ಐಎಎಸ್ ಅಧಿಕಾರಿಯೊಬ್ಬರ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಜ್ಯಸಭಾ ಸಂಸದ ಸುಭಾಷ್ ಬರಾಲ ಅವರ ಮಗ ವಿಕಾಸ್ ಬರಾಲ ಅವರನ್ನು ಹರಿಯಾಣ ಸರ್ಕಾರ ಸಹಾಯಕ ಅಡ್ವೊಕೇಟ್ ಜನರಲ್ (ಎಎಜಿ) ಆಗಿ ನೇಮಿಸಿದೆ.
2017ರ ಪ್ರಕರಣದಲ್ಲಿ ಆರೋಪಿಯಾಗಿರುವ ವಿಕಾಸ್ ಅವರ ಹೆಸರು, ಸಹಾಯಕ ಅಡ್ವೊಕೇಟ್ ಜನರಲ್‌ಗಳು, ಡೆಪ್ಯುಟಿ ಅಡ್ವೊಕೇಟ್ ಜನರಲ್‌ಗಳು, ಹಿರಿಯ ಡೆಪ್ಯುಟಿ ಅಡ್ವೊಕೇಟ್ ಜನರಲ್‌ಗಳು ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಹುದ್ದೆಗಳಿಗೆ ಹೊಸದಾಗಿ ನೇಮಿಸಲಾದ 97 ಮಂದಿಯ ಪಟ್ಟಿಯಲ್ಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ಇನ್ನೂ ಚಂಡೀಗಢ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ವಿಕಾಸ್ ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ ಎಂದು ವರದಿ ತಿಳಿಸಿದೆ.
ವಿಕಾಸ್ ಮತ್ತು ಆತನ ಸ್ನೇಹಿತ ಆಶಿಶ್ ಕುಮಾರ್ ವಿರುದ್ಧ ಆಗಸ್ಟ್ 5, 2017 ರಂದು ಐಪಿಸಿ ಸೆಕ್ಷನ್ 354 ಡಿ, 341, 365 ಮತ್ತು 511ರ ಅಡಿಯಲ್ಲಿ ಹಾಗೂ ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಹರಿಯಾಣ ಕೇಡರ್ ಐಎಎಸ್ ಅಧಿಕಾರಿ ವಿ.ಎಸ್ ಕುಂಡು ಅವರ ಪುತ್ರಿ ವರ್ಣಿಕಾ ಕುಂಡು ಅವರು ದೂರು ದಾಖಲಿಸಿದ್ದರು. ಚಂಡೀಗಢದಲ್ಲಿ ತಡರಾತ್ರಿ ತಮ್ಮ ವಾಹನವನ್ನು ಬೆನ್ನಟ್ಟಿ ಬಲವಂತವಾಗಿ ವಾಹನದೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.
ವರ್ಣಿಕಾ ಅವರ ದೂರು ಆಧರಿಸಿ ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಮತ್ತು ಆಗಸ್ಟ್ 9, 2017ರಂದು ವಿಕಾಸ್ ಮತ್ತು ಆಶಿಶ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು.
ವಿಕಾಸ್ ಅವರನ್ನು 2018ರ ಜನವರಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ನೀಡುವವರೆಗೂ ಚಂಡೀಗಢದ ಬುರೈಲ್‌ನಲ್ಲಿರುವ ಮಾದರಿ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ಆಗಸ್ಟ್ 2, 2025 ರಂದು ರಕ್ಷಣಾ ಸಾಕ್ಷ್ಯಗಳ ದಾಖಲಾತಿಗಾಗಿ ನಿಗದಿಪಡಿಸಲಾಗಿದೆ.
ಘಟನೆ ನಡೆದ ಸಮಯದಲ್ಲಿ ವಿಕಾಸ್ ಕಾನೂನು ವಿದ್ಯಾರ್ಥಿಯಾಗಿದ್ದರು. ಡಿಸೆಂಬರ್ 2017 ರಲ್ಲಿ, ಕುರುಕ್ಷೇತ್ರ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗೆ ಹಾಜರಾಗಲು ಅವರಿಗೆ ಹೈಕೋರ್ಟ್ ಅನುಮತಿ ನೀಡಿತ್ತು.
ಸುಭಾಷ್ ಬರಾಲ ಡಿಸೆಂಬರ್ 2014ರಿಂದ ಜುಲೈ 2020 ರವರೆಗೆ ಹರಿಯಾಣ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 2019ರ ವಿಧಾನಸಭಾ ಚುನಾವಣೆಯಲ್ಲಿ ಫತೇಹಾಬಾದ್ ಜಿಲ್ಲೆಯ ತೋಹಾನಾದಿಂದ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.
ನಂತರ ಅವರು, ಹರಿಯಾಣ ಬ್ಯೂರೋ ಆಫ್ ಪಬ್ಲಿಕ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾಗಿ ನೇಮಕಗೊಂಡರು. ಫೆಬ್ರವರಿ, 2024 ರಲ್ಲಿ ಹರಿಯಾಣದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು.
ಐಎಎಸ್ ಅಧಿಕಾರಿ ವಿ.ಎಸ್ ಕುಂಡು ಡಿಸೆಂಬರ್ 2022ರಲ್ಲಿ ನಿವೃತ್ತರಾಗಿದ್ದು, ಪ್ರಸ್ತುತ ಹರಿಯಾಣದ ಕಂದಾಯ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಳೆದ ಮಂಗಳವಾರ, ಅವರು ಹರಿಯಾಣ ಸಚಿವ ವಿಪುಲ್ ಗೋಯೆಲ್ ಅವರ ಅಧ್ಯಕ್ಷತೆಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಅಧಿಕಾರಿಗಳ ತರಬೇತಿ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಪ್ರಕರಣ: ಮಾಧ್ಯಮ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ


