ಚುನಾವಣೆಗೆ ಸ್ಪರ್ಧಿಸುವಾಗ ಮತ್ತು ಪೆಟ್ರೋಲ್ ಪಂಪ್ ಡೀಲರ್‌ಶಿಪ್ ಪಡೆಯುವಾಗ ನಕಲಿ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ಹಿರಿಯ ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ (ಜು.7) ವಜಾಗೊಳಿಸಿದೆ.
ಪ್ರಯಾಗ್‌ರಾಜ್‌ನ ಬಿಜೆಪಿ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ದಿವಾಕರ್ ನಾಥ್ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರ ಪೀಠ ತಿರಸ್ಕರಿಸಿದೆ.
ಈ ವಿಷಯದ ಬಗ್ಗೆ ಪೊಲೀಸ್ ತನಿಖೆ ಕೋರಿ ಸಿಆರ್‌ಪಿಸಿ ಸೆಕ್ಷನ್ 156(3) ಅಡಿಯಲ್ಲಿ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು 2021ರಲ್ಲಿ ಪ್ರಯಾಗ್‌ರಾಜ್‌ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ವಜಾಗೊಳಿಸಿತ್ತು.
ಮೌರ್ಯ ವಿರುದ್ಧ ಯಾವುದೇ ಗುರುತಿಸಬಹುದಾದ ಅಪರಾಧ ಕಂಡು ಬಂದಿಲ್ಲ ಎಂದಿದ್ದ ಎಸಿಜೆಎಂ ನಮ್ರತಾ ಸಿಂಗ್, ತ್ರಿಪಾಠಿ ಅವರ ಅರ್ಜಿಯನ್ನು ವಜಾಗೊಳಿಸಿದ್ದರು.
ನಂತರ ತ್ರಿಪಾಠಿ ಅವರು ಎಸಿಜೆಎಂ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಅರ್ಜಿ ಸಲ್ಲಿಕೆಯ ವಿಳಂಬದ ಕಾರಣ ಕೊಟ್ಟು ಫೆಬ್ರವರಿ 2024ರಲ್ಲಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶದ 300 ದಿನಗಳಿಗಿಂತಲೂ ಹೆಚ್ಚು ಸಮಯದ ನಂತರ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿತ್ತು.
ಈ ವರ್ಷದ ಜನವರಿಯಲ್ಲಿ, ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಕೆ ವಿಳಂಬವನ್ನು ಮನ್ನಿಸಿತ್ತು ಮತ್ತು ಅರ್ಹತೆಯ ಆಧಾರದ ಮೇಲೆ ವಿಷಯವನ್ನು ಪರಿಗಣಿಸಲು ಹೈಕೋರ್ಟ್‌ಗೆ ನಿರ್ದೇಶನ ನೀಡಿತ್ತು.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಪ್ರಕಾರ, ತ್ರಿಪಾಠಿ ಮತ್ತೆ ಅದೇ ಆರೋಪಗಳು ಮತ್ತು ಆಧಾರಗಳನ್ನು ತೆಗೆದುಕೊಂಡು ಹೊಸ ಅರ್ಜಿಯೊಂದಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಏಪ್ರಿಲ್ 2025ರಲ್ಲಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್, ಮೇ ತಿಂಗಳಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು (ಜು.7) ವಜಾಗೊಳಿಸಿದೆ.
ಬಂಗಾಳದಲ್ಲಿ ಟಿಎಂಸಿ ಕಿತ್ತೊಗೆಯಲು ‘ಮಹಾಮೈತ್ರಿ’ಗೆ ಕರೆಕೊಟ್ಟ ಬಿಜೆಪಿ ನಾಯಕ: ತಿರಸ್ಕರಿಸಿದ ಕಾಂಗ್ರೆಸ್, ಸಿಪಿಐ(ಎಂ)


