ಯೆಮನ್‌ನಲ್ಲಿ ಮರಣದಂಡನೆ ಘೋಷಣೆಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ರಕ್ಷಣೆಗೆ ಕೊನೆಯ ಪ್ರಯತ್ನ ನಡೆದಿದೆ.
ಭಾರತದ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಮಧ್ಯಪ್ರವೇಶದ ಬಳಿಕ ಯೆಮನ್‌ನಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದೆ ಎಂದು ವರದಿಯಾಗಿದೆ.
ಜುಲೈ 16ರಂದು, ಅಂದರೆ ನಾಳೆ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲು ದಿನಾಂಕ ನಿಗದಿಯಾಗಿದೆ. ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, “ನಮ್ಮಿಂದ ಹೆಚ್ಚಿನದ್ದೇನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಕೈಚೆಲ್ಲಿದೆ.
ಈ ನಡುವೆ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ (ಸುನ್ನೀ ಮುಸ್ಲಿಂ ವಿದ್ವಾಂಸರ ಸಂಘಟನೆ) ಪ್ರಧಾನ ಕಾರ್ಯದರ್ಶಿ ಹಾಗೂ ಭಾರತದ ಗ್ರ್ಯಾಂಡ್ ಮುಫ್ತಿ (ಭಾರತೀಯ ಸುನ್ನೀ ಮುಸ್ಲಿಮರ ಪರಮೋನ್ನತ ನಾಯಕ) ಆಗಿರುವ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅಥವಾ ಎಪಿ ಉಸ್ತಾದರ ಮಧ್ಯಪ್ರವೇಶ ಆಶಾ ಭಾವನೆ ಮೂಡಿಸಿದೆ.
ಯೆಮನ್‌ನ ಪ್ರಸಿದ್ದ ಸೂಫಿ ಪಂಡಿತ ಹಬೀಬ್ ಉಮರ್ ಇಬ್ನ್ ಹಾಫಿಝ್ ಅವರ ಮೂಲಕ ಎಪಿ ಉಸ್ತಾದ್ ನಿಮಿಷಾ ಅವರನ್ನು ಮರಣದಂಡನೆಯಿಂದ ಪಾರು ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಅವರ ಕಚೇರಿ ಹೇಳಿದೆ.
ಎಪಿ ಉಸ್ತಾದ್ ಅವರ ಮಧ್ಯಪ್ರವೇಶದ ಬಳಿಕ ಸೋಮವಾರ ಸಂಜೆ ಮೃತ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬದ ಜೊತೆ ಉತ್ತರ ಯೆಮೆನ್‌ನಲ್ಲಿ ಮಹತ್ವದ ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿ ಹಬೀಬ್ ಉಮರ್ ಅವರ ಪ್ರತಿನಿಧಿ ಅಬ್ದುರಹ್ಮಾನ್ ಅಲೀ ಮಶ್ಹೂರ್, ಜಿನಾಯತ್ ನ್ಯಾಯಾಲಯದ ನ್ಯಾಯಾಧೀಶರು, ಬುಡಕಟ್ಟು ಮುಖಂಡರು ಮತ್ತು ಮೃತ ತಲಾಲ್ ಅವರ ಸಹೋದರ ಭಾಗವಹಿಸಿದ್ದಾರೆ ಎಂದು ವರದಿಗಳು ಹೇಳಿವೆ.
ನಿಮಿಷಾ ಅವರ ಮರಣದಂಡನೆಯನ್ನು ಯೆಮನ್‌ನ ಎಲ್ಲಾ ಹಂತದ ನ್ಯಾಯಾಲಯಗಳು ಎತ್ತಿ ಹಿಡಿದಿವೆ. ಈಗ ಉಳಿದಿರುವ ಆಯ್ಕೆ ಮೃತ ತಲಾಲ್ ಅವರ ಕುಟುಂಬ ರಕ್ತಧನ ಅಥವಾ ಬ್ಲಡ್ ಮನಿ ಪಡೆದು ಕ್ಷಮಾಧಾನ ನೀಡುವುದು ಮಾತ್ರವಾಗಿದೆ. ಯೆಮನ್‌ನ ಷರಿಯಾ ಕಾನೂನಿನ ಪ್ರಕಾರ, ಮೃತನ ಕುಟುಂಬ ಕ್ಷಮೆ ನೀಡಿದರೆ ಮಾತ್ರ ನಿಮಿಷಾ ಸಾವಿನ ದವಡೆಯಿಂದ ಪಾರಾಗಲಿದ್ದಾರೆ. ಆ ಪ್ರಯತ್ನವನ್ನು ಹಬೀಬ್ ಉಮರ್ ಅವರ ಮೂಲಕ ಎಪಿ ಉಸ್ತಾದ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇಂದು (ಮಂಗಳವಾರ) ಮೃತನ ಕುಟುಂಬದ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ ಎಂದು ವರದಿಗಳು ಹೇಳಿವೆ. ಈ ಮಾತುಕತೆ ಬಳಿಕ ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಎಪಿ ಉಸ್ತಾದರ ಮಧ್ಯಸ್ಥಿಕೆ ಫಲ ಕಾಣಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಾರೈಸಿದ್ದಾರೆ.
