ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿರುವ ದೂರಿಗೆ ಸಂಬಂಧಿಸಿದಂತೆ, ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಅದನ್ನು ನಡೆಸುತ್ತಿರುವ ಕುಟುಂಬದ ವಿರುದ್ಧ ಯಾವುದೇ ‘ಮಾನಹಾನಿಕರ ವಿಷಯ’ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ (ಜುಲೈ 23) ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದ ಮುಂದೆ ಅರ್ಜಿದಾರರಾದ ‘ಥರ್ಡ್ ಐ ಯೂಟ್ಯೂಬ್ ಚಾನೆಲ್’ ಪರ ವಕೀಲರು ವಿಷಯ ಪ್ರಸ್ತಾಪಿಸಿದ್ದರು.
“ಸುಮಾರು 390 ಮಾಧ್ಯಮ ಸಂಸ್ಥೆಗಳ ವಿರುದ್ದ ಗ್ಯಾಗ್ ಆರ್ಡರ್ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಮೂರು ಗಂಟೆಗಳಲ್ಲಿ ಅದನ್ನು ಪರಿಗಣಿಸಿ ಆದೇಶ ಮಾಡಲಾಗಿದೆ. ಸುಮಾರು 9 ಸಾವಿರ ಯುಆರ್‌ಎಲ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಲಾಗಿದೆ. ಇದರಿಂದ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ಹಿನ್ನೆಡೆಯಲಾಗಲಿದೆ” ಎಂದು ವಕೀಲರು ತಿಳಿಸಿದ್ದರು.
ಆದರೆ, ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಈ ವಿಷಯವನ್ನು ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪರಿಗಣಿಸಲು ನಿರಾಕರಿಸಿದೆ ಎಂದು livelaw.in ವರದಿ ಮಾಡಿದೆ.
“ನಾವು ಹೈಕೋರ್ಟ್‌ಗಳನ್ನು ನಿರುತ್ಸಾಹಗೊಳಿಸಲು ಸಾಧ್ಯವಿಲ್ಲ” ಎಂದು ಹೇಳಿದ ಪೀಠ, ಮೊದಲು ಹೈಕೋರ್ಟ್‌ಗೆ ಹೋಗಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜುಲೈ 18ರಂದು ಆದೇಶ ನೀಡಿದ್ದು, ಹರ್ಷೇಂದ್ರ ಕುಮಾರ್, ಅವರ ಕುಟುಂಬ ಸದಸ್ಯರು, ಹರ್ಷೇಂದ್ರ ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಂಸ್ಥೆಗಳು ಮತ್ತು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ವಿರುದ್ಧ ಯಾವುದೇ ಮಾನನಷ್ಟಕರ ವಿಷಯ ಮತ್ತು ಮಾಹಿತಿಯನ್ನು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಡಿಜಿಟಲ್ ಮಾಧ್ಯಮ, ಎಲ್ಲಾ ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವುದು, ಪ್ರಸಾರ ಮಾಡುವುದು, ಫಾರ್ವರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು, ರವಾನಿಸುವುದು ಮತ್ತು ಪ್ರಸಾರ ಮಾಡುವುದನ್ನು ಮುಂದಿನ ವಿಚಾರಣೆಯವರೆಗೆ ನಿರ್ಬಂಧಿಸಿ ತಡೆಯಾಜ್ಞೆ ಹೊರಡಿಸಿದೆ.
Courtesy : livelaw.in


