ಅನ್ನಭಾಗ್ಯ ಪಡಿತರ ಯೋಜನೆಯಡಿ ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಮ್‌ಸಿ ಗೋದಾಮುಗಳಲ್ಲಿ ದುಡಿಯುವ ಹಮಾಲಿ ಕಾರ್ಮಿಕರಿಗೆ ಸಮರ್ಪಕ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ಲೋಡಿಂಗ್ & ಅನ್‌ಲೋಡಿಂಗ್ ಕಾರ್ಮಿಕ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಹಮಾಲಿ ಕಾರ್ಮಿಕರು, ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಪಡಿತರ ಯೋಜನೆಗೆ ಅನ್ನಭಾಗ್ಯ ಎಂದು ಹೆಸರಿಟ್ಟು ಇಂದಿಗೆ 12 ವರ್ಷದ ಪೂರ್ಣಗೊಂಡಿದೆ. ಆದರೆ, ಅದನ್ನು ಜಾರಿ ಮಾಡುವ ಹಮಾಲಿ ಕಾರ್ಮಿಕರ ಬದುಕು ಇನ್ನೂ ಅತಂತ್ರವಾಗಿದೆ. ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯಡಿ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಮ್‌ಸಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ & ಅನ್‌ಲೋಡಿಂಗ್ ಕೆಲಸ ಮಾಡುವವರಿಗೆ ಕಾರ್ಮಿಕ ಕಾನೂನುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಆದರೆ, ಸಾಗಾಣಿಕೆ ಗುತ್ತಿಗೆದಾರರಿಂದ ಕಿರುಕುಳ ಮಾತ್ರ ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕರು- ಸಾಗಾಣಿಕೆ ಗುತ್ತಿಗೆದಾರರ ಜೊತೆ , ಇಎಸ್‌ಐ ಮತ್ತು ಪಿಎಫ್ ಕುರಿತು ಸಭೆ ನಡೆಸುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಕಾರ್ಮಿಕರ ಮನವಿ ಸ್ವೀಕರಿಸಿದರು. ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು.
ಕಾರ್ಮಿಕ ಕಾನೂನು ಕನಿಷ್ಠ ವೇತನ ಕಾಯ್ದೆ ಪ್ರಕಾರ ಪ್ರತಿವರ್ಷ ಬೆಲೆ ಏರಿಕೆ, ತುಟ್ಟುಭತ್ಯೆಗೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ ಮಾಡಿ ಏಪ್ರಿಲ್ 1ರಿಂದ ಜಾರಿ ಮಾಡುವುದು ಕಾನೂನು. ಆದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯಾವುದೇ ಮಾನದಂಡವಿಲ್ಲದೆ ತನ್ನಿಚ್ಚೆ ಬಂದಾಗ ಕೂಲಿ ಹೆಚ್ಚಳ ಮಾಡುತ್ತಿದ್ದು, ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕೂಲಿ ಹೆಚ್ಚಳಕ್ಕೆ ಹಾಗೂ ಕಾರ್ಮಿಕ ಕಾನೂನುಗಳ ಜಾರಿಗೆ ಒಂದು ಸಮಪರ್ಕಕ ನಿಯಮ ಬೇಕಾಗಿದೆ. ಅದನ್ನು ಜಾರಿ ಮಾಡಬೇಕು ಎಂದು ಕಾರ್ಮಿಕರು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಹೇಳಿದ್ದಾರೆ.
