ಮೂವರು ಅಪ್ರಾಪ್ತ ವಯಸ್ಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಖುರ್ಜಾ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, 13 ರಿಂದ 17 ವರ್ಷ ವಯಸ್ಸಿನ ಹುಡುಗರು ಜೂನ್ 28 ರಂದು ಬಾಲಕಿ ಮತ್ತು ಆಕೆಯ ಮೂರು ವರ್ಷದ ಸಹೋದರನನ್ನು ಬೈಕ್ ಸವಾರಿಗೆ ಕರೆದುಕೊಂಡು ಹೋಗಿದ್ದರು. ಬಳಿಕ ಅವರು ಆಕೆಯನ್ನು ಮಾತ್ರ ಏಕಾಂತ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಮನೆಗೆ ಹಿಂದಿರುಗಿದ ನಂತರ, ಬಾಲಕಿ ತನ್ನ ತಾಯಿಗೆ ನಡೆದ ವಿಷಯವನ್ನು ತಿಳಿಸಿದ್ದರು. ಅವರು ಪೊಲೀಸರಿಗೆ ದೂರು ನೀಡಿದ್ದರು. ಬಿಎನ್ಎಸ್ ಸೆಕ್ಷನ್ 70 (2) (ಸಾಮೂಹಿಕ ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ 5/6 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದರು. ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಕಳೆದ ಮಂಗಳವಾರ ಬೆಳಿಗ್ಗೆ ನಾನು ಕೆಲಸಕ್ಕೆಂದು ಹೋಗಿದ್ದೆ. ಮಗಳು ಮನೆಯಲ್ಲಿ ಇದ್ದಳು. ಸಂಜೆ ಮನೆಗೆ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಬಾಗಿಲು ತಟ್ಟಿದರೂ ಮಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ನಾನು ಪಕ್ಕದ ಮನೆಯ ಮೂಲಕ ಛಾವಣಿಯಿಂದ ಮನೆಯೊಳಗೆ ಹೋದಾಗ ಮಗಳು ನೇಣು ಬಿಗಿದುಕೊಂಡಿದ್ದಳು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದರು” ಎಂದು ಮೃತಳ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
“ಅತ್ಯಾಚಾರಕ್ಕೊಳಗಾದ ಬಳಿಕ ಬಾಲಕಿ ಮೌನವಾಗಿರುತ್ತಿದ್ದಳು ಮತ್ತು ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದಳು. ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು” ಎಂದು ಸಂಬಂಧಿಯೊಬ್ಬರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಮಹಿಳೆ ತನ್ನ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಅವರ ಮಗಳು ಮನೆಯಲ್ಲಿ ಒಬ್ಬಂಟಿಯಾಗಿ ಇದ್ದರು. ಆಕೆಯ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಎಂದು ಖುರ್ಜಾ ಸರ್ಕಲ್ ಇನ್‌ಸ್ಪೆಕ್ಟರ್ ಪೂರ್ಣಿಮಾ ಸಿಂಗ್ ತಿಳಿಸಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಹಿಂದೂ ಯುವತಿ ಭೇಟಿಗಾಗಿ ಮುಸ್ಲಿಂ ಯುವಕನಿಗೆ ಗುಂಪಿನಿಂದ ಕ್ರೂರ ಹಲ್ಲೆ: ‘ಲವ್ ಜಿಹಾದ್’ ಹೆಸರಿನಲ್ಲಿ ಅನ್ಯಾಯ


