ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ 17 ವರ್ಷದ ಆರೋಪಿಯ ಪೋಷಕರು ಎರಡನೇ ಬಾರಿಗೆ ರಕ್ತದ ಮಾದರಿಯನ್ನು ತಿರುಚಲು ಯತ್ನಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ನಗರದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೇ 19, 2024ರಂದು ನಸುಕಿನ ವೇಳೆ ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ವೇಗವಾಗಿ ಬಂದ ಐಷಾರಾಮಿ ಪೋರ್ಷೆ ಕಾರು ಜನರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ ರಸ್ತೆ ಬದಿ ಬೈಕ್ ಮೇಲೆ ಕುಳಿತಿದ್ದ ಇಬ್ಬರು ಐಟಿ ಉದ್ಯೋಗಿಗಳು ಸಾವನ್ನಪ್ಪಿದ್ದರು. ಕಾರು ಚಲಾಯಿಸಿದ ವ್ಯಕ್ತಿ ನಗರದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯ ಮಗನಾಗಿದ್ದು, ಆತ ಮದ್ಯದ ನಶೆಯಲ್ಲಿ ಕಾರು ಚಲಾಯಿಸಿ ಜೀವಹಾನಿ ಮಾಡಿದ್ದ. ಘಟನೆ ಬಳಿಕ ಹಣದ ಪ್ರಭಾವ ಬಳಸಿ ಆರೋಪಿಯ ರಕ್ಷಣೆಯ ಪ್ರಯತ್ನ ನಡೆದಿತ್ತು.
ಅಪಘಾತ ನಡೆದ ಗಂಟೆಗಳ ಬಳಿಕ ಆರೋಪಿ ಬಾಲಕನ ರಕ್ತದ ಮಾದರಿಯನ್ನು ನಗರದ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ತೆಗೆದುಕೊಳ್ಳಲಾಗಿತ್ತು. ತಡವಾಗಿ ರಕ್ತದ ಮಾದರಿ ಸಂಗ್ರಹಿಸುವ ಮೂಲಕ ಆರೋಪಿಯ ರಕ್ಷಣೆಗೆ ಪ್ರಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿತ್ತು. ಈ ನಡುವೆ ಸಂಭಾವ್ಯ ಕಲ್ಮಷದ ವರದಿಗಳಿಂದಾಗಿ ಪೊಲೀಸರು ಮತ್ತೊಮ್ಮೆ ರಕ್ತದ ಮಾದರಿ ಸಂಗ್ರಹಿಸಲು ವಿನಂತಿಸಿದ್ದರು. ಹಾಗಾಗಿ, ಎರಡನೇ ಬಾರಿಗೆ ಔಂಧ್ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದ ಮಾದರಿಯನ್ನು ಪಡೆಯಲಾಗಿತ್ತು.
ಔಂಧ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಮಾದರಿ ಬದಲಾಯಿಸಲು ಪ್ರಯತ್ನಿಸಲಾಗಿತ್ತು. ಆದರೆ, ವೈದ್ಯರು ತಿರುಚಲು ನಿರಾಕರಿಸಿದ್ದರಿಂದ ಅದು ವಿಫಲವಾಯಿತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರಕರಣದ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದೆ. ಅದರಲ್ಲಿ, ಮೇ 19, 2024 ರಂದು ಪೊಲೀಸ್ ತಂಡವು ಎರಡನೇ ಬಾರಿಗೆ ರಕ್ತದ ಮಾದರಿಯನ್ನು ಸಂಗ್ರಹಿಸಲು ಆರೋಪಿ ಅಪ್ರಾಪ್ತ ವಯಸ್ಕನನ್ನು ಔಂಧ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ಆತನ ತಂದೆ-ತಾಯಿ ಮತ್ತು ಮಧ್ಯವರ್ತಿ ಅಶ್ಫಾಕ್ ಮಕಂದರ್ ಎಂಬಾತ ಅಲ್ಲಿಗೆ ಹೋಗಿದ್ದರು ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ರಕ್ತದ ಮಾದರಿಯನ್ನು ಗೌಪ್ಯವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ, ಅದು ಆರೋಪಿಯ ಕುಟುಂಬಸ್ಥರಿಗೆ ಗೊತ್ತಾಗಿದೆ. ಏಕೆಂದರೆ, ಅವರು ಯರವಾಡ ಪೊಲೀಸ್ ಠಾಣೆಯಲ್ಲಿ ಇದ್ದರು. ಹಾಗಾಗಿ, ಎರಡನೇ ಬಾರಿಯೂ ರಕ್ತದ ಮಾದರಿಯನ್ನು ತಿರುಚುವ ಪ್ರಯತ್ನ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಹೇಳಿದೆ.
ಮೇ 20, 2024ರಂದು, ಎರಡೂ ರಕ್ತದ ಮಾದರಿಗಳನ್ನು ಡಿಎನ್ಎ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಅಪಘಾತದ ಸಮಯದಲ್ಲಿ 17 ವರ್ಷದ ಬಾಲಕ ಕುಡಿದ ಮತ್ತಿನಲ್ಲಿದ್ದ ಎಂಬುದನ್ನು ಮರೆಮಾಚಲು ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಆತನ ರಕ್ತದ ಮಾದರಿಯನ್ನು ತಾಯಿಯ ರಕ್ತದ ಮಾದರಿಯೊಂದಿಗೆ ಬದಲಾಯಿಸಲಾಗಿತ್ತು ಎಂದು ಈ ಹಿಂದೆ ತನಿಖೆಯಿಂದ ಬಯಲಾಗಿತ್ತು.
ಈ ಪ್ರಕರಣದಲ್ಲಿ ಸಸೂನ್ ಜನರಲ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಅಜಯ್ ತಾವರೆ, ವೈದ್ಯಾಧಿಕಾರಿ ಶ್ರೀಹರಿ ಹಲ್ನೋರ್ ಮತ್ತು ಸಿಬ್ಬಂದಿ ಅತುಲ್ ಘಟ್ಕಾಂಬಳೆ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಬಂಧಿತರಲ್ಲಿ ಬಾಲಕನ ತಂದೆ-ತಾಯಿ, ಮಧ್ಯವರ್ತಿ ಅಶ್ಫಾಕ್ ಮಕಂದರ್ ಮತ್ತು ಅಮರ್ ಗಾಯಕ್ವಾಡ್, ಆದಿತ್ಯ ಅವಿನಾಶ್ ಸೂದ್, ಆಶಿಶ್ ಮಿತ್ತಲ್ ಮತ್ತು ಅರುಣ್ ಕುಮಾರ್ ಸಿಂಗ್ ಎಂಬವರೂ ಸೇರಿದ್ದಾರೆ.
ಸೌಜನ್ಯ ಪ್ರಕರಣ| ಹೈಕೋರ್ಟ್ ನ್ಯಾಯಮೂರ್ತಿ ದೇವದಾಸ್ ವಾಗ್ದಂಡನೆಗೆ ಒತ್ತಾಯ