ಉದಾಹರಣೆಗೆ ಗೋದಾಮುಗಳಿಂದ ಪಡಿತರ ನ್ಯಾಯಬೆಲೆ ಅಂಗಡಿಗೆ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ & ಅನ್‌ಲೋಡಿಂಗ್ ಕೆಲಸ ಚಿಲ್ಲರೆ ಸಾಗಾಣಿಕೆ ಕೂಲಿದರ ಹೆಚ್ಚಳ 2018 ನವೆಂಬರ್‌ನಲ್ಲಿ ಕ್ವಿಂಟಾಲ್‌ಗೆ 16 ರೂ. 2023ರ ಜೂನ್‌ನಲ್ಲಿ ಕ್ವಿಂಟಾಲ್‌ಗೆ 19 ರೂ. 2025ರ ಫೆಬ್ರವರಿಯಲ್ಲಿ ಟೆಂಡರ್ ಆಗಿರುವ ತಾಲೂಕುಗಳಿಗೆ ಮಾತ್ರ 23.62 ರೂ. ನಿಗದಿ ಮಾಡಲಾಗಿದೆ. 120ಕ್ಕೂ ಹೆಚ್ಚು ತಾಲೂಕುಗಳಲ್ಲಿ ತಾಂತ್ರಿಕ ಕಾರಣಗಳಿಂದ ಟೆಂಡರ್ ಆಗದೆ ಉಳಿದಿದ್ದು, ಅಲ್ಲಿ ಹಳೆಯ ದರವೇ 19 ರೂ. ಇದೆ. ಕಾರ್ಮಿಕರಿಗೆ ಕ್ವಿಂಟ್ವಾಲ್‌ಗೆ 4.62 ರೂ. ಹಾಗೆಯೇ ಸಗಟು ಸಾಗಾಣಿಕೆ ಟೆಂಡರ್ ಆಗದೇ ಉಳಿದಿರುವ ತಾಲೂಕುಗಳಲ್ಲಿ 10ರೂ. ಇದೆ. ಟೆಂಡರ್ ಆಗಿರುವ ತಾಲೂಕುಗಳಿಗೆ 10.92 ರೂ. ಇದೆ. ಇದರಿಂದ ಪ್ರತಿ ಕ್ವಿಂಟ್ವಾಲ್‌ಗೆ ಕಾರ್ಮಿಕರಿಗೆ 5.54 ರೂ. ನಷ್ಟ ಉಂಟಾಗುತ್ತಿದೆ. ಕಾರ್ಮಿಕರು ಪ್ರತಿತಿಂಗಳು ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ, ಕೆ.ಆರ್ ನಗರ ಕೆಎಫ್‌ಸಿಎಸ್‌ಸಿ, ಸರಗೂರು, ಹೆಚ್.ಡಿ ಕೋಟೆ, ಹುಣಸೂರು, ನಂಜನಗೂಡು ತಾಲೂಕುಗಳಿಗೆ ಟೆಂಡರ್ ಆಗದೇ ಉಳಿದಿದ್ದು, ಆ ತಾಲೂಕುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಕೂಡಲೇ ಹೊಸ ದರ ಚಿಲ್ಲರೆ ಸಾಗಾಣಿಕೆ ಕ್ವಿಂಟಾಲ್‌ಗೆ 23.62 ರೂ. ಸಗಟು ಸಾಗಾಣಿಕೆ ಟೆಂಡರ್ ಕ್ವಿಂಟಾಲ್‌ಗೆ 10.92 ರೂ. ನಿಗದಿ ಮಾಡಿ ಆದೇಶ ಮಾಡಬೇಕು. ತಿಂಗಳಿಗೆ ಲಕ್ಷಾಂತರ ರೂ. ಕಾರ್ಮಿಕರಿಗೆ ನಷ್ಟ ಉಂಟಾಗುತ್ತಿದ್ದು, ಫೆಬ್ರವರಿ 2025ರಿಂದಲೇ ಜಾರಿಗೆ ಬರುವಂತೆ ಈ ಕೂಡಲೇ ಕೂಲಿ ಹೆಚ್ಚಳ ಮಾಡಿ ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಸಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ &ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರ 2024-2026 ಟೆಂಡರ್ ನಿಯಮಾವಳಿಯಲ್ಲಿ ಇಎಸ್‌ಐ ಮತ್ತು ಪಿಎಫ್ ಪಾವತಿಸುವುದು ಕಡ್ಡಾಯ ಮಾಡಿದೆ. ಆದರೆ, ಇದು ಮೈಸೂರು ಜಿಲ್ಲೆಯಲ್ಲಿ ಇನ್ನೂ ಜಾರಿಯಾಗಿಲ್ಲ. ಇಎಸ್ಐ ಕಟ್ಟದೆ ಇರುವ ಕಾರಣದಿಂದ ಆನಾರೋಗ್ಯಕ್ಕೀಡಾದ ಕಾರ್ಮಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೈಯಿಂದ ಹಣ ಪಾವತಿಸಬೇಕಾದ ಸಂದರ್ಭ ಬಂದಿದೆ. ಇಎಸ್ಐ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ ಎಂದು ಹೇಳಿದ್ದಾರೆ.
