶಗಳ ನಿಖರ ವಿವರಗಳನ್ನು, ಉದ್ದೇಶಿತ ಯೋಜನೆಯನ್ನು ಮತ್ತು ಯಾವ ಕಾನೂನಿನಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ಗೆ ಸಂಬಂಧಿಸಿದಂತೆ, ಹಲವು ವರ್ಷಗಳಿಂದ ವಿವಿಧ ಹಂತಗಳಲ್ಲಿ ಇಂತಹ ಗೆಜೆಟ್ ಅಧಿಸೂಚನೆಗಳು ಹೊರಬಿದ್ದಿವೆ. ಆದರೆ, 2013ರ LARR ಕಾಯಿದೆಯ ಜನಪರ ಅಂಶಗಳನ್ನು KIADB ಕಾಯಿದೆಗೆ ಅನ್ವಯಿಸದೆ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ಪ್ರಸ್ತುತ, ದೇವನಹಳ್ಳಿಯ ಚನ್ನರಾಯಪಟ್ಟಣ, ಮೆಟ್ಟಿಬಾರ್ಲು ಹಾಗೂ ಪ್ರೋತ್ರೀಯ ತಲ್ಲೋಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ 495 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಸರ್ಕಾರ ಭರವಸೆ ನೀಡಿದೆ. ಅಲ್ಲದೆ, 2013ರ ಭೂಸ್ವಾಧೀನ ಕಾಯ್ದೆಯನ್ವಯ ಪರಿಹಾರ ನೀಡಿಕೆ ಮತ್ತು ಪರ್ಯಾಯ ಭೂಮಿ ನೀಡುವ ಬಗ್ಗೆಯೂ ಪ್ರಸ್ತಾಪಿಸಿದೆ. ಆದರೂ, 13 ಹಳ್ಳಿಗಳ ರೈತರು ತಮ್ಮ ಒಟ್ಟು ಭೂಮಿಯ ರಕ್ಷಣೆಗಾಗಿ ಪೂರ್ಣ ಪ್ರಮಾಣದ ಹೋರಾಟವನ್ನು ಮುಂದುವರಿಸಿದ್ದಾರೆ. ದೇವನಹಳ್ಳಿಯ ಭೂಸ್ವಾಧೀನವನ್ನು ಸರಕಾರ ತನ್ನ ಬಳಿ ಇರುವ ಕಾಯ್ದೆಯಡಿಯೇ ನಡೆಸುತ್ತಿದೆ.

ಈ ದೇವನಹಳ್ಳಿಯ ಭೂಸ್ವಾಧೀನವನ್ನು ಕೈಬಿಡುವ ಯಾವ ಮಾರ್ಗಗಳು ಇಲ್ಲವೆ? ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ. ಭೂಸ್ವಾಧೀನಕ್ಕಾಗಿಯೇ ಬ್ರಿಟಿಷರು ಜಾರಿಗೆ ತಂದಿದ್ದ 1894ರ ಭೂಸ್ವಾಧೀನ ಕಾಯಿದೆಯಡಿಯಲ್ಲಿಯೇ ಭೂಸ್ವಾಧೀನವನ್ನು ಕೈಗೊಂಡು ಸೋತು ಯೋಜನೆಗಳನ್ನು ಕೈಬಿಟ್ಟ ಹಲವು ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ. ಇವುಗಳ ಆಧಾರದಲ್ಲಿ ನೋಡುವುದಾದರೆ ದೇವನಹಳ್ಳಿಯ ಭೂಸ್ವಾಧೀನವನ್ನು ರೈತರ ತೀವ್ರ ಹೋರಾಟದ ಕಾರಣಕ್ಕಾಗಿ ರಾಜ್ಯ ಸರಕಾರವು ಕೈಬಿಡಲೇ ಬೇಕಾಗುತ್ತದೆ. ಈ ಹಿಂದೆ ಗೆಲುವು ಸಾಧಿಸಿ ಪ್ರಮುಖ 6 ಭೂಸ್ವಾಧೀನ ವಿರೋಧಿ ಹೋರಾಟಗಳನ್ನು ಈ ಕೆಳಗೆ ನೀಡಲಾಗಿದೆ.

1.ಪಶ್ಚಿಮ ಬಂಗಾಳದ ಪಾಠ: ಸಿಂಗೂರ್ ಮತ್ತು ನಂದಿಗ್ರಾಮ್‌ನ ರೈತ ವಿಜಯ

ಭಾರತದಲ್ಲಿ ರೈತ ಹೋರಾಟಗಳು ಹೇಗೆ ಬೃಹತ್ ಕೈಗಾರಿಕಾ ಯೋಜನೆಗಳನ್ನು ತಡೆಗಟ್ಟಿದವು ಎಂಬುದಕ್ಕೆ ಪಶ್ಚಿಮ ಬಂಗಾಳದ ಸಿಂಗೂರ್ ಮತ್ತು ನಂದಿಗ್ರಾಮ್ ಪ್ರಕರಣಗಳು ಜೀವಂತ ಉದಾಹರಣೆಗಳಾಗಿವೆ.

ಸಿಂಗೂರ್‌ನಲ್ಲಿ ಟಾಟಾ ನ್ಯಾನೋ ಕಾರ್ಖಾನೆಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪಶ್ಚಿಮ ಬಂಗಾಳದ ಅಂದಿನ ಎಡರಂಗ ಸರ್ಕಾರವು 1894ರ ಭೂಸ್ವಾಧೀನ ಕಾಯಿದೆಯನ್ನು (Land Acquisition Act, 1894) ಬಳಸಲು ಮುಂದಾಗಿತ್ತು. ಈ ಕಾಯಿದೆಯ ಸೆಕ್ಷನ್‌ 4 (ಪ್ರಾಥಮಿಕ ಅಧಿಸೂಚನೆ) ಮತ್ತು ಸೆಕ್ಷನ್‌ 6 (ಅಂತಿಮ ಅಧಿಸೂಚನೆ) ಗಳನ್ನು ಆ ಸರ್ಕಾರವು ಆಹ್ವಾನಿಸಿತ್ತು. ಸಿಂಗೂರ್ ಪ್ರಕರಣದಲ್ಲಿ, ಟಾಟಾ ಮೋಟರ್ಸ್‌ನಂತಹ ಖಾಸಗಿ ಕಂಪನಿಯ ಕಾರ್ಖಾನೆ ಸ್ಥಾಪನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು “ಸಾರ್ವಜನಿಕ ಉದ್ದೇಶ” ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.

ಹೇಗೆ ಭೂಸ್ವಾಧೀನವನ್ನು ಕೈಬಿಡಲಾಯಿತು?

2006ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದಾಗ, ಸಿಂಗೂರ್‌ನ ಸಾವಿರಾರು ರೈತರು, ವಿಶೇಷವಾಗಿ ಫಲವತ್ತಾದ ಬಹುಬೆಳೆ ಬೆಳೆಯುತ್ತಿದ್ದವರು, ತಮ್ಮ ಭೂಮಿ ಕಳೆದುಕೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಂದಿನ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ರೈತರನ್ನು ಸಂಘಟಿಸಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ರಸ್ತೆ ತಡೆಗಳು, ಧರಣಿಗಳು, ಮತ್ತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಗಳು ನಡೆದವು. “ಮೌಖಿಕವಾಗಿ ಅನುಮತಿ ನೀಡಿದ” ರೈತರು ಕೂಡ ನಂತರ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಹೋರಾಟದ ತೀವ್ರತೆ ಹೆಚ್ಚಾದಂತೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿತು. ರತನ್ ಟಾಟಾ ಅವರು ಪ್ರತಿಭಟನೆಗಳಿಂದಾಗಿ ಯೋಜನೆಯನ್ನು ಮುಂದುವರಿಸಲು ಅಸಾಧ್ಯ ಎಂದು ಘೋಷಿಸಿ, ಅಂತಿಮವಾಗಿ 2008ರಲ್ಲಿ ನ್ಯಾನೋ ಕಾರ್ಖಾನೆ ಯೋಜನೆಯನ್ನು ಸಿಂಗೂರ್‌ನಿಂದ ಗುಜರಾತ್‌ನ ಸಾನಂದ್‌ಗೆ ಸ್ಥಳಾಂತರಿಸಿದರು.

