ಯೆಮೆನ್‌ನಲ್ಲಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ತಡೆಯಲು “ಭಾರತ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ” ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
“ಸರ್ಕಾರ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ. ಯೆಮೆನ್ ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ. ಬ್ಲಡ್ ಮನಿ ವಿಚಾರ ಖಾಸಗಿ ಮಾತುಕತೆಯಾಗಿದೆ. ಸರ್ಕಾರ ಖಾಸಗಿ ಮಾರ್ಗಗಳ ಮೂಲಕ ನಿಮಿಷಾ ಅವರನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದೆ” ಎಂದು ಕೇಂದ್ರ ಸರ್ಕಾರದ ಪರ ಅಡ್ವೋಕೇಟ್ ಜನರಲ್ ವೆಂಕಟರಮಣಿ ಹೇಳಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಜುಲೈ 16ರಂದು ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಜಾರಿಯಾಗಲಿದ್ದು, ಅದನ್ನು ತಡೆಯಲು ಸರ್ಕಾರ ಮಧ್ಯಪ್ರವೇಶಿಸುವಂತೆ ನಿರ್ದೇಶಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ತನ್ನ ಪ್ರತಿಕ್ರಿಯೆ ನೀಡಿದೆ.
ಈ ವಿಚಾರದಲ್ಲಿ ಭಾರತ ಸರ್ಕಾರ ಯಾವ ಹಂತದವರೆಗೆ ಹೋಗಬಹುದು ಎಂಬುದಕ್ಕೆ ಒಂದು ಮಿತಿಯಿದೆ. ನಾವು ಆ ಮಿತಿಯನ್ನು ತಲುಪಿದ್ದೇವೆ. ಯೆಮೆನ್ ಪ್ರಪಂಚದ ಇತರ ದೇಶಗಳಂತೆ ಅಲ್ಲ. ನಾವು ಸಾರ್ವಜನಿಕವಾಗಿ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಲು ಬಯಸಿರಲಿಲ್ಲ. ಖಾಸಗಿಯಾಗಿ ನಿಮಿಷಾ ಅವರ ರಕ್ಷಣೆಗೆ ಎಲ್ಲಾ ಪ್ರಯತ್ನಿಗಳನ್ನು ಮಾಡಿದ್ದೇವೆ ಎಂದು ಎಜಿ ಹೇಳಿದ್ದಾರೆ.
ಸರ್ಕಾರ ನಿಮಿಷಾ ಅವರ ಪ್ರಕರಣದಲ್ಲಿ ಮೃತ ಯೆಮನ್ ಪ್ರಜೆಯ ಕುಟುಂಬದೊಂದಿಗೆ ಮಾತುಕತೆ ನಡೆಸಬೇಕು. ನಿಮಿಷಾ ಅವರ ಕುಟುಂಬ ಮೃತನ ಕುಟುಂಬಕ್ಕೆ 8.6 ಕೋಟಿ ರೂಪಾಯಿ ಬ್ಲಡ್ ಮನಿ ನೀಡಲು ಮುಂದಾಗಿದೆ. ಇದು ಯೆಮನ್‌ನ ಷರಿಯಾ ಕಾನೂನಿನಡಿಯಲ್ಲಿ ಮಾನ್ಯವಾಗಿರುವ ನಿಬಂಧನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಜಿ, “ಬ್ಲಡ್ ವಿಚಾರವಾಗಿ ಖಾಸಗಿ ಮಾತುಕತೆಯಾಗಿದೆ. ಸರ್ಕಾರ ಅಲ್ಲಿನ ಕೆಲ ಶೇಖ್‌ಗಳು, ಪ್ರಭಾವಿ ವ್ಯಕ್ತಿಗಳೊಂದಿಗೆ ಖಾಸಗಿಯಾಗಿ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ ಹತ್ಯೆ ಪ್ರಕರಣ: ‘ಗೋಧಿ ಮೀಡಿಯಾ’ಗಳ ‘ಲವ್ ಜಿಹಾದ್’ ಆರೋಪ ಟುಸ್ಸಾಗಿದ್ದು ಹೇಗೆ?