2025ರ ಫೆಬ್ರವರಿ ಮಾಹೆಯಿಂದಲೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರು ಕಾರ್ಮಿಕರಿಂದ ಇಎಸ್ಐ ಮತ್ತು ಪಿಎಫ್ ವಂತಿಗೆ ಕಡಿತ ಮಾಡಿದ್ದು, ಇಲ್ಲಿಯವರೆಗೂ ಪಾವತಿ ಮಾಡದೇ ಇರುವುದು ಕಾನೂನೂ ಬಾಹಿರ ಮತ್ತು ಕ್ರಿಮಿನಲ್ ಅಪರಾಧ. ಹಾಗಾಗಿ, ಇದರ ಬಗ್ಗೆ ತುರ್ತಾಗಿ ಗಮನವಹಿಸಿ, ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿಲ್ಲರೆ ಸಾಗಾಣಿಕೆಗೆ ಯಾವುದೇ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕ ಕಾಯ್ದೆ ಪ್ರಕಾರ ನಿಯಮಾವಳಿಗಳನ್ನು ಪಾಲಿಸುತಿಲ್ಲ. ಸರಿಯಾದ ಸಮಯಕ್ಕೆ ಸಂಬಳ (ಕೂಲಿ) ಪಾವತಿ ಮಾಡುತ್ತಿಲ್ಲ. ಸಂಬಳ ಪಾವತಿ ರಸೀದಿ ಅಥವಾ ಸಂಬಳ ಚೀಟಿ (WAGE SLIP ) ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿ ರಸೀದಿ ನೀಡುತ್ತಿಲ್ಲ. ಹಾಗಾಗಿ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಂಬಳ ಪಾವತಿಸಲು ಹಾಗೂ ಆಯಾ ತಿಂಗಳು ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿಸಿ ರಸೀದಿ ನೀಡಲು ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.
2023ರ ಆಗಸ್ಟ್ 30ರಂದು ನಡೆದ ದ್ವಿಪಕ್ಷೀಯ ಕರಾರಿನಲ್ಲಿ ಮೂರು ತಿಂಗಳು ಕಾಲವಕಾಶ ಕೋರಿ, ನಂತರ ಅದರ ಉಲ್ಲಂಘನೆ ಮಾಡಿ 2023ರ ಜುಲೈನಿಂದ ಚಿಲ್ಲರೆ ಸಾಗಣಿಕೆ ಗುತ್ತಿಗೆದಾರರು ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೂಲಿ ದರ 1.90ರೂ. ಕಡಿಮೆ ಪಾವತಿ ಮಾಡಿಲಾಗಿದೆ. ಇದರ ಬಗ್ಗೆ 2024ರ ಸೆಪ್ಟಂಬರ್ 20ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೆ ಪಾವತಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ, ಮೈಸೂರು ಜಿಲ್ಲೆಯ ಕೆಲವು ತಾಲೂಕುಗಳಿಗೆ ಸಾಗಾಣಿಕೆ ಗುತ್ತಿಗೆದಾರರು ಬದಲಾಗಿದ್ದಾರೆ. ಈ ಗುತ್ತಿಗೆದಾರರ ಇಎಂಡಿ ಹಣ ಮತ್ತು ಸಾಗಾಣಿಕೆ ಬಿಲ್ ಹಣ ಪಾವತಿ ಮಾಡದೆ ಕಡ್ಡಾಯವಾಗಿ ತಡೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಆಗಸ್ಟ್ 15ರಂದು ಕರಾಳ ಸ್ವಾತಂತ್ರ್ಯ ದಿನ ಆಚರಿಸುವುದಾಗಿ ಕಾರ್ಮಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯ ಕ್ಷ ಕರಿನಾಯಕ, ಕಾರ್ಯದರ್ಶಿ ಮಹದೇವ ಹಾಗೂ ಮಂಡ್ಯ ಜಿಲ್ಲಾ ಮುಖಂಡರಾದ ಕೃಷ್ಣಪ್ಪ, ಪುಟ್ಟಸ್ವಾಮಿ ಸೇರಿದತೆ ಪ್ರಮುಖರು ಇದ್ದರು.
“ಬೇಟಿ ಬಚಾವೋ” ಯೋಜನೆ ಇರುವುದೇ ಬಿಜೆಪಿ ನಾಯಕರಿಂದ ಮಹಿಳೆಯರಿಗೆ ರಕ್ಷಿಸಿಕೊಳ್ಳಲು: ಬಿ.ಕೆ ಹರಿಪ್ರಸಾದ್