2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಧಿಕಾರಕ್ಕೆ ಬಂದ ಕೂಡಲೇ, ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಭೂಮಿ ಹಿಂದಿರುಗಿಸುವ ಉದ್ದೇಶದಿಂದ ‘ಸಿಂಗೂರ್ ಭೂ ಪುನರ್ವಸತಿ ಮತ್ತು ಅಭಿವೃದ್ಧಿ ಕಾಯಿದೆ, 2011 (Singur Land Rehabilitation and Development Act, 2011)’ ಅನ್ನು ಜಾರಿಗೆ ತಂದಿತು. ಈ ಕಾಯಿದೆಯು ಹಿಂದಿನ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮತ್ತೆ ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಮತ್ತು ಅದನ್ನು ರೈತರಿಗೆ ಹಿಂದಿರುಗಿಸಲು ಅನುಮತಿ ನೀಡಿತು.

ಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದ 2011ರ ಕಾಯಿದೆಯನ್ನು ಟಾಟಾ ಮೋಟರ್ಸ್ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಕಲ್ಕತ್ತಾ ಹೈಕೋರ್ಟ್ 2011ರ ಕಾಯಿದೆಯನ್ನು “ಅಸಂವಿಧಾನಿಕ ಮತ್ತು ಅನೂರ್ಜಿತ” ಎಂದು ಘೋಷಿಸಿ ಅದನ್ನು ರದ್ದುಪಡಿಸಿತು. ಏಕೆಂದರೆ, ಇದು ಕೇಂದ್ರದ 1894ರ ಭೂಸ್ವಾಧೀನ ಕಾಯಿದೆಗೆ ವಿರುದ್ಧವಾಗಿತ್ತು ಮತ್ತು ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆದಿರಲಿಲ್ಲ. ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. 2016ರ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಸಿಂಗೂರ್‌ನಲ್ಲಿ 2006ರಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಯು ಅಕ್ರಮ ಮತ್ತು ಅನೂರ್ಜಿತ ಎಂದು ಘೋಷಿಸಿತು. ಭೂಮಿಯನ್ನು ನೇರವಾಗಿ ಖಾಸಗಿ ಕಂಪನಿಯಾದ ಟಾಟಾ ಮೋಟರ್ಸ್‌ಗೆ ವರ್ಗಾಯಿಸುವುದು 1894ರ ಕಾಯಿದೆಯ “ಸಾರ್ವಜನಿಕ ಉದ್ದೇಶ”ದ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಇದು ಖಾಸಗಿ ಉದ್ದೇಶಕ್ಕಾಗಿ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ತೀರ್ಮಾನಿಸಿತು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾಯಿದೆಯಡಿ ಪಾಲಿಸಬೇಕಾದ ಕೆಲವು ಕಡ್ಡಾಯ ಕಾರ್ಯವಿಧಾನಗಳನ್ನು, ವಿಶೇಷವಾಗಿ ಭೂಮಾಲೀಕರ ಆಕ್ಷೇಪಣೆಗಳನ್ನು ಸರಿಯಾಗಿ ಪರಿಗಣಿಸದಿರುವುದು ಮತ್ತು ಸೂಕ್ತ ವಿಚಾರಣೆ ನಡೆಸದಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಗಮನಿಸಿತು. ನ್ಯಾಯಾಲಯವು 997 ಎಕರೆ ಭೂಮಿಯನ್ನು ರೈತರಿಗೆ 12 ವಾರಗಳಲ್ಲಿ ಹಿಂದಿರುಗಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತು. ಭೂಮಿಯನ್ನು ಹಿಂದಿರುಗಿಸಿದರೂ, ಭೂಮಾಲೀಕರು ಈಗಾಗಲೇ ಪಡೆದಿರುವ ಪರಿಹಾರವನ್ನು ಮರುಪಾವತಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು, ಏಕೆಂದರೆ ಅವರು ದೀರ್ಘಕಾಲದವರೆಗೆ ತಮ್ಮ ಜೀವನೋಪಾಯದಿಂದ ವಂಚಿತರಾಗಿದ್ದರು. ಈ ಸುಪ್ರೀಂ ಕೋರ್ಟ್ ತೀರ್ಪು ಸಿಂಗೂರ್ ಪ್ರಕರಣಕ್ಕೆ ಅಂತಿಮ ತೆರೆ ಎಳೆಯಿತು ಮತ್ತು ಭಾರತದಲ್ಲಿ ಭೂಸ್ವಾಧೀನ ಕಾನೂನುಗಳ ಸುಧಾರಣೆಯ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿತು, ಇದು 2013ರ ಹೊಸ ಭೂಸ್ವಾಧೀನ ಕಾಯಿದೆಗೆ ಪ್ರೇರಣೆಯಾಯಿತು.

2.ನಂದಿಗ್ರಾಮ್ ಭೂ ಸ್ವಾಧೀನ: ರೈತರ ಪ್ರತಿಭಟನೆಗಳು

ಸಿಂಗೂರ್ ಪ್ರಕರಣದಂತೆ, ನಂದಿಗ್ರಾಮ್ ಘಟನೆಯೂ ಸಹ ಪಶ್ಚಿಮ ಬಂಗಾಳದಲ್ಲಿ ಮತ್ತು ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿತು. ಸಿಂಗೂರ್‌ನಲ್ಲಿ ಟಾಟಾ ನ್ಯಾನೋ ಕಾರ್ಖಾನೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ, ನಂದಿಗ್ರಾಮ್‌ನಲ್ಲಿ ಇನ್ನೊಂದು ಬೃಹತ್ ಕೈಗಾರಿಕಾ ಯೋಜನೆಗೆ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನ ವಿವಾದಕ್ಕೀಡಾಯಿತು. ನಂದಿಗ್ರಾಮ್‌ನಲ್ಲಿ ಸುಮಾರು 10,000 ಎಕರೆಗಳಷ್ಟು (ಸುಮಾರು 4,000 ಹೆಕ್ಟೇರ್‌) ಕೃಷಿ ಭೂಮಿಯನ್ನು ಇಂಡೋನೇಷಿಯಾದ ಸಲೀಮ್ ಗ್ರೂಪ್‌ಗಾಗಿ ರಾಸಾಯನಿಕ ಹಬ್ (Chemical Hub) ಸ್ಥಾಪಿಸಲು ಪಶ್ಚಿಮ ಬಂಗಾಳದ ಅಂದಿನ ಎಡರಂಗ ಸರ್ಕಾರವು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿತ್ತು. ಈ ಯೋಜನೆಯು ವಿಶೇಷ ಆರ್ಥಿಕ ವಲಯ (Special Economic Zone – SEZ) ನೀತಿಯ ಅಡಿಯಲ್ಲಿ ಬರಬೇಕಿತ್ತು.

ಸಿಂಗೂರ್‌ನಂತೆಯೇ, ನಂದಿಗ್ರಾಮ್‌ನಲ್ಲೂ 1894ರ ಭೂಸ್ವಾಧೀನ ಕಾಯಿದೆಯನ್ನೇ ಭೂಮಿ ವಶಪಡಿಸಿಕೊಳ್ಳಲು ಬಳಸಲು ಸರ್ಕಾರ ಮುಂದಾಗಿತ್ತು. “ಸಾರ್ವಜನಿಕ ಉದ್ದೇಶ”ದ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಭೂಮಿಯನ್ನು ಒದಗಿಸಲು ಈ ಕಾಯಿದೆಯನ್ನು ಬಳಸಲಾಗುತ್ತಿತ್ತು. 2005ರಲ್ಲಿ ಜಾರಿಗೆ ಬಂದ SEZ ಕಾಯಿದೆಯು ಕೈಗಾರಿಕಾ ಯೋಜನೆಗಳಿಗಾಗಿ ಭೂಸ್ವಾಧೀನಕ್ಕೆ ಸರ್ಕಾರಗಳಿಗೆ ವಿಶೇಷ ಅಧಿಕಾರಗಳನ್ನು ನೀಡಿತ್ತು. ಇದು ಭೂಸ್ವಾಧೀನ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶ ಹೊಂದಿತ್ತು, ಆದರೆ ರೈತರ ಹಕ್ಕುಗಳನ್ನು ನಿರ್ಲಕ್ಷಿಸುತ್ತದೆ ಎಂಬ ಆರೋಪಗಳಿದ್ದವು. ನಂದಿಗ್ರಾಮ್ ಯೋಜನೆಯು ಇದೇ SEZ ನೀತಿಯ ಭಾಗವಾಗಿತ್ತು. ಆದರೆ, ನಂದಿಗ್ರಾಮ್‌ನಲ್ಲಿ ಭೂಸ್ವಾಧೀನಕ್ಕಾಗಿ ಯಾವುದೇ ಅಂತಿಮ ಅಧಿಸೂಚನೆ (Final Notification) ಹೊರಡಿಸಿರಲಿಲ್ಲ. ಹಲ್ದಿಯಾ ಡೆವಲಪ್‌ಮೆಂಟ್ ಅಥಾರಿಟಿ (Haldia Development Authority – HDA) ಯಿಂದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಆಶಯದ ಕುರಿತು ಪ್ರಾಥಮಿಕ ಸೂಚನೆ ಮಾತ್ರ ಹೊರಡಿಸಲಾಗಿತ್ತು. ಈ ಸೂಚನೆ ಹೊರಬಿದ್ದ ಕೂಡಲೇ ವ್ಯಾಪಕ ವಿರೋಧ ವ್ಯಕ್ತವಾಯಿತು.

ಹೇಗೆ ಭೂಸ್ವಾಧೀನವನ್ನು ಕೈಬಿಡಲಾಯಿತು?

ನಂದಿಗ್ರಾಮ್‌ನಲ್ಲಿನ ಭೂಸ್ವಾಧೀನ ಪ್ರಕ್ರಿಯೆಯು ತೀವ್ರ ಹಿಂಸಾಚಾರ ಮತ್ತು ಪ್ರಬಲ ಪ್ರತಿಭಟನೆಗಳಿಂದಾಗಿ ಕೊನೆಗೊಂಡಿತು. ಯೋಜನೆಯ ಅಧಿಸೂಚನೆ ಹೊರಬಿದ್ದ ಕೂಡಲೇ, ಸ್ಥಳೀಯ ರೈತರು ಮತ್ತು ಸ್ಥಳೀಯರು ಬೃಹತ್ ಪ್ರತಿಭಟನೆಗಳನ್ನು ಆರಂಭಿಸಿದರು. ಈ ಪ್ರತಿಭಟನೆಗಳನ್ನು ಭೂಮಿ ಉಚ್ಛೇದ್ ಪ್ರತಿರೋಧ್ ಕಮಿಟಿ (Bhumi Uchhed Pratirodh Committee – BUPC) ಎಂಬ ಸಂಘಟನೆ ಮುನ್ನಡೆಸಿತು. ಇದರಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಇತರ ವಿರೋಧ ಪಕ್ಷಗಳು, ಮತ್ತು ಮಾವೋವಾದಿಗಳು ಕೂಡ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

ರೈತರು ರಸ್ತೆಗಳನ್ನು ಅಗೆದು, ಸೇತುವೆಗಳನ್ನು ಧ್ವಂಸಗೊಳಿಸಿ, ನಂದಿಗ್ರಾಮ್ ಪ್ರದೇಶಕ್ಕೆ ಸಂಪರ್ಕ ಕಡಿತಗೊಳಿಸಿ ಸಂಪೂರ್ಣವಾಗಿ ತಮ್ಮ ಪ್ರದೇಶವನ್ನು ಸರ್ಕಾರದಿಂದ ಪ್ರತ್ಯೇಕಿಸಿಕೊಂಡರು. 2007ರ ಆರಂಭದಿಂದಲೇ ಪ್ರತಿಭಟನೆಗಳು ತೀವ್ರಗೊಂಡವು, ಮತ್ತು ಪೊಲೀಸರು ಹಾಗೂ ಆಡಳಿತವು ಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರನ್ನು ಗ್ರಾಮಗಳಿಂದ ಹೊರಹಾಕಲಾಯಿತು. ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆಯಲು, ಮಾರ್ಚ್ 14, 2007ರಂದು ಪಶ್ಚಿಮ ಬಂಗಾಳ ಸರ್ಕಾರವು 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ ನಂದಿಗ್ರಾಮ್‌ಗೆ ನುಗ್ಗಲು ಪ್ರಯತ್ನಿಸಿತು. ಪೊಲೀಸ್ ಮತ್ತು ಪ್ರತಿಭಟನಕಾರರ ನಡುವೆ ಭೀಕರ ಘರ್ಷಣೆಗಳು ನಡೆದವು. ಈ ಘರ್ಷಣೆಗಳಲ್ಲಿ ಕನಿಷ್ಠ 14 ಜನರು ಪೊಲೀಸ್ ಗುಂಡೇಟಿಗೆ ಬಲಿಯಾದರು (ಆರೋಪಗಳ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿತ್ತು). ಅನೇಕರು ಗಾಯಗೊಂಡರು. ಈ ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಕಲ್ಕತ್ತಾ ಹೈಕೋರ್ಟ್ ಈ ಘಟನೆಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಪೊಲೀಸ್ ಗುಂಡೇಟು ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿತು ಮತ್ತು ಸಿಬಿಐ ತನಿಖೆಗೆ ಆದೇಶಿಸಿತು. ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆದೇಶಿಸಿತು.

ನಂದಿಗ್ರಾಮ್‌ನಲ್ಲಿ ನಡೆದ ಹಿಂಸಾಚಾರ ಮತ್ತು ಪೊಲೀಸ್ ಫೈರಿಂಗ್ ಘಟನೆಗಳ ನಂತರ, ವಿರೋಧ ಪಕ್ಷಗಳ ಮತ್ತು ನಾಗರಿಕ ಸಮಾಜದ ವ್ಯಾಪಕ ಟೀಕೆಗಳು ವ್ಯಕ್ತವಾದವು. ಈ ಘಟನೆಗಳ ತೀವ್ರತೆಯಿಂದಾಗಿ, ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಅವರು, ಜನರ ಇಚ್ಛೆಗೆ ವಿರುದ್ಧವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದರು. 2007ರ ಮಾರ್ಚ್ ಆರಂಭದಲ್ಲಿಯೇ ಪಶ್ಚಿಮ ಬಂಗಾಳ ಸರ್ಕಾರವು ನಂದಿಗ್ರಾಮ್‌ನಲ್ಲಿನ ರಾಸಾಯನಿಕ ಹಬ್ ಯೋಜನೆಯನ್ನು ರದ್ದುಪಡಿಸುವುದಾಗಿ ಘೋಷಿಸಿತು. ಹಲ್ದಿಯಾ ಡೆವಲಪ್‌ಮೆಂಟ್ ಅಥಾರಿಟಿ ಹೊರಡಿಸಿದ್ದ ಭೂಸ್ವಾಧೀನ ಸೂಚನೆಯನ್ನು ಹಿಂಪಡೆಯಲಾಯಿತು.

ಈ ಪ್ರಕರಣಗಳು ಭೂಸ್ವಾಧೀನ ಕಾನೂನುಗಳಲ್ಲಿ ಬದಲಾವಣೆಯ ಅಗತ್ಯವನ್ನು ಇನ್ನಷ್ಟು ಬಲಪಡಿಸಿದವು. 2013ರ LARR ಕಾಯಿದೆ ರೂಪಿಸುವಲ್ಲಿ ಈ ಘಟನೆಗಳು ಪ್ರಮುಖ ಪಾತ್ರವಹಿಸಿದವು.

ನಂದಿಗ್ರಾಮ್ ಪ್ರಕರಣವು ಕೇವಲ ಭೂಸ್ವಾಧೀನ ವಿವಾದವಾಗಿರದೆ, ರೈತರ ಹಕ್ಕುಗಳು, ಸರ್ಕಾರದ ಅಭಿವೃದ್ಧಿ ನೀತಿಗಳು ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆಯ ಮಹತ್ವದ ಕುರಿತಾದ ಒಂದು ರಾಷ್ಟ್ರೀಯ ಸಂವಾದಕ್ಕೆ ನಾಂದಿ ಹಾಡಿತು.

3.ಗ್ರೇಟರ್ ನೋಯ್ಡಾ ಭೂ ಸ್ವಾಧೀನ: ರೈತರ ಪ್ರತಿಭಟನೆಗಳು

ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ) ಪ್ರದೇಶದಲ್ಲಿ ನಡೆದ ಭೂಸ್ವಾಧೀನ ವಿರೋಧಿಸಿ ನಡೆದ ರೈತರ ಪ್ರತಿಭಟನೆಗಳು ಸಿಂಗೂರ್ ಮತ್ತು ನಂದಿಗ್ರಾಮ್ ಪ್ರಕರಣಗಳಿಗಿಂತ ಸ್ವಲ್ಪ ವಿಭಿನ್ನವಾಗಿವೆ. ಇಲ್ಲಿನ ಹೋರಾಟಗಳು ಭೂಸ್ವಾಧೀನವನ್ನು ಸಂಪೂರ್ಣವಾಗಿ ರದ್ದುಪಡಿಸುವುದಕ್ಕಿಂತ ಹೆಚ್ಚಾಗಿ, ಹೆಚ್ಚು ನ್ಯಾಯಯುತ ಪರಿಹಾರ, ಅಭಿವೃದ್ಧಿಪಡಿಸಿದ ಪ್ಲಾಟ್‌ಗಳು ಮತ್ತು ಉತ್ತಮ ಪುನರ್ವಸತಿ ಸೌಲಭ್ಯಗಳಿಗಾಗಿ ಕೇಂದ್ರೀಕೃತವಾಗಿವೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ಹೆಚ್ಚಿನ ಭೂಸ್ವಾಧೀನಗಳು 1894ರ ಭೂಸ್ವಾಧೀನ ಕಾಯಿದೆಯ (Land Acquisition Act, 1894) ಅಡಿಯಲ್ಲಿ ನಡೆದಿವೆ. ಉತ್ತರ ಪ್ರದೇಶ ಸರ್ಕಾರವು, “ಸಾರ್ವಜನಿಕ ಉದ್ದೇಶಗಳಿಗಾಗಿ” ಎಂದು ಘೋಷಿಸಿ, ಪ್ರಾಧಿಕಾರಗಳ ಮೂಲಕ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.

ರೈತ ಸಂಘಟನೆಗಳು ಮತ್ತು ನ್ಯಾಯಾಲಯಗಳು 1894ರ ಕಾಯಿದೆಯ “ಅರ್ಜೆನ್ಸಿ ಕ್ಲಾಸ್” (ತುರ್ತು ಷರತ್ತು) ಅನ್ನು ಸರ್ಕಾರಗಳು ಮತ್ತು ಪ್ರಾಧಿಕಾರಗಳು ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿವೆ. ಈ ಷರತ್ತು ಸಾಮಾನ್ಯ ಭೂಸ್ವಾಧೀನ ಪ್ರಕ್ರಿಯೆಗಳನ್ನು (ಉದಾಹರಣೆಗೆ ಸಾಮಾಜಿಕ ಪರಿಣಾಮ ಅಧ್ಯಯನ, ಆಕ್ಷೇಪಣೆಗಳನ್ನು ಆಲಿಸುವುದು) ಬೈಪಾಸ್ ಮಾಡಲು ಅವಕಾಶ ನೀಡುತ್ತದೆ. ಈ ಮೂಲಕ ರೈತರಿಗೆ ತಮ್ಮ ಅಹವಾಲುಗಳನ್ನು ಮಂಡಿಸಲು ಸಾಕಷ್ಟು ಅವಕಾಶ ಸಿಕ್ಕಿಲ್ಲ ಎಂದು ಪ್ರತಿಭಟನಕಾರರು ವಾದಿಸಿದ್ದರು. ಅನೇಕ ಸಂದರ್ಭಗಳಲ್ಲಿ, “ಯೋಜಿತ ಕೈಗಾರಿಕಾ ಅಭಿವೃದ್ಧಿ” ಎಂಬ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ನಂತರ ಅದನ್ನು ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ಇದು ರೈತರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು, ಏಕೆಂದರೆ ಅವರು ಕಡಿಮೆ ಪರಿಹಾರಕ್ಕೆ ಭೂಮಿ ಕಳೆದುಕೊಂಡು, ಅದೇ ಭೂಮಿಯನ್ನು ಖಾಸಗಿ ಕಂಪನಿಗಳು ಲಾಭ ಗಳಿಸಲು ಬಳಸುತ್ತಿವೆ ಎಂದು ಭಾವಿಸಿದರು.

2013ರಲ್ಲಿ ಹೊಸ ಭೂಸ್ವಾಧೀನ ಕಾಯಿದೆ (LARR Act, 2013) ಜಾರಿಗೆ ಬಂದ ನಂತರವೂ, ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಹಿಂದಿನ ಕಾಯಿದೆಯಡಿ ಆರಂಭಿಸಲಾದ ಪ್ರಕ್ರಿಯೆಗಳು ಮುಂದುವರಿದವು. ಹೊಸ ಕಾಯಿದೆ ರೈತರಿಗೆ ಹೆಚ್ಚಿನ ಪರಿಹಾರ, SIA ಮತ್ತು ಒಪ್ಪಿಗೆ ಷರತ್ತುಗಳನ್ನು ಕಡ್ಡಾಯಗೊಳಿಸಿದ್ದರೂ, ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಾದಗಳು ಮುಂದುವರಿದವು.

ಗ್ರೇಟರ್ ನೋಯ್ಡಾದಲ್ಲಿನ ರೈತ ಹೋರಾಟಗಳು ಸಿಂಗೂರ್ ಅಥವಾ ನಂದಿಗ್ರಾಮ್‌ಗಿಂತ ಭಿನ್ನವಾಗಿ, ಸಂಪೂರ್ಣ ಯೋಜನೆಗಳ ರದ್ದತಿಗಿಂತ ಹೆಚ್ಚಾಗಿ, ಸಮರ್ಪಕ ಪರಿಹಾರ ಮತ್ತು ಪುನರ್ವಸತಿಯನ್ನು ಕೇಂದ್ರೀಕರಿಸಿದವು. ಪ್ರಮುಖ ಬೇಡಿಕೆಗಳು ಇವುಗಳಾಗಿದ್ದವು:

  1. ಭೂಮಿಗೆ ನೀಡಲಾದ ಪರಿಹಾರವು ಮಾರುಕಟ್ಟೆ ದರಕ್ಕಿಂತ ಕಡಿಮೆಯಿದೆ ಎಂದು ರೈತರು ವಾದಿಸಿದರು ಮತ್ತು ಹೆಚ್ಚಿನ ಪರಿಹಾರಕ್ಕಾಗಿ ನಿರಂತರವಾಗಿ ಒತ್ತಾಯಿಸಿದರು.
  2. ರೈತರು ತಮ್ಮ ಸ್ವಾಧೀನಪಡಿಸಿಕೊಂಡ ಭೂಮಿಯ ಶೇಕಡಾವಾರು ಭಾಗವನ್ನು (ಸಾಮಾನ್ಯವಾಗಿ 6% ಅಥವಾ 10%) ಅಭಿವೃದ್ಧಿಪಡಿಸಿದ ವಸತಿ ಅಥವಾ ವಾಣಿಜ್ಯ ಪ್ಲಾಟ್‌ಗಳ ರೂಪದಲ್ಲಿ ನೀಡಬೇಕೆಂದು ಆಗ್ರಹಿಸಿದರು. ಇದು ಅವರ ಭವಿಷ್ಯದ ಜೀವನೋಪಾಯಕ್ಕೆ ಆಧಾರವಾಗಲಿದೆ ಎಂಬುದು ಅವರ ವಾದವಾಗಿತ್ತು.
  3. ಭೂಮಿ ಕಳೆದುಕೊಂಡ ಕುಟುಂಬಗಳಿಗೆ, ವಿಶೇಷವಾಗಿ ಯುವಕರಿಗೆ, ಕೈಗಾರಿಕಾ ಯೋಜನೆಗಳಲ್ಲಿ ಅಥವಾ ಪ್ರಾಧಿಕಾರಗಳಲ್ಲಿ ಉದ್ಯೋಗ ನೀಡುವಂತೆ ಬೇಡಿಕೆ ಇಟ್ಟರು.
  4. ಘೋಷಿಸಿದ ಪರಿಹಾರವನ್ನು ನೀಡುವಲ್ಲಿ ಆಗುತ್ತಿದ್ದ ವಿಳಂಬವೂ ಪ್ರತಿಭಟನೆಗಳಿಗೆ ಕಾರಣವಾಯಿತು.

ಗ್ರೇಟರ್ ನೋಯ್ಡಾ ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮಗಳ ರೈತರು ಭೂಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ಇದು ಗ್ರೇಟರ್ ನೋಯ್ಡಾ ಭೂಸ್ವಾಧೀನದಲ್ಲಿ ಒಂದು ಪ್ರಮುಖ ಪ್ರಕರಣ. ಅಲಹಾಬಾದ್ ಹೈಕೋರ್ಟ್ ಸಹ್ಬೇರಿ ಗ್ರಾಮದಲ್ಲಿ “ತುರ್ತು ಷರತ್ತು” ಅಡಿಯಲ್ಲಿ ನಡೆದ ಭೂಸ್ವಾಧೀನವನ್ನು ರದ್ದುಪಡಿಸಿತು, ಏಕೆಂದರೆ ಈ ಷರತ್ತಿನ ದುರುಪಯೋಗವು “ಸಾರ್ವಜನಿಕ ಉದ್ದೇಶ”ದ ವ್ಯಾಖ್ಯಾನವನ್ನು ಉಲ್ಲಂಘಿಸುತ್ತದೆ ಎಂದು ಕಂಡುಕೊಂಡಿತು. ಇದು ಇತರ ಹಲವು ಗ್ರಾಮಗಳ ಭೂಸ್ವಾಧೀನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಉತ್ತೇಜನ ನೀಡಿತು.

ಅನೇಕ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಸರ್ಕಾರ ಮತ್ತು ಪ್ರಾಧಿಕಾರಗಳು ರೈತರಿಗೆ ನೀಡಿದ ಪರಿಹಾರವನ್ನು ಹೆಚ್ಚಿಸುವಂತೆ ಆದೇಶಿಸಿದವು (ಉದಾಹರಣೆಗೆ, 64.7% ರಷ್ಟು ಹೆಚ್ಚುವರಿ ಪರಿಹಾರ). ಅಲ್ಲದೆ, 6% ಅಭಿವೃದ್ಧಿಪಡಿಸಿದ ಪ್ಲಾಟ್‌ಗಳನ್ನು ನೀಡುವಂತೆ ಹಲವು ತೀರ್ಪುಗಳು ಹೊರಬಿದ್ದವು. 2023 ಮತ್ತು 2024ರಲ್ಲಿಯೂ ಗ್ರೇಟರ್ ನೋಯ್ಡಾ, ನೋಯ್ಡಾ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರಗಳ ಕಚೇರಿಗಳ ಹೊರಗೆ ಸಾವಿರಾರು ರೈತರು ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ರಸ್ತಾ ರೋಕೋ, ಪಾದಯಾತ್ರೆಗಳು ಮತ್ತು ಅನಿರ್ದಿಷ್ಟಾವಧಿ ಧರಣಿಗಳು ಸಾಮಾನ್ಯವಾಗಿದ್ದವು. ಭಾರತೀಯ ಕಿಸಾನ್ ಯೂನಿಯನ್ (BKU) ನಂತಹ ರೈತ ಸಂಘಟನೆಗಳು ಈ ಹೋರಾಟಗಳನ್ನು ಮುನ್ನಡೆಸಿವೆ.

ಸಿಂಗೂರ್ ಅಥವಾ ನಂದಿಗ್ರಾಮ್‌ಗೆ ಹೋಲಿಸಿದರೆ, ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಭೂಸ್ವಾಧೀನಪಡಿಸಿಕೊಂಡ ಬೃಹತ್ ಯೋಜನೆಗಳು (ಉದಾಹರಣೆಗೆ ಎಕ್ಸ್‌ಪ್ರೆಸ್‌ವೇಗಳು, ವಿಮಾನ ನಿಲ್ದಾಣಗಳು, ದೊಡ್ಡ ಕೈಗಾರಿಕಾ ವಲಯಗಳು) ಸಂಪೂರ್ಣವಾಗಿ ರದ್ದುಗೊಂಡ ಪ್ರಕರಣಗಳು ಕಡಿಮೆ. ಬದಲಾಗಿ, ಪ್ರತಿಭಟನೆಗಳು ಮುಖ್ಯವಾಗಿ ಹೆಚ್ಚು ನ್ಯಾಯಯುತ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ನ್ಯಾಯಾಲಯಗಳ ಮಧ್ಯಸ್ಥಿಕೆ ಮತ್ತು ನಿರಂತರ ರೈತ ಹೋರಾಟಗಳು ಸರ್ಕಾರದ ಭೂಸ್ವಾಧೀನ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮತ್ತು ರೈತರಿಗೆ ಉತ್ತಮ ವ್ಯವಹಾರಗಳನ್ನು ಪಡೆಯಲು ಸಹಾಯ ಮಾಡಿವೆ. ಗ್ರೇಟರ್ ನೋಯ್ಡಾ ಪ್ರಕರಣಗಳು, 2013ರ ಕಾಯಿದೆ ಜಾರಿಗೆ ಬಂದ ನಂತರವೂ, ಹಿಂದಿನ ಭೂಸ್ವಾಧೀನ ಕಾಯಿದೆಯಡಿ ನಡೆದ ಪ್ರಕ್ರಿಯೆಗಳಿಂದ ಉಂಟಾದ ವಿವಾದಗಳು ಇನ್ನೂ ಮುಂದುವರಿದಿವೆ ಎಂಬುದನ್ನು ಎತ್ತಿ ತೋರಿಸಿದೆ.

