ಕೋಲ್ಕತ್ತಾ: ಅಸ್ಸಾಂನಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನಲ್ಲಿರುವ ಬಂಗಾಳಿ ಮಾತನಾಡುವ ಜನರನ್ನು “ಬೆದರಿಸಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಈ ಬಂಗಾಳಿ ಭಾಷಿಕರು “ಎಲ್ಲಾ ಭಾಷೆಗಳು ಮತ್ತು ಧರ್ಮಗಳನ್ನು ಗೌರವಿಸಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು” ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ಬಿಜೆಪಿಯ “ವಿಭಜಿಸಿ ಆಳುವ ನೀತಿ” ಅಸ್ಸಾಂನಲ್ಲಿ “ಎಲ್ಲಾ ಮಿತಿಗಳನ್ನು ಮೀರಿದೆ” ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ಬಂಗಾಳಿ ಮಾತನಾಡುವ ವಲಸಿಗರನ್ನು ವ್ಯವಸ್ಥಿತವಾಗಿ “ಅಕ್ರಮ ಬಾಂಗ್ಲಾದೇಶಿ” ಅಥವಾ “ರೋಹಿಂಗ್ಯಾ” ಎಂದು ಹಣೆಪಟ್ಟಿ ಕಟ್ಟಿ ಗುರಿಪಡಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
“ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆ ಬಾಂಗ್ಲಾ ಭಾಷೆಯಾಗಿದೆ. ಇದು ಅಸ್ಸಾಂನಲ್ಲೂ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಎಲ್ಲಾ ಭಾಷೆಗಳು ಮತ್ತು ಧರ್ಮಗಳನ್ನು ಗೌರವಿಸಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಬಯಸುವ ಬಂಗಾಳಿ ಭಾಷಿಕರನ್ನು ತಮ್ಮ ಮಾತೃಭಾಷೆಯನ್ನು ಎತ್ತಿಹಿಡಿದಿದ್ದಕ್ಕಾಗಿ ಕಿರುಕುಳ ನೀಡಿ, ಬೆದರಿಸುವುದು ತಾರತಮ್ಯ ಮತ್ತು ಅಸಾಂವಿಧಾನಿಕವಾಗಿದೆ. ಅಸ್ಸಾಂನಲ್ಲಿ ಬಿಜೆಪಿಯ ಈ ವಿಭಜಕ ಅಜೆಂಡಾ ಎಲ್ಲಾ ಮಿತಿಗಳನ್ನು ಮೀರಿದೆ ಮತ್ತು ಇದರ ವಿರುದ್ಧ ಅಸ್ಸಾಂ ಜನತೆ ಹೋರಾಡುತ್ತದೆ” ಎಂದು ಅವರು ‘ಎಕ್ಸ್’ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. “ತಮ್ಮ ಭಾಷೆ ಮತ್ತು ಗುರುತಿನ ಘನತೆಗಾಗಿ ಮತ್ತು ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ನಾಗರಿಕನೊಂದಿಗೆ ನಾನು ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.
ಅಸ್ಸಾಂ ಸಿಎಂ ತಿರುಗೇಟು: ‘ಮಮತಾ ಕೇವಲ ಬಂಗಾಳಿ-ಮುಸ್ಲಿಮರ ಪರ’
ಗುರುವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ತಮ್ಮ ಪಶ್ಚಿಮ ಬಂಗಾಳದ ಸಹೋದ್ಯೋಗಿ ಬಂಗಾಳಿ ಮಾತನಾಡುವ ಮುಸ್ಲಿಮರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದು ಆರೋಪಿಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಭಾಷಿಕ ಗುರುತನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಇತ್ತೀಚೆಗೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಶರ್ಮಾ, “ಮಮತಾ ಬ್ಯಾನರ್ಜಿ ಬಂಗಾಳಿಗಳನ್ನು ಇಷ್ಟಪಡುತ್ತಾರೋ ಅಥವಾ ಮುಸ್ಲಿಂ-ಬಂಗಾಳಿಗಳನ್ನು ಮಾತ್ರ ಇಷ್ಟಪಡುತ್ತಾರೋ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ನನ್ನ ಉತ್ತರವೇನೆಂದರೆ ಮುಸ್ಲಿಂ-ಬಂಗಾಳಿಗಳನ್ನು ಮಾತ್ರ ಅವರು ಇಷ್ಟ ಪಡುತ್ತಾರೆ ಎಂಬುದು ಆಗಿದೆ” ಎಂದು ಗುವಾಹಟಿಯಲ್ಲಿ ಆರೋಪಿಸಿದ್ದರು.
“ಅವರು ಮುಸ್ಲಿಂ-ಬಂಗಾಳಿಗಳಿಗಾಗಿ ಅಸ್ಸಾಂಗೆ ಬಂದರೆ, ಅಸ್ಸಾಮಿ ಜನರು ಮತ್ತು ಹಿಂದೂ-ಬಂಗಾಳಿಗಳು ಅವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಶರ್ಮಾ ಎಚ್ಚರಿಕೆ ನೀಡಿದ್ದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರ ಮೇಲೆ ನಡೆಯುತ್ತಿರುವ ಕಿರುಕುಳವನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಬುಧವಾರ ಕೋಲ್ಕತ್ತಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: 36 ಲಕ್ಷ ಜನರು ಅವರ ವಿಳಾಸಗಳಲ್ಲಿ ಇಲ್ಲ ಎಂದ ಚುನಾವಣೆ ಆಯೋಗ