ನಿಮಿಷಾ ಪ್ರಿಯಾ ಆಕ್ಷನ್ ಕಮಿಟಿ
ನಿಮಿಷಾ ಪ್ರಿಯಾ ಅವರನ್ನು ಜೀವಂತವಾಗಿ ಯೆಮನ್‌ನಿಂದ ಕರೆ ತರಲು 2020ರಲ್ಲಿ ‘ನಿಮಿಷಾ ಪ್ರಿಯಾ ಆಕ್ಷನ್ ಕಮಿಟಿ’ ರಚಿಸಲಾಗಿದೆ. ವಕೀಲರು, ಮಾನವ ಹಕ್ಕುಗಳ ಕಾರ್ಯಕರ್ತರು, ರಾಜಕೀಯ, ಸಾಮಾಜಿಕ ಮುಖಂಡರು ಈ ಕಮಿಟಿಯಲ್ಲಿ ಇದ್ದಾರೆ.
ಕೇರಳ ವಿಧಾನಸಭೆಯ ಸದಸ್ಯ, ಪಾಲಕ್ಕಾಡ್ ಜಿಲ್ಲೆಯ ನೆನ್ಮರ ಕ್ಷೇತ್ರದ ಶಾಸಕ ಕೆ.ಬಾಬು ನೇತೃತ್ವದ ಈ ಸಮಿತಿ, ಭಾರತ ಮೂಲದ ಯೆಮನ್‌ನ ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಭಾಸ್ಕರನ್ ಅವರ ಮೂಲಕ ನಿಮಿಷಾ ಪ್ರಿಯಾ ಅವರ ರಕ್ಷಣೆಗೆ ಪ್ರಯತ್ನಿಸುತ್ತಿದೆ.
ವರದಿಗಳ ಪ್ರಕಾರ, ಕಮಿಟಿಯು ಸುಮಾರು 40 ಸಾವಿರ ಡಾಲರ್ ಹಣವನ್ನು ಕ್ರೌಡ್ ಫಂಡಿಂಗ್ ಮೂಲಕ ಈಗಾಗಲೇ ಸಂಗ್ರಹಿಸಿದ್ದು, ಅದನ್ನು ಜೆರೋಮ್ ಸೇರಿದಂತೆ ಯೆಮನ್‌ನಲ್ಲಿರುವ ಮಧ್ಯವರ್ತಿಗಳಿಗೆ ಮುಂಗಡವಾಗಿ ಎರಡು ಕಂತುಗಳಲ್ಲಿ ಪಾವತಿಸಿದೆ. ಸುಮಾರು 1 ಮಿಲಿಯನ್ ಡಾಲರ್‌ವರೆಗೆ ಬ್ಲಡ್ ಮನಿಯನ್ನು ನೀಡಲು ಸಿದ್ದ ಎಂದು ಮೃತ ತಲಾಲ್ ಅವರ ಕುಟುಂಬಕ್ಕೆ ತಿಳಿಸಿದೆ. ಆದರೆ, ತಲಾಲ್ ಕುಟುಂಬಸ್ಥರು ಇದುವರೆಗೆ ಹಣ ಸ್ವೀಕರಿಸಿಲ್ಲ ಎನ್ನಲಾಗಿದೆ.
ಮೋದಿಗೆ ಕೇರಳ ಸಿಎಂ ಪತ್ರ
ನಿಮಿಷಾ ಪ್ರಿಯಾ ಪ್ರಕರಣದಲ್ಲಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಕೈ ಚೆಲ್ಲಿರುವುದರಿಂದ ಈ ವಿಷಯದಲ್ಲಿ ಯಾವುದೇ ಪ್ರಯತ್ನ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅಲ್ಲದೆ, ಮರಣದಂಡನೆ ಜಾರಿಯಾಗಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ.
2017ರ ಜುಲೈನಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಎಂಬಾತನನ್ನು ಹತ್ಯೆಗೈದ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಮರಣದಂಡನೆಗೆ ಗುರಿಯಾಗಿದ್ದಾರೆ. ಮೃತ ಅಬ್ದೋ ಮಹ್ದಿ ನಿಮಿಷಾ ಅವರ ಪಾಸ್‌ಪೋರ್ಟ್ ತನ್ನ ಬಳಿ ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ನಿಮಿಷಾ ಅವರು, ಆತನಿಗೆ ನಿದ್ರೆ ಬರುವ ಚುಚ್ಚುಮದ್ದನ್ನು ಚುಚ್ಚಿ ಪಾಸ್‌ಪೋರ್ಟ್ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದರು. ಆದರೆ ಚುಚ್ಚುಮದ್ದು ಓವರ್ ಡೋಸ್ ಆಗಿ ಅಬ್ದೋ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಬಂಧಿತಾಗಿದ್ದ ನಿಮಿಷಾ ಅವರಿಗೆ ಯೆಮನ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಶಿಕ್ಷೆ ಜಾರಿಗೆ ಜುಲೈ 16ರಂದು ಸಮಯ ನಿಗದಿಯಾಗಿದೆ.


