ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಜುಲೈ 16ರಂದು ಯೆಮೆನ್‌ನಲ್ಲಿ ಮರಣದಂಡನೆ ಜಾರಿಯಾಗಲಿದೆ. ಅದನ್ನು ತಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಪೀಠದ ಮುಂದೆ ಹಿರಿಯ ವಕೀಲ ರಾಗೇಂತ್ ಬಸಂತ್ ಈ ವಿಷಯವನ್ನು ಪ್ರಸ್ತಾಪಿಸಿ, ತುರ್ತು ವಿಚಾರಣೆಗೆ ಕೋರಿದ್ದಾರೆ. ಯೆಮನ್‌ನ ಶರಿಯತ್ ಕಾನೂನಿನ ಪ್ರಕಾರ ಮೃತರ ಸಂಬಂಧಿಕರು ಬ್ಲಡ್ ಮನಿ ಸ್ವೀಕರಿಸಿ ಕ್ಷಮೆ ನೀಡಲು ಒಪ್ಪಿಕೊಂಡರೆ ಅಪರಾಧಿ ಶಿಕ್ಷೆಯಿಂದ ಪಾರಾಗುತ್ತಾರೆ. ಹಾಗಾಗಿ, ಆ ಆಯ್ಕೆಯನ್ನು ಅನ್ವೇಷಿಸಲು ಮಾತುಕತೆ ನಡೆಸಬಹುದು ಎಂದು ವಾದಿಸಿದ್ದಾರೆ. ಬಸಂತ್ ಅವರಿಗೆ ವಕೀಲ ಕೆ ಸುಭಾಷ್ ಚಂದ್ರನ್ ಸಹಕಾರ ನೀಡಿದ್ದಾರೆ.
‘ಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್’ ಎಂಬ ಹೆಸರಿನ ಸಮಿತಿಯ ಪರವಾಗಿ ಸಲ್ಲಿಕೆಯಾದ ಅರ್ಜಿಯಲ್ಲಿ, ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಮಿಷಾ ಪ್ರಿಯಾ ಅವರನ್ನು ಮರಣದಂಡನೆಯಿಂದ ಪಾರು ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
ನಿಮಿಷಾ ಅವರಿಗೆ ಏಕೆ ಮರಣದಂಡನೆ ವಿಧಿಸಲಾಗಿದೆ? ಎಂಬ ನ್ಯಾಯಮೂರ್ತಿ ಧುಲಿಯಾ ಅವರ ಪ್ರಶ್ನೆಗೆ ಉತ್ತರಿಸಿದ ವಕೀಲ ಬಸಂತ್, “ಕೇರಳದ ನರ್ಸ್ ನಿಮಿಷಾ ಅವರು ಕೆಲಸಕ್ಕಾಗಿ ಯೆಮನ್‌ಗೆ ಹೋಗಿದ್ದರು. ಅಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ಅವರಿಗೆ ಕಿರುಕುಳ ಕೊಡುತ್ತಿದ್ದ. ಈ ಕಾರಣಕ್ಕೆ ಆತನನ್ನು ಕೊಲೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಈ ವೇಳೆ, ಜುಲೈ 14ರಂದು ಅರ್ಜಿ ವಿಚಾರಣೆ ಮಾಡುವುದಾಗಿ ಪೀಠ ಹೇಳಿದೆ. ತಕ್ಷಣ ಮಧ್ಯಪ್ರವೇಶಿಸಿದ ವಕೀಲ ಬಸಂತ್, “ಜುಲೈ 16ರಕ್ಕೆ ಮರಣದಂಡನೆ ನಿಗದಿಯಾಗಿರುವ ಕಾರಣ, ಎರಡು ದಿನ ಮುಂಚೆ ವಿಚಾರಣೆ ಕೈಗೆತ್ತಿಕೊಂಡರೆ ಪರಿಣಾಮ ಬೀರದಿರಬಹುದು. ರಾಜತಾಂತ್ರಿಕ ಮಾತುಕತೆಗೆ ಸಮಯ ಬೇಕಿದೆ. ಹಾಗಾಗಿ, ಇಂದು ಅಥವಾ ನಾಳೆ ವಿಚಾರಣೆ ನಡೆಸುವಂತೆ ಕೋರಿದ್ದಾರೆ.
2017ರ ಜುಲೈನಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿ ಎಂಬಾತನನ್ನು ಹತ್ಯೆಗೈದ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಮರಣದಂಡನೆಗೆ ಗುರಿಯಾಗಿದ್ದಾರೆ. ಮೃತ ಅಬ್ದೋ ಮಹದಿ ನಿಮಿಷಾ ಅವರ ಪಾಸ್‌ಪೋರ್ಟ್ ತನ್ನ ಬಳಿ ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ನಿಮಿಷಾ ಅವರು, ಆತನಿಗೆ ನಿದ್ರೆ ಬರುವ ಚುಚ್ಚುಮದ್ದನ್ನು ಚುಚ್ಚಿ ಪಾಸ್‌ಪೋರ್ಟ್ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದರು. ಆದರೆ ಚುಚ್ಚುಮದ್ದು ಚುಚ್ಚಿದ ಬಳಿಕ ಅಬ್ದೋ ಮೃತಪಟ್ಟಿದ್ದ.
ಪೋರ್ಷೆ ಕಾರು ಅಪಘಾತ ಪ್ರಕರಣ: ಎರಡನೇ ಬಾರಿ ರಕ್ತದ ಮಾದರಿ ತಿರುಚಲು ಯತ್ನಿಸಿದ್ದ ಆರೋಪಿಗಳು!


