ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಕ್ಕೂ ಅಧಿಕ ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ಮೃತದೇಹಗಳನ್ನು ಹೂತುಹಾಕಿದ್ದೆ. ಈ ಹಿಂದೆ ಜೀವ ಬೆದರಿಕೆಯಿಂದ ಈ ಕೃತ್ಯ ಎಸಗಿದ್ದೆ. ಆದರೆ ಈಗ ಪಾಪಪ್ರಜ್ಞೆ ಕಾಡಿದೆ. ಆದ್ದರಿಂದ ಸಾಕ್ಷಿ ನೀಡಲು ಮುಂದಾಗಿದ್ದೇನೆ ಎಂದು ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕ ಆಗಿದ್ದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯವರಿಗೆ ದೂರನ್ನು ಸಲ್ಲಿಸಿದ್ದರು.
ಈ ಹಿಂದೆಯೇ ಹಲವು ಅಪರಾಧ ಕೃತ್ಯಗಳು ನಡೆದಿದೆ. ಜೀವ ಬೆದರಿಕೆಯಿಂದ ತಾನು ಮೃತದೇಹಗಳ ವಿಲೇವಾರಿ ಮಾಡಿದ್ದೆ. ಆದರೆ ಈಗ ಪಾಪಪ್ರಜ್ಞೆ ಕಾಡುತ್ತಿದೆ. ಕಾನೂನು ರಕ್ಷಣೆ ದೊರೆತರೆ ವಿಲೇವಾರಿ ಮಾಡಿದ ಮೃತದೇಹಗಳನ್ನು ತೋರಿಸುವುದಾಗಿ ವ್ಯಕ್ತಿ ಹೇಳಿದ್ದರು.
ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇಂದು(ಜುಲೈ 11) ದೂರುದಾರ ವ್ಯಕ್ತಿ ಬೆಳ್ತಂಗಡಿ ಕೋರ್ಟ್‌ಗೆ ಹಾಜರಾಗಿದ್ದಾರೆ. ದೂರುದಾರರ ಮನವಿಯಂತೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ. ಇನ್ನು ಅನಾಮಧೇಯ ದೂರುದಾರರ ಕೈಯಲ್ಲಿ ಕಪ್ಪು ಬ್ಯಾಗ್ ಕಾಣಿಸಿಕೊಂಡಿದ್ದು, ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 4ರಂದು ವಕೀಲರ ಮೂಲಕ ದೂರು ನೀಡಿದ್ದ ಈ ವ್ಯಕ್ತಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನ ಪಠ್ಯಪುಸ್ತಕ ವಿವಾದ: ‘ಕಾಂಗ್ರೆಸ್ ವೈಭವೀಕರಣ’, ‘ಮೋದಿ ಕಡೆಗಣನೆ’ ಆರೋಪದಡಿ 12ನೇ ತರಗತಿ ಪುಸ್ತಕ ರದ್ದು