4.ಪಂಜಾಬ್‌ನಲ್ಲಿ ಎಕ್ಸ್‌ಪ್ರೆಸ್‌ವೇ ಯೋಜನೆಗಳು: ರೈತರ ಪ್ರತಿಭಟನೆಗಳು

ಪಂಜಾಬ್‌ನಲ್ಲಿ ಎಕ್ಸ್‌ಪ್ರೆಸ್‌ವೇ ಯೋಜನೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಭೂಸ್ವಾಧೀನ ವಿವಾದಗಳು ಮತ್ತು ರೈತರ ಪ್ರತಿಭಟನೆಗಳು ಭಾರತದ ಪ್ರಮುಖ ಭೂ ವಿವಾದಗಳಲ್ಲಿ ಒಂದಾಗಿವೆ. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ (DAK Expressway) ಸೇರಿದಂತೆ ಹಲವು ಹೆದ್ದಾರಿ ಯೋಜನೆಗಳು ಈ ಪ್ರತಿಭಟನೆಗಳಿಂದಾಗಿ ವಿಳಂಬವಾಗಿವೆ ಅಥವಾ ಕೆಲವು ಕಡೆ ಸ್ಥಗಿತಗೊಂಡಿವೆ.

ಪಂಜಾಬ್ ಭಾರತದ ಪ್ರಮುಖ ಕೃಷಿ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಬಹುಪಾಲು ಭೂಮಿ ಫಲವತ್ತಾಗಿದ್ದು, ರೈತರು ತೀವ್ರವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಅಥವಾ ಮೂಲಸೌಕರ್ಯ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವಾಗ ರೈತರಲ್ಲಿ ತೀವ್ರ ವಿರೋಧ ವ್ಯಕ್ತವಾಗುವುದು ಸಹಜ.

ಪಂಜಾಬ್‌ನಲ್ಲಿ ಹೆದ್ದಾರಿ ಯೋಜನೆಗಳಿಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಕಾಯಿದೆ, 1956 (National Highways Act, 1956) ಅನ್ನು ಬಳಸಲಾಗುತ್ತದೆ. ಈ ಕಾಯಿದೆಯು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ದಿಷ್ಟ ಕಾರ್ಯವಿಧಾನಗಳನ್ನು ಒದಗಿಸುತ್ತದೆ.

ರಾಷ್ಟ್ರೀಯ ಹೆದ್ದಾರಿ ಕಾಯಿದೆ, 1956 ಅಡಿಯಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡರೂ, ಪರಿಹಾರ ಮತ್ತು ಪುನರ್ವಸತಿ ಸಂಬಂಧಿತ ನಿಬಂಧನೆಗಳು ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ಸ್ಥಾಪನೆಯಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯಿದೆ, 2013ರ ಅಡಿಯಲ್ಲಿ ಬರುತ್ತವೆ. ಅಂದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭೂಮಿ ಸ್ವಾಧೀನಕ್ಕೆ ತನ್ನದೇ ಕಾಯಿದೆಯನ್ನು ಬಳಸಬಹುದಾದರೂ, ಪರಿಹಾರ ಮತ್ತು ಪುನರ್ವಸತಿಯನ್ನು LARR ಕಾಯಿದೆಯ ನಿಯಮಗಳ ಪ್ರಕಾರ (ಮಾರುಕಟ್ಟೆ ಬೆಲೆಯ 2 ರಿಂದ 4 ಪಟ್ಟು ಪರಿಹಾರ ಸೇರಿದಂತೆ) ನೀಡಬೇಕಾಗುತ್ತದೆ.

LARR ಕಾಯಿದೆ, 2013ರಲ್ಲಿ ಕೆಲವೊಂದು ವರ್ಗದ ಯೋಜನೆಗಳಿಗೆ (ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ) ರೈತರ ಒಪ್ಪಿಗೆ ಮತ್ತು ಸಾಮಾಜಿಕ ಪರಿಣಾಮ ಅಧ್ಯಯನ ಪ್ರಕ್ರಿಯೆಗಳಿಂದ ವಿನಾಯಿತಿ ನೀಡಲಾಗಿದೆ. ಇದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಪಂಜಾಬ್‌ನಲ್ಲಿ ರೈತರು ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಗಳು ಭೂಸ್ವಾಧೀನ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಿವೆ.

ಪಂಜಾಬ್‌ನ ರೈತರು ತಮ್ಮ ಫಲವತ್ತಾದ ಭೂಮಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡುವಂತೆ ಆಗ್ರಹಿಸುತ್ತಿದ್ದಾರೆ. ಫಲವತ್ತಾದ ಭೂಮಿಯನ್ನು ನೀಡಲು ನಿರಾಕರಣೆ: ಅನೇಕ ರೈತರು ತಮ್ಮ ಬಹು ಬೆಳೆ ಬೆಳೆಯುವ ಫಲವತ್ತಾದ ಭೂಮಿಯನ್ನು ಎಕ್ಸ್‌ಪ್ರೆಸ್‌ವೇ ಯೋಜನೆಗಳಿಗೆ ನೀಡಲು ನಿರಾಕರಿಸಿದ್ದಾರೆ ರೈತ ಸಂಘಟನೆಗಳು, ವಿಶೇಷವಾಗಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ (KMSC) ಮತ್ತು ಭಾರತಿಯ ಕಿಸಾನ್ ಯೂನಿಯನ್ (BKU) ನಂತಹ ಸಂಸ್ಥೆಗಳು, ಭೂಸ್ವಾಧೀನ ಪ್ರಕ್ರಿಯೆ ಮತ್ತು ನಿರ್ಮಾಣ ಕಾರ್ಯಗಳಿಗೆ ನೇರವಾಗಿ ಅಡ್ಡಿಪಡಿಸಿವೆ. ರಸ್ತೆ ತಡೆಗಳು, ಧರಣಿಗಳು, ಸರ್ಕಾರದ ಕಚೇರಿಗಳ ಎದುರು ಪ್ರತಿಭಟನೆಗಳು ಮತ್ತು ಜೆಸಿಬಿ ಯಂತ್ರಗಳನ್ನು ನಿರ್ಬಂಧಿಸುವುದು ಸಾಮಾನ್ಯವಾಗಿದೆ.

