ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹಸ್ತಕ್ಷೇಪ ಮಾಡಿದ ಮತ್ತು ಕೋಮು ಸಂಘರ್ಷವನ್ನು ಪ್ರಚೋದಿಸಿದ ಆರೋಪದ ಮೇಲೆ ಹಿರಿಯ ಪತ್ರಕರ್ತರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸೋಮವಾರ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜುಲೈ 12ರಂದು ಬಾಲಿಯಾದ ಮತಗಟ್ಟೆಗೆ ಭೇಟಿ ನೀಡಿದ ನಂತರ ಪ್ರಶಸ್ತಿ ವಿಜೇತ ಪತ್ರಕರ್ತ ಅಜಿತ್ ಅಂಜುಮ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, 2023 ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಅಂಜುಮ್ ಅವರು, ಮತಗಟ್ಟೆಯಲ್ಲಿ ಹಲವು ಗಣತಿ ಫಾರ್ಮ್‌ಗಳು (ನಮೂನೆಗಳು) ಕಂಡು ಬಂದಿವೆ. ಅವುಗಳಲ್ಲಿ ಕೆಲವು ಫಾರ್ಮ್‌ಗಳಲ್ಲಿ ಫೋಟೋ ಇರಲಿಲ್ಲ. ಇನ್ನೂ ಕೆಲವು ಫಾರ್ಮ್‌ಗಳನ್ನು ಭಾಗಶಃ ಭರ್ತಿ ಮಾಡಲಾಗಿತ್ತು, ಸಹಿ ಹಾಕಿರಲಿಲ್ಲ” ಎಂದು ವರದಿ ಮಾಡಿದ್ದರು.
ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಮೊಹಮ್ಮದ್ ಅನ್ಸಾರುಲ್ ಹಕ್ ಅವರ ದೂರಿನ ಮೇರೆಗೆ, ಅಂಜುಮ್ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಕ್ರಿಮಿನಲ್ ಅತಿಕ್ರಮಣ, ಕಾನೂನುಬದ್ಧ ಆದೇಶವನ್ನು ಉಲ್ಲಂಘಿಸುವುದು, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಪ್ರಯತ್ನಿಸುವುದು ಮುಂತಾದ ಸೆಕ್ಷನ್‌ಗಳಡಿ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.
“ಸಾಹಿಬ್‌ಪುರ ಕಮಲ್ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 16145 ರ ಬಿಎಲ್ಒ ಆದ ನಾನು, ಜುಲೈ 12, 2025ರಂದು ಬಲ್ಲಿಯಾದಲ್ಲಿರುವ ಬ್ಲಾಕ್ ಆಡಿಟೋರಿಯಂನಲ್ಲಿ ಬಿಎಲ್ಒ ಅಪ್ಲಿಕೇಶನ್‌ನಿಂದ ಎಣಿಕೆ ಫಾರ್ಮ್‌ಗಳನ್ನು ಅಪ್‌ಲೋಡ್ ಮಾಡುತ್ತಿದ್ದೆ. ಬೆಳಿಗ್ಗೆ 9:30ರ ಸುಮಾರಿಗೆ, ಯೂಟ್ಯೂಬರ್ ಅಜಿತ್ ಅಂಜುಮ್ ಅವರ ಸಹಚರರು ಮತ್ತು ಕ್ಯಾಮರಾಮ್ಯಾನ್ ಅನುಮತಿಯಿಲ್ಲದೆ ಆಡಿಟೋರಿಯಂಗೆ ಪ್ರವೇಶಿಸಿ, ನನ್ನ ಬೂತ್‌ನಲ್ಲಿರುವ ಮತದಾರರ ಸಂಖ್ಯೆ, ನಾನು ಎಷ್ಟು ಫಾರ್ಮ್‌ಗಳನ್ನು ವಿತರಿಸಿದ್ದೇನೆ ಮತ್ತು ನನಗೆ ಎಷ್ಟು ಫಾರ್ಮ್‌ಗಳು ವಾಪಸ್ ತೊರೆತಿವೆ ಎಂದು ಪ್ರಶ್ನಿಸಲು ಪ್ರಾರಂಭಿಸಿದರು” ಎಂದು ಮೊಹಮ್ಮದ್ ಅನ್ಸಾರುಲ್ ಹಕ್ ದೂರು ನೀಡಿದ್ದಾರೆ.
ಮುಸ್ಲಿಂ ಮತದಾರರ ಸಂಖ್ಯೆ ಮತ್ತು ಎಷ್ಟು ಮಂದಿ ಫಾರ್ಮ್ ಸಲ್ಲಿಸಿದ್ದಾರೆ ಎಂದು ಆರೋಪಿಗಳು ಕೇಳಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
“ನನ್ನ ಮತಗಟ್ಟೆಯಲ್ಲಿ 1,020 ಮತದಾರರಿದ್ದಾರೆ. ನಾನು ಎಲ್ಲರಿಗೂ ಫಾರ್ಮ್‌ಗಳನ್ನು ವಿತರಿಸಿ ಅವುಗಳನ್ನು ಮರಳಿ ಪಡೆದಿದ್ದೇನೆ ಎಂದು ಅವರಿಗೆ ಹೇಳಿದ್ದೇನೆ. ಆದರೂ, ಮುಸ್ಲಿಂ ಮತದಾರರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಹೇಳಿಕೆಯ ಮೇಲೆ ಯೂಟ್ಯೂಬರ್ ಗಮನ ಹರಿಸಿದ್ದರು, ಅದು ಸಂಪೂರ್ಣವಾಗಿ ಸುಳ್ಳು. ಯೂಟ್ಯೂಬರ್ ಮತ್ತು ಅವರ ತಂಡವು ನನಗೆ ಒಂದು ಗಂಟೆ ಕೆಲಸ ಮಾಡಲು ಅವಕಾಶ ನೀಡಿರಲಿಲ್ಲ. ಇದರಿಂದಾಗಿ ನನ್ನ ಕೆಲಸಕ್ಕೆ ಅಡ್ಡಿ ಉಂಟಾಯಿತು. ಆದ್ದರಿಂದ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಕೋಮು ಸಂಘರ್ಷವನ್ನು ಪ್ರಚೋದಿಸಿದ ಯೂಟ್ಯೂಬರ್ ಅಜಿತ್ ಅಂಜುಮ್ ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಅನ್ಸಾರುಲ್ ಹಕ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ನಡುವೆ ಪತ್ರಕರ್ತ ಅಂಜುಮ್ ಅವರು ತಮ್ಮ ವರದಿಗೆ ಬದ್ಧ ಎಂದಿದ್ದು, “ನಮ್ಮ ವರದಿ ನ್ಯಾಯಯುತ ಮತ್ತು ಪಕ್ಷಪಾತ ರಹಿತವಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
“ನಾನೊಬ್ಬ ಪ್ರಜ್ಞಾಪೂರ್ವಕ ಪತ್ರಕರ್ತನಾಗಿ, ಭಾರತೀಯ ಚುನಾವಣಾ ಆಯೋಗದ ನಿಯಮಗಳನ್ನು ಹೇಗೆ ಪಾಲಿಸುತ್ತಿಲ್ಲ ಎಂಬುದನ್ನು ತೋರಿಸಿದ್ದೇನೆ. ನಾನು ಯಾರ ಗುರುತನ್ನು ಬಹಿರಂಗಪಡಿಸಿಲ್ಲ ಅಥವಾ ಗಣತಿ ನಮೂನೆಗಳ ಹತ್ತಿರದ ಚಿತ್ರಗಳನ್ನು ತೋರಿಸಿಲ್ಲ. ಪೊಲೀಸರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನ್ನ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ. ನಾನು ಇದಕ್ಕೆಲ್ಲ ಹೆದರುವವನು ಅಲ್ಲ ಅಂಜುಮ್ ಹೇಳಿದ್ದಾರೆ.
ಪ್ರಾಧ್ಯಾಪಕನ ಲೈಂಗಿಕ ಕಿರುಕುಳ ತಡೆಯದ ಕಾಲೇಜು: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು


