ಮಧ್ಯಪ್ರದೇಶದಲ್ಲಿ ತಮ್ಮ ಊರಿಗೆ ರಸ್ತೆ ನಿರ್ಮಿಸಿಕೊಡುವಂತೆ ಗರ್ಭಿಣಿಯೊಬ್ಬರು ಮನವಿ ಮಾಡಿದ್ದಕ್ಕೆ ಬಿಜೆಪಿ ಸಂಸದ ಹೆರಿಗೆ ದಿನಾಂಕ ಕೇಳಿದ್ದಾರೆ ಎಂದು ವರದಿಯಾಗಿದೆ.
ಸಿಧಿ ಜಿಲ್ಲೆಯ ಖಡ್ಡಿ ಖುರ್ದ್ ಗ್ರಾಮದ ಗರ್ಭಿಣಿ ತಮ್ಮ ಊರಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಆಡಳಿತಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಧಿ ಬಿಜೆಪಿ ಸಂಸದ ಡಾ.ರಾಕೇಶ್ ಮಿಶ್ರಾ “ಹೆರಿಗೆಗೆ ಒಂದು ವಾರ ಮೊದಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ” ಎಂಬ ಬೇಜವ್ದಾರಿಯ ಉತ್ತರ ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ಇನ್‌ಪ್ಲುಯೆನ್ಸರ್ ಆಗಿರುವ ಸ್ಥಳೀಯ ಮಹಿಳೆ 25 ವರ್ಷದ ಲೀಲಾ ಸಾಹು ತಮ್ಮ ಊರಿನ ರಸ್ತೆಯ ದುರವಸ್ಥೆಯ ಬಗ್ಗೆ ಗಮನ ಸೆಳೆದಿದ್ದಿದ್ದರು. ಪ್ರಸ್ತುತ ಅವರು ಗರ್ಭಿಣಿಯಾಗಿರುವ ಅವರು, ಸರಿಯಾದ ರಸ್ತೆ ಸಂಪರ್ಕದ ಕೊರತೆಯಿಂದಾಗಿ, ವಿಶೇಷವಾಗಿ ಮಳೆಗಾಲದಲ್ಲಿ ಆಂಬ್ಯುಲೆನ್ಸ್‌ಗಳು ಗ್ರಾಮವನ್ನು ತಲುಪುವುದು ಅಸಾಧ್ಯ ಎಂದು ಇತ್ತೀಚಿನ ವಿಡಿಯೋದಲ್ಲಿ ಹೇಳಿದ್ದರು.
ಗರ್ಭಿಣಿಯರಾದ ನಾವು ಟ್ರ್ಯಾಕ್ಟರ್‌ಗಳಲ್ಲಿ ಆಸ್ಪತ್ರೆಗೆ ಹೋಗಬೇಕಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಹಾಯ ಪಡೆಯುವುದು ಕಷ್ಟವಾಗಿದೆ ಎಂದು ಆಕೆ ಸಮಸ್ಯೆ ಹೇಳಿಕೊಂಡಿದ್ದರು.
ಸಾಹು ಅವರು ಕಳೆದೊಂದು ವರ್ಷದಿಂದ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಸರಿಯಾದ ಸಂಪರ್ಕ ರಸ್ತೆ ಇಲ್ಲದಿರುವುದನ್ನು ಬಿಂಬಿಸುವ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೆ ರಸ್ತೆ ವಿಚಾರವಾಗಿಯೇ ಅವರು ಸುದ್ದಿಯಲ್ಲಿದ್ದಾರೆ.
ಲೀಲಾ ಸಾಹು ಅವರ ಮನವಿಗೆ ಪ್ರತಿಕ್ರಿಯಿಸಿದ ಸಂಸದ ಮಿಶ್ರಾ, “ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ನಮ್ಮಲ್ಲಿ ಸಾಕಷ್ಟು ಆಂಬ್ಯುಲೆನ್ಸ್‌ಗಳಿವೆ. ಆಶಾ ಕಾರ್ಯಕರ್ತರಿದ್ದಾರೆ. ಇತರ ವ್ಯವಸ್ಥೆಗಳಿವೆ. ಹಾಗಾಗಿ, ಯಾರು ಕೂಡಾ ಚಿಂತಿಸಬೇಕಿಲ್ಲ. ಲೀಲಾ ಅವರ ಹೆರಿಗೆಯ ನಿಗದಿತ ದಿನಾಂಕವನ್ನು ತಿಳಿಸಿದರೆ, ನಾವು ಆಕೆಯನ್ನು ಒಂದು ವಾರ ಮೊದಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಜನರು ಯಾವುದಾದರೊಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆಯನ್ನು ಗಳಿಸಲು ಬಯಸುತ್ತಾರೆ. ರಸ್ತೆ ಸಮಸ್ಯೆಯನ್ನು ಈ ರೀತಿ ಮುನ್ನೆಲೆಗೆ ತರುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದಾರೆ.
ಮೂರು ದಿನಗಳ ಹಿಂದೆ, ಇದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್, “ಸಿಧಿಯ ಲೀಲಾ ಸಾಹು ಅವರ ವಿಡಿಯೋ ಬಗ್ಗೆ ನೀವು ಹೇಳುತ್ತಿದ್ದೀರಾ? ಅದು ನಮಗೆ ಸೋಶಿಯಲ್ ಮೀಡಿಯಾದಲ್ಲಿ ಬಂದಿದೆ” ಎಂದು ಹೇಳಿದ್ದರು.
“ಇಂತಹ ಬೇಡಿಕೆಗಳು ಇರುವ ಜನರು ತುಂಬಾ ಇದ್ದಾರೆ. ನಿಮ್ಮ ಅಭಿಪ್ರಾಯವೇನು? ಲೋಕೋಪಯೋಗಿ ಇಲಾಖೆ ಅಥವಾ ಇನ್ನಾವುದೇ ಇಲಾಖೆಗೆ ಸಂಬಂಧಪಟ್ಟಂತೆ ಯಾರಾದರೂ ಏನಾದರೂ ಪೋಸ್ಟ್ ಮಾಡಿದರೆ ನಾವು ತಕ್ಷಣ ಅಲ್ಲಿಗೆ ಹೋಗ್ಬೇಕಾ? ಈಗ ನಾವು ರಸ್ತೆ ನಿರ್ಮಿಸಿ ಕೊಡ್ಬೇಕಾ? ನಮ್ಮಲ್ಲಿ ಅಷ್ಟು ಹಣ ಇದೆಯಾ? ಅದೆಲ್ಲ ಆಗಲ್ಲ, ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ ಎಂದಿದ್ದರು.
Courtesy : timesofindia.indiatimes.com