ಕೆಲವು ಪ್ರಕರಣಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭೂಮಿ ಪಡೆಯಲು ಅಸಾಧ್ಯವಾದ ಕಾರಣ ಕೆಲವೆಡೆ ಟೆಂಡರ್‌ಗಳನ್ನೇ ರದ್ದುಗೊಳಿಸಿದೆ ಅಥವಾ ಹಿಂತೆಗೆದುಕೊಂಡಿದೆ. ಉದಾಹರಣೆಗೆ, ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಯ ಅಮೃತಸರ-ಟರ್ನ್ ತಾರನ್ ವಿಸ್ತರಣೆಯಂತಹ ಕೆಲವು ಭಾಗಗಳಲ್ಲಿ ಭೂಸ್ವಾಧೀನ ಸಮಸ್ಯೆಗಳಿಂದಾಗಿ ಟೆಂಡರ್‌ಗಳನ್ನು ರದ್ದುಪಡಿಸಲಾಗಿದೆ. ನವೆಂಬರ್ 2024 ರ ವರದಿಯ ಪ್ರಕಾರ, ಪಂಜಾಬ್‌ನಲ್ಲಿ 104 ಕಿ.ಮೀ ಉದ್ದದ, ₹3,264 ಕೋಟಿ ಮೌಲ್ಯದ ಮೂರು ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆಗಳನ್ನು ಭೂಮಿ ಲಭ್ಯವಿಲ್ಲದ ಕಾರಣ ರದ್ದುಪಡಿಸಲಾಗಿದೆ.

ಭೂಸ್ವಾಧೀನದ ಸಮಸ್ಯೆಗಳಿಂದಾಗಿ ಪಂಜಾಬ್‌ನಲ್ಲಿ ಅನೇಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸ್ಥಗಿತಗೊಂಡಿವೆ ಅಥವಾ ತೀವ್ರವಾಗಿ ವಿಳಂಬವಾಗಿವೆ. 650 ಕಿ.ಮೀ ಉದ್ದದ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಯ 361 ಕಿ.ಮೀ ಪಂಜಾಬ್‌ನಲ್ಲೇ ಹಾದುಹೋಗುತ್ತದೆ. ಇದರಲ್ಲಿ ಹಲವು ಭಾಗಗಳಲ್ಲಿ ಕಾಮಗಾರಿ ನಿಂತುಹೋಗಿದೆ.

ಪ್ರತಿಭಟನೆಗಳ ಒತ್ತಡದಿಂದಾಗಿ ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ, NHAI ಮತ್ತು ರಾಜ್ಯ ಸರ್ಕಾರವು ರೈತರಿಗೆ ಹೆಚ್ಚುವರಿ ಪರಿಹಾರವನ್ನು ನೀಡಲು ಒಪ್ಪಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ಪರಿಹಾರದ ಮೊತ್ತವನ್ನು ಪ್ರತಿ ಎಕರೆಗೆ ₹12 ಲಕ್ಷದಿಂದ ₹85 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಸೇವಾ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳ ಬೇಡಿಕೆಗಳನ್ನು ಸಹ ಪರಿಗಣಿಸಲಾಗಿದೆ.

NHAI ನ್ಯಾಯಾಲಯಗಳಿಗೆ ಮೊರೆ ಹೋಗಿ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಸಹಕಾರವನ್ನು ಕೇಳಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಸರ್ಕಾರಕ್ಕೆ ಎನ್‌ಎಚ್‌ಎಐಗೆ ತಡೆರಹಿತ ಭೂಮಿಯನ್ನು ಹಸ್ತಾಂತರಿಸುವಂತೆ ನಿರ್ದೇಶನ ನೀಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಹ ಭೂಮಿ ದೊರೆಯದಿದ್ದರೆ ಯೋಜನೆಗಳನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು, ಇದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತು.

ಪಂಜಾಬ್ ಸರ್ಕಾರ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ರೈತ ನಾಯಕರೊಂದಿಗೆ ನಿಯಮಿತವಾಗಿ ಸಂಧಾನ ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಕೆಲವು ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟಿದ್ದರೂ, ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಕೆಲವು ಪ್ರಕರಣಗಳಲ್ಲಿ, ರೈತರು ತಾವು “ಬಲವಂತವಾಗಿ” ಕಳೆದುಕೊಂಡ ಭೂಮಿಯನ್ನು “ಮರು ಸ್ವಾಧೀನಪಡಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

5.ತೆಲಂಗಾಣದಲ್ಲಿ ಭೂಸ್ವಾಧೀನ ಮತ್ತು ರೈತ ಪ್ರತಿಭಟನೆಗಳು

ತೆಲಂಗಾಣ ರಾಜ್ಯ, ವಿಶೇಷವಾಗಿ ಹೈದರಾಬಾದ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಅಭಿವೃದ್ಧಿಯ ಕೇಂದ್ರಬಿಂದುವಾಗಿವೆ. ಈ ಪ್ರದೇಶಗಳಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರಿಂದ ತೀವ್ರ ಪ್ರತಿಭಟನೆಗಳು ಎದುರಾಗಿವೆ. ಪಂಜಾಬ್‌ನಂತೆ, ಇಲ್ಲಿನ ಪ್ರತಿಭಟನೆಗಳು ಮುಖ್ಯವಾಗಿ ಸಮರ್ಪಕ ಪರಿಹಾರದ ಕೊರತೆ ಮತ್ತು ಫಲವತ್ತಾದ ಭೂಮಿಯ ನಷ್ಟದ ಬಗ್ಗೆ ಕೇಂದ್ರೀಕೃತವಾಗಿವೆ.

ತೆಲಂಗಾಣ ಸರ್ಕಾರವು ಕೈಗಾರಿಕಾ ಪಾರ್ಕ್‌ಗಳು (ಉದಾಹರಣೆಗೆ ಫಾರ್ಮಾ ಸಿಟಿ), ಪ್ರಾದೇಶಿಕ ವರ್ತುಲ ರಸ್ತೆ (Regional Ring Road – RRR), ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ), ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗಾಗಿ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಆದರೆ, ಹೈದರಾಬಾದ್ ಸುತ್ತಮುತ್ತಲಿನ ಭೂಮಿಯ ಹೆಚ್ಚಿನ ಮಾರುಕಟ್ಟೆ ಮೌಲ್ಯ ಮತ್ತು ಕೃಷಿ ಉತ್ಪಾದಕತೆಯು ರೈತರ ಪ್ರತಿರೋಧಕ್ಕೆ ಪ್ರಮುಖ ಕಾರಣವಾಗಿದೆ.

ತೆಲಂಗಾಣ ರಾಜ್ಯದಲ್ಲಿ ಭೂಸ್ವಾಧೀನಕ್ಕಾಗಿ ಪ್ರಾಥಮಿಕವಾಗಿ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ಸ್ಥಾಪನೆಯಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯಿದೆ, 2013ರ ಕಾಯ್ದೆಯನ್ನು ಬಳಸಲಾಗಿದೆ. ಆದಾಗ್ಯೂ, ತೆಲಂಗಾಣ ಸರ್ಕಾರವು 2013ರ ಕೇಂದ್ರ ಕಾಯಿದೆಯಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದೆ, ಇದು ವಿವಾದಕ್ಕೆ ಕಾರಣವಾಗಿದೆ:

‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ಸ್ಥಾಪನೆಯಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆ (ತೆಲಂಗಾಣ ತಿದ್ದುಪಡಿ) ಕಾಯಿದೆ, 2016’: ತೆಲಂಗಾಣ ಸರ್ಕಾರವು 2013ರ ಕೇಂದ್ರ ಕಾಯಿದೆಯ ಭೂಸ್ವಾಧೀನ ಪ್ರಕ್ರಿಯೆ ‘ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ’ ಎಂಬ ಕಾರಣ ನೀಡಿ, ತನ್ನದೇ ಆದ ತಿದ್ದುಪಡಿಯನ್ನು ತಂದಿತು. ಈ ತಿದ್ದುಪಡಿಯ ಮುಖ್ಯ ಉದ್ದೇಶ, ಭೂಮಾಲೀಕರಿಂದ ಒಪ್ಪಂದದ ಮೂಲಕ ಭೂಮಿಯನ್ನು ವೇಗವಾಗಿ ಪಡೆಯುವುದು. ಕೆಲವು ಸಂದರ್ಭಗಳಲ್ಲಿ, ಹೊಸ ಕಾಯಿದೆ ಜಾರಿಗೆ ಬರುವ ಮೊದಲು ಆರಂಭಿಸಿದ ಅಥವಾ ಅತೀವ ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾದ ಯೋಜನೆಗಳಿಗೆ 1894ರ ಹಳೆಯ ಕಾಯಿದೆಯ “ತುರ್ತು ಷರತ್ತುಗಳನ್ನು” ಬಳಸುವ ಪ್ರಯತ್ನಗಳೂ ನಡೆದಿವೆ.

ತೆಲಂಗಾಣದಲ್ಲಿ ರೈತರು ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವುದರ ವಿರುದ್ಧ ವ್ಯಾಪಕವಾಗಿ ಪ್ರತಿಭಟಿಸುತ್ತಿದ್ದಾರೆ. ತೆಲಂಗಾಣದಲ್ಲಿನ ಈ ಪ್ರಕರಣಗಳು, ಕೇವಲ ಹಳೆಯ ಕಾಯಿದೆಗಳಷ್ಟೇ ಅಲ್ಲದೆ, ಹೊಸ LARR ಕಾಯಿದೆಯಡಿಯಲ್ಲೂ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಿದ್ಧರಿದ್ದಾರೆ ಎಂಬುದನ್ನು ತೋರಿಸುತ್ತವೆ. ನ್ಯಾಯಯುತ ಪರಿಹಾರ, ಪುನರ್ವಸತಿ ಮತ್ತು ಪರಿಸರ ಕಾಳಜಿಗಳನ್ನು ನಿರ್ಲಕ್ಷಿಸಿ ಕೈಗೊಳ್ಳುವ ಯಾವುದೇ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಪ್ರಬಲ ಪ್ರತಿರೋಧ ಎದುರಾಗುತ್ತದೆ ಎಂಬುದಕ್ಕೆ ಇವು ಸ್ಪಷ್ಟ ಉದಾಹರಣೆಗಳಾಗಿವೆ.

6.ನೆಲ್ಲೂರಿನಲ್ಲಿ ಸೌರಸ್ಥಾವರಕ್ಕಾಗಿ ಭೂಸ್ವಾಧೀನ ಮತ್ತು ರೈತ ಪ್ರತಿಭಟನೆಗಳು

ನೆಲ್ಲೂರು ಜಿಲ್ಲೆಯ ಕಂಡುಕೂರು ವಿಧಾನಸಭಾ ಕ್ಷೇತ್ರದ ಕರೆಡು ಗ್ರಾಮದಲ್ಲಿ ಪ್ರಸ್ತಾವಿತ ಇಂಡೋಸೋಲ್ ಸೌರ ಯೋಜನೆ (Indosol solar project) ಗಾಗಿ 8,300 ಎಕರೆ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗಳು ರಾಷ್ಟ್ರೀಯ ಹೆದ್ದಾರಿ-16 ಅನ್ನು ತಡೆದು ಸಂಚಾರಕ್ಕೆ ಅಡ್ಡಿಪಡಿಸುವ ಹಂತಕ್ಕೆ ತಲುಪಿದ್ದವು. ಆಂಧ್ರಪ್ರದೇಶದಲ್ಲಿ  LARR Act, 2013 ಅನ್ನು ಬಳಸಲಾಗುತ್ತದೆ..

ನೆಲ್ಲೂರಿನಲ್ಲಿ ಇಂಡೋಸೋಲ್ ಸೌರ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯು 2013ರ ಕಾಯಿದೆಯ ಅಡಿಯಲ್ಲಿಯೇ ನಡೆಯಲು ಉದ್ದೇಶಿಸಿತ್ತು. ಆದರೆ, ರೈತರು ಮತ್ತು ಪ್ರತಿಭಟನಾಕಾರರು ಸರ್ಕಾರವು ಕಾಯಿದೆಯ ನಿಬಂಧನೆಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ, ವಿಶೇಷವಾಗಿ ರೈತರೊಂದಿಗೆ ಸಮಾಲೋಚನೆ ನಡೆಸದೆ ಮತ್ತು ಸೂಕ್ತ ಪರಿಹಾರ ನೀಡದೆ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತ್ ಚೈತನ್ಯ ಯುವಜನ (BCY) ಮುಖ್ಯಸ್ಥ ಬೋಡೆ ರಾಮಚಂದ್ರ ಯಾದವ್ ನೇತೃತ್ವದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದರೂ, ರಾಮಚಂದ್ರ ಯಾದವ್ ಸಮುದ್ರ ಮಾರ್ಗದ ಮೂಲಕ ಕರೆಡು ಗ್ರಾಮವನ್ನು ತಲುಪಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತು.

ರೈತರು ತಮ್ಮ ಜೀವನವು ಭೂಮಿಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿಕೊಂಡಿದ್ದು, ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು. ಈ ಯೋಜನೆಯನ್ನು ಕೃಷಿಯೇತರ ಭೂಮಿಗೆ ಸ್ಥಳಾಂತರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ಈ ಘಟನೆಯು ರೈತರ ಸಂಘಟಿತ ಪ್ರತಿಭಟನೆಗಳು ಭೂಸ್ವಾಧೀನ ಪ್ರಕ್ರಿಯೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.

ಈ ಉದಾಹರಣೆಗಳು, ಸಂಘಟಿತ ಮತ್ತು ನಿರಂತರ ರೈತ ಹೋರಾಟ, ಜೊತೆಗೆ ಸಮರ್ಥ ನಾಯಕತ್ವವು, ಬೃಹತ್ ಯೋಜನೆಗಳ ವಿರುದ್ಧವೂ ಸಫಲತೆಯನ್ನು ಸಾಧಿಸಬಹುದು ಎಂಬುದನ್ನು ತೋರಿಸುತ್ತವೆ. ಇದನ್ನಾಧರಿಸಿಯೇ ರಾಜ್ಯದ ದೇವನಹಳ್ಳಿಯ ರೈತರ ಭೂಸ್ವಾಧೀನವನ್ನು ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದಾಗಲೂ ಕೈಬಿಡಬಹುದು ಎಂಬುದಕ್ಕೆ ಸಾಕ್ಷಿಯಾಗಿವೆ.

ಮಾಹಿತಿ ಮೂಲ: ಶಿವಸುಂದರ್ ಮತ್ತು ವಿವಿಧ ಪತ್ರಿಕೆಗಳಿಂದ ಆಯ್ದುಕೊಳ್ಳಲಾಗಿದೆ

ದೇವನಹಳ್ಳಿ ಭೂಸ್ವಾಧೀನ ಮಾಡಿದರೆ ಸರಕಾರಕ್ಕೆ ಎಚ್ಚರಿಕೆ: ಸಂಯುಕ್ತ ಹೋರಾಟದ ನಾಯಕರೊಂದಿಗೆ ವಿಶೇಷ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...