ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹತ್ವದ ಚುನಾವಣಾ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಾಜ್ಯದ ಎಲ್ಲಾ ಮನೆಗಳಿಗೆ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಗುರುವಾರ ಘೋಷಿಸಿದ್ದು, ಇದು 1.67 ಕೋಟಿ ಕುಟುಂಬಗಳಿಗೆ ಆಗಸ್ಟ್ 1 ರಿಂದಲೇ ಅನ್ವಯಿಸಲಿದೆ.
ಜುಲೈ ಬಿಲ್‌ನಿಂದಲೇ, ರಾಜ್ಯದ ಎಲ್ಲ ಗೃಹಬಳಕೆ ಗ್ರಾಹಕರು 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ನಾವು ಈಗ ನಿರ್ಧರಿಸಿದ್ದೇವೆ ಎಂದು ಬಿಹಾರ ಮುಖ್ಯಮಂತ್ರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ “200 ಯೂನಿಟ್ ಉಚಿತ ವಿದ್ಯುತ್” ಭರವಸೆಗೆ ಪ್ರತಿಯಾಗಿ ನಿತೀಶ್‌ರ ಈ ಘೋಷಣೆ ಬಂದಿದೆ.
ನಿತೀಶ್ ಕುಮಾರ್ ಅವರು “ಒಂದು ದೇಶ, ಒಂದು ಸುಂಕ” ನೀತಿಯ ಬಲವಾದ ಪ್ರತಿಪಾದಕರಾಗಿದ್ದು, ಪ್ರಸ್ತುತ ಬಿಹಾರವು ಗ್ರಿಡ್‌ನಿಂದ ದುಬಾರಿ ದರದಲ್ಲಿ ವಿದ್ಯುತ್ ಪಡೆಯುತ್ತಿದೆ ಎಂದು ವಾದಿಸುತ್ತಾರೆ.
ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಸೌರಶಕ್ತಿಯ ಮೂಲಕ 10,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅವರು ಹಂಚಿಕೊಂಡಿದ್ದಾರೆ.
ಸರ್ಕಾರಿ ಅನುದಾನಿತ ‘ಕುಟೀರ್ ಜ್ಯೋತಿ ಯೋಜನೆ’ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಬಡವರ ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಯೋಜನೆ ಜಾರಿಯಲ್ಲಿದೆ.
ಈ ಘೋಷಣೆಯು ರಾಜ್ಯದ ಒಟ್ಟು 1 ಕೋಟಿ 67 ಲಕ್ಷ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ತಿಂಗಳಿಗೆ 400 ರೂ. ಪಿಂಚಣಿ ಪಡೆಯುವ ಸುಮಾರು 1.1 ಕೋಟಿ ಪಿಂಚಿಣಿದಾರರಿದ್ದಾರೆ. ಈಗ ಇವರ ಪಿಂಚಣಿಯನ್ನು ಮೂರು ಪಟ್ಟು ಅಂದರೆ 1,100 ರೂ.ಗೆ ಹೆಚ್ಚಳ ಮಾಡಿ ವಾರದ ಹಿಂದಷ್ಟೇ ಘೋಷಣೆ ಮಾಡಲಾಗಿದೆ. ಈ ಘೋಷಣೆ ನಂತರ ಈ ಉಚಿತ ವಿದ್ಯುತ್ ಘೋಷಣೆ ಹೊರಬಿದ್ದಿದೆ.


